CONNECT WITH US  

ಸೆ.1ರಿಂದ ಪೋಸ್ಟ್‌  ಪೇಮೆಂಟ್ಸ್‌  ಬ್ಯಾಂಕ್‌ ಶುರು

ಹಾವೇರಿ ಅಂಚೆ ವಿಭಾಗದಿಂದ 5 ಅಂಚೆ ಕಚೇರಿಗಳಲ್ಲಿ ಚಾಲನೆ 

ಹಾವೇರಿ: ಬಹು ನಿರೀಕ್ಷಿತ ಇಂಡಿಯಾ ಪೋಸ್ಟ್‌ ಪೇಮೆಂಟ್ಸ್‌ ಬ್ಯಾಂಕ್‌ ಜಿಲ್ಲೆಯಲ್ಲಿ ಸೆಪ್ಟೆಂಬರ್‌ 1ರಿಂದ ಆರಂಭಗೊಳ್ಳಲಿದೆ. ಅಂದು ಮಧ್ಯಾಹ್ನ 2 ಗಂಟೆಗೆ ನಗರದ ಶಿವಬಸವ ಕಲ್ಯಾಣ ಮಂಟಪದಲ್ಲಿ ವಿಭಾಗೀಯ ಮಟ್ಟದ ಇಂಡಿಯಾ ಪೋಸ್ಟ್‌ ಪೇಮೆಂಟ್‌ ಬ್ಯಾಂಕಿನ ಹಾವೇರಿ ಶಾಖೆಯನ್ನು ಜಿಲ್ಲಾಧಿಕಾರಿ ಡಾ| ಎಂ.ವಿ. ವೆಂಕಟೇಶ್‌ ಉದ್ಘಾಟಿಸಲಿದ್ದಾರೆ ಎಂದು ಅಂಚೆ ಕಚೇರಿ ಮುಖ್ಯ ಅಧೀಕ್ಷಕರು ತಿಳಿಸಿದ್ದಾರೆ.

ಮುಖ್ಯ ಅತಿಥಿಗಳಾಗಿ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿಲ್ಪಾ ನಾಗ್‌ ಹಾಗೂ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ.ಪರಶುರಾಮ ಭಾಗವಹಿಸುವರು. ಹಾವೇರಿ ಅಂಚೆ ವಿಭಾಗದಿಂದ ಒಟ್ಟು ಐದು ಅಂಚೆ ಕಚೇರಿಗಳಲ್ಲಿ ಬ್ಯಾಂಕಿಂಗ್‌ ಸೇವೆ ಆರಂಭವಾಗಲಿದೆ. ಆರಂಭಿಕ ಹಂತದಲ್ಲಿ ಹಾವೇರಿ ಪ್ರಧಾನ ಅಂಚೆ ಕಚೇರಿ, ರಾಣಿಬೆನ್ನೂರು ಮುಖ್ಯ ಅಂಚೆ ಕಚೇರಿ, ಅರೆಮಲ್ಲಾಪುರ, ಹೊನ್ನತ್ತಿ ಹಾಗೂ ಕಾಕೋಳ ಗ್ರಾಮೀಣ ಶಾಖಾ ಅಂಚೆ ಕಚೇರಿಗಳಲ್ಲಿ ಅಂಚೆ ಬ್ಯಾಂಕಿಂಗ್‌ ಸೇವೆ ಕಾರ್ಯಾರಂಭಗೊಳ್ಳಲಿದೆ. ನಂತರದ ದಿನಗಳಲ್ಲಿ ಹಾವೇರಿ ವಿಭಾಗದ ಎಲ್ಲ 259 ಶಾಖೆಗಳಿಗೂ ತನ್ನ ಕಾರ್ಯವ್ಯಾಪ್ತಿಯಲ್ಲಿ ವಿಸ್ತರಿಸಲಾಗುವುದು ಎಂದು ತಿಳಿಸಿದ್ದಾರೆ.

ಸೆಪ್ಟೆಂಬರ್‌ 1ರಂದು ರಾಷ್ಟ್ರದ 650 ಶಾಖೆಗಳು ಹಾಗೂ 3250 ಉಪಶಾಖೆಗಳು ಏಕಕಾಲಕ್ಕೆ ಪ್ರಾರಂಭವಾಗುತ್ತವೆ. ಕಾಗದ ರಹಿತ, ನಗದು ರಹಿತ ಡಿಜಿಟಲ್‌ ಬ್ಯಾಂಕಿಂಗ್‌ ವ್ಯವಸ್ಥೆ ಹಾಗೂ ಜನರ ಮನೆ ಬಾಗಿಲಿಗೆ ಬ್ಯಾಂಕಿಂಗ್‌ ಸೌಲಭ್ಯಗಳನ್ನು ಒದಗಿಸುವುದು ಇದರ ಮುಖ್ಯ ಧ್ಯೇಯವಾಗಿದೆ. ಕೇಂದ್ರ ಸರ್ಕಾರದ ಮಹತ್ವಪೂರ್ಣ ಡಿಜಿಟಲ್‌ ಇಂಡಿಯಾ, ಸ್ಕಿಲ್‌ ಇಂಡಿಯಾ ಮತ್ತು ಮೇಕ್‌ ಇನ್‌ ಇಂಡಿಯಾದ ಭಾಗವಾಗಿ ಅಂಚೆ ಇಲಾಖೆಯಲ್ಲಿ ಇಂಡಿಯಾ ಪೋಸ್ಟ್‌ ಪೇಮೆಂಟ್ಸ್‌ ಬ್ಯಾಂಕ್‌ (ಐಪಿಪಿಬಿ) ಆರಂಭ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಅಂಚೆ ಬ್ಯಾಂಕಿನ ಉದ್ದೇಶ ಗ್ರಾಮೀಣ ಜನರಲ್ಲಿ ಆರ್ಥಿಕ ಸಾಕ್ಷರತೆ ಮೂಡಿಸುವುದು, ಸಣ್ಣ ವ್ಯವಹಾರಸ್ಥರು, ವಿದ್ಯಾರ್ಥಿಗಳು, ರೈತರು, ಸರ್ಕಾರದ ಸಾಮಾಜಿಕ ಭದ್ರತಾ ಯೋಜನೆಗಳು ಹಾಗೂ ಉದ್ಯೋಗ ಖಾತ್ರಿ ಯೋಜನೆಯ ಫಲಾನುಭವಿಗಳು, ಹಿರಿಯ ನಾಗರಿಕರು, ಗೃಹಿಣಿಯರು ಮತ್ತು ದಿವ್ಯಾಂಗರನ್ನು ಬ್ಯಾಂಕಿಂಗ್‌ ವ್ಯವಸ್ಥೆಯ ಮುಖವಾಣಿಗೆ ತರುವುದೇ ಐಪಿಪಿಬಿಯ ಮುಖ್ಯ ಉದ್ದೇಶ. ಸರ್ಕಾರದಿಂದ ಬರುವ ಮಾಸಾಶನ ಹಾಗೂ ನರೇಗಾ ಪೇಮೆಂಟ್‌ನ್ನು ನೇರಹಣ ವರ್ಗಾವಣೆಯಡಿ ಐಪಿಪಿಬಿ ಖಾತೆಯಿಂದ ಪಡೆಯಬಹುದು. ಕಾಗದ ರಹಿತ ವ್ಯವಹಾರ: ಅಂಚೆ ಬ್ಯಾಂಕ್‌ನಲ್ಲಿ ಖಾತೆ ತೆರೆಯಲು ಯಾವುದೇ ರೀತಿಯ ಅರ್ಜಿ. ಫಾರ್ಮ್ ಅಗತ್ಯವಿಲ್ಲ. ಇದೊಂದು ಕಾಗದ ರಹಿತ ಖಾತೆ ತೆರೆಯುವ, ವ್ಯವಹರಿಸುವ ಬ್ಯಾಂಕ್‌, ಖಾತೆ ತೆರೆಯಲು ಕನಿಷ್ಠ ಠೇವಣಿ ಬೇಕಿಲ್ಲ ಹಾಗೂ ಕನಿಷ್ಠ ಬ್ಯಾಲೆನ್ಸ್‌ ಇಡಬೇಕೆಂಬ ನಿರ್ಬಂಧವಿರುವುದಿಲ್ಲ. ಒಂದು ಲಕ್ಷದವರೆಗೆ ಠೇವಣಿ ಇಡಬಹುದು, ಖಾತೆಯಲ್ಲಿನ ವ್ಯವಹಾರ ಮಾಡಲು ಪಾಸ್‌ಬುಕ್‌ ಬೇಕಿಲ್ಲ. ವ್ಯವಹಾರದ ವಿವರಗಳನ್ನು ಉಚಿತವಾಗಿ ಪಡೆಯಬಹುದು, ಖಾತೆ ತೆರೆಯಲು ಆಧಾರ್‌ ಸಂಖ್ಯೆ ಮತ್ತು ಮೊಬೈಲ್‌ ಸಂಖ್ಯೆ ಸಾಕು. ಪ್ರತಿ ವ್ಯವಹಾರಕ್ಕೂ ಎಸ್‌ಎಂಎಸ್‌ ಬರುವುದರಿಂದ ವ್ಯವಹಾರವು ಖಚಿತ ಮತ್ತು ಸುರಕ್ಷಿತ. ಖಾತೆಯ ಸಂಖ್ಯೆಯನ್ನು ನೆನಪಿಟ್ಟುಕೊಳ್ಳಬೇಕಿಲ್ಲ. ಕ್ಯೂ ಆರ್‌ ಕಾರ್ಡ್‌ ಎಲ್ಲ ಮಾಹಿತಿಯನ್ನು ನೀಡುತ್ತದೆ. ಅದು ಕಳೆದು ಹೋದರೂ ಆಧಾರ್‌ ಸಂಖ್ಯೆ, ಮೊಬೈಲ್‌ ಸಂಖ್ಯೆಯ ಸಹಾಯದಿಂದ ವ್ಯವಹಾರ ಮುಂದುವರಿಸಬಹುದಾಗಿದೆ. ಮನೆ ಬಾಗಿಲಲ್ಲೇ ಪೋಸ್ಟ್‌ ಮ್ಯಾನ್‌ ಮೂಲಕ ಖಾತೆ ತೆರೆಯಬಹುದು. ಅಲ್ಲದೇ, ಹಣವನ್ನು ಮನೆಬಾಗಿಲಲ್ಲೇ ಪಡೆಯಬಹುದು. 

ಸೆ.1ರಂದು ರಾಣಿಬೆನ್ನೂರು
ಮುಖ್ಯ ಅಂಚೆ ಕಚೇರಿ, ಅರೆಮಲ್ಲಾಪುರ, ಹೊನ್ನತ್ತಿ ಹಾಗೂ ಕಾಕೋಳ ಗ್ರಾಮೀಣ ಶಾಖಾ ಅಂಚೆ ಕಚೇರಿಗಳಲ್ಲಿಯೂ ಬ್ಯಾಂಕ್‌ ಶಾಖೆ ಉದ್ಘಾಟನೆಗೊಳ್ಳಲಿದೆ. ಸಾರ್ವಜನಿಕರು ಈ ಸೌಲಭ್ಯದ ಸದುಪಯೋಗ ಪಡೆದುಕೊಳ್ಳಬೇಕು.
. ಅಂಚೆ ಇಲಾಖೆ ಅಧೀಕ್ಷಕರು


Trending videos

Back to Top