CONNECT WITH US  

ಸ್ವಾಮಿ ದರ್ಶನದ ಆ ಕ್ಷಣ

ಜಗ್ಗೇಶ್‌ ಮಾಲೆ ಹಾಕಿದಾಗ ...

ಡಿಸೆಂಬರ್‌ ಬಂತೆಂದರೆ ಚಳಿಯ ಜೊತೆ ಜೊತೆಗೇ ಅಯ್ಯಪ್ಪನ ಸೀಸನ್‌ ಸಹ ಶುರುವಾಗುತ್ತದೆ. ಜನರೆಲ್ಲಾ ಕರಿ ಶರ್ಟು-ಪಂಚೆ ತೊಟ್ಟು, ಧ್ಯಾನ ಮಾಡುತ್ತಾ, "ಸ್ವಾಮಿ ಶರಣಂ ಅಯ್ಯಪ್ಪ' ಎಂದು ಭಜನೆ ಮಾಡುವ ದೃಶ್ಯ ಕಾಣುತ್ತದೆ. ಕನ್ನಡ ಚಿತ್ರರಂಗದಲ್ಲಿ ಅಯ್ಯಪ್ಪನ ದೊಡ್ಡ ಭಕ್ತರಾಗಿ ಗುರುತಿಸಿಕೊಂಡವರೆಂದರೆ ಅದು ಡಾ. ರಾಜಕುಮಾರ್‌.

ರಾಜಕುಮಾರ್‌ ಅವರು, ಬದುಕಿದ್ದವರೆಗೂ ಹಲವು ಬಾರಿ ಶಬರಿಮಲೈಗೆ ಹೋಗಿ ಅಯ್ಯಪ್ಪನ ದರ್ಶನ ಮಾಡಿ ಬರುತ್ತಿದ್ದರು. ಈಗಲೂ ಶಿವರಾಜಕುಮಾರ್‌, ಶಿವರಾಮಣ್ಣ, ದರ್ಶನ್‌, ಪ್ರೇಮ್‌ ಮುಂತಾದ  ಕಲಾವಿದರು ಪ್ರತಿ ವರ್ಷ ತಪ್ಪದೆ ಶಬರಿಮಲೈಗೆ ಹೋಗಿ ಸ್ವಾಮಿಯ ದರ್ಶನ ಮಾಡುತ್ತಾರೆ.ಗುರು ರಾಘವೇಂದ್ರರ ಭಕ್ತರಾಗಿರುವ ಜಗ್ಗೇಶ್‌ ಸಹ ತಮ್ಮ ಜೀವನದಲ್ಲಿ ಎರಡು ಬಾರಿ ಅಯ್ಯಪ್ಪನ ದರ್ಶನ ಮಾಡಿಬಂದಿದ್ದಾರೆ.

ಅವರು ಯಾವ ಸಂದರ್ಭದಲ್ಲಿ ಮಾಲೆ ಹಾಕಿದ್ದರು, ಆ ಸಂದರ್ಭದಲ್ಲಿ ಏನೆಲ್ಲಾ ಆಯ್ತು ಎಂಬ ಕುತೂಹಲದೊಂದಿಗೆ ಅವರನ್ನು ಮಾತನಾಡಿಸಿದಾಗ, ತಾವು ಎರಡು ಬಾರಿ ದರ್ಶನ ಮಾಡಿದ ಪ್ರಸಂಗಗಳನ್ನು ಬಿಚ್ಚಿಟ್ಟರು. ಜಗ್ಗೇಶ್‌ ಅವರ ಶಬರಿಮಲೈ ಪ್ರಯಾಣ ಹೇಗಿತ್ತು ಎಂಬುದನ್ನು ಅವರ ಮಾತುಗಳಲ್ಲೇ ಕೇಳಿಬಿಡಿ.

"ನಾನು ಇದುವರೆಗೂ ಮಾಲೆ ಧರಿಸಿದ್ದು, ಶಬರಿಮಲೈಗೆ ಹೋಗಿದ್ದು ಎರಡೇ ಬಾರಿ. ಮೊದಲ ಬಾರಿಗೆ ಹೋಗಿದ್ದು 1979ರಲ್ಲಿ. ಆಗ ನಾನು ಅಪಾ ಪೋಲಿ. ನನ್ನಿಂದ ಅಪ್ಪ-ಅಮ್ಮನಿಗೆ ವಿಪರೀತ ಹಿಂಸೆ. ಸಹವಾಸ ದೋಷದಿಂದ ನನ್ನ ನಡೆ-ನುಡಿ ಯಾವುದೂ ಸರಿ ಇರಲಿಲ್ಲ. ಇವನನ್ನ ಹೇಗೆ ಸರಿ ಮಾಡೋದು ಅಂತ ಅಪ್ಪ-ಅಮ್ಮಂಗೆ ಚಿಂತೆ ಆಗಿಬಿಟ್ಟಿತ್ತು. ಆಗ ಯಾರೋ ಬಂದು, "ಇವೆಲ್ಲಾ ಗ್ರಹಚಾರ. ಟೈಮ್‌ ಸರಿ ಇಲ್ಲ ಅಂದ್ರೆ ಹೀಗೆಲ್ಲಾ ಆಗತ್ತೆ.

ಒಂದಾರಿ ಅಯ್ಯಪ್ಪಂಗೆ ಕಳಿ. ಎಲ್ಲಾ ಸರಿ ಹೋಗತ್ತೆ ...' ಅಂತ ಹೇಳಿದ್ರಂತೆ. ಸರಿ, ಹೇಗೆ ಕಳಿಸೋದು, ಯಾರ ಜತೆ ಕಳಿಸೋದು ಅಂತ ಯೋಚೆ° ಮಾಡ್ತಿದ್ದಾಗ ಒಬ್ಬರ ನೆನಪಾಯ್ತು. ಅವರು ನಮ್ಮ ಬಿಲ್ಡಿಂಗ್‌ನಲ್ಲೇ ಇದ್ದರು. ಗುರುಸ್ವಾಮಿಯಾಗಿದ್ದರು. ಸರಿ ನಂಗೆ, ನನ್ನ ತಮ್ಮಂಗೆ ಮಾಲೆ ಹಾಕ್ಸಿದ್ರು. ಆಗ ಅದರ ಬಗ್ಗೆ ಅಷ್ಟು ಗೊತ್ತಿಲ್ಲದಿದ್ದರೂ ಮಾಲೆ ಹಾಕಿಕೊಂಡಿದ್ದಕ್ಕೆ ಬಹಳ ಖುಷಿಯಾಯ್ತು. ಕಾರಣ ಡಿಸೈನ್‌ ಡಿಸೈನ್‌ ಫ‌ುಡ್ಡು.

ನಾನು ಆಗ ತುಂಬಾ ತಿನ್ನುತ್ತಿದ್ದೆ. ಪ್ರತಿ ದಿನ ಒಬ್ಬೊಬ್ಬರ ಮನೇಲಿ ತಿನ್ನೋಕೆ ಸಿಗೋದು. ಹಾಗಾಗಿ ಬಹಳ ಖುಷಿಯಾಗಿಬಿಟ್ಟಿತ್ತು. ಆದರೆ, ಒಂದೇ ಬೇಸರ ಅಂದ್ರೆ ತಣ್ಣೀರು ಸ್ನಾನ. ಚಳೀಲಿ ದಿನಾ ಎರಡು ಬಾರಿ ಸ್ನಾನ ಮಾಡೋದು ಬಹಳ ಕಷ್ಟ ಆಗ್ತಿತ್ತು. ಸ್ವಲ್ಪ ದಿನ ಆದ್ಮೇಲೆ ಎಲ್ಲಾ ಅಡ್ಜಸ್ಟ್‌ ಆಯ್ತು. ಒಂಥರಾ ಹೊಸ ಅನುಭವ. ದಿನ ಪೂಜೆ ಮಾಡ್ತಾ ಮಾಡ್ತಾ, ಅಯ್ಯಪ್ಪನ ಹಾಡುಗಳನ್ನ ಹಾಡ್ತಾ ಹಾಡ್ತಾ ಕ್ರಮೇಣ ಭಕ್ತಿ ಬಂತು.

ಮನಸ್ಸೂ ಪರಿವರ್ತನೆ ಆಯ್ತು. ಅಷ್ಟು ದಿನ ಮಾಲೆ ಹಾಕಿದ್ದಕ್ಕೆ ಸ್ವಲ್ಪ ಸಾತ್ವಿಕವಾಗಿದ್ದೆ. ಅದೆಲ್ಲಾ ಮುಗಿದು ಇನ್ನು ಶಬರಿಮಲೈಗೆ ಹೋಗಬೇಕು ಅಂತಾಯ್ತು. ಆ ಸಮಯದಲ್ಲಿ ನಮ್ಮ ಹತ್ರ ಅಷ್ಟೊಂದು ದುಡ್ಡು ಇರಿ¤ರಲಿಲ್ಲ. ನಮ್ಮಮ್ಮ ಹೇಗೋ ಅಡ್ಜಸ್ಟ್‌ ಮಾಡಿ 200 ರೂಪಾಯಿ ನಂಗೆ, ನನ್‌ ತಮ್ಮಂಗೆ ಕೊಟ್ಟಿದ್ರು. ಪ್ರಯಾಣಕ್ಕೆ ತಯಾರಿ ನಡೀತು. ಅಷ್ಟರಲ್ಲಿ ಏನೋ ಘಟನೆ ಆಗಿ ನಮ್ಮಪ್ಪಂಗೆ ನನ್ನ ಮೇಲೆ ಬಹಳ ಸಿಟ್ಟು ಬಂದಿತ್ತು.

ರೈಲಿನ ಹತ್ತಿರ ಬಂದು "ನಿನ್ನ ಆನೆ ತುಳಿಯಾ, ನಿಂಗೆ ಹಂಗಾಗ್ಲಿ, ಹಿಂಗಾಗ್ಲಿ ...' ಅಂತೆಲ್ಲಾ ಶಾಪ ಹಾಕಿ ಕಳಿಸಿದ್ದರು. ನಾವು ಶಬರಿಮಲೈಗೆ ಹೋಗೋವಷ್ಟರಲ್ಲೇ ನನ್ನ ಹತ್ರ ಇದ್ದ ದುಡ್ಡು ಮುಗಿದು ಹೋಗಿತ್ತು. ಕೊನೆಗೆ ನಮ್ಮ ಗುರುಸ್ವಾಮಿಗಳಿಗೆ ನನ್ನ ಮೇಲೆ ಕನಿಕರ ಬಂದು, ನನ್ನ ಮತ್ತು ನನ್ನ ತಮ್ಮನ ಖರ್ಚನ್ನು ಎಲ್ಲರೂ ನಿಭಾಯಿಸುವುದು ಅಂತ ನಿರ್ಧಾರವಾಯಿತು. ಸರಿ, ಶಬರಿಮಲೈಗೆ ಹೋಗ್ತಿವಿ.

ಅಲ್ಲಿ ಸಾವಿರಾರು ಜನ. ಈಗಿನ ಹಾಗೆ ಉಳ್ಕೊಳ್ಳೋಕೆ ಅಂತೆಲ್ಲಾ ಏನೂ ಇರಲಿಲ್ಲ. ಗುಡಿಸಲಿನಲ್ಲಿ ಮಲಗಬೇಕಿತ್ತು. ಯಾವಾಗ ಆನೆ ಬಂದು ಅಟ್ಯಾಕ್‌ ಮಾಡುತ್ತೋ ಅಂತ ಭಯ. ಇನ್ನೊಂದು ಕಡೆ ಕೆಟ್ಟ ವಾಸನೆ. ಎಲ್ಲರೂ ಶೌಚಕ್ಕೆ ಸುತ್ತಮುತ್ತಲೇ ಹೋಗೋರು. ಇದೆಲ್ಲದರಿಂದ ಕೆಟ್ಟ ವಾಸನೆ. ನದಿಯಲ್ಲಿ ಸ್ನಾನ ಮಾಡೋಕೂ ಒಮ್ಮೊಮ್ಮೆ ಭಯ ಆಗೋದು. ಅಷ್ಟೊಂದು ಘನಃಘೋರವಾಗಿತ್ತು.

ಕಾಡು-ಮೇಡು ದಾಟಿ, ಇಷ್ಟೆಲ್ಲಾ ಅನುಭವಿಸಿ ದೇವರ ದರ್ಶನ ಮಾಡೋಣ ಅಂತ ಹೋದರೆ, ಅಲ್ಲಿ ದೇವರ ದರ್ಶನ ಆಗಲಿಲ್ಲ. ಅಷ್ಟೊಂದು ಜನರ ನೂಕು-ನುಗ್ಗಾಟದಲ್ಲಿ ನನ್ನ ತಮ್ಮ ಎಲ್ಲಿ ಕಳೆದು ಹೋದನೋ ಗೊತ್ತಾಗಲಿಲ್ಲ. ಇನ್ನು ಜ್ಯೋತಿ ಕಾಣಲಿಲ್ಲ. ಅಪ್ಪನ ಶಾಪ ತಟ್ಟಿತು ಅನಿಸುತ್ತೇ, ಆನೆ ಹಿಂಡು ನುಗ್ಗಿ ಬಂತು. ಕಣ್ಣಮುಂದೆ 50-60 ಆನೆಗಳು ಹಾದು ಹೋದವು. ಹೀಗೆ ಒಂದಲ್ಲಾ ಒಂದು ಘಟನೆ ನಡೆದು ಹೋದವು.

ಏನೇನೋ ರೋದನೆಗಳಾಗಿ ಸಾಕಾಗಿ ಹೋಗಿತ್ತು. ಆ ಪ್ರಯಾಣದಲ್ಲಿ ನನಗೆ ಬಹಳ ಇಷ್ಟವಾಗಿದ್ದು ಅಂದರೆ ಒಂದೇ ವಿಷಯ. ಅಲ್ಲೊಬ್ಬರು ಬಂದಿದ್ದರು. ಥೇಟು ಡಾ ರಾಜಕುಮಾರ್‌ ತರಹ ಹಾಡುತ್ತಿದ್ದರು. ಅದ್ಭುತವಾಗಿ ಅಯ್ಯಪ್ಪನ ಹಾಡುಗಳನ್ನ ಹಾಡುತ್ತಿದ್ದರು. ಎಲ್ಲಿ ಹೋದರೂ ಅವರಿಂದ ಹಾಡಿಸೋರು. ಅವರು ಹಾಡೋದನ್ನು ನೋಡೋದೇ ಒಂದು ಚೆಂದ. ಇಡೀ ಪ್ರಯಾಣದಲ್ಲಿ ಬಹಳ ಖುಷಿ ಕೊಟ್ಟ ವಿಚಾರ ಎಂದರೆ ಅವರ ಹಾಡುಗಳನ್ನು ಕೇಳಿದ್ದು.

ಇವೆಲ್ಲಾ ಆದಮೇಲೆ ಶಬರಿಮಲೈಗೆ ಹೋಗುವುದಕ್ಕೇ ಆಗಲಿಲ್ಲ. 90ರ ದಶಕದಲ್ಲಿ ನನ್ನ ಜೀವನದಲ್ಲಿ ಒಂದು ಕೆಟ್ಟ ಘಟನೆ ಆಗಿತ್ತು. ಎಲ್ಲಾ ಸರಿ ಹೋದರೆ, ಶಬರಿಮಲೈಗೆ ಹೋಗುತ್ತೀನಿ ಅಂತ ನಮ್ಮ ಕೋಮಲ್‌ ಹರಿಸಿಕೊಂಡಿದ್ದ. ಆಮೇಲೆ ಎಷ್ಟೋ ಬಾರಿ ಬಂದು ಅವನು ನನ್ನ ಶಬರಿಮಲೈಗೆ ಕರೆದರೂ ಹೋಗೋಕೆ ಆಗಿರಲಿಲ್ಲ. ಏನೋ ಒಂದು ಕಾರಣ ಬಂದು, ಪ್ರತಿ ವರ್ಷ ತಪ್ಪಿ ಹೋಗೋದು. ಕೊನೆಗೆ ಕಳೆದ ವರ್ಷ ಕಾಲ ಕೂಡಿ ಬಂತು.

ನಮ್ಮ ಸ್ನೇಹಿತರೊಬ್ಬರು ಕೇರಳದಲ್ಲಿ ಪೊಲೀಸ್‌ ಕಮಿಷನರ್‌ ಆಗಿದ್ದಾರೆ. ಅವರು ದಾವಣಗೆರೆಯವರು. ಆದರೆ, ಅಲ್ಲಿ ಕೆಲಸ ಮಾಡ್ತಿದ್ದಾರೆ. ಅವರನ್ನ "ಕೇರಳ ಸಿಂಗಂ' ಅಂತಲೇ ಕರೀತಾರೆ. ಒಮ್ಮೆ ಅವರ ಜೊತೆಗೆ ಮಾತನಾಡುವಾಗ ಶಬರಿಮಲೈಗೆ ಹೋಗಬೇಕು ಅಂತ ಹೇಳಿದ್ದೆ. ಅವರು ಒತ್ತಾಯ ಮಾಡಿ ಕರೆಸಿಕೊಂಡರು. ಈ ಹಿಂದೆ ಒಮ್ಮೆ ಹೋಗಿದ್ದಾಗ ದೇವರ ದರ್ಶನವೇ ಆಗಿರಲಿಲ್ಲ.

ಈ ಬಾರಿ ಅದ್ಭುತ ದರ್ಶನವಾಯ್ತು ಅರ್ಧ-ಮುಕ್ಕಾಲು ಗಂಟೆ ದೇವರೆದುರು ನಿಂತು ದರ್ಶನ ಪಡೆಯುವಂತೆ ಆಯಿತು. ಈ ವರ್ಷ ಸಹ ಬನ್ನಿ ಎಂದಿದ್ದಾರೆ. ಆದರೆ, ಕೆಲಸ-ಕಾರ್ಯಗಳ ಒತ್ತಡ ಇದ್ದರಿಂದ ಹೋಗೋಕೆ ಆಗಿಲ್ಲ. ಎಲ್ಲಾ ಮುಗಿದ ಮೇಲೆ ಒಮ್ಮೆ ಹೋಗಿ ಬರಬೇಕು. ಹೀಗೆ ನಾನು ಶಬರಿಮಲೈಗೆ ಹೋಗಿರೋದು ಎರಡೇ ಎರಡು ಸಾರಿ ಅಷ್ಟೇ.

ಒಮ್ಮೆ, ಏನೂ ಇಲ್ಲದಿದ್ದಾಗ. ಇನ್ನೊಮ್ಮೆ, ಈಗ. ಮೊದಲ ಬಾರಿಗೆ ದರ್ಶನಕ್ಕೆ ಹೋದ ಸಂದರ್ಭದಲ್ಲಿ ಏನೇ ಘಟನೆಗಳು ಆಗಿರಬಹುದು. ಆದರೆ, ಅಯ್ಯಪ್ಪನ ಮಾಲೆ ಹಾಕುವುದರಿಂದ ಒಂದು ಶಿಸ್ತು, ಶ್ರದ್ಧೆ ಬರುತ್ತದೆ. ಜಪ-ತಪ ಮಾಡುವುದರಿಂದ ಅಂತರಂಗ ಶುದ್ಧಿಯಾಗಿರುತ್ತದೆ. ದುಶ್ಚಟಗಳನ್ನೆಲ್ಲಾ ಪಕ್ಕಕ್ಕಿಟ್ಟು, ಏಕಾಗ್ರತೆ ಸಾಧಿಸಬಹುದು ಎನ್ನುವುದು ಮಾತ್ರ ಅಪ್ಪಟ ನಿಜ.

ನಿರೂಪಣೆ: ಚೇತನ್‌ ನಾಡಿಗೇರ್‌

Back to Top