CONNECT WITH US  

ಗೌರಸಮುದ್ರ ಜಾತ್ರೆಗೆ ಸಕಲ ಸಿದ್ಧತೆ

ಚಳ್ಳಕೆರೆ: ರಾಜ್ಯದ ಪ್ರಸಿದ್ಧ ಜಾತ್ರೆಗಳಲ್ಲಿ ಒಂದಾಗಿರುವ ತಾಲೂಕಿನ ಗೌರಸಮುದ್ರ ಗ್ರಾಮದ ಮಾರಮ್ಮ ದೇವಿ ಜಾತ್ರೆ ಸೆ. 10ರಿಂದ 12ರವರೆಗೆ ವಿಜೃಂಭಣೆಯಿಂದ ನಡೆಯಲಿದ್ದು, ಇದಕ್ಕಾಗಿ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ.

ಇಂದಿನ ಆಧುನಿಕ ಯುಗದಲ್ಲೂ ಸಾವಿರಾರು ಭಕ್ತರು ಎತ್ತಿನಗಾಡಿಗಳಲ್ಲಿ ಆಗಮಿಸಿ ದೇವಿಯ ದರ್ಶನ ಪಡೆಯುವುದು
ವಿಶೇಷ. ಪ್ರತಿ ವರ್ಷ ಜಾತ್ರೆಗೆ ಆಗಮಿಸುವ ಭಕ್ತರ ಸಂಖ್ಯೆ ಹೆಚ್ಚುತ್ತಿದೆ. ಭಕ್ತಾದಿಗಳಿಗೆ ಮೂಲ ಸೌಲಭ್ಯ ಕಲ್ಪಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ.

ಗ್ರಾಮದ ದೇವಸ್ಥಾನದಿಂದ ಮೆರವಣಿಗೆಯಲ್ಲಿ ಆಗಮಿಸುವ ದೇವಿ ಮೂರ್ತಿಯನ್ನು ಊರ ಹೊರಗಿನ ತುಮಲದಲ್ಲಿ ಪ್ರತಿಷ್ಠಾಪನೆ ಮಾಡಲಾಗುತ್ತದೆ. ಅಲ್ಲಿ ಪೂಜಾರರು ಕಂಬ ಹತ್ತಿ ದೀಪ ಹಚ್ಚುವ ಮೂಲಕ ಜಾತ್ರೆಗೆ ಚಾಲನೆ ನೀಡುವುದು
ವಾಡಿಕೆ. ಜಾತ್ರೆಗೆ ಬರುವ ಭಕ್ತರು ತಮ್ಮ ಜಾನುವಾರಗಳನ್ನೂ ದೇವಿ ದರ್ಶನಕ್ಕೆ ಕರೆ ತರುವ ಪದ್ಧತಿ ಇದ್ದು, ಜಾನುವಾರುಗಳಿಗೆ ಪತ್ಯೇಕ ಬ್ಯಾರಿಕೇಡ್‌ ನಿರ್ಮಿಸಿ ಯಾವುದೇ ತೊಂದರೆಯಾಗದಂತೆ ಜಾಗೃತೆ ವಹಿಸಲಾಗಿದೆ.

ಉಪವಿಭಾಗದ ಡಿವೈಸ್ಪಿ ಎಸ್‌. ರೋಷನ್‌ ಜಮೀರ್‌ ಜಾತ್ರಾ ಸಿದ್ಧತೆ ಬಗ್ಗೆ ಮಾಹಿತಿ ನೀಡಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳು ಮತ್ತು ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳ ಮಾರ್ಗದರ್ಶನದಲ್ಲಿ ವೃತ್ತ ನಿರೀಕ್ಷಕ ಎನ್‌.
ತಿಮ್ಮಣ್ಣ, ತಳಕು ಠಾಣೆ ಪಿಎಸ್‌ಐ ಶಿವಕುಮಾರ್‌ ಮತ್ತು ಸಿಬ್ಬಂದಿ ಕಳೆದ ಒಂದು ವಾರದಿಂದ ಜಾತ್ರೆಗೆ ಬರುವ ಭಕ್ತಾದಿಗಳಿಗೆ ಅನುಕೂಲ ಕಲ್ಪಿಸಲು ಶ್ರಮಿಸುತ್ತಿದ್ದಾರೆ. ಈ ಬಾರಿ ಗ್ರಾಮದ ಮಾರಮ್ಮ ದೇವಸ್ಥಾನ, ತುಮಲು
ಪ್ರದೇಶದಲ್ಲಿ ಹಾಗೂ ಸುತ್ತಮುತ್ತ ಪೊಲೀಸ್‌ ಇಲಾಖೆ ಸಿಸಿ ಕ್ಯಾಮೆರಾ ಅಳವಡಿಸಿದೆ. ಕಳೆದ ಬಾರಿಗಿಂತ ಈ ಸಲ ಹೆಚ್ಚಿನ ಸಂಖ್ಯೆಯಲ್ಲಿ ಅಳವಡಿಕೆ ಮಾಡಲಾಗಿದೆ. ವಾಹನ ಸಂಚಾರಕ್ಕೆ ಯಾವುದೇ ತೊಂದರೆಯಾಗದಂತೆ ರಸ್ತೆಗಳ ಎರಡೂ ಬದಿಯನ್ನು ವಿಸ್ತರಣೆ ಮಾಡಲಾಗಿದೆ. 

ದೇವಸ್ಥಾನಕ್ಕೆ ಬರುವ ವಾಹನಗಳನ್ನು ಸ್ವಲ್ಪ ದೂರದಲ್ಲೇ ತಡೆದು ನೇರವಾಗಿ ತುಮಲು ಪ್ರದೇಶಕ್ಕೆ ತೆರಳಲು ವ್ಯವಸ್ಥೆ ಮಾಡಲಾಗಿದೆ. ಐದು ಕಡೆ ಸಹಾಯವಾಣಿ ಕೇಂದ್ರ ಹಾಗೂ ನಾಲ್ಕು ಕಡೆ ಚೆಕ್‌ಪೋಸ್ಟ್‌ಗಳನ್ನು ಸ್ಥಾಪಿಸಲಾಗಿದೆ. ತುಮಲು ಪ್ರದೇಶದ ಒಳಆವರಣದಲ್ಲಿ ವಾಚ್‌ ಟವರ್‌ ನಿರ್ಮಿಸಿ ನಿಗಾ ವಹಿಸಲಾಗುವುದು ಎಂದರು.

ಪ್ರಾಣಿ ಬಲಿ ನಿಷೇಧ: ಭಕ್ತಾದಿಗಳು ಪ್ರಾಣಿ ಬಲಿ ಕೊಡುವುದು, ಬೇವಿನಸೀರೆ ಉಡುವುದನ್ನು ನಿಷೇಧಿಸಲಾಗಿದೆ. ಜಾತ್ರೆಯಲ್ಲಿ ಅನಗತ್ಯವಾಗಿ ಕಿರಿಕಿರಿ ಉಂಟು ಮಾಡುವ ಕಿಡಿಗೇಡಿಗಳನ್ನು ಪತ್ತೆ ಹಚ್ಚಲು ವಿಶೇಷ ತಂಡ ರಚಿಸಲಾಗಿದೆ. ಜಿಲ್ಲಾಧಿಕಾರಿಗಳ ಮತ್ತು ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯನಿರ್ವಹಣಾಧಿ ಕಾರಿಗಳ ಮಾರ್ಗದರ್ಶನದಲ್ಲಿ ಮಾರಮ್ಮ ದೇವಿ ದೇವಸ್ಥಾನದ ಮುಂದೆ ಆರೋಗ್ಯ ಕೇಂದ್ರವನ್ನು ಸ್ಥಾಪಿಸಲಾಗಿದೆ. ಗ್ರಾಮದಲ್ಲಿ ಕುಡಿಯುವ ನೀರಿನ ತೊಂದರೆ ಉಂಟಾಗದಂತೆ ಹೆಚ್ಚುವರಿ ನಲ್ಲಿ ಅಳವಡಿಸಲಾಗಿದೆ. ಬೆಳಕಿನ ವ್ಯವಸ್ಥೆ ಮಾಡಲಾಗಿದೆ, ರೋಗ ನಿಯಂತ್ರಣಕ್ಕೆ
ಆರೋಗ್ಯ ಇಲಾಖೆ ಮುಂಜಾಗ್ರತಾ ಕ್ರಮ ಕೈಗೊಂಡಿದೆ. ಸ್ಥಳೀಯ ಗ್ರಾಮ ಪಂಚಾಯತ್‌ ಆಡಳಿತ ದೇವಸ್ಥಾನ ಸುತ್ತಮುತ್ತ ಹಾಗೂ ಇನ್ನಿತರ ಪ್ರದೇಶಗಳನ್ನು ಸ್ವತ್ಛಗೊಳಿಸಿ ಡಿಡಿಟಿ ಸಿಂಪರಣೆ ಮಾಡಿದೆ. ದೇವಸ್ಥಾನ ರಸ್ತೆಯ ಇಕ್ಕೆಲಗಳಲ್ಲಿ ಅಂಗಡಿಗಳು ತಲೆ ಎತ್ತದಂತೆ ಬ್ಯಾರಿಕೇಡ್‌ ಹಾಕಲಾಗಿದೆ. ಒಟ್ಟಿನಲ್ಲಿ ಮಾರಸಮುದ್ರ ಜಾತ್ರೆಗೆ ಕ್ಷಣಗಣನೆ
ಆರಂಭವಾಗಿದ್ದು, ವಿವಿಧ ಇಲಾಖೆಗಳ ಅಧಿಕಾರಿಗಳು ಜಾತ್ರೆಯನ್ನು ಯಶಸ್ವಿಯಾಗಿ ನಡೆಸಲು ಪ್ರಯತ್ನ ನಡೆಸಿದ್ದಾರೆ.


Trending videos

Back to Top