CONNECT WITH US  

ಮೋದಿ ಮಾತಿನ ಮರ್ಮ ಬಲ್ಲವರ್ಯಾರು?

ದೇವೇಗೌಡರ ಕುರಿತ ಪ್ರಧಾನಿ ಮಾತಿನಲ್ಲಿ ರಾಜಕೀಯ ಲೆಕ್ಕಾಚಾರ

ಬೆಂಗಳೂರು: ಕಳೆದ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಗುಜರಾತ್‌ನಲ್ಲಿ ವೃದ್ಧಾಶ್ರಮಗಳು ಸಾಕಷ್ಟಿವೆ ಬಂದುಬಿಡಿ ದೇವೇಗೌಡರೇ ಎಂದು ಹೇಳಿದ್ದ ಪ್ರಧಾನಿ ನರೇಂದ್ರಮೋದಿ, ಮಂಗಳವಾರ ಉಡುಪಿ ಪ್ರಚಾರ ಸಭೆಯಲ್ಲಿ  ದೇವೇಗೌಡರಿಗೆ ಕಾಂಗ್ರೆಸ್‌ ಅವಮಾನ ಮಾಡುತ್ತಿದೆ ಎಂದು ಹೇಳಿರುವುದು ರಾಜಕೀಯ ವಲಯದಲ್ಲಿ ನಾನಾ ವಿಶ್ಲೇಷಣೆಗೆ ಕಾರಣವಾಗಿದೆ.

ಅಮಿತ್‌ ಶಾ ಹಾಗೂ ಎಚ್‌.ಡಿ.ಕುಮಾರಸ್ವಾಮಿ ಒಂದೇ ವಿಮಾನದಲ್ಲಿ ಪ್ರಯಾಣಿಸಿದ್ದಾರೆ. ಬಿಜೆಪಿ ಹಾಗೂ ಜೆಡಿಎಸ್‌ ಒಳ ಒಪ್ಪಂದ ಮಾಡಿಕೊಂಡಿದೆ ಎಂಬ ಮಾತುಗಳು ಕಳೆದೊಂದು ವಾರದಿಂದ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿರುವ ಬೆನ್ನಲ್ಲೇ ಇದೀಗ ಪ್ರಧಾನಿ ಮೋದಿ ಅವರು ಉಡುಪಿಯಲ್ಲಿ ದೇವೇಗೌಡರ ಗುಣಗಾನ ಮಾಡಿರುವುದು ಮತ್ತಷ್ಟು ಕುತೂಹಲ ಮೂಡಿಸಿದೆ.

ಮೋದಿ ಅವರು ರಾಜ್ಯದಲ್ಲಿ ಅತಂತ್ರ ವಿಧಾನ ಸಭೆಯ ಸುಳಿವು ಅರಿತೇ ಈ ಹೇಳಿಕೆ ನೀಡಿದರೇ? ಇದು ಚುನಾವಣೋತ್ತರ ಮೈತ್ರಿಯ ಮುನ್ಸೂಚ ನೆಯೇ ಎಂಬ ಜಿಜ್ಞಾಸೆಯೂ ಇದೆ. ಎರಡು ದಿನಗಳ ಹಿಂದೆಯಷ್ಟೇ ಬಿಜೆಪಿ ಜತೆ ಮತ್ತೂಮ್ಮೆ ಸೇರಿದರೆ ಕುಮಾರಸ್ವಾಮಿಯನ್ನು ಕುಟುಂಬ ಹಾಗೂ ಪಕ್ಷದಿಂದಲೇ ಬಹಿಷ್ಕಾರ ಹಾಕುತ್ತೇ ನೆಂದು ದೇವೇಗೌಡರು ಹೇಳಿದ್ದರು. ಇದಕ್ಕೆ ಕುಮಾರಸ್ವಾಮಿ ಸಹ ತಂದೆಗೆ ನೋವು ಕೊಡುವು ದಿಲ್ಲ. 2006ರಲ್ಲಿ ನೋವು ಕೊಟ್ಟು ನಾನೂ ಅನುಭವಿಸಿದ್ದೇನೆ ಎಂದು ಹೇಳಿದ್ದೂ ಆಯಿತು. 

ಇದಾದ ನಂತರ ಇದೀಗ ದೇವೇಗೌಡರು ರಾಷ್ಟ್ರೀಯ ನೇತಾರರಲ್ಲಿ ಒಬ್ಬರು, ಕಾಂಗ್ರೆಸ್‌ ಹಾಗೂ ಆ ಪಕ್ಷದ ನಾಯಕರು ಅವರನ್ನೇ ಅವಹೇಳನ ಮಾಡುತ್ತಿ ದ್ದಾರೆಂದು "ಬಾಂಬ್‌' ಹಾಕಿದ್ದಾರೆ. ಮೂಲಗಳ ಪ್ರಕಾರ, ನರೇಂದ್ರಮೋದಿ ದೇವೇ ಗೌಡರ ಬಗ್ಗೆ ಹೊಗಳಿರುವ ಹಿಂದೆ ಬಿಜೆಪಿಗೆ ಒಕ್ಕಲಿಗ ಮತ ಸೆಳೆಯುವ ತಂತ್ರ ಆಗಿದೆ. ಪ್ರಸ್ತುತ ಒಕ್ಕಲಿಗ ಸಮುದಾಯದ ಅತಿ ಹೆಚ್ಚು ಜೆಡಿಎಸ್‌ ಜತೆಗಿದ್ದು, ಕೆಲವೆಡೆ ಕಾಂಗ್ರೆಸ್‌ ವಿರುದ್ಧ ಆಕ್ರೋಶ ಹೊಂದಿದೆ. ಅಂತಹ ಜಾಗಗಳಲ್ಲಿ ಬಿಜೆಪಿಗೆ ಒಕ್ಕಲಿಗ ಮತಗಳು ಬರಲಿ ಎಂಬ ಲೆಕ್ಕಾಚಾರ ಅಡಗಿದೆ. ಮೋದಿ ಮಾತಿ ನಿಂದ ರಾಜಕೀಯವಾಗಿ ಜೆಡಿಎಸ್‌ಗಿಂತ ಬಿಜೆಪಿಗೆ ಹೆಚ್ಚು ಅನುಕೂಲ ಎಂದೂ ಹೇಳಲಾಗುತ್ತಿದೆ.

ಜೆಡಿಎಸ್‌ ಬಗ್ಗೆ ಬಿಜೆಪಿ ಮೃದು ಧೋರಣೆ ಹೊಂದಿ ದಷ್ಟೂ ಕಾಂಗ್ರೆಸ್‌ ಜೆಡಿಎಸ್‌ ಮೇಲೆ ಮುಗಿ ಬೀಳುತ್ತದೆ. ಆಗ, ಕಾಂಗ್ರೆಸ್‌ ಬಗ್ಗೆ ಆಕ್ರೋಶ ಹೊಂದಿ ಜೆಡಿಎಸ್‌ ಗೆಲ್ಲಲು ಸಾಧ್ಯವಿಲ್ಲದ ಕಡೆ ಬಿಜೆಪಿಯತ್ತ ಒಲವು ತೋರುತ್ತಾರೆ ಎಂಬುದು ಬಿಜೆಪಿ ಲೆಕ್ಕಾಚಾರ. ಇದೂ ಸಹ ಕಾರ್ಯತಂತ್ರದ ಭಾಗ.

ಹದಿನೈದು ದಿನಗಳ ಹಿಂದೆ ರಾಜ್ಯಕ್ಕೆ ಆಗಮಿಸಿದ್ದ ಬಿಜೆಪಿ ಅಧ್ಯಕ್ಷ ಅಮಿತ್‌ ಶಾ, ಜೆಡಿಎಸ್‌ ಬಗ್ಗೆ ಹೆಚ್ಚು ಮಾತನಾಡಲು ಹೋಗಬೇಡಿ. ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್‌ ಟಾರ್ಗೆಟ್‌ ಮಾಡಿ ಎಂದು ತಾಕೀತು ಮಾಡಿದ್ದರು.

ರಾಜ್ಯದಲ್ಲಿ ಪ್ರಮುಖ ಸಮುದಾಯದ ಬೆಂಬಲ ಇಲ್ಲದೆ ಬಿಜೆಪಿ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ ಎಂಬ ಅಂಶ ಮನಗಂಡಿರುವ ಶಾ, ದೇವೇಗೌಡರ ವಿರುದ್ಧ ಸಿದ್ದರಾಮಯ್ಯ ವಾಗ್ಧಾಳಿ ಹಿನ್ನೆಲೆಯಲ್ಲಿ ಒಕ್ಕಲಿಗರ ಆಕ್ರೋಶದ ಜತೆಗೆ ಲಿಂಗಾಯತ ಪ್ರತ್ಯೇಕ ಧರ್ಮ, ಬಡ್ತಿ ಮೀಸಲಾತಿ, ಸದಾಶಿವ ಆಯೋಗ ವರದಿ ಜಾರಿ ವಿಚಾರಗಳಲ್ಲಿ ಕಾಂಗ್ರೆಸ್‌ ವಿರುದ್ಧ  ಎದ್ದಿರುವ ಅಸಮಾಧಾನ ಬಿಜೆಪಿಗೆ ಲಾಭವಾಗಿ ಪರಿವರ್ತಿಸಿಕೊಳ್ಳಿ ಎಂದು ರಾಜ್ಯ ನಾಯಕರಿಗೆ  ಸೂಚನೆ ನೀಡಿದ್ದರು. 

ಇದರ ಬೆನ್ನಲ್ಲೇ ನರೇಂದ್ರಮೋದಿ ದೇವೇಗೌಡರ ಗುಣಗಾನ ಮಾಡಿ ಕಾಂಗ್ರೆಸ್‌ಗೆ "ಟಾಂಗ್‌' ನೀಡುವ ಯತ್ನ ಮಾಡಿದ್ದಾರೆ.  ಈ ಬಾರಿ  ಮೋದಿ ರಾಜ್ಯಕ್ಕೆ ಬಂದ ನಂತರ ಮೋಡಿ ಆಗಲಿದೆ ಎಂಬುದು ಬಿಜೆಪಿ ಯವರ ನಿರೀಕ್ಷೆ ಎಂಬ ಮಾತುಗಳು ಕೇಳಿಬರುತ್ತಿವೆ.

ಏನದು ಸಂದರ್ಭ?
2014ರ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಕೇಂದ್ರದಲ್ಲಿ ಮೋದಿ ನೇತೃತ್ವದ ಬಿಜೆಪಿ ಅಧಿಕಾರಕ್ಕೆ ಬಂದರೆ ಕರ್ನಾಟಕ ತೊರೆಯುತ್ತೇನೆ. ರಾಜಕೀಯ ಸನ್ಯಾಸ ತೆಗೆದುಕೊಳ್ಳುತ್ತೇನೆ ಎಂದು ದೇವೇಗೌಡರು ಹೇಳಿದ್ದರು. ಚಿಕ್ಕಬಳ್ಳಾಪುರ ಲೋಕಸಭೆ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಬಚ್ಚೇಗೌಡರ ಪರ ಪ್ರಚಾರಕ್ಕೆ ಆಗಮಿಸಿದ್ದ ಮೋದಿ, ದೇವೇಗೌಡರಿಗೆ ತಿರುಗೇಟು ನೀಡಿ, ನೀವು ಮಾಜಿ ಪ್ರಧಾನಿ. ನಾನು ನಿಮ್ಮ ಮಗನಿದ್ದಂತೆ, ನಿಮಗೆ ಇಲ್ಲಿರಲು (ಕರ್ನಾಟಕ)ಕಷ್ಟ ಆದರೆ ನಾನು ನಿಮ್ಮಲ್ಲಿ ಪ್ರಾರ್ಥಿಸುತ್ತೇನೆ, ಗುಜರಾತ್‌ಗೆ ಬಂದುಬಿಡಿ ನಿಮಗೆ ಸ್ವಾಗತ ಎಲ್ಲ ರೀತಿಯ ವ್ಯವಸ್ಥೆ ಕಲ್ಪಿಸಲಾಗುವುದು ಅಲ್ಲಿ ವೃದ್ಧಾಶ್ರಮದಲ್ಲಿರಲು ಬಯಸಿದರೂ ಸರಿ, ಸ್ವಂತ ಮನೆ ಖರೀದಿಸ ಬಯಸಿದರೂ ಸರಿ, ನಿಮ್ಮ ಮಕ್ಕಳಿಗಿಂತ ಚೆನ್ನಾಗಿ ನೋಡಿಕೊಳೆನೆ. ನನ್ನ  ಆಹ್ವಾನ ಒಪ್ಪಿಕೊಳ್ಳಿ ಎಂದು ಹೇಳಿದ್ದರು.

ಪ್ರಸ್ತುತ ಒಕ್ಕಲಿಗ ಸಮುದಾಯ ಜೆಡಿಎಸ್‌ ಜತೆಗಿದ್ದು, ಕೆಲವೆಡೆ ಕಾಂಗ್ರೆಸ್‌ ವಿರುದ್ಧ ಆಕ್ರೋಶ ಹೊಂದಿದೆ. ಅಂತಹ ಜಾಗಗಳಲ್ಲಿ ಬಿಜೆಪಿಗೆ ಒಕ್ಕಲಿಗ ಮತಗಳು ಬರಲಿ ಎಂಬ ಲೆಕ್ಕಾಚಾರ 
15 ದಿನದ ಹಿಂದೆ ರಾಜ್ಯಕ್ಕೆ ಆಗಮಿಸಿದ್ದ  ಶಾ, ಜೆಡಿಎಸ್‌ ಬಗ್ಗೆ ಹೆಚ್ಚು ಮಾತನಾಡಲು ಹೋಗಬೇಡಿ. ಸಿದ್ದರಾಮಯ್ಯ, ಕಾಂಗ್ರೆಸ್‌ ಟಾರ್ಗೆಟ್‌ ಮಾಡಿ ಎಂದು ತಾಕೀತು

ಎಸ್‌.ಲಕ್ಷ್ಮಿನಾರಾಯಣ 


Trending videos

Back to Top