CONNECT WITH US  

ಗೆಳೆಯನನ್ನು ಅಳಿಸಿದವನ ಗತಿ ಏನಾಯ್ತು?

"ಇಷ್ಟು ಸಣ್ಣ ವಿಷಯಕ್ಕೆ ಆ ಬ್ರಿಟಿಷ್‌ ಹುಡುಗನ ಹತ್ತಿರ ನೀನು ಯಾಕೆ ಕ್ಷಮೆ ಕೇಳಿದೆ?' ಎಂದು  ಶಾಲೆಯಲ್ಲಿ ವಿದ್ಯಾರ್ಥಿಯೊಬ್ಬ ಕೆಂಡಾಮಂಡಲನಾಗಿ ಸ್ನೇಹಿತನನ್ನು ಕೇಳಿದ. ಅಷ್ಟರಲ್ಲಿ ಶಿಕ್ಷಕರು ತರಗತಿಗೆ ಬಂದರು. ಕೋಪಗೊಂಡಿದ್ದ ಬಾಲಕ ಆ ಕ್ಷಣಕ್ಕೆ ಸುಮ್ಮನಾದ. ತರಗತಿಯಲ್ಲಿ ನಡೆಯುತ್ತಿದ್ದ ಗೌಜು ಗದ್ದಲವೆಲ್ಲ ಒಮ್ಮೆಗೇ ಶಾಂತವಾಯಿತು. 

ಆಗ ನಮ್ಮ ಭಾರತ ದೇಶ ಸ್ವತಂತ್ರವಾಗಿರಲಿಲ್ಲ. ಬ್ರಿಟಿಷರು  ಭಾರತದಲ್ಲಿ ಆಳ್ವಿಕೆ ನಡೆಯುತ್ತಿದ್ದರು. ಶಾಲೆ- ಕಾಲೇಜು- ಆಫೀಸು, ಮಾರ್ಕೆಟ್‌ ಎಲ್ಲ ಕಡೆ ಬ್ರಿಟಿಷರದೇ ದರ್ಬಾರು. ಅವರ ಬೂಟುಪಾಲಿಷ್‌ ಕೆಲಸವನ್ನು ಭಾರತೀಯರೇ ಮಾಡಬೇಕಾಗಿದ್ದಿತು. ಅವರು ಹೊಡೆದರೆ, ನಾವು ಹೊಡೆಸಿಕೊಳ್ಳಬೇಕು. ಅಂತಹ ದಿನಗಳು. 

ಶಾಲೆಯೊಂದರಲ್ಲಿ ತರಗತಿ ಶುರುವಾಗಿ ಎಷ್ಟೋ ಹೊತ್ತಾಗಿದ್ದರೂ ಶಿಕ್ಷಕರು ಬಂದಿರಲಿಲ್ಲ. ವಿದ್ಯಾರ್ಥಿಗಳು ಜಗಳವಾಡಿಕೊಳ್ಳುತ್ತ, ಗಲಾಟೆಯಲ್ಲಿ ತೊಡಗಿದ್ದರು. ಆ ಸಂದರ್ಭದಲ್ಲಿ ಒಬ್ಬ ಭಾರತೀಯ ಹುಡುಗನ ಕೈ ಆಂಗ್ಲ ಹುಡುಗನ ಕುತ್ತಿಗೆಗೆ ತಾಕಿತು. ಕೋಪಗೊಂಡ ಆಂಗ್ಲ ಹುಡುಗ ಮೈಲಿಗೆಯಾದವರಂತೆ ಸೆಟೆದು ದೂರ ನಿಂತ. ಅಷ್ಟು ಸಾಲದು ಅಂತ "ನೀವು ಭಾರತೀಯರು ಶುದ್ಧ ಕತ್ತೆಗಳು. ನಿಮಗೆ ಶಿಸ್ತು ಅನ್ನೋದೇ ಗೊತ್ತಿಲ್ಲ. ನಾಯಿಗಳ ಹಾಗೆ ಕಚ್ಚಾಡುತ್ತೀರಾ.' ಎಂದು ಬುಸುಗುಟ್ಟಿದ. ಕೈ ತಾಕಿದವ ತನಗೆ ಇನ್ನೇನು ಕಾದಿದೆಯೋ ಎಂದು ಹೆದರಿ ನಡುಗಿದ. ಬ್ರಿಟಿಷ್‌ ಹುಡುಗ ಹಿರಿಯ ಪ್ರಾಧ್ಯಾಪಕರ ಬಳಿ ಚಾಡಿ ಹೇಳಿ ತನಗೆ ಉಗ್ರ ಶಿಕ್ಷೆ ಕೊಡಿಸುವ ಮೊದಲು ಅವನ ಕ್ಷಮೆ ಕೇಳುವುದು ಸರಿಯಾದ ದಾರಿ ಎಂದು ಅವನಿಗೆ ತೋರಿತು. ಅದಕ್ಕೇ "ತಪ್ಪಾಯಿತು, ಕ್ಷಮಿಸು' ಎಂದು ಕ್ಷಮೆ ಕೇಳಿದ. ಆಂಗ್ಲ ಬಾಲಕ ಯುದ್ಧದಲ್ಲಿ ಗೆದ್ದಂತೆ ಬೀಗಿದ. ಭಾರತೀಯ ಹುಡುಗ ಕ್ಷಮೆ ಕೇಳಿದ್ದರಿಂದ ತನ್ನ ವರ್ಚಸ್ಸು ಹೆಚ್ಚಿತು ಎಂದು ತಿಳಿದ. ಏನೋ ದೊಡ್ಡ ಮನಸ್ಸು ಮಾಡಿದವನಂತೆ ಮುಖಭಾವ ತೋರಿ ಅವನು "ಆಯ್ತು ಇದೊಂದು ಸಲ ಕ್ಷಮಿಸಿದ್ದೇನೆ' ಎಂದ.

ಭಾರತೀಯ ಬಾಲಕ ಕ್ಷಮೆ ಕೇಳಿದ್ದು ಅವನ ಗೆಳೆಯನೊಬ್ಬನಿಗೆ ಹಿಡಿಸಲಿಲ್ಲ. ಆ ಗೆಳೆಯನ ಕಣ್ಣಾಲಿಗಳು ಬೆಂಕಿಯಂತೆ ಪ್ರಜ್ವಲಿಸುತ್ತಿದ್ದವು. ಅವನು ಕ್ಷಮೆ ಕೇಳಿದವನನ್ನು ತರಾಟೆಗೆ ತೆಗೆದುಕೊಳ್ಳುವವನಿದ್ದ. ಆದರೆ ಅಷ್ಟರಲ್ಲಿ ಮಾಸ್ಟರರು ಬಂದುದರಿಂದ ಸುಮ್ಮನಿರಬೇಕಾುತು. ಸಂಜೆ ಶಾಲೆ ಬಿಟ್ಟಮೇಲೆ ಎಲ್ಲರೂ ಹೊರಬಂದರು. ಶಿಕ್ಷಕರು ತಮ್ಮ ಕೊಠಡಿಗೆ ಹೋಗಿದ್ದರು. ಕ್ಷಮೆ ಕೋರಿದವನ ಗೆಳೆಯ ಮಾತ್ರ ಅಹಂಕಾರದಿಂದ ವರ್ತಿಸಿದ ಬ್ರಿಟಿಷ್‌ ಬಾಲಕನನ್ನು ಹಿಂಬಾಲಿಸಿಕೊಂಡು ಬಂದಿದ್ದ. ಹಠಾತ್ತನೆ ಆಂಗ್ಲ ಹುಡುಗನ ಕೊರಳಪಟ್ಟಿ ಹಿಡಿದು "ನಮ್ಮ ದೇಶದಲ್ಲೇ ಇದ್ದುಕೊಂಡು, ನಮ್ಮ ಅನ್ನವನ್ನೇ ಊಟ ಮಾಡುತ್ತ ನಮ್ಮನ್ನೇ ಹೀನಾಮಾನವಾಗಿ ಬೈಯ್ಯುತ್ತೀಯಾ? ನಾವು ದೊಡ್ಡವರಾದ ಮೇಲೆ ಪರಕೀಯರಾದ ನಿಮ್ಮನ್ನು ಕತ್ತುಡಿದು ಹೊರಗೆ ಹಾಕುತ್ತೇವೆ. ಎಚ್ಚರ.' ಎಂದು ಹೇಳಿದವನೇ, ಛಟಾರನೇ ಅವನ ಕೆನ್ನೆಗೆ ಬಿಗಿದ. ಅನಿರೀಕ್ಷಿತ ಧಾಳಿಯಿಂದ ಕಂಗಾಲಾದ ಆಂಗ್ಲ ವಿದ್ಯಾರ್ಥಿ ಕಕ್ಕಾಬಿಕ್ಕಿಯಾಗಿ ನಿಂತೇ ಇದ್ದ.

ಬಾಲಕನಾಗಿದ್ದಾಗಲೇ ದೇಶಾಭಿಮಾನವನ್ನು ಮೆರೆದ ಬಾಲಕ ಯಾರು ಗೊತ್ತೇ? "ನೇತಾಜಿ' ಎಂದು ಪ್ರಸಿದ್ಧರಾದ, ಸುಭಾಶ್‌ಚಂದ್ರ ಬೋಸ್‌. ಅವರ ಜೀವನ, ಸಾಹಸಗಾಥೆಗಳನ್ನು ಓದುವುದೇ ಒಂದು ರೋಚಕ ಅನುಭವ.

ವನರಾಗ ಶರ್ಮಾ


Trending videos

Back to Top