CONNECT WITH US  

ನನ್ನನ್ನೇ ಮುಗಿಸೋಕೆ ಬಂದಿದ್ದಾರೆ ಅನಿಸುತ್ತೆ

ರೂಪತಾರಾ

ಇವತ್ತೆಂಥ ಬುಧವಾರವಾ? ಆಗಿನ್ನೂ "ಅಮ್ಮಾ ಐ ಲವ್‌ ಯೂ' ಚಿತ್ರ ಬಿಡುಗಡೆಯಾಗಿರಲಿಲ್ಲ. ಅದರ ಕೊನೆಯ ಹಂತದ ಕೆಲಸಗಳು ನಡೆಯುತಿತ್ತು. ರಾತ್ರಿ 3ರ ತನಕ ಕೆಲಸ ಮಾಡಿ, ಮಲಗಿದ್ದರು ಗುರುಕಿರಣ್‌. ಬೆಳಿಗ್ಗೆ ಮೀಟಿಂಗ್‌ಗಳ ಮೇಲೆ ಮೀಟಿಂಗ್‌ಗಳು. ಈ ಮಧ್ಯೆ "ರೂಪತಾರಾ'ಕ್ಕೊಂದು ಸಂದರ್ಶನ ಬೇರೆ. ಇನ್ನೂ ನಿದ್ರೆ ಮಂಪರಿನಲ್ಲಿದ್ದ ಗುರುಕಿರಣ್‌ಗೆ ಅಂದು ಯಾವ ದಿನ ಎಂಬುದೇ ಮರೆತಂಗಿತ್ತು.

ಅದೇ ಮಂಪರಿನಲ್ಲಿ ಅವರು ಮಾತಿಗೆ ಅಣಿಯಾದರು, ಮುಖವನ್ನೊಮ್ಮೆ ಎರಡೂ ಕೈಗಳಿಂದ ಒರೆಸಿಕೊಂಡು, ಮುಂದಿದ್ದ ಟೀ ಕಪ್ಪಿನಿಂದ ಒಮ್ಮೆ ಟೀ ಹೀರುತ್ತಿದ್ದಂತೆಯೇ ಅವರಿಗೊಂದಿಷ್ಟು ಚೈತನ್ಯ ಬಂದಿತು. ಗುಂಗುರು ಕೂದಲನ್ನೊಮ್ಮೆ ನೇವರಿಸಿಕೊಂಡು ಅವರು ಮಾತಿಗೆ ಕುಳಿತರು. ಎಲ್ಲಿ ಗುರುಕಿರಣ್‌ ಇತ್ತೀಚೆಗೆ ಸಂಗೀತ ನಿರ್ದೇಶನ ಮಾಡೋದನ್ನೇ ಕಡಿಮೆ ಮಾಡಿಬಿಟ್ಟಿದ್ದಾರಲ್ಲ ಎಂಬ ಪ್ರಶ್ನೆ ಬರುತ್ತಿದ್ದಂತೆಯೇ ...

"ಪೂರ್ತಿ ದೂರ ಇರಲಿಲ್ಲ. ಹಾಗೆಯೇ ತುಂಬಾ ಒಳಗೂ ಇರಲಿಲ್ಲ ...': ಹಾಗಂತ ಹೇಳಿ ಒಂದು ಕ್ಷಣ ಮೌನವಾದರು ಗುರುಕಿರಣ್‌. "ಏನೇ ಮಾಡಿದರೂ ಇಷ್ಟಪಟ್ಟು ಮಾಡಬೇಕು ಅಂತ ನನ್ನ ಪ್ರಿನ್ಸಿಪಲ್‌. ಸುಮ್ಮನೆ ಟೈಮ್‌ ಇದೆ ಅಂತ ಯಾವುದೇ ಕೆಲಸ ಮಾಡಬಾರದು. ನಾನು ಸ್ವಲ್ಪ ಬಿಝಿ ಇದೆ. ಒಂದಿಷ್ಟು ಮ್ಯೂಸಿಕ್‌ ಷೋಗಳನ್ನು ಕೊಟ್ಟೆ. ಕೆಲವು ಚಿತ್ರಗಳಿಗೆ ಹಿನ್ನೆಲೆ ಸಂಗೀತ ಮಾಡಿದೆ. ನಾನು ಸಂಗೀತ ಕೊಟ್ಟ ಕೊನೆಯ ಚಿತ್ರ ಬಹುಶಃ "ನಾಗರಹಾವು' ಇರಬೇಕು.

ಅದು ಬಿಟ್ಟರೆ ಹಿನ್ನೆಲೆ ಸಂಗೀತ ಮಾಡುತ್ತಲೇ ಇದ್ದೆ. "ಆಕೆ', "ನಾನಿ' ಹೀಗೆ ಒಂದಿಷ್ಟು ಚಿತ್ರಕ್ಕೆ ಬ್ಯಾಕ್‌ಗ್ರೌಂಡ್‌ ಸ್ಕೋರ್‌ ಮಾಡಿದೆ. ಈಗ ಒಂದಿಷ್ಟು ಚಿತ್ರಗಳಿಗೆ ಮತ್ತೆ ಸಂಗೀತ ಸಂಯೋಜಿಸುತ್ತಿದ್ದೇನೆ. "ಅಮ್ಮಾ ಐ ಲವ್‌ ಯೂ' ಮುಂದಿನ ವಾರ ಬಿಡುಗಡೆಯಾಗುತ್ತಿದೆ. ಅದಲ್ಲದೆ "ಕಾಲಚಕ್ರ', "ಕಾಜಲ್‌' ಮುಂತಾದ ಚಿತ್ರಗಳಿಗೆ ಸಂಗೀತ ಸಂಯೋಜಿಸುತ್ತಿದ್ದೇನೆ. ಕೆಲಸದ ವಿಷಯದಲ್ಲಿ ಎಂದಿನಂತೆ ಬಿಝಿ ಇದ್ದೇನೆ. ಆದರೆ, ಹಾಡುಗಳು ಕಡಿಮೆಯಾಗಿವೆ' ಎನ್ನುತ್ತಾರೆ ಗುರುಕಿರಣ್‌.

ಗುರುಕಿರಣ್‌ ಗಮನಿಸಿರುವಂತೆ ಸಂಗೀತದ ಮಾರುಕಟ್ಟೆಯಲ್ಲಿ ಒಂದು ಡಿಪ್‌ ಇದೆಯಂತೆ. "ಪ್ರತಿ ಬದಲಾವಣೆಯಲ್ಲೂ ಒಂದು ಡಿಪ್‌ ಇದ್ದೇ ಇರುತ್ತದೆ. ಸ್ವಲ್ಪ ನೀವೇ ಗಮನಿಸಿ, ಮುಂಚೆ ಒಂದು ಚಿತ್ರದ ಹಾಡು ಹಿಟ್‌ ಆಯಿತು ಎಂದರೆ, ಕ್ಯಾಸೆಟ್‌ ಅಥವಾ ಸಿಡಿಗಳ ಮಾರಾಟವಾಗೋದು. ಈಗ ಹಾಗಿಲ್ಲ. ಹಾಡು ಹಿಟ್‌ ಆಗಿದೆ ಅಂತ ನಾವೇ ಹೇಳಿಕೊಳ್ಳಬೇಕು. ಈ ಮಧ್ಯೆ ಯಾರು, ಎಲ್ಲಿ ಹಾಡು ಕೇಳಿದರು ಅಂತ ಗೊತ್ತೇ ಆಗುವುದಿಲ್ಲ. ಎಫ್ಎಂ ರೇಡಿಯೋಗಳಲ್ಲಿ ತಂತ್ರಜ್ಞರ ಹೆಸರುಗಳನ್ನೇ ಹೇಳ್ಳೋದಿಲ್ಲ.

ಹೆಸರು ಬರದಿದ್ದರೆ ಯಾರು ತಾನೆ ಮನಸ್ಸಿಟ್ಟು ಕೆಲಸ ಮಾಡುತ್ತಾರೆ. ಅದಲ್ಲದೆ, ಮುಂಚೆ ಹಾಡುಗಳು ಅನ್ನೋದು ಒಂದು ಚಿತ್ರದ ಭಾಗ ಆಗಿತ್ತು. ಈಗ ಒಂದು ಚಿತ್ರದಲ್ಲಿ ಹಾಡುಗಳ ಸಂಖ್ಯೆಯೂ ಕಡಿಮೆಯಾಗಿದೆ, ಹಾಡುಗಳಿಗೆ ಇಡುತ್ತಿದ್ದ ಬಜೆಟ್‌ ಸಹ ಬಹಳ ಕಡಿಮೆಯಾಗಿದೆ. ಈಗ ಏಳು ವರ್ಷಗಳಿಂದ ಎಲ್ಲಾ ಹಾಳಾಗಿದೆ. ಇದು ಕ್ರಮೇಣ ಸರಿ ಹೋಗುತ್ತದೆ. ಮುಂಚೆ ಸಂಗೀತ ಕ್ಷೇತ್ರಕ್ಕಿಂತ ಒಂದು ದೊಡ್ಡ ಸಮಸ್ಯೆಯೆಂದರೆ ಅದು ಪೈರಸಿ ಆಗಿತ್ತು.

ಅದರಿಂದಾದರೂ ಯಾರಿಗೋ ದುಡ್ಡು ಬರೋದು. ಈಗ ಹಾಗಿಲ್ಲ. ಎಲ್ಲವೂ ಫ್ರೀ. ಹಾಗಾಗಿ ಲೆಕ್ಕವೇ ಸಿಗುವುದಿಲ್ಲ. ಸುಮ್ಮನೆ ನಾವೇನೋ ಮಾಡುತ್ತಿದ್ದೀವಿ ಅಂತ ತೋರಿಸಿಕೊಳ್ಳೋಕೆ ಕೆಲಸ ಮಾಡುವ ಹಾಗಾಗಿದೆ ...' ಎಂದು ಪಾಸ್‌ ಕೊಟ್ಟರು ಗುರುಕಿರಣ್‌. ಅವರ್ಯಾಕೆ ಇತ್ತೀಚೆಗೆ ಸಂಗೀತ ಸಂಯೋಜನೆ ಮಾಡುವುದು ಕಡಿಮೆಯಾಗಿದೆ ಎಂಬ ಪ್ರಶ್ನೆಗೆ ಹೀಗೆ ಕಾರಣಗಳನ್ನು ಕೊಡುತ್ತಾ ಹೋದರು. ಅದನ್ನು ಮುಂದುವರೆಸಿದ ಅವರು, "ಅತ್ತ ಹೆಸರೂ ಇಲ್ಲ, ಇತ್ತ ದೊಡ್ಡ ಮಟ್ಟದ ಸೇಲ್ಸ್‌ ಸಹ ಇಲ್ಲ.

ಇನ್ನು ಉಳಿಯೋದು ನಾವು ಯಾರ ಜೊತೆಗೆ ಕೆಲಸ ಮಾಡುತ್ತಿದ್ದೀವಿ ಎಂಬ ವಿಷಯ. ಒಂದು ತಂಡ ಚೆನ್ನಾಗಿರಬೇಕು. ಆಗ ಕೆಲಸ ಮಾಡುವುದಕ್ಕೂ ಖುಷಿಯಾಗುತ್ತದೆ. ದುಡ್ಡಿನ ಮಾತು ಅತ್ಲಾಗಿರಲಿ, ಒಂದು ತಂಡ ಏನೋ ಉತ್ಸಾಹದಿಂದ ಚಿತ್ರ ಮಾಡುವುದಕ್ಕೆ ಕೈ ಹಾಕಿದರೆ ಆಗ ನಮಗೂ ಉತ್ಸಾಹ ಇರುತ್ತದೆ. ಉದಹಾರಣೆಗೆ "ಅಮ್ಮಾ ಐ ಲವ್‌ ಯೂ'. ಈ ಹಿಂದೆ ಚೈತನ್ಯ ಅವರ "ಆಕೆ' ಚಿತ್ರಕ್ಕೆ ಬ್ಯಾಕ್‌ಗ್ರೌಂಡ್‌ ಮ್ಯೂಸಿಕ್‌ ಮಾಡಿದ್ದೆ. ನಾನೇ ಬೇಕು ಅಂತ ಬಂದರು ಚೈತನ್ಯ.

ನಿಜ ಹೇಳಬೇಕೆಂದರೆ, ಸಂಗೀತ ಮಾಡಿ, ಅದಕ್ಕೆ ಚಿತ್ರೀಕರಣ ಮಾಡಿದ್ದಲ್ಲ. ಚೈತನ್ಯ ಮೊದಲೇ ಒಂದಿಷ್ಟು ಚಿತ್ರೀಕರಣ ಮಾಡಿದ್ದರು. ಕಾರಣ, ಚಿತ್ರದಲ್ಲಿರೋದೆಲ್ಲಾ ಮಾಂಟೇಜ್‌ ಹಾಡುಗಳೇ. ಅವರೆಷ್ಟು ಚೆನ್ನಾಗಿ ಎಲ್ಲವನ್ನೂ ಚಿತ್ರೀಕರಣ ಮಾಡಿದ್ದರು ಎಂದರೆ, ಅದನ್ನು ನೋಡಿ ಖುಷಿಯಾಗಿ ಹಾಡುಗಳನ್ನು ಮಾಡುವುದಕ್ಕೆ ಒಪ್ಪಿಕೊಂಡೆ. ಕೆಲವರು ಬರುತ್ತಿದ್ದಂತೆಯೇ, "ಎಷ್ಟಕ್ಕೆ ಮುಗಿಸ್ತೀರಾ' ಅಂತ ಬರುತ್ತಾರೆ. ಅಂಥವರನ್ನು ನೋಡಿದಾಗಲೆಲ್ಲಾ, ಅವರು ನನ್ನನ್ನೇ ಮುಗಿಸೋಕೆ ಬಂದಿದ್ದಾರೆ ಅನಿಸುತ್ತೆ.

ಹಾಗಾಗಿ ಎಷ್ಟೋ ಜನರನ್ನ ವಾಪಸ್ಸು ಕಳಿಸಿದ್ದೂ ಇದೆ. ಬರೀ ಬಿಝಿನೆಸ್‌ಗಾಗಿ ಬರದೆ, ನಮಗಾಗಿ ಬಂದರೆ ಖುಷಿಯಾಗುತ್ತದೆ. ಅಂತಹ ಸಿನಿಮಾಗಳನ್ನು ಹೆಚ್ಚುಹೆಚ್ಚು ಒಪ್ಪಿಕೊಳ್ಳುತ್ತಿದ್ದೀನಿ' ಎಂಬ ಉತ್ತರ ಅವರಿಂದ ಬರುತ್ತದೆ. ಗುರುಕಿರಣ್‌ ಹೇಳುವಂತೆ ಕೆಲಸ ಮಾಡೋದು ಇದ್ದೇ ಇದೆಯಂತೆ. "ಎಷ್ಟೋ ಬಾರಿ ಯಾವುದೋ ಸ್ನೇಹಕ್ಕೆ, ಕೆಲಸಕ್ಕೆ ಕಟ್ಟುಬಿದ್ದು ಕೆಲಸ ಮಾಡಬೇಕಾಗುತ್ತದೆ. ಆದರೆ, ಕೆಲವು ಕಡೆ ಅವನ್ನೆಲ್ಲಾ ಮೀರಿ ಕೆಲಸ ಮಾಡಬೇಕು. ಒಂದು ತಂಡವಾಗಿ ಬಂದಾಗ ಕೆಲಸ ಮಾಡೋಕೆ ಖುಷಿಯಾಗುತ್ತದೆ.

ಅವರ ಜೊತೆಗೆ ನಮಗೆ ಇಷ್ಟವಾಗಿದ್ದನ್ನೂ ಮಾಡಬಹುದು. ಅಂತಹ ತಂಡಗಳನ್ನ ನಾನು ಹೆಚ್ಚು ಬಯಸುತ್ತಿದ್ದೇನೆ. ನನಗೆ ಇಷ್ಟೇ ಮಾಡಬೇಕು, ಅಷ್ಟೇ ಮಾಡಬೇಕು ಅಂತ ಗುರಿ ಇಲ್ಲ. ಒಂದಿಷ್ಟು ಒಳ್ಳೆಯ ಹಾಡುಗಳನ್ನು ಮಾಡಬೇಕು, ಜನ ಮೆಲುಕು ಹಾಕಬೇಕು ಎಂಬುದಷ್ಟೇ ನನ್ನ ಆಸೆ. ಅಂತಹ ಕೆಲವು ಚಿತ್ರಗಳು ಸಿಗುತ್ತಿವೆ. ಅದರಲ್ಲೇ ಹ್ಯಾಪಿಯಾಗಿದ್ದೇನೆ' ಎನ್ನುತ್ತಾರೆ ಅವರು. ಇನ್ನು ಗುರುಕಿರಣ್‌ ಎಷ್ಟು ಚಿತ್ರಗಳಿಗೆ ಸಂಗೀತ ಸಂಯೋಜಿಸಿದ್ದೇನೆಂದು ಲೆಕ್ಕ ಇಡುವರೆದೇ ಬಿಟ್ಟುಬಿಟ್ಟಿದ್ದಾರಂತೆ.

"50ರವರೆಗೂ ಲೆಕ್ಕ ಇಟ್ಟಿದ್ದೆ. ಆಮೇಲೆ ಅವೆಲ್ಲಾ ಬಿಟ್ಟು ಹೋಯಿತು. ಧಾರಾವಾಹಿಗಳಿಗೆ ಸಂಗೀತ ಸಂಯೋಜಿಸಿದ್ದು, ಹಾಡಿದ್ದು, ಟಿವಿ ಶೋಗಳಲ್ಲಿ ಕಾಣಿಸಿಕೊಂಡಿದ್ದು, ಲೈವ್‌ ಶೋಗಳನ್ನು ಮಾಡಿದ್ದು ... ಯಾವುದನ್ನೂ ಲೆಕ್ಕ ಇಟ್ಟಿಲ್ಲ. ಕಳೆದ ಒಂದು ವರ್ಷದಲ್ಲಿ ಮೂರು ಬಾರಿ ಅಮೇರಿಕಾಗೆ ಹೋಗಿ ಲೈವ್‌ ಶೋ ಕೊಟ್ಟುಬಂದಿದ್ದೀನಿ. ಇನ್ನು ದುಬೈ ಮುಂತಾದ ಕಡೆ ಎಷ್ಟು ಶೋ ಆಯಿತೋ ಲೆಕ್ಕ ಇಟ್ಟಿಲ್ಲ. ಅಲ್ಲೆಲ್ಲಾ ಕನ್ನಡದ ಹಾಡುಗಳನ್ನು ಹಾಡುವುದಕ್ಕೆ, ಕನ್ನಡವನ್ನ ಪ್ರಮೋಟ್‌ ಮಾಡುವುದಕ್ಕೆ ಖುಷಿಯಾಗುತ್ತದೆ' ಎನ್ನುತ್ತಾರೆ ಗುರುಕಿರಣ್‌.

ದ್ವಾರಕೀಶ್‌, ಗುರುಕಿರಣ್‌ ಸೇರಿ ಡಿಜಿಕೆ ಆಡಿಯೋ: ಸಂಗೀತ ನಿರ್ದೇಶಕರು ಆಡಿಯೋ ಕಂಪೆನಿಗಳನ್ನು ಹುಟ್ಟುಹಾಕೋದು ಟ್ರೆಂಡ್‌ ಆಗಿದೆ. ಹಂಸಲೇಖ, ಅನೂಪ್‌ ಸೀಳಿನ್‌, ವಿ. ನಾಗೇಂದ್ರ ಪ್ರಸಾದ್‌, ರಘು ದೀಕ್ಷಿತ್‌ ಹೀಗೆ ಎಲ್ಲರೂ ಆಡಿಯೋ ಕಂಪೆನಿಯನ್ನು ಮಾಡಿದವರೇ. "ಆಪ್ತಮಿತ್ರ' ಚಿತ್ರದ ಸಂದರ್ಭದಲ್ಲೇ ಒಂದು ಆಡಿಯೋ ಕಂಪೆನಿ ಮಾಡೋಣ ಅಂತ ಹೇಳಿದ್ದರಂತೆ ನಿರ್ಮಾಪಕ ಯೋಗಿ ದ್ವಾರಕೀಶ್‌.

ಆದರೆ, ಆಡಿಯೋ ಮಾರುಕಟ್ಟೆ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಬೇಕು ಎಂಬ ಕಾರಣಕ್ಕೆ ಗುರುಕಿರಣ್‌ ಐಡಿಯಾವನ್ನು ಮುಂದೆ ಹಾಕಿದ್ದರಂತೆ. ಈಗ ಕೊನೆಗೂ ಮುಹೂರ್ತ ಕೂಡಿಬಂದಿದ್ದು, ದ್ವಾರಕೀಶ್‌ ಮತ್ತು ಗುರುಕಿರಣ್‌ ಇಬ್ಬರೂ ಸೇರಿ ಡಿಜಿಕೆ ಆಡಿಯೋ ಎಂಬ ಸಂಸ್ಥೆಯನ್ನು ಹುಟ್ಟುಹಾಕಿದ್ದಾರೆ. ಅದರ ಮೊದಲ ಚಿತ್ರವಾಗಿ "ಅಮ್ಮಾ ಐ ಲವ್‌ ಯೂ' ಹೊರಬಂದಿದೆ. ಕಳೆದ ತಿಂಗಳು ಡಿಜಿಕೆ ಆಡಿಯೋವನ್ನು ಶಿವರಾಜಕುಮಾರ್‌ ಉದ್ಘಾಟಿಸಿದರು.

ಇವೆಲ್ಲಾ ಕೆಲವೇ ದಿನಗಳ ಅಂತರದಲ್ಲಿ ಪ್ಲಾನ್‌ ಆಗಿದ್ದು ಎನ್ನುತ್ತಾರೆ ಗುರುಕಿರಣ್‌. "ನಾನು ಮತ್ತು ಯೋಗಿ ಯಾವುದೋ ಕೆಲಸಕ್ಕೆ ಮುಂಬೈಗೆ ಹೋಗಿದ್ದೆವು. ಹೋಗುವ ಸಂದರ್ಭದಲ್ಲಿ ಈ ಕುರಿತು ಮಾತಾಡಿದೆವು. ಅದಾಗಿ ಎರಡು ದಿನಗಳಲ್ಲಿ ಎಲ್ಲವೂ ಫೈನಲ್‌ ಆಯಿತು. ಇದು ನನ್ನೊಬ್ಬನ ಕಂಪೆನಿಯಲ್ಲ. ಎಲ್ಲಾ ಸಂಗೀತ ನಿರ್ದೇಶಕರ ಕಂಪೆನಿ ಇದು. ಎಲ್ಲಾ ಸಂಗೀತ ನಿರ್ದೇಶಕರಿಗೂ ಇದೊಂದು ವೇದಿಕೆ' ಎನ್ನುತ್ತಾರೆ ಗುರುಕಿರಣ್‌.

ಬರಹ: ಚೇತನ್‌


Trending videos

Back to Top