ಗಣೇಶ ಪ್ರತಿಷ್ಠಾಪನೆ ನೆಲಬಾಡಿಗೆ ವಿನಾಯ್ತಿ

ಬೆಂಗಳೂರು: ಪ್ರಸಕ್ತ ಸಾಲಿನ ಗಣೇಶ ಉತ್ಸವ ಈ ಬಾರಿ ಭಕ್ತರ ಪಾಲಿಗೆ ತುಸು ಹೊರೆ ಆಗಲಿದೆ. ಸಾರ್ವಜನಿಕ ಸ್ಥಳಗಳಲ್ಲಿ ಗಣೇಶನ ಪ್ರತಿಷ್ಠಾಪನೆಗೆ ನೆಲ ಬಾಡಿಗೆಯಿಂದ ಬಿಬಿಎಂಪಿ ವಿನಾಯ್ತಿ ನೀಡಿದೆ. ಆದರೆ, ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯು ಐದು ಸಾವಿರ ಶುಲ್ಕ ವಿಧಿಸಿದೆ. ಇದಕ್ಕೆ ವಿವಿಧ ಸಂಘ-ಸಂಸ್ಥೆಗಳಿಂದ ಆಕ್ಷೇಪ ವ್ಯಕ್ತವಾಗಿದೆ.
ಸಾರ್ವಜನಿಕ ಸ್ಥಳಗಳಲ್ಲಿ ಬಹುದಿನಗಳ ಕಾಲ ಪೆಂಡಾಲ್ಗಳನ್ನು ಹಾಕಿ, ಗಣೇಶನ ಪ್ರತಿಷ್ಠಾಪನೆ ಮಾಡಿ, ದೊಡ್ಡ ಕಾರ್ಯಕ್ರಮಗಳನ್ನು ಆಯೋಜಿಸುವವರು ಈ ಸಂಬಂಧ ನಿರಾಕ್ಷೇಪಣೆ ಪತ್ರ ಪಡೆಯುವುದು ಕಡ್ಡಾಯ. ಇದಕ್ಕಾಗಿ ಐದು ಸಾವಿರ ರೂ. ಶುಲ್ಕ ವಿಧಿಸಲಾಗಿದೆ ಎಂದು ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆ ಪ್ರಕಟಣೆ ತಿಳಿಸಿದೆ.
ದೊಡ್ಡ ಕಾರ್ಯಕ್ರಮ ಹಮ್ಮಿಕೊಂಡ ಸ್ಥಳಗಳಿಗೆ ಅಗ್ನಿ ಅವಘಡ ಸಂಭವಿಸಬಹುದಾದ ಸ್ಥಳಗಳ ಪರಿಶೀಲನೆ ನಡೆಸಿ, ನಿರಾಕ್ಷೇಪಣ ಪತ್ರವನ್ನು ನೀಡತಕ್ಕದ್ದು. ಸರ್ಕಾರಿ ನಿಯಮದನ್ವಯ ಶುಲ್ಕವನ್ನು ಚಲನ್ ಮೂಲಕ ಪಾವತಿಸಿಕೊಂಡು ಅರ್ಜಿದಾರರಿಗೆ ನಿರಾಕ್ಷೇಪಣಾ ಪತ್ರ ನೀಡತಕ್ಕದ್ದು ಎಂದೂ ತಿಳಿಸಿದೆ.
ಸಾರ್ವಜನಿಕ ಸ್ಥಳಗಳಲ್ಲಿ ಸಾಮಾನ್ಯವಾಗಿ ಪ್ರತಿಷ್ಠಾಪಿಸುವ ಸಣ್ಣಪುಟ್ಟ ಗಣೇಶ ಮೂರ್ತಿಗಳಿಗೆ ಈ ಆದೇಶ ಅನ್ವಯಿಸುವುದಿಲ್ಲ ಎಂದು ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆ ಪೊಲೀಸ್ ಮಹಾನಿರ್ದೇಶಕ ಎಂ.ಎನ್. ರೆಡ್ಡಿ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದ್ದಾರೆ.