CONNECT WITH US  
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಸಂಗೀತಗಾರರ ಧ್ವನಿಯ ಆರೈಕೆ

ಸಂಗೀತ ಎನ್ನುವುದು ಬಹಳ ಶಕ್ತಿಶಾಲಿಯಾದ ಒಂದು ಕಲೆ, ಧ್ವನಿಯ ಸಾಂಗತ್ಯದಲ್ಲಿ ಸಂಗೀತದ ಮಾಧುರ್ಯವು ರೂಪುಗೊಳ್ಳುತ್ತದೆ. ಸಂಗೀತದ ಬೇರೆ ಬೇರೆ ಶೈಲಿ ಮತ್ತು ವಿಶಿಷ್ಟ ಆವಶ್ಯಕತೆಗಳಿಗೆ ಅನುಸಾರವಾಗಿ, ಸಂಗೀತದ ವಿವಿಧ ಸ್ಥಾಯಿಗಳ ವೈವಿಧ್ಯಮಯ ಏರಿಳಿತಗಳನ್ನು ಹೊರಡಿಸಲು, ಗಂಟಲಿನಲ್ಲಿರುವ ಧ್ವನಿ ಅಂಗಾಂಶಗಳು ನಿರ್ದಿಷ್ಟ ರೀತಿಯ ಹೊಂದಾಣಿಕೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ. ಸಂಗೀತದ ವಿವಿಧ ಶೈಲಿಗಳಿಗೆ ಹೊರತಾಗಿಯೂ, ನಮ್ಮ ಕೊರಳಲ್ಲಿ ಸಂಗೀತವು ಹೊಮ್ಮಲು ಮೂಲಭೂತವಾಗಿ ಸಂಪೂರ್ಣ ಧ್ವನಿ ವ್ಯವಸ್ಥೆಯ ಸಂಯೋಜಿತ ಕಾರ್ಯಶೀಲತೆ ಮತ್ತು ಸಂಕೀರ್ಣ ನಿಯಂತ್ರಣ ಆವಶ್ಯಕ. 

ಒಳ್ಳೆಯ ಗುಣಮಟ್ಟದ ಹಾಡುಗಾರಿಕೆಗೆ, ಧ್ವನಿ ವ್ಯವಸ್ಥೆಯ ಒಟ್ಟಾರೆ ಕಾರ್ಯಶೀಲತೆ ಅತ್ಯಾವಶ್ಯಕ, ಹೀಗಿದ್ದಾಗ ಮಾತ್ರವೇ ಹಾಡಿನ ಉದ್ದಕ್ಕೂ ಸಂಗೀತಗಾರರು ಶ್ರುತಿಬದ್ಧವಾಗಿ ಮತ್ತು ಕ್ರಿಯಾತ್ಮಕ ಸ್ಥಾಯಿಯಲ್ಲಿ ಸರಾಗವಾಗಿ ಹಾಡಲು ಸಾಧ್ಯವಾಗುತ್ತದೆ. ಹವ್ಯಾಸಿ ಸಂಗೀತಗಾರರು ಅಥವಾ ತರಬೇತಿ ಪಡೆದಿಲ್ಲದ ಸಂಗೀತಗಾರರಿಗೆ ಹೋಲಿಸಿದರೆ, ತರಬೇತಿಯನ್ನು ಪಡೆದಿರುವ ಮತ್ತು ನುರಿತ ಹಾಡುಗಾರರ ಸಂಗೀತದಲ್ಲಿ ಹೆಚ್ಚು ಕೌಶಲ್ಯವನ್ನು ನಾವು ಗಮನಿಸಬಹುದು. ಸಂಗೀತದ ಕ್ರಮಬದ್ಧ ತರಬೇತಿಯು ಹಾಡುಗಾರಿಕೆಯ ಮೇಲೆ ಧನಾತ್ಮಕ ಪರಿಣಾಮವನ್ನು ಉಂಟುಮಾಡುತ್ತದೆ ತರಬೇತಿಯಿಂದಾಗಿ, ಹಾಡುಗಾರನ ಧ್ವನಿಯ ನಮ್ಯತೆ ಅಥವಾ ಕ್ಷಮತೆ ಉತ್ತಮಗೊಳ್ಳುತ್ತದೆ ಮತ್ತು ಧ್ವನಿಯು ಬಹಳ ಬೇಗನೆ ಸೋತು ಹೋಗುವುದಿಲ್ಲ. 

ಹಾಡುಗಾರಿಕೆಯನ್ನು ನಿರೂಪಿಸುವ ಮೂಲಸ್ವರೂಪ ಮತ್ತು ಶೈಲಿಯ ಆವಶ್ಯಕತೆಗೆ ಅನುಗುಣವಾಗಿ, ಸಂಗೀತವು ವಿಶೇಷ ರೂಪದ ಸ್ವರ-ಭಾರವನ್ನು ಬಯಸುತ್ತದೆ. ಹಾಡುಗಾರರ ಅನುಭವ, ಹಾಡುವ ಜೊತೆಗೆ ನರ್ತಿಸುವ ಅಥವಾ ಪಾತ್ರಗಳ ಸಂಭಾಷಣೆಗಳನ್ನು ಹೇಳಬೇಕಾದ ಆವಶ್ಯಕತೆಯೂ ಸೇರಿದಂತೆ, ಸಂಗೀತದ ಪ್ರಸ್ತುತಿಯ ಜೊತೆ-ಜೊತೆಗೆ ಇನ್ನಿತರ ಆವಶ್ಯಕತೆಗಳೂ ಇರಬಹುದು. ವೇಳಾಪಟ್ಟಿಗೆ ಹೊರತಾದ, ಹೆಚ್ಚು ಪ್ರವಾಸ ಮಾಡಬೇಕಾದ ಆವಶ್ಯಕತೆಗಳು, ಇನ್ನಷ್ಟು ಮುಂದುವರಿದ ನಿರ್ಮಾಣ ಅವಧಿಗಳು, ಹೊಗೆ, ಸೌಂಡ್‌ ಎಫೆೆಕ್ಟ್, ಅಬ್ಬರದ ಆರ್ಕೆಸ್ಟ್ರಾ ಮಧ್ಯೆ ಹಾಡಬೇಕಾಗುವ ಸನ್ನಿವೇಶಗಳು ಹಾಡುಗಾರನ ಧ್ವನಿಯ ಮೇಲೆ ಹೆಚ್ಚುವರಿ ಒತ್ತಡವನ್ನು ಹೇರಬಹುದು. 

ಸಂಗೀತಕ್ಕೆ ಆವಶ್ಯಕವಿರುವ ಬಾಹ್ಯ ಬೇಡಿಕೆಗಳಷ್ಟೇ ಅಲ್ಲದೆ, ಪ್ರಶಸ್ತ ಆರೋಗ್ಯ, ಸೂಕ್ತ ತರಬೇತಿ ಮತ್ತು ಧ್ವನಿಯ ಆರೋಗ್ಯದ ಬಗೆಗಿನ ಸರಿಯಾದ ಅರಿವು (ಹೆಚ್ಚಿನ ಹಾಡುಗಾರರು ಇದನ್ನು ಪಾಲಿಸಲು ಮರೆಯುತ್ತಾರೆ) ಇತ್ಯಾದಿ ಕಾರಣಗಳಿಂದಾಗಿ ಸಂಗೀತಗಾರರ ಧ್ವನಿಯಲ್ಲಿ ಕುಗ್ಗುವಂತಹ ಬದಲಾವಣೆಗಳಾಗುತ್ತವೆ. ಈ ಬದಲಾವಣೆಗೆ ಸಕಾಲದಲ್ಲಿ ಚಿಕಿತ್ಸೆಯನ್ನು ಒದಗಿಸದಿದ್ದರೆ, ಪರಿಸ್ಥಿತಿಯು ಇನ್ನಷ್ಟು ಕೆಡಬಹುದು. ದೈಹಿಕ ಬೇಡಿಕೆಗಳಷ್ಟೇ ಅಲ್ಲದೆ, ಹಾಡುವಾಗ ಅಸಮರ್ಪಕ ಧ್ವನಿತಂತ್ರಗಳನ್ನು ಬಳಸುವುದು ಅಥವಾ ಆತಂಕಕಾರಿ ವಾತಾವರಣದ ಪರಿಸ್ಥಿತಿಯಲ್ಲಿ ಹಾಡುವುದು, ಪ್ರತೀ ಪ್ರಸ್ತುತಿಯ ಬಳಿಕ ಸಾಕಷ್ಟು ವಿಶ್ರಾಂತಿಯನ್ನು ಪಡೆಯದೇ ಇರುವುದು ಮತ್ತು ಎತ್ತರದ ಧ್ವನಿ ಸ್ಥಾಯಿಯಲ್ಲಿ ಹಾಡುವುದು - ಈ ಎಲ್ಲಾ ಕಾರಣಗಳಿಂದ ಸಂಗೀತಗಾರನ ಧ್ವನಿತಂತುಗಳ ಪದರದ ಮೇಲೆ ವಿಪರೀತ ಹೊರೆ ಬೀಳುತ್ತದೆ. 

ಹೆಚ್ಚಿನ ಸಂಗೀತಗಾರರಲ್ಲಿ, ಧ್ವನಿಯ ಆರೋಗ್ಯ ಅನ್ನುವುದು ಹೆಚ್ಚಾಗಿ ನಿರ್ಲಕ್ಷಿಸಲ್ಪಡುವ, ಅವಗಣನೆಗೆ ಒಳಗಾಗುವ ಅಥವಾ  ಹೆಚ್ಚು ತಿಳಿವಳಿಕೆಯೇ ಇಲ್ಲದ ಒಂದು ವಿಚಾರವಾಗಿದೆ.  ಹೆಚ್ಚಿನ ಸಂದರ್ಭಗಳಲ್ಲಿ ಸಂಗೀತಗಾರರು - ಧ್ವನಿ ಗೊಗ್ಗರಾಗುವುದು, ಬದಲಾದ ಸ್ಥಾಯಿಯಲ್ಲಿ ಮತ್ತು ಎತ್ತರದ ಸ್ವರದಲ್ಲಿ ಹಾಡಲು ಕಷ್ಟವಾಗುವುದು, ಸ್ವರ-ಶ್ರೇಣಿಯು ಕುಗ್ಗುವುದು, ಧ್ವನಿ ಸೋಲುವುದು, ಗಂಟಲಿನಲ್ಲಿ ಬಿಗಿತ ಅಥವಾ ಕಿರಿಕಿರಿಯ ಸಂವೇದನೆ, ಗಂಟಲು ಒಣಗುವುದು ಅಥವಾ ನೋವು ಇತ್ಯಾದಿ ಸಮಸ್ಯೆಗಳನ್ನು ಎದುರಿಸುತ್ತಿರುತ್ತಾರೆ.  

ಗಂಭೀರ ಪ್ರಕರಣಗಳಲ್ಲಿ, ಶಬ್ದಗಳ ಉಚ್ಛಾರಣೆ, ಉಸಿರಾಟದ ಬೆಂಬಲದ ಕೊರತೆ ಮತ್ತು ಗಂಟಲಿನಲ್ಲಿ ನಮ್ಯತೆ ಅಥವಾ ಸಹಿಷ್ಣುತೆಯು ನಷ್ಟವಾಗಿರುವಿಕೆ  ಇತ್ಯಾದಿ ತೊಂದರೆಗಳು ಇವೆ ಎಂಬುದಾಗಿ ಸಂಗೀತಗಾರರು ದೂರಬಹುದು.  ಧ್ವನಿ-ತಂತುಗಳು ಮತ್ತು ಧ್ವನಿ ವ್ಯವಸ್ಥೆಯ ಮೇಲೆ ಬೀಳುವ ಅತ್ಯಧಿಕ ಒತ್ತಡದ ಕಾರಣದಿಂದ, ಧ್ವನಿ ವ್ಯವಸ್ಥೆಯ ಮೇಲೆ ಋಣಾತ್ಮಕ ಮತ್ತು ಹಾನಿಕಾರಕ ಪರಿಣಾಮಗಳು ಉಂಟಾಗಬಹುದು. ಇದರಿಂದ ವ್ಯಕ್ತಿಗಳು ತಮ್ಮ ದೈನಂದಿನ ಮತ್ತು ವೃತ್ತಿಜೀವನದ ಜೊತೆಗೆ ಹೊಂದಾಣಿಕೆ ಮಾಡಬೇಕಾಗಿ ಬರಬಹುದು. ಇದರಿಂದ ಅವರ ಜೀವನ ಗುಣಮಟ್ಟದ ಮೇಲೆಯೂ ಪರಿಣಾಮ ಉಂಟಾಗಬಹುದು ಮಾತ್ರವಲ್ಲದೆ ವ್ಯಕ್ತಿಯ ಸಂಗೀತ-ವೃತ್ತಿ ಜೀವನ ಕುಂಠಿತಗೊಳ್ಳಬಹುದು. 

ಧ್ವನಿಯ ಆರೋಗ್ಯದ ನಿರ್ವಹಣೆಯ ಬಗೆಗಿನ ಸೀಮಿತ ಅರಿವಿನ ಕಾರಣದಿಂದ, ಧ್ವನಿಯ ಗುಣಮಟ್ಟವನ್ನು ಉತ್ತಮಪಡಿಸಿಕೊಳ್ಳುವ ಪ್ರಯತ್ನವಾಗಿ ವಿವಿಧ ರೀತಿಯ ಪಾರಂಪರಿಕ ಮನೆಮದ್ದುಗಳು ಮತ್ತು ನಂಬಿಕೆಗಳಿಗೆ ಮೊರೆಹೋಗುತ್ತೇವೆ.  ಈ ಪಾರಂಪರಿಕ ಪರಿಹಾರೋಪಾಯಗಳು ತಾತ್ಕಾಲಿಕ ಉಪಶಮನವನ್ನು ಒದಗಿಸಬಹುದು. 

ಆದರೆ ಧ್ವನಿಯಲ್ಲಿ ಸಮಸ್ಯೆಗಳು ಕಾಣಿಸಿಕೊಳ್ಳುವುದನ್ನು ಬದಿಗಿರಿಸಿ ನೋಡಿದರೂ ಸಹ, ಧ್ವನಿಯ ಅಸ್ವಸ್ಥತೆಯು ತೀವ್ರ ರೋಗಸ್ಥಿತಿಯಾಗಿ ಬೆಳೆಯದ ಹೊರತು ಸಂಗೀತಗಾರರು, ತಮ್ಮ ಧ್ವನಿಯ ಆರೋಗ್ಯ ನಿರ್ವಹಣೆಗಾಗಿ ವೃತ್ತಿಪರರ ಸಹಾಯವನ್ನು ಪಡೆಯುವುದು ಬಹಳ ಅಪರೂಪ ಎಂದು ಹೇಳಬಹುದು. ಧ್ವನಿಯ ಅಸ್ವಸ್ಥತೆಯು ತೀವ್ರ ರೋಗಸ್ಥಿತಿಯಾಗಿ ಬೆಳೆದ ಪ್ರಕರಣಗಳಲ್ಲಿ, ಧ್ವನಿ ಚಿಕಿತ್ಸಕರನ್ನು ಕೂಡಲೆ ಸಂಪರ್ಕಿಸುವಂತೆ ಸೂಚನೆಯನ್ನು ನೀಡಲಾಗುತ್ತದೆ.  ಮೂಗಿನ ಲೋಳೆಪೊರೆಯ ಉರಿಯೂತ(ರಿನಿಟೀಸ್‌), ಕಫ‌, ಸೋಂಕು ಮತ್ತು ಇತರ ಅಲರ್ಜಿಗಳು ಇದ್ದಲ್ಲಿ ಕೂಡಲೇ ಕಿವಿ-ಗಂಟಲು ತಜ್ಞ ವೈದ್ಯರಲ್ಲಿ  (ಓಟೋಲ್ಯಾರಿಂಜೋಲಾಜಿಸ್ಟ್‌) ಚಿಕಿತ್ಸೆಯನ್ನು ಪಡೆಯುವಂತೆ ಸೂಚಿಸಲಾಗುತ್ತದೆ.  
 
ಈ ವಿಚಾರಗಳಿಗೆ ಸಂಬಂಧಿಸಿದಂತೆ, ಮಂಗಳೂರಿನ, ಅತ್ತಾವರದ ಕಸ್ತೂರ್ಬಾ ಮೆಡಿಕಲ್‌ ಕಾಲೇಜು, ಎಪ್ರಿಲ್‌ 16 ನೇ ದಿನಾಂಕವನ್ನು ಜಾಗತಿಕ ಧ್ವನಿ ದಿನ (ಗಟlrಛ Vಟಜಿcಛಿ ಈಚy) ಅಂದರೆ ವಾಯೆÕಥಾನ್‌ - 2016 ಎಂಬುದಾಗಿ ಆಚರಿಸುತ್ತಿದೆ. ಇದು ಸಂಗೀತದ ಆರೋಗ್ಯಶಾಲಿ ಧ್ವನಿಗಾಗಿ ಒಂದು ಅಭಿಯಾನ. ಜನರಲ್ಲಿ ಧ್ವನಿಯ ಪ್ರಾಮುಖ್ಯತೆಯ ಬಗ್ಗೆ ಜಾಗೃತಿಯನ್ನು ಉಂಟು ಮಾಡುವುದು ಮತ್ತು ಸಂಗೀತ ಗಾರರಲ್ಲಿ ಧ್ವನಿಗೆ ಸಂಬಂಧಿಸಿದಂತೆ ಅಪಾಯ ಕಾರಿ ಸನ್ನಿವೇಶಗಳನ್ನು ಗುರುತಿಸುವುದು ಈ ಕಾರ್ಯಕ್ರಮದ ಉದ್ದೇಶ. 

ಆ ದಿನದಂದು, ಶಾಸ್ತ್ರೀಯ ಸಂಗೀತಗಾರರು, ಪಾಶ್ಚಾತ್ಯ ಸಂಗೀತಗಾರರು, ಯಕ್ಷಗಾನ ಕಲಾವಿದರು ಹಾಗೂ ಇತರರು ಮಂಗಳೂರು ಅತ್ತಾವರದಲ್ಲಿನ ಕಸ್ತೂರ್ಬಾ ಮೆಡಿಕಲ್‌ ಕಾಲೇಜು ಆಸ್ಪತ್ರೆಯ-ಆಡಿಯೋಲಜಿ ಮತ್ತು ಸ್ಪೀಚ್‌ ಲ್ಯಾಂಗ್ವೇಜ್‌ ಪ್ಯಾಥಾಲಜಿ ವಿಭಾಗದ, ಸ್ಪೀಚ್‌ ಪ್ಯಾಥಾಲಜಿಸ್ಟ್‌ ಗಳಿಂದ ಉಚಿತ ಸಲಹೆಗಳನ್ನು ಮತ್ತು ಪರಿಹಾರಗಳನ್ನು ಪಡೆದುಕೊಳ್ಳಬಹುದು.

ಡಾ| ರಾಧೀಶ್‌ ಕುಮಾರ್‌ 
ಮತ್ತು  ಮಾಲವಿಕಾ,  
ಡಯಟೀಷಿಯನ್‌, 
ಪಥ್ಯಾಹಾರ ವಿಭಾಗ, ಕೆ.ಎಂ.ಸಿ., 
ಅತ್ತಾವರ , ಮಂಗಳೂರು.

Back to Top