CONNECT WITH US  

ಮುಸ್ಲಿಂ, ಕ್ರೈಸ್ತರಿಗೆ ಮಾತ್ರ ಉದ್ಯೋಗ: ಸ್ವಾಮಿ ಆಕ್ರೋಶ

ಮುಂಬೈ: ಜೀಶನ್‌ ಖಾನ್‌ ಎಂಬ ಮುಸ್ಲಿಂ ಯುವಕನಿಗೆ ಮುಂಬೈ ಕಂಪನಿಯೊಂದು ಕೆಲಸ ನಿರಾಕರಿಸಿದ ವಿಷಯ ಭಾರೀ ಸುದ್ದಿಯಾದ ಬೆನ್ನಲ್ಲೇ, ಮುಸ್ಲಿಂ ಮತ್ತು ಕ್ರೈಸ್ತರಿಗೆ ಮಾತ್ರ ಉದ್ಯೋಗ ನೀಡುವುದಾಗಿ ಹೇಳುವ ಕಂಪನಿಗಳ ಬಗ್ಗೆ ಮಾಧ್ಯಮಗಳೇಕೆ ಸುದ್ದಿ ಮಾಡುವುದಿಲ್ಲ ಎಂದು ಬಿಜೆಪಿ ನಾಯಕ ಸುಬ್ರಮಣಿಯನ್‌ ಸ್ವಾಮಿ ಪ್ರಶ್ನಿಸಿದ್ದಾರೆ.

ವಿವಿಧ ರಾಜ್ಯಗಳಲ್ಲಿ ಮುಸ್ಲಿಂ ಮತ್ತು ಕ್ರೈಸ್ತರಿಗೆ ಮಾತ್ರ ಉದ್ಯೋಗ ಎಂಬ ಜಾಹೀರಾತು ಪ್ರಕಟವಾಗುತ್ತಿದ್ದರೂ, ಈ ಬಗ್ಗೆ ಎಂದು ಮಾಧ್ಯಮಗಳು ಪ್ರಸ್ತಾಪಿಸುವುದಿಲ್ಲ ಎಂದು ಸ್ವಾಮಿ ತಮ್ಮ ಫೇಸ್‌ಬುಕ್‌ ಪುಟದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜೊತೆಗೆ ಇಂಥ ಆಕ್ರೋಶ ವ್ಯಕ್ತಪಡಿಸಲು ಅವರು ಶಂಖನಾದ್‌ ಎಂಬ ವೆಬ್‌ಸೈಟ್‌ ಪ್ರಕಟಿಸುವ ಸುದ್ದಿಯನ್ನು ಮೂಲವಾಗಿ ಬಳಸಿಕೊಂಡಿದ್ದಾರೆ.

ಶಂಖನಾದ್‌ನಲ್ಲೇನಿದೆ?: ಮುಂಬೈನಲ್ಲಿ ಜೀಶನ್‌ಗೆ ಉದ್ಯೋಗ ನಿರಾಕರಿಸಿದ ಬಗ್ಗೆ ಮಾಧ್ಯಮಗಳು ದೊಡ್ಡ ಸುದ್ದಿ ಮಾಡುತ್ತಿವೆ. ಆದರೆ ಜೀಶನ್‌ಗೆ ಉದ್ಯೋಗ ನಿರಾಕರಿಸಿದ್ದು, ಒಂದು ಖಾಸಗಿ ಕಂಪನಿ ಎಂಬುದನ್ನು ಮರೆಯಬಾರದು. ಅದೇ ಕೇರಳದಲ್ಲಿ ರಾಜ್ಯ ಸರ್ಕಾರವೇ ಮುಸ್ಲಿಮರಿಗೆ ಮಾತ್ರ ಉದ್ಯೋಗ ಎಂದು ಹಲವು ವರ್ಷಗಳಿಂದ ಜಾಹೀರಾತು ನೀಡುತ್ತಿದೆ. ಇದೇಕೆ ಸುದ್ದಿಯಾಗುವುದಿಲ್ಲ ಎಂದು ವೆಬ್‌ಸೈಟ್‌ನ ಲೇಖನ ಪ್ರಶ್ನಿಸಿದೆ.

ಜೊತೆಗೆ ಅಲಿಘಡ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿ ಇದುವರೆಗೆ ಮುಸ್ಲಿಮೇತರರು ಉಪಕುಲಪತಿಗಳಾಗಿಲ್ಲ, ಅಲ್ಲಿನ ಹೆಚ್ಚಿನ ಶಿಕ್ಷಕರು ಮುಸ್ಲಿಮರು. ಕೇರಳದ ಪಬ್ಲಿಕ್‌ ಸರ್ವೀಸ್‌ ಕಮೀಷನ್‌ ಕೇವಲ ಮುಸ್ಲಿಮರಿಗೆ ಮಾತ್ರ ಉದ್ಯೋಗ ಎಂದು ಜಾಹೀರಾತು ನೀಡುತ್ತದೆ. ಬೆಂಗಳೂರಿನ ಖಾಸಗಿ ಶಾಲೆಯೊಂದು ಹಿಜಬ್‌ ಪಾಲಿಸುತ್ತಿರುವ ಮುಸ್ಲಿಂ ಮಹಿಳೆಯರಿಗೆ ಆದ್ಯತೆ ಎಂದು ಜಾಹೀರಾತು ನೀಡುತ್ತದೆ. ನೋಯ್ಡಾದಲ್ಲಿ ಮುಸ್ಲಿಮರಿಗೆ ಮಾತ್ರ ಮೀಸಲಾದ ಅಪಾರ್ಟ್‌ಮೆಂಟ್‌ ಇದೆ.

ಇನ್ನು ಸೆಂಟ್‌ ಸ್ಟೆಫ‌ನ್‌ನಲ್ಲೂ ಕ್ರೈಸ್ತರಿಗೆ ಮಾತ್ರ ಉದ್ಯೋಗ ನೀಡಲಾಗುತ್ತದೆ. ನೋಯ್ಡಾದ ಕಂಪನಿಯೊಂದು ಫ್ಲ್ಯಾಟ್‌ ಜಾಹೀರಾತಿನಲ್ಲಿ ಕ್ರೈಸ್ತರಿಗೆ ಮಾತ್ರ ಎಂದು ಸೂಚಿಸಿತ್ತು. ಚೆನ್ನೈ ಮೂಲದ ಡಾಟಾ ಎಂಟ್ರಿ ಕಂಪನಿಯೊಂದು ಕ್ರೈಸ್ತರಿಗೆ ಮಾತ್ರ ಉದ್ಯೋಗ ಎಂದಿತ್ತು. ಕೇರಳದ ಸಿಟಿ ಸೂಪರ್‌ ಮಾರ್ಕೆಟ್‌ನಲ್ಲಿ ಮುಸ್ಲಿಂ ಮತ್ತು ಕ್ರೈಸ್ತರಿಗೆ ಮಾತ್ರ ಉದ್ಯೋಗದ ಅವಕಾಶ ಎಂದು ಜಾಹೀರಾತು ನೀಡಿದೆ. ಆದರೂ ಇದೇಕೆ ಸುದ್ದಿಯಾಗುವುದಿಲ್ಲ ಎಂದು ಲೇಖನದಲ್ಲಿ ಪ್ರಶ್ನಿಸಲಾಗಿದೆ.

Trending videos

Back to Top