CONNECT WITH US  

ಒಗ್ಗರಣೆಯಿಂದ ದೋಸೆಯೊ ದೋಸೆಯಿಂದ ಒಗ್ಗರಣೆಯೊ !

ಬಾದಾಮ್‌ ನಮ್‌ಕೀನ್‌
ಬೇಕಾಗುವ ಸಾಮಗ್ರಿ: ಬಾದಾಮ್‌ 1/2 ಕಪ್‌, ಮೈದಾ 2 ಕಪ್‌, ಉಪ್ಪು ರುಚಿಗೆ ತಕ್ಕಷ್ಟು, ಬ್ಯಾಡಗಿ ಮೆಣಸು 4, ಕರಿಯಲು ಎಣ್ಣೆ , ಜೀರಿಗೆ 1 ಟೀ ಚಮಚ, ಓಮದ ಕಾಳು 1/2 ಟೀ ಚಮಚ, ನೀರು ಸ್ವಲ್ಪ .

ತಯಾರಿಸುವ ವಿಧಾನ : ಬಾದಾಮ್‌ನ್ನು ಬಿಸಿನೀರಿನಲ್ಲಿ 2 ಗಂಟೆಗಳ ಕಾಲ ನೆನೆಸಿ ಸಿಪ್ಪೆ ತೆಗೆದಿಡಿ. ಮಿಕ್ಸಿಗೆ ಬಾದಾಮ್‌, ಉಪ್ಪು, ಮೆಣಸು, ಜೀರಿಗೆ, ಓಮದ ಕಾಳು, ನೀರು ಸ್ವಲ್ಪ ಹಾಕಿ ನುಣ್ಣಗೆ ರುಬ್ಬಿ . ರುಬ್ಬಿದ್ದಕ್ಕೆ ಮೈದಾಹಿಟ್ಟು, 1 ಟೇಬಲ್‌ ಸ್ಪೂನ್‌ ಎಣ್ಣೆ ಹಾಕಿ ಗಟ್ಟಿ ಬೆರೆಸಿ ಒಂದು ಗಂಟೆ ಹಾಗೇ ಇಡಿ. ನಂತರ ಪೂರಿಯ ಹಾಗೆ ಲಟ್ಟಿಸಿ ನಾಲ್ಕು ಗೆರೆಹಾಕಿ ಒಂದು ಬದಿ ಮಡಚಿ ಎಣ್ಣೆಯಲ್ಲಿ ಕರಿಯಿರಿ. ಇದು ಗರಿಗರಿಯಾಗಿರುತ್ತದೆ.

ಬಾದಾಮ್‌ ಮಿಕ್ಸ್‌ಡ್‌ ಬರ್ಫಿ
ಬೇಕಾಗುವ ಸಾಮಗ್ರಿ: ಬಾದಾಮ್‌ 1 ಕಪ್‌, ಸಕ್ಕರೆ 3 ಕಪ್‌, ನೀಲಂ ಮಾವಿನಹಣ್ಣು ತುಂಡು ಮಾಡಿದ್ದು 1 ಕಪ್‌, ತುಪ್ಪ 1 ಕಪ್‌, ಏಲಕ್ಕಿ ಹುಡಿ ಸ್ವಲ್ಪ, ಕಡ್ಲೆಹುಡಿ 1/2 ಕಪ್‌, ನೀರು 1 ಕಪ್‌, ಕೇಸರಿಬಣ್ಣ  ಚಿಟಿಕೆ, ತುಪ್ಪದಲ್ಲಿ ಹುರಿದ ಬಾದಾಮ್‌ ಚೂರುಗಳು 2 ಟೀ ಸ್ಪೂನ್‌.

ತಯಾರಿಸುವ ವಿಧಾನ:  ಬಾದಾಮ್‌ನ್ನು ಕುದಿಯುವ ನೀರಿನಲ್ಲಿ ಒಂದು ಗಂಟೆ ನೆನೆಸಿ ಮುಚ್ಚಿಡಿ. ನಂತರ ಸಿಪ್ಪೆ ತೆಗೆದು ಮಿಕ್ಸಿಗೆ ಸ್ವಲ್ಪ ನೀರು ಹಾಕಿ ನುಣ್ಣಗೆ ರುಬ್ಬಿ. ಅದಕ್ಕೆ ಮಾವಿನಹಣ್ಣು , ತುಪ್ಪದಲ್ಲಿ ಹುರಿದಿಟ್ಟ ಕಡ್ಲೆಹುಡಿಯನ್ನು ಸ್ವಲ್ಪ ನೀರು ಹಾಕಿ ನುಣ್ಣಗೆ ರುಬ್ಬಿ. ಬಾಣಲೆಗೆ ಸ್ವಲ್ಪ ತುಪ್ಪ  ಹಾಕಿ ರುಬ್ಬಿದ್ದನ್ನು ಸೇರಿಸಿ, ಸಕ್ಕರೆ, ಕಲರ್‌ಹುಡಿ, ಏಲಕ್ಕಿ, ಬಾದಾಮ್‌ ಚೂರು, ತುಪ್ಪವೆಲ್ಲ ಹಾಕಿ ಗಟ್ಟಿಯಾಗಿ ಕಾಯಿಸಿ. ಮುದ್ದೆಯಾಗಿ ತಳಬಿಟ್ಟ ಮೇಲೆ ತುಪ್ಪ ಸವರಿದ ತಟ್ಟೆಗೆ ಹಾಕಿ ಹರಡಿ. ಸ್ವಲ್ಪ ಗಟ್ಟಿಯಾದ ಮೇಲೆ ಚೂರಿಯಿಂದ ಒತ್ತಿ ಗೆರೆ ಹಾಕಿಡಿ. ತಣ್ಣಗಾದ ಮೇಲೆ ತುಂಡುಗಳನ್ನು ತೆಗೆದಿಡಿ.

ಬೇಬಿ ಕಾರ್ನ್ ಕರಿ
ಬೇಕಾಗುವ ಸಾಮಗ್ರಿ: ಬೇಬಿಕಾರ್ನ್ 10, ಬ್ಯಾಡಗಿ ಮೆಣಸು 5, ತೆಂಗಿನತುರಿ 1/2 ಕಪ್‌, ಟೊಮೆಟೊ 1, ಗೋಡಂಬಿ 20, ಕೊತ್ತಂಬರಿ ಬೀಜ 1/2 ಕಪ್‌, ಕೆಂಪು ಮೆಣಸಿನ ಹುಡಿ 1 ಟೀ ಚಮಚ, ಗರಂಮಸಾಲ 2 ಟೀ ಚಮಚ, ಉಪ್ಪು ರುಚಿಗೆ ತಕ್ಕಷ್ಟು , ಶುಂಠಿ-ಬೆಳ್ಳುಳ್ಳಿ ಪೇಸ್ಟ್‌ 1 ಟೀ ಚಮಚ, ಅರಸಿನ ಹುಡಿ 1/2 ಟೀ ಚಮಚ, ಕಸ್ತೂರಿಮೇಥಿ 1 ಟೀ ಚಮಚ, ಕೊತ್ತಂಬರಿಸೊಪ್ಪು ಸ್ವಲ್ಪ.

ತಯಾರಿಸುವ ವಿಧಾನ :  ಬೇಬಿಕಾರ್ನ್ ದೊಡ್ಡದಾಗಿ ತುಂಡು ಮಾಡಿ. ಅರಸಿನ, ಮೆಣಸಿನ ಹುಡಿ, ಉಪ್ಪು ಹಾಕಿ ಬೇಯಿಸಿಡಿ. ಮಿಕ್ಸಿಗೆ ಎಲ್ಲ ಸಾಮಾನು ಹಾಕಿ ರುಬ್ಬಿ. ಬೇಯಿಸಿದ ಬೇಬಿಕಾರ್ನ್ಗೆ ಕಸ್ತೂರಿಮೇಥಿ ರುಬ್ಬಿದ ಮಸಾಲೆ ಹಾಕಿ ಕುದಿಸಿ, ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ.

ಪಂಚವರ್ಣಗಳ ಚಟ್ನಿ
ಬೇಕಾಗುವ ಸಾಮಗ್ರಿ: ಕರಿಬೇವು ಸ್ವಲ್ಪ, ಒಂದೆಲಗ ಸ್ವಲ್ಪ , ದೊಡ್ಡಪತ್ರೆ ಸ್ವಲ್ಪ, ಪುದಿನಾಸೊಪ್ಪು ಸ್ವಲ್ಪ, ಕೊತ್ತಂಬರಿಸೊಪ್ಪು ಸ್ವಲ್ಪ, ತೆಂಗಿನತುರಿ 1 ಕಪ್‌, ಶುಂಠಿ 1 ಇಂಚು ಉದ್ದ, ಹಸಿಮೆಣಸು 2, ಉಪ್ಪು ರುಚಿಗೆ, ಮೊಸರು 1/2 ಕಪ್‌, 1/2 ಟೀ ಚಮಚ ಸಕ್ಕರೆ, ಎಣ್ಣೆ 2 ಟೀ ಚಮಚ, ನೀರು ಸ್ವಲ್ಪ.

ತಯಾರಿಸುವ ವಿಧಾನ :ಬಾಣಲೆಗೆ ಸ್ವಲ್ಪ ಎಣ್ಣೆ ಹಾಕಿ ಕರಿಬೇವು, ಪುದೀನಾ, ದೊಡ್ಡಪತ್ರೆ ಹಾಕಿ ಬಾಡಿಸಿ. ಮಿಕ್ಸಿಗೆ ತೆಂಗಿನತುರಿ, ಎಲ್ಲಾ ಸಾಮಾನು, ಸೊಪ್ಪನ್ನು ಹಾಕಿ ನುಣ್ಣಗೆ ರುಬ್ಬಿ. ಆರೋಗ್ಯಕ್ಕೆ ಒಳ್ಳೆಯದು.

ಒಗ್ಗರಣೆ ದೋಸೆ
ಬೇಕಾಗುವ ಸಾಮಗ್ರಿ: ಮೈದಾ 1 ಕಪ್‌, ಬಾಂಬೆ ರವಾ 1/2 ಕಪ್‌, ಉಪ್ಪು ರುಚಿಗೆ, ಎಣ್ಣೆ 2 ಟೀ ಚಮಚ, ಸಾಸಿವೆ 2 ಟೀ ಚಮಚ, ಕರಿಬೇವು ಸ್ವಲ್ಪ, ಕೊತ್ತಂಬರಿಸೊಪ್ಪು ಸ್ವಲ್ಪ, ಕೆಂಪು ಮೆಣಸಿನ ಹುಡಿ 1 ಟೀ ಚಮಚ, ನೀರು ಸ್ವಲ್ಪ.

ತಯಾರಿಸುವ ವಿಧಾನ : ಒಂದು ಪಾತ್ರೆಗೆ ಮೈದಾ, ರವಾ, ಉಪ್ಪು , ಮೆಣಸಿನ ಹುಡಿ, ಕರಿಬೇವು, ಕೊತ್ತಂಬರಿಸೊಪ್ಪಿನ ಚೂರುಗಳನ್ನು ಹಾಕಿ ಹದ ದಪ್ಪವಾಗಿ ಬೆರೆಸಿ. ನಂತರ ಒಗ್ಗರಣೆ ಹಾಕಿ ಬೆರೆಸಿ ಒಂದು ಗಂಟೆ ನೆನೆಸಿ ಹೊರಗೆ ಇಟ್ಟು ದೋಸೆ ಮಾಡಿ. 

ರತ್ನಾ ಕಾವೇರಿಕಾನ

Trending videos

Back to Top