CONNECT WITH US  

ಆರು ಸಿನಿಮಾ ರಿಲೀಸ್‌ : ಮೇ ಕೊನೇ ಶುಕ್ರವಾರ.; ಗೆಲ್ಲೋದ್ಯಾರು ಪಕ್ಕಾ!

ಕಳೆದ ವಾರ ಮೂರು ಸಿನಿಮಾ ಬಿಡುಗಡೆಯಾಗಿತ್ತು. ಈ ವಾರ ಬರೋಬ್ಬರಿ ಆರು ಸಿನಿಮಾಗಳು ಬಿಡುಗಡೆಯಾಗುತ್ತಿವೆ.ಅಲ್ಲಿಗೆ ಮತ್ತೆ ರಿಲೀಸ್‌ ಬಿಝಿ ಆರಂಭವಾಗಿದೆ ಎಂದುಕೊಂಡರೆ ತಪ್ಪಲ್ಲ. ಐದು ಚಿತ್ರಗಳಲ್ಲಿ ನಾಲ್ಕು ಹೊಸಬರ ಚಿತ್ರಗಳು ಬಿಡುಗಡೆಯಾಗುತ್ತಿವೆ. ಕೆಲವು ಚಿತ್ರತಂಡಗಳಿಗೆ ಚಿತ್ರಮಂದಿರಗಳು ಸಿಗುವುದರೊಂದಿಗೆ ಬಿಡುಗಡೆಯನ್ನು ಘೋಷಿಸಿಕೊಂಡಿವೆ. ರವಿಚಂದ್ರನ್‌ ಅವರ "ಅಪೂರ್ವ'ದ ಜೊತೆಗೆ ಹೊಸಬರ "ಮಿಸ್ಟರ್‌ ಮೊಮ್ಮಗ', "ಶಾಲಿನಿ', "ಲೇಹ್ಯ ಅಜ್ಜಿ ಲೇಹ್ಯ', "ಕರ್ವ' ಹಾಗೂ
"ಕೋಮಾ' ಚಿತ್ರಗಳು ಈ ವಾರ ಬಿಡುಗಡೆಯಾಗುತ್ತಿವೆ.

ಈ ಆರು ಚಿತ್ರಗಳಲ್ಲಿ ರವಿಚಂದ್ರನ್‌ ಅವರ "ಅಪೂರ್ವ' ಚಿತ್ರ ಸಾಕಷ್ಟು ನಿರೀಕ್ಷೆ ಹುಟ್ಟಿಸಿದೆ. ಎರಡು ಪಾತ್ರಗಳ ಸುತ್ತವೇ ಸುತ್ತುವ
"ಅಪೂರ್ವ' ಒಂದು ಹೊಸ ಪ್ರಯೋಗದ ಚಿತ್ರವಾಗಿ ಪ್ರೇಕ್ಷಕರಿಗೆ ಇಷ್ಟವಾಗುತ್ತದೆ ಎನ್ನಲಾಗಿದೆ. ರವಿಚಂದ್ರನ್‌ ಅವರು ಇಲ್ಲಿ ವಿಭಿನ್ನ
ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ನಟ ಸುದೀಪ್‌ ಸೇರಿದಂತೆ ಅನೇಕರು ಗೆಸ್ಟ್‌ ಅಪಿಯರೆನ್ಸ್‌ ಮಾಡಿದ್ದಾರೆ ಕೂಡಾ. ಈ
ಚಿತ್ರದ ಮೂಲಕ ಮೈಸೂರಿನ ಹುಡುಗಿಯನ್ನು ನಾಯಕಿಯನ್ನಾಗಿ ಪರಿಚಯಿಸುತ್ತಿದ್ದಾರೆ ರವಿಚಂದ್ರನ್‌. ಈ ಚಿತ್ರಕ್ಕೆ ರವಿಚಂದ್ರನ್‌
ಕಥೆ, ಚಿತ್ರಕಥೆ, ಸಂಭಾಷಣೆ ಮತ್ತು ಸಾಹಿತ್ಯ ಬರೆಯುವುದರ ಜೊತೆಗೆ, ನಟಿಸಿ, ಸಂಗೀತ ಸಂಯೋಜಿಸಿ, ಸಂಕಲನವನ್ನೂ
ಮಾಡಿದ್ದಾರೆ. ಈ ಮೂಲಕ ಹಲವು ಜವಾಬ್ದಾರಿಗಳನ್ನು ತಮ್ಮ ಬೆನ್ನ ಮೇಲೆ ಹೊತ್ತಿದ್ದಾರೆ.

ಇನ್ನು, ಹೊಸಬರ "ಮಿಸ್ಟರ್‌ ಮೊಮ್ಮಗ' ಚಿತ್ರ ತಮಿಳಿನ "ಮಂಜಾಪೈ' ರೀಮೇಕ್‌ ಆಗಿದ್ದು, ರವಿ ಗೌಡ ಹಾಗೂ ಓವಿಯಾ ಈ
ಚಿತ್ರದಲ್ಲಿ ನಟಿಸಿದ್ದಾರೆ. ಚಿತ್ರ ಸಂತೋಷ್‌ ಚಿತ್ರಮಂದಿರದಲ್ಲಿ ಬಿಡುಗಡೆಯಾಗುತ್ತಿದೆ. ಈ ಹಿಂದೆ "ಕಿರಾತಕ' ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದ ಓವಿಯಾಗೆ ಕನ್ನಡದಲ್ಲಿ ಇದು ಎರಡನೇ ಸಿನಿಮಾ. ಈಗಾಗಲೇ ಚಿತ್ರದ ಹಾಡುಗಳು ಬಿಡುಗಡೆಯಾಗಿದ್ದು, ಚಿತ್ರ ಈ ವಾರ ತೆರೆಕಾಣುತ್ತಿದೆ. ಹಾರರ್‌ ಸಿನಿಮಾಗಳ ಪಟ್ಟಿಗೆ ಹೊಸದಾಗಿ ಸೇರ್ಪಡೆಯಾಗುತ್ತಿರುವ ಚಿತ್ರ "ಶಾಲಿನಿ'. "ಅತ್ಯಾಚಾರಿಗಳೇ ಎಚ್ಚರ' ಎಂಬ ಅಡಿಬರಹ ಕೂಡಾ ಈ ಚಿತ್ರಕ್ಕಿದೆ. ಅಲ್ಲಿಗೆ ಇದು ದೆವ್ವವಾಗಿ ಸೇಡು ತೀರಿಸಿಕೊಳ್ಳುವ ಹೆಣ್ಣಿನ ಕಥೆ ಎಂದು ನೀವಂದುಕೊಳ್ಳಲಡ್ಡಿಯಿಲ್ಲ. ಚಿತ್ರವನ್ನು ಸಿ.ಮಲ್ಲಿಕಾರ್ಜುನ್‌ ನಿರ್ದೇಶಿಸಿದ್ದಾರೆ. ಬೆಂಗಳೂರಿನ ಮೇನಕ ಚಿತ್ರಮಂದಿರದಲ್ಲಿ ಈ ಚಿತ್ರ ಬಿಡುಗಡೆಯಾಗುತ್ತಿದೆ. ಅಲ್ಲಿಗೆ ಕಳೆದ ವಾರ ತೆರಕಂಡ "ತಾಂಡವ' ಜಾಗಕ್ಕೆ ಶಾಲಿನಿ ಬರುತ್ತಾಳೆ ಎನ್ನಬಹುದು.

"ಲೇಹ್ಯ ಅಜ್ಜಿ ಲೇಹ್ಯ' ಎಂಬ ಚಿತ್ರವೊಂದು ಕೂಡಾ ಈ ವಾರ ತನ್ನ ಬಿಡುಗಡೆಯನ್ನು ಘೋಷಿಸಿಕೊಂಡಿದೆ. ಕೆ.ಜಿ.ರಸ್ತೆಯಲ್ಲಿ ಪ್ರಮುಖ ಚಿತ್ರಮಂದಿರ ಸಿಗುವ ವಿಶ್ವಾಸದೊಂದಿಗೆ ಬಿಡುಗಡೆಯ ದಿನಾಂಕವನ್ನು ಘೋಷಿಸಿಕೊಂಡಿರುವ ಈ ಚಿತ್ರವನ್ನು ದೇವರಾಜು ಎಂಬವರು ನಿರ್ದೇಶಿಸಿದ್ದಾರೆ.

ಇದರ ಜೊತೆಗೆ "ಕೋಮಾ' ಎಂಬ ಚಿತ್ರ ಕೂಡಾ ಈ ವಾರ ತೆರೆಕಾಣುತ್ತಿದೆ. ಲವ್‌ ಸ್ಟೋರಿಯೊಂದಿಗೆ ಸಾಗುವ ಈ ಸಿನಿಮಾದಲ್ಲಿ ಸಾಕಷ್ಟು ಹೊಸ ಪ್ರತಿಭೆಗಳು ಕಾಣಿಸಿಕೊಂಡಿವೆ. ಅವರ ಜೊತೆಗೆ ಹಿರಿಯ ನಿರ್ದೇಶಕ ಭಗವಾನ್‌, ನಟ-ನಿರ್ದೇಶಕ ಗುರುಪ್ರಸಾದ್‌ ಸಹ ಈಚಿತ್ರದಲ್ಲಿ ನಟಿಸಿದ್ದಾರೆ ಎನ್ನುವುದು ವಿಶೇಷ.

Trending videos

Back to Top