CONNECT WITH US  

ಸಂವಿಧಾನ ಕಾಪಾಡುವುದು ಎಲ್ಲರ ಕರ್ತವ್ಯ

ಚಾಮರಾಜನಗರ: ಬಾಬಾಸಾಹೇಬ್‌ ಡಾ.ಅಂಬೇಡ್ಕರ್‌ ರಚಿಸಿರುವ ಸಂವಿಧಾನ, ಮೀಸಲಾತಿಗೆ ಕುತ್ತು ಬಂದಿದ್ದು ನಾವೆಲ್ಲರೂ ಒಗ್ಗಟ್ಟಾಗಿ ಸಂವಿಧಾನ ಕಾಪಾಡಿಕೊಳ್ಳಬೇಕಿದೆ ಎಂದು ಮೈಸೂರು ಉರಿಲಿಂಗಿ ಪೆದ್ದಿಮಠದ ಜ್ಞಾನಪ್ರಕಾಶ ಸ್ವಾಮೀಜಿ ಹೇಳಿದರು.

ನಗರದ ಸೆಸ್ಕ್ ಕಚೇರಿ ಆವರಣದಲ್ಲಿ ಕರ್ನಾಟಕ ವಿದ್ಯುತ್ಛಕ್ತಿ ಮಂಡಳಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಸಂಸ್ಥೆ ವಿಭಾಗೀಯ ಸಮಿತಿ, ವೃತ್ತ ಸಮಿತಿ ವತಿಯಿಂದ ನಡೆದ ಭೀಮ ಸಂಭ್ರಮ-2018 ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಅಂಬೇಡ್ಕರ್‌ ಜಾತಿಗೆ ಸೀಮಿತರಲ್ಲ: ಭಾರತದ ಹೆಣ್ಣುಮಕ್ಕಳಿಗೆ ಬದುಕುವ, ಮಾತನಾಡುವ, ಧಾರ್ಮಿಕ ಹಕ್ಕು ಸೇರಿದಂತೆ ಎಲ್ಲ ಹಕ್ಕುಗಳನ್ನು ಸಂವಿಧಾನದಲ್ಲಿ ಅಂಬೇಡ್ಕರ್‌ ಕಲ್ಪಿಸಿದ್ದಾರೆ. ಅಲ್ಲದೆ ದೇಶದ ಪ್ರತಿಯೊಬ್ಬರಿಗೂ ಮತದಾನ ಹಕ್ಕು, ಶಿಕ್ಷಣ, ಆಸ್ತಿ, ಉದ್ಯೋಗ ಹಕ್ಕು ನೀಡಿ ಸಮಾನತೆ ಕಲ್ಪಿಸಿಕೊಟ್ಟಿದ್ದಾರೆ. ಆದರೂ ಅಂಬೇಡ್ಕರ್‌ ಅವರನ್ನು ಎಸ್‌ಸಿ, ಎಸ್‌ಟಿಗಳಿಗೆ ಸೀಮಿತಿಗೊಳಿಸಿ, ಜಾತಿಯ ಚೌಕಟ್ಟಿನಲ್ಲಿ ನೋಡುತ್ತಿರುವುದು ವಿಷಾದದ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದರು.

ಭಾರತದ ಪ್ರತಿಯೊಬ್ಬ ಪ್ರಜೆಯೂ ಅಂಬೇಡ್ಕರ್‌ ಜಯಂತಿ ಆಚರಣೆ ಮಾಡಬೇಕಿತ್ತು. ಮನುವಾದಿಗಳು ಅಂಬೇಡ್ಕರ್‌ ಸಂವಿಧಾನ, ಮೀಸಲಾತಿ, ಪ್ರಜಾಪ್ರಭುತ್ವ ನಾಶಪಡಿಸಿ, ಮನುವಾದಿ ಸಂವಿಧಾನ ತರಲು ಸಜ್ಜಾಗುತ್ತಿದ್ದಾರೆ. ಇದರ ಬಗ್ಗೆ ಎಚ್ಚೆತ್ತುಕೊಂಡು ದೇಶದ ಮನುವಾದಿ ಸಂವಿಧಾನವನ್ನು ಬೇರು ಸಹಿತ ಕಿತ್ತು ಹಾಕಬೇಕಿದೆ ಎಂದರು.

ಸುಭದ್ರ ಭಾರತ ನಿರ್ಮಾಣ: ಬಡ್ತಿ ಮೀಸಲಾತಿ ಜಾರಿಗೆ ರಾಷ್ಟ್ರಪತಿಯವರು ಅಂಕಿತ ಹಾಕಿದ್ದಾರೆ. ಆದರು ಕೂಡ ಮುಖ್ಯಮಂತ್ರಿ ಕುಮಾರಸ್ವಾಮಿ ನೇತೃತ್ವ ಕಾಂಗ್ರೆಸ್‌, ಜೆಡಿಎಸ್‌ ಸರ್ಕಾರ ಮುಂಬಡ್ತಿ ಮೀಸಲಾತಿ ಜಾರಿ ಮಾಡುವಲ್ಲಿ ಮೀನಾಮೇಷ ಎಣಿಸುತ್ತಿದೆ. ಅಂಬೇಡ್ಕರ್‌ ಅಭಿಮಾನ ಬೇಕಿಲ್ಲ. ಅನುಯಾಯಿಗಳಾಗಬೇಕು ಆಗ ಮಾತ್ರ ಸುಭದ್ರ ಭಾರತ ನಿರ್ಮಾಣ ಸಾಧ್ಯ ಎಂದು ಹೇಳಿದರು.

ಹಕ್ಕುಗಳಿಗೆ ಹೋರಾಡಿ: ಎಸ್‌ಸಿ, ಎಸ್‌ಟಿಗಳಿಗೆ ಸರ್ಕಾರ ಸಂಪೂರ್ಣವಾಗಿ ಶೇ. 18 ರಷ್ಟು ಮೀಸಲಾತಿ ನೀಡಿಲ್ಲ ಕೇವಲ ಶೇ.10ರಷ್ಟು ಮೀಸಲಾತಿಯನ್ನು ನೀಡಿದೆ. ನಮ್ಮ ಸಂವಿಧಾನ ಬದ್ದ ಮೀಸಲಾತಿ ನಮಗೆ ದೊರೆತಿಲ್ಲ. ಸಂವಿಧಾನ ಜಾರಿ ಮಾಡುವ ಸ್ಥಳದಲ್ಲಿ ಮನುವಾದಿಗಳು ಇರುವುದರಿಂದ ಸಂವಿಧಾನ ಸಂಪೂರ್ಣ ಜಾರಿಯಾಗಿಲ್ಲ ಸಂವಿಧಾನ ಬದ್ದ ನಮ್ಮ ಹಕ್ಕುಗಳನ್ನು ಪಡೆದುಕೊಳ್ಳಲು ಹೋರಾಟ ರೂಪಿಸಿಕೊಳ್ಳಬೇಕಿದೆ.

ಸಾಮಾಜಿಕ ನ್ಯಾಯದ ಪ್ರತಿಬಿಂಬವಾಗಿರುವ ಮೀಸಲಾತಿಯನ್ನು ಸರ್ಕಾರ ಪ್ರಜಾಪ್ರಭುತ್ವ ಉಳಿಸಿ ಸಾಮಾಜಿಕ ನ್ಯಾಯ ಕೊಡಬೇಕಿದೆ ಎಂದರು. ಕೊಳ್ಳೇಗಾಲ ಜೇತವನದ ಸುಗತಪಾಲ ಬಂತೇಜಿ ಮಾತನಾಡಿ, ಅಂಬೇಡ್ಕರ್‌ ಆಶಯಗಳನ್ನು ಅನುಕರಣೆ ಮಾಡಬೇಕು. ಬುದ್ಧ, ಬಸವ, ಅಂಬೇಡ್ಕರ್‌ ಅವರ ಮಾರ್ಗದಲ್ಲೇ ನಡೆದು ಭೌದ್ದ ಧರ್ಮ ಸ್ವೀಕರಿಸಬೇಕು ಎಂದರು.

ಸೆಸ್ಕ್ ವಿಭಾಗ ಕಚೇರಿ ಕಾರ್ಯನಿರ್ವಾಹಕ ಎಂಜಿನಿಯರ್‌ ಪೂರ್ಣಚಂದ್ರತೇಜಸ್ವಿ ಮಾತನಾಡಿ, ಅಂಬೇಡ್ಕರ್‌ ಎಂದರೆ ಸಂಪೂರ್ಣ ಜಗತ್ತೇ ಕಾಣಿಸುತ್ತದೆ. ಪ್ರತಿಕ್ಷಣವೂ ಅಂಬೇಡ್ಕರ್‌ರವರ ಬಗ್ಗೆ ಅಧ್ಯಯನ ಮಾಡಬೇಕಿದೆ. ಅವರ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕಿದೆ ಎಂದರು.

ಸಿದ್ದರಾಮೇಶ್ವರ ಸ್ವಾಮೀಜಿ, ಕರ್ನಾಟಕ ವಿದ್ಯುತ್ಛಕ್ತಿ ಮಂಡಳಿ ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಠ ವರ್ಗಗಳ ಕಲ್ಯಾಣ ಸಂಸ್ಥೆ ಅಧ್ಯಕ್ಷ ಕೆ.ದಾಸ್‌ಪ್ರಕಾಶ್‌, ಕಾರ್ಯನಿರ್ವಾಹಕ ಎಂಜಿನಿಯರ್‌ ಎಚ್‌.ಕೆ.ರಮೇಶ್‌, ಲೆಕ್ಕಾಧಿಕಾರಿಗಳಾದ ಆರ್‌.ಭಾಸ್ಕರ್‌, ಬೆಳ್ಳಯ್ಯ,  ಸಹಾಯಕ ನಿರ್ವಾಹಕರಾದ ರಾಜು, ದೇವರಾಜಯ್ಯ, ಶಶಿಧರ್‌, ಸಿದ್ದಲಿಂಗಪ್ಪ, ನಂದಿನಿ, ಎ.ಆರ್‌.ಮಂಗಳಾಂಬಾ, ಪ್ರಜಾ ಪರಿವರ್ತನ ವೇದಿಕೆ ಅಧ್ಯಕ್ಷ ಸಿ.ಎಂ.ಕೃಷ್ಣಮೂರ್ತಿ, ದಲಿತ ಮುಖಂಡರಾದ ಆಲೂರು ನಾಗೇಂದ್ರ, ಕೆ.ಎಂ.ನಾಗರಾಜು ಇತರರು ಹಾಜರಿದ್ದರು. 

Trending videos

Back to Top