CONNECT WITH US  

ರೈತರ ಸಾಲ ವಸೂಲಿಗೆ ಸರ್ಕಾರದ ಕ್ರಮ

ಬಸವನಬಾಗೇವಾಡಿ: ಕೇಂದ್ರ ಮತ್ತು ರಾಜ್ಯ ಸರಕಾರಗಳು ದೊಡ್ಡ ದೊಡ್ಡ ಉದ್ಯಮಿಗಳ ಸಾವಿರಾರು ಕೋಟಿ ರೂ.ಗಳ ಸಾಲ ವಸೂಲಿ ಮಾಡುವಲ್ಲಿ ವಿಫಲವಾಗಿವೆ. ಆದರೆ ರೈತರು ಮಾಡಿದ ಸಾಲ ವಸೂಲಾತಿಗೆ ಮುಂದಾಗಿದ್ದು ಖಂಡನೀಯ. ರೈತರ ಸಾಲ ವಸೂಲಾತಿಗೆ ಇ ಟೆಂಡರ್‌ ಮೂಲಕ ರೈತರ ಭೂಮಿ ವಶಪಡಿಸಿಕೊಳ್ಳಲು ಮುಂದಾಗಿದ್ದು, ಇದನ್ನು ಕೈಬಿಡಬೇಕು ಎಂದು ಕರ್ನಾಟಕ
ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಕಾಶಿನಾಥ ಸಿಂಧೂರ, ಮಹಿಳಾ ಘಟಕದ ಅಧ್ಯಕ್ಷೆ ವಿದ್ಯಾ ಪಾಟೀಲ ಆಗ್ರಹಿಸಿದರು.

ಪಟ್ಟಣದಲ್ಲಿ ಶುಕ್ರವಾರ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತರಿಗೆ ಸಾಲ ವಸೂಲಾತಿ ನೋಟೀಸು ಕಳಿಸದೇ ಇ ಹರಾಜು ಮೂಲಕ ರೈತರ ಜಮೀನು, ಮನೆ ವಶಪಡಿಸಿಕೊಳ್ಳಲು ಸರ್ಕಾರ ಮುಂದಾಗಿದೆ. ಇತ್ತೀಚೆಗೆ ಬೆಂಗಳೂರಿನ ಜಯನಗರದಲ್ಲಿ ಇರುವ ಆಂಧ್ರಪ್ರದೇಶದ ಆಂಧ್ರ ಬ್ಯಾಂಕಿನ ಕರ್ನಾಟಕ ವಲಯ ಕಚೇರಿಯ ಬ್ಯಾಂಕಿನಲ್ಲಿ ಸಾಲ ಪಡೆದ ರೈತನ ಸಾಲ ವಸೂಲಾತಿಗೆ ನೋಟೀಸ್‌ ನೀಡದೇ, ಆತನ ಜಮೀನನ್ನು ಇ ಹರಾಜು ಮೂಲಕ ಅಕ್ರಮವಾಗಿ ಕಬಳಿಸಲು ಮುಂದಾಗಿತ್ತು. ಆದರೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಬ್ಯಾಂಕಿನ ವಿರುದ್ಧ ಹೋರಾಟ ಮಾಡಿ ಆ ಜಮೀನನ್ನು ರೈತನಿಗೆ ಮರಳಿಸುವಲ್ಲಿ ಯಶಸ್ವಿಯಾಗಿದೆ. ಇದೇ ರೀತಿ ರಾಜ್ಯದ ಯಾವುದೇ ಬ್ಯಾಂಕ್‌ ಗಳು ಮಾಡಬಾರದೆಂಬ ಉದ್ದೇಶದಿಂದ ಇಡೀ ರಾಜ್ಯಾದ್ಯಾಂತ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಹಾಗೂ ರೈತರು, ರೈತ ಮಹಿಳೆಯರು ಜೂ.14ರಂದು
ಬೆಂಗಳೂರಿನ ಜಯನಗರದಲ್ಲಿರುವ ಆಂಧ್ರ ಬ್ಯಾಂಕಿನ ಮುಂದೆ ಪ್ರತಿಭಟನೆ ನಡೆಸಲಾಗುವುದು. ಜಿಲ್ಲೆಯಿಂದ ಸುಮಾರು ಸಾವಿರಾರು ರೈತರು ಭಾಗವಹಿಸಲಿದ್ದಾರೆ. ಈ ಪ್ರತಿಭಟನೆ ಮೂಲಕ ರಾಜ್ಯ ಸರ್ಕಾರಕ್ಕೆ ಬಿಸಿ ಮುಟ್ಟಿಸಲಾಗುವುದು ಎಂದರು. 

ಆದ್ದರಿಂದ ಕೇಂದ್ರ ಹಾಗೂ ರಾಜ್ಯ ಸರಕಾರ ರೈತರ ಸಾಲ ವಸೂಲಾತಿ ತಡೆಹಿಡಿಯಬೇಕು. ರೈತರ ಎಲ್ಲ ಸಾಲ ಮನ್ನಾ ಮಾಡಬೇಕು. ಒಂದು ವೇಳೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರೊಂದಿಗೆ ಚೆಲ್ಲಾಟವಾಡಿದರೆ ಮುಂದಾ ಗುವ ಅನಾಹುತಗಳಿಗೆ ಸರಕಾರವೇ ಹೊಣೆಯಾಗುತ್ತದೆ. ರಾಜ್ಯದಲ್ಲಿ ರೈತರ ಸಾಲ ವಸೂಲಾತಿಗೆ ಮುಂದಾಗುವ ಬ್ಯಾಂಕ್‌ ಗಳ ಎದುರು ಧರಣಿ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು. 

ರೈತ ಸಂಘದ ಜಿಲ್ಲಾ ಗೌರವಾಧ್ಯಕ್ಷ ನರಸಪ್ಪ ಬಂಡಿವಡ್ಡರ, ಕಾರ್ಯದರ್ಶಿ ಬಸನಗೌಡ ಧರ್ಮಗೊಂಡ, ನಿಂಗರಾಜ ಅಲೂರ, ರೈತ ಮುಖಂಡರಾದ ಬಾಲು ಹೂಗಾರ, ಕಾಶಿನಾಥ ಪತ್ತಾರ ಇತರರು ಇದ್ದರು.


Trending videos

Back to Top