CONNECT WITH US  

ಚೆಲುವನಾರಾಯಣನಿಗೆ ಮಂಟಪ ವಾಹನೋತ್ಸವ

ಮೇಲುಕೋಟೆ: ಚೆಲುವನಾರಾಯಣಸ್ವಾಮಿ ಆಷಾಢ ಜಾತ್ರೆಯ ದ್ವಜಾರೋಹಣ ಭಾನುವಾರ ಸಡಗರ ಸಂಭ್ರಮದೊಂದಿಗೆ ನೆರವೇರಿತು. ಗರುಡದ್ವಜವನ್ನು ಪ್ರತಿಷ್ಠಾಪನೆ ಮಾಡಿ ಮಹಾವಿಷ್ಣುವಿನ ವಾಹನವಾದ ಗರುಡದೇವನನ್ನು ಆರಾಧಿಸಿ ಅಭಿಷೇಕ ನೆರವೇರಿಸಿ ಮಹೂರ್ತ ಪಠಣ ಮತ್ತು  ವೇದಮಂತ್ರಗಳೊಂದಿಗೆ ದ್ವಜಾರೋಹಣ ಮಾಡಲಾಯಿತು.

ಇದಕ್ಕೂ ಮುನ್ನ ಚೆಲುವನಾರಾಯಣಸ್ವಾಮಿಗೆ ಗರುಡಪಟದೊಂದಿಗೆ ಮಂಟಪವಾಹನೋತ್ಸವ ವೈಭವದಿಂದ ನೆರವೇರಿತು. 10 ದಿನಗಳ ಕಾಲ ನಡೆಯುವ ಆಷಾಢ ಜಾತ್ರಾ ಮಹೋತ್ಸವ ಶ್ರೀ ಕೃಷ್ಣರಾಜಮುಡಿ ಬ್ರಹ್ಮೋತ್ಸವಕ್ಕೆ ದೇವಾನುದೇವತೆಗಳನ್ನು ಆಹ್ವಾನಿಸಲು ಸಾಂಪ್ರದಾಯಿಕ ಪದ್ಧªತಿಯನುಸಾರಿ ಮಂತ್ರಗಳ ಮೂಲಕ ಕೋರಿ ಗರುಡದೇವನಿಗೆ ಪೂಜಾನುಷ್ಠಾನ ಕೈಗೊಳ್ಳಲಾಯಿತು. 

ಮುಮ್ಮಡಿ ಶ್ರೀಕೃಷ್ಣರಾಜ ಒಡೆಯರ್‌ ಜನ್ಮ ವರ್ಧಂತಿಯ ನಿಮಿತ್ತ ಮೂಲಮೂರ್ತಿ ಚೆಲ್ವತಿರುನಾರಾಯಣಸ್ವಾಮಿ, ಯೋಗಾನರಸಿಂಹಸ್ವಾಮಿ, ರಾಮಾನುಜಾಚಾರ್ಯರು ಹಾಗೂ ಯದುಗಿರಿ ನಾಯಕಿ ಅಮ್ಮನವರಿಗೆ ವೇದ ಮಂತ್ರಗಳೊಂದಿಗೆ ಸ್ನಪನ ಪೂರ್ವಕವಾದ ಮಹಾಭಿಷೇಕ ನೆರವೇರಿಸಲಾಯಿತು. 

ವಿವಿಧ ಭಾಗಗಳಿಂದ ಆಗಮಿಸಿದ್ದ ಸಹಸ್ರಾರು ಭಕ್ತರು ದೇವರ ದರ್ಶನ ಪಡೆದರು. ಬೆಳಗ್ಗೆ 8 ಕ್ಕೆ ಆರಂಭವಾದ ದೇವಾಲಯದ ಧಾರ್ಮಿಕ ಕಾರ್ಯಕ್ರಮಗಳು ಇಡೀದಿನ ನಡೆದವು. ದ್ವಜಾರೋಹಣ ಕಾರ್ಯಕ್ರಮಗಳು ಒಂದು ಗಂಟೆಗೆ ಮುಕ್ತಾಯವಾದ ನಂತರ ಆರಂಭವಾದ ಮಹಾಭಿಷೇಕ ಸಂಜೆ ಆರು ಗಂಟೆಗೆ ಮುಕ್ತಾಯವಾಯಿತು. ರಾತ್ರಿ ಕಲ್ಯಾಣ ನಾಯಕಿ ಮತ್ತು ಚೆಲುವನಾರಾಯಣಸ್ವಾಮಿಗೆ ಕಲ್ಯಾಣೋತ್ಸವ ನೆರವೇರಿತು. 

2 ತಿಂಗಳಲ್ಲಿ 30 ಲಕ್ಷರೂ. ಕಾಣಿಕೆ ಸಂಗ್ರಹ: ಮೇಲುಕೋಟೆ ದೇವಾಲಯದಲ್ಲಿ ಎರಡು ತಿಂಗಳ ಅವಧಿಯಲ್ಲಿ ಹುಂಡಿಯಲ್ಲಿ 30 ಲಕ್ಷ ರೂ. ಕಾಣಿಕೆ ಸಂಗ್ರಹವಾಗಿದೆ. ಈಚೆಗೆ ನಡೆಸಿದ ಎಣಿಕೆಯಲ್ಲಿ ಚೆಲುವನಾರಾಯಣಸ್ವಾಮಿ ದೇವಾಲಯದ ಹುಂಡಿಗಳಿಂದ 21,26,915 ಲಕ್ಷ ರೂ.

ಮತ್ತು ಯೋಗಾ ನರಸಿಂಹಸ್ವಾಮಿ ದೇವಾಲಯದ ಹುಂಡಿಗಳಲ್ಲಿ 8,66.985 ರೂ. ಸೇರಿ 29,93,900 ರೂ. ಕಾಣಿಕೆ ಸಂಗ್ರಹವಾಗಿದೆ. ಎಣಿಕೆ ಕಾರ್ಯದಲ್ಲಿ ಕಾರ್ಯನಿರ್ವಾಹಕ ಅಧಿಕಾರಿ ನಂಜೇಗೌಡ ಉಪತಹಶೀಲ್ದಾರ್‌ ರಾಜೇಶ್‌, ದೇವಾಲಯದ ಬಾಲಕೃಷ್ಣ ಹೆಡ್‌ ಗುಮಾಸ್ತ ಶ್ರೀರಂಗರಾಜು, ಭಗವಾನ್‌ ಅಕೌಂಟೆಂಟ್‌ ಹೇಮಂತಕುಮಾರ್‌ ಪಾಲ್ಗೊಂಡಿದ್ದರು.  


Trending videos

Back to Top