CONNECT WITH US  

ವಿಷ ಕನ್ಯೆಯರೂ,ಬದುಕನ್ನೇ ತುಕ್ಕು ಹಿಡಿಸುವ ಪುರುಷ ಪುಂಗವರೂ...

 ಬದುಕು ಪ್ರತಿ ಹಂತದಲ್ಲೂ ( ವಿಸ್ಮಯಗಳಿಂದ ಕೂಡಿದ, ತಲ್ಲಣಗಳಿಂದ ಕೂಡಿದ, ಸಂತೋಷಗಳ ಹೊರತಾಗಿ ಬೇರೇನೂ ಇರದ, ಸಂತೋಷ ಕಳಕೊಂಡರೆ ಬರೇ ನೋವಿನ ಸುರಿ. ಮಳೆಯೇ ಸುರಿಯುವ ಇತ್ಯಾದಿ ಇತ್ಯಾದಿ)  ಬದಲಾಗಿ ನಿಂತುಕೊಳ್ಳಬಹುದು. ಅದರ ಹಾದಿ ಹೀಗೇ ಇರುತ್ತದೆ ಎಂದು ಹೇಳಲು ಸಾಧ್ಯವೇ ಇಲ್ಲ. ಕೊನೆಗೂ ಕಾಣದ ಕೈಯ್ಯೊಂದು ಬದುಕಿನುದ್ದಕ್ಕೂ ಅದೃಷ್ಟ, ದುರಾದೃಷ್ಟಗಳನ್ನು ಒದಗಿಸುತ್ತ ಹೋಗುತ್ತದೆ ಎಂಬುದು ನಮ್ಮ ನಂಬಿಕೆ. ಆದರೂ ನಾವು ಒಳಿತುಗಳು ಬಂದೇ ಬರುತ್ತವೆ ಎಂಬ ನಂಬಿಕೆಯೊಂದಿಗೆ ಮುಂದೆ ಸಾಗುತ್ತೇವೆ. ಕಾಣದ ಶಕ್ತಿಯ ಬಳಿ ಪ್ರಾರ್ಥನೆಯ ಮೂಲಕ ಒಳಿತನ್ನು ನೀಡು ಎಂದು ಕೇಳಿಕೊಳ್ಳುತ್ತೇವೆ.  ಹಾಗಾದರೆ ಈ ಎಲ್ಲ ಒಳಿತು ಕೆಡಕುಗಳ ಮರ್ಮ ಏನು? ಹಲವು ತೆರನಾದ್ದು ಈ ಮರ್ಮ. ಒಬ್ಬ ವ್ಯಕ್ತಿಗೆ ವರ್ಚಸ್ಸು ಸದಾ ತುಂಬಿರುತ್ತದೆ, ಏಕೆ? ಒಬ್ಬ ಮಾತಿನ ಮಾಂತ್ರಿಕನಾಗಿರುತ್ತಾನೆ, ಏಕೆ? ಮಗದೊಬ್ಬ ವ್ಯಕ್ತಿ ಧೈರ್ಯದಿಂದ ಮುನ್ನುಗ್ಗುವುದು ಏತಕ್ಕೆ? ಇನ್ನೂ ಒಬ್ಬ ಸುಖದಲ್ಲಿಯೇ ತೇಲಾಡಿಕೊಂಡಿರುತ್ತಾನಲ್ಲಾ? ಈ ಎಲ್ಲಾ ಪ್ರಶ್ನೆಗಳಿಗೆ  ಒಂದೇ ಏಟಿಗೆ ಉತ್ತರಿಸುವುದು ಕಷ್ಟ.  ಏಕಾಂಗಿಯಾಗಿ ಬದುಕು ಸಾಗಿಸುವುದು ಕಷ್ಟ. ಹೀಗಾಗಿ ಹೆಣ್ಣು ಗಂಡು ಬಾಳ ಪಥದಲ್ಲಿ ಕೂಡಿ ದಾಂಪತ್ಯದ ಜೀವನಕ್ಕೆ ಕಾಲಿಡುತ್ತಾರೆ. ಧರ್ಮ, ಅರ್ಥ, ಕಾಮ, ಮೋಕ್ಷಗಳು ದಾಂಪತ್ಯದ ಮೂಲಕವೇ ಸಿಗಬೇಕು. ಆದರೆ ಎಷ್ಟು ದಾಂಪತ್ಯಗಳು ಅನ್ಯೋನ್ಯವಾಗಿರುತ್ತವೆ? ಪೂರ್ತಿ ಹೊಂದಾಣಿಕೆ, ಏನೂ ಹೊಂದಾಣಿಕೆಯೇ ಇರದ, ಇದ್ದರೂ ಶ್ರೇಷ್ಠ ಹೊಂದಾಣಿಕೆ ಎಂದು ಅನಿಸದ, ಮದುವೆಯಾಗಿರುವ ಕಾರಣಕ್ಕೆ, ಸಮಾಜದ ಮಂದಿಯ ಎದುರು ಮರ್ಯಾದೆ ಉಳಿಸಿಕೊಳ್ಳುವ ಕಾರಣಕ್ಕಾದರೂ ಹೊಂದಿಕೊಂಡು ಹೋಗಬೇಕು ಎಂಬುದಕ್ಕೆ ನಾಟಕ ಮಾಡುತ್ತಲಾದರೂ ಹೊಂದಿಕೊಂಡು ಹೋಗುವ ದಾಂಪತ್ಯಗಳು ತುಂಬಾ ಇವೆ. ಸಂತೋಷದ ದಾಂಪತ್ಯಗಳೂ ಇಲ್ಲ ಎಂದೇನಲ್ಲ. ಆದರೆ ಸಂತೋಷವನ್ನೇ ಬದುಕಾಗಿಸಿಕೊಂಡವರ ಸಂಖ್ಯೆ ಕಡಿಮೆ. 

 ತುಕ್ಕು ಹಿಡಿಸುವ ಪುರುಷ ಪುಂಗವರು
 ದುಷ್ಟ ಪುರುಷರು ಸದಾ ಇದ್ದೇ ಇರುತ್ತಾರೆ. ಹೀಗೆಂದ ಮಾತ್ರಕ್ಕೆ ಒಳ್ಳೆ ಜನ ಅಪರೂಪವಲ್ಲ. ತುಕ್ಕು ಹಿಡಿಸುವ ಪುರುಷ ಪುಂಗವರು ಎಂದರೆ ತನ್ನನ್ನು ನಂಬಿದ ಹೆಣ್ಣು ಮಕ್ಕಳಿಗೆ ತೊಂದರೆಯನ್ನೇ ತರುವವರು ಇವರು. ಹೆಣ್ಣುಗಳನ್ನು ಬೆನ್ನು ಹತ್ತುತ್ತಾರೆ. ಗೋಳಾಡಿಸುತ್ತಾರೆ. ಸುಲಭವಾಗಿ ಕೈವಶ ಪಡಿಸಿಕೊಳ್ಳುತ್ತಾರೆ. ಮರುಳು ಮಾಡುವುದು ಇವರ ಹುಟ್ಟುಗುಣ. ಇವರು ಬಲಾತ್ಕಾರವಾಗಿ ತಮಗೆ ಬೇಕಾದವರನ್ನು ಶತಾಯುಗತಾಯು ಹಿಡಿದು ಭೋಗಿಸುತ್ತಾರೆ. ಪರಿಸ್ಥಿತಿ ಹತೋಟಿ ತಪ್ಪಿದರೆ ಸಾಯಿಸುತ್ತಾರೆ. ಇನ್ನೂ ಕೆಲವು ಪುರುಷರು ಪ್ರವೇಶಿಸಿದ ಮನೆಯ ಹೆಣ್ಣು ಮಕ್ಕಳ ಬಾಳು ಕಣ್ಣೀರಿನ ಕಥೆಯೇ ಆಗುತ್ತದೆ. ಇದು ನಮ್ಮ ದೇಶ ಎಂದಲ್ಲ. ಪ್ರಪಂಚವ್ಯಾಪಿ. ನೋಡಿ, ಅದೃಷ್ಟ ಇಂಥ ಪುರುಷರನ್ನು ಅದೃಷ್ಟ ಹೀನ ಮಹಿಳಾ ಮಣಿಗಳಿಗೆ ಗಂಟು ಹಾಕುತ್ತದೆ. 

 ಒಬ್ಬ ಪುರುಷ, ಈತ ಅಂತಾರಾಷ್ಟ್ರೀಯ ಕೇಡಿ. ಬಹು ಸುಂದರಾಂಗ. ಇವನ ಜನನದ ವೇಳೆಯ ಮುಖ್ಯ ಯಾಜಮಾನನೇ ಬುಧ. ಬುಧನ ಅನುಪಮ ಶಕ್ತಿ ದಕ್ಕಿದಾಗ ಸುಂದರವಾದ ವ್ಯಕ್ತಿತ್ವ (ನೋಡಲಿಕ್ಕೆ) ಪ್ರಧಾನವಾಗುತ್ತದೆ. ಇಂಥವರನ್ನು  ಉತ್ಪಾತರೂಪಿ ಎಂದೂ° ನಮ್ಮ ಗ್ರಂಥಗಳು ಉದ್ಗರಿಸುತ್ತವೆ. ರೂಪದಲ್ಲಿ ಬುಧನು ಅಪ್ರತಿಮನಾಗಿದ್ದಾನೆಂಬುದಾಗಿ ಇವುಗಳು ವರ್ಣನೆ ಮಾಡುತ್ತವೆ.  ಈಗ ಉಲ್ಲೇಖೀಸುತ್ತಿರುವ ಕೇಡಿಯು ರೂಪದಲ್ಲಿ ಅನುಪಮತೆಯನ್ನು ಬುಧನ ಕಾರಣದಿಂದಾಗಿಯೇ ಪಡೆದಿರುತ್ತಾನೆ. ಇವನ ಜಾತಕದಲ್ಲಿ ಸುಂದರ ರೂಪ ಪ್ರಧಾನವಾದ ಆಯುಧವಾಗಿದೆ. ಜೊತೆಗೆ ದಿಗ್ಬಲ ಪಡೆದು ಸೂರ್ಯನ ಕಾರಣದಿಂದಾಗಿ ಹುಡುಗಿಯರ ಸಂಬಂಧ ಅವನ ಗ್ರಹಗಳೇ ಒದಗಿಸುವ ವರ್ತಮಾನ ಉಂಟಾಗುತ್ತಿರುತ್ತದೆ. ಆದರೆ ಸೂರ್ಯನ, ಶುಕ್ರನ ಸಂಯೋಜನೆಯು ( ಕುಜದೋಷದ ದುಷ್ಟಾತಿ ದುಷ್ಟ ರಾಕ್ಷಸ ಮನೋಭಾವ ಒದಗಿರುವುದರಿಂದ) ಹತ್ತಿರ ಬಂದ ಹುಡುಗಿಯರನ್ನು ದೈಹಿಕವಾಗಿ ಉಪಯೋಗಿಸಿಕೊಂಡು, ನಂತರ ಹಣ ದೋಚಿ, ಪ್ರತಿಭಟನೆ ಎದುರಾದಾಗ ಕೊಂದು ಬಿಸಾಡುವ ಹೀನತನ ನೀಡಿದೆ. ಅಮಲು ಪದಾರ್ಥ, ಲೈಂಗಿಕ ತೃಷೆ, ಕಳ್ಳತನ, ಕೊಲೆ ಇತ್ಯಾದಿಗಳನ್ನು ಇವನ ಮೋಹಕ ರೂಪದ ಒಳಗೆ ಕಾಣಲು ಸಾಧ್ಯವಾಗದು. 

ಇನ್ನೊಬ್ಬನ ಕಥೆ ಕೇಳಿ. ಈತನದೂ ಅಂತಾರಾಷ್ಟ್ರೀಯ ಕುಖ್ಯಾತಿ. ಸದಾ ಜಗಳಾಡುತ್ತಿದ್ದ ತಂದೆ ತಾಯಿಗಳ ಮಗ. ವಿಭಿನ್ನ ಸಂಸ್ಕೃತಿ, ಖಂಡಾಂತರ ದೇಶದ ಹೆಣ್ಣು ಗಂಡುಗಳು ಪ್ರೀತಿಸಿ ಮದುವೆಯಾಗಿ ಪಡೆದ ಈ ಮಗು ಶುದ್ಧ ರಾಕ್ಷಸನಾದ. ಇವನ ಸಹವಾಸಕ್ಕೆ ಬಂದ ಯಾವ ಹೆಣ್ಣುಗಳೂ ಒಂದು ಉತ್ತಮ ಸ್ಥಿತಿಗತಿ ಪಡೆಯಲಿಲ್ಲ. ಎಷ್ಟೇ ದೋಚಿದರೂ ಇವನೂ ಉದ್ದಾರವಾಗಲಿಲ್ಲ. ಪೊಲೀಸರು ಸದಾ ಬೆನ್ನಟ್ಟಿದ್ದರು. ಪೊಲೀಸರಿಗೂ ಚಳ್ಳೆ ಹಣ್ಣು ತಿನ್ನಿಸಿದ.  ತಾನು ಯಾರನ್ನು ಕೊಂದನೋ, ಆ ಕೊಲೆಗೆ ಬೇಕಾದ ಸಾಕ್ಷಿಯನ್ನು ಚೂರೂ ಉಳಿಸಿದೆ ಗಲ್ಲು ಶಿಕ್ಷೆ ತಪ್ಪಿಸಿಕೊಂಡ. ತನ್ನ ಕೇಸುಗಳನ್ನು ತಾನೇ ವಾದಿಸಿ ಸಮರ್ಥಿಸಿಕೊಳ್ಳುವ ಕಾಯ್ದೆ ಕಾನೂನುಗಳ ಪರಿಣಿತ. ಎಲ್ಲಾ ದೇಶದ ಕಾಯ್ದೆಗಳನ್ನು ಅರೆದು ಕುಡಿದು ಹಸ್ತಂಗತ ಮಾಡಿಕೊಂಡ ಮಹಾನ್‌ ಚತುರ. ಜೀವನದ ನಾಲ್ಕು ದಶಕಗಳ ಕಾಲವನ್ನು ಜೈಲಿನಲ್ಲೇ ಜೀವನ ಕಳೆದ. ಗಲ್ಲು ತಪ್ಪಿದರೂ, ಜೈಲು ತಪ್ಪಲಿಲ್ಲ. ಆದರೆ ಅರಳಬೇಕಾದ ಮಹಿಳೆಯರ  ಬದುಕನ್ನು ಶಾಶ್ವತವಾಗಿ ತುಕ್ಕು ಹಿಡಿಸಿದ. ಚೆಂಡಾಡಿದ. ತಣ್ಣಗಿನ ಕ್ರೌರ್ಯವನ್ನು ಕುಜ ದೋಷ ವ್ಯಕ್ತಿತ್ವಕ್ಕೆ ರಾಕ್ಷಸತ್ವ ನೀಡಿ ಮರೆಸಿತು. ಮನೋಹರ ರೂಪವನ್ನು ಬುಧ ನೀಡಿದ. ಬುದ್ಧಿ ಬಲ ಸೂರ್ಯನಿಂದ. ಭೋಗ ಶುಕ್ರನ ಶಕ್ತಿಯ ಕಾರಣದಿಂದ. ಆದರೆ ....!!! ಏನು ಪ್ರಯೋಜನ? 

 ಹತ್ತಿ ಬಂದವರನ್ನೆಲ್ಲ ನಿಷ್ಕ್ರಿಯಗೊಳಿಸಿದ ವಿಷ ಕನ್ಯೆ
 ಈ ಮೇಲಿನ ಎಲ್ಲಾ ವಿವರ ಪುರುಷನದ್ದಾದರೆ, ಈಗ ವಿಷ ಕನ್ಯೆಯ ಚಿತ್ರ. ವ್ಯಕ್ತಿತ್ವವನ್ನು ಎತ್ತರಕ್ಕೇರಿಸುವ ಅಂಗಾರಕನಿದ್ದರೂ ಸದಾ ರಾಹು ಕಕ್ಕಿದ ವಿಷ ಪೀಡಿತನಾಗಿ ಸುಂದರಿಯಾದರೂ ಹತ್ತಿರ ಬಂದ ಪುರುಷರು ನಿರ್ವೀರ್ಯಗೊಳ್ಳುತ್ತಿದ್ದರು. ಕೇತು ದೋಷ ರಾಹು ನಕ್ಷತ್ರದಲ್ಲಿ (ವಿಷದ ಬಟ್ಟಲಲ್ಲೇ ಕುಳಿತ ಕೇತು)ರುವ ಕೇತು ಪುರುಷರನ್ನು ಸೆಳೆದು ಅವರ ಬಾಹು ಬಂಧನದಲ್ಲಿ ನಿರಂತರವಾದ ಸುಖ ಪಡೆಯುವ ಅದಮ್ಯ ಉತ್ಸಾಹದ ಹೆಣ್ಣು ಇವಳು. ಆದರೆ ಸುಖದ ಯಜಮಾನ ಮರಣದ ಮನೆಯಲ್ಲಿ ಬಲಿಷ್ಠನಾಗಿ ಒಂದಲ್ಲಾ ಒಂದು ಪುರುಷ ಜೀವನವನ್ನು ಪ್ರವೇಶಿಸುತ್ತಿದ್ದನಾದರೂ, ಇವಳ ತೆಕ್ಕೆಗೆ ಬಂದ ಪುರುಷ ಸುಖಮಯವಾಗಿ ಬಾಳುವುದು ಕಷ್ಟವೇ ಆಗುತ್ತಿತ್ತು. ಒಂದಲ್ಲ, ಎರಡಲ್ಲ ಹದಿನೇಳು ಪುರುಷರು ಇವಳ ಲಾವಣ್ಯಕ್ಕೆ ಸೋತು ಬಂದವರು. ಸತ್ತವರೂ ಇದ್ದಾರೆ. ನೇಣು ಬಿಗಿದು ಜೀವನದ ಯಾತ್ರೆ ಮುಗಿಸಿದವರು, ಜೈಲು ಶಿಕ್ಷೆ ಅನುಭವಿಸಿದರೂ ಇದ್ದಾರೆ. ಜೀವನವಿಡೀ ದಿವಾಳಿತನ, ಅನಾರೋಗ್ಯದ ಅತಿರೇಕದಲ್ಲೇ ಬದುಕಿ ಬಾಳಿದವರಿದ್ದಾರೆ. 

   ಹಾಗಾದರೆ ಈ ವಿಷ ಕನ್ಯೆಯ ತೆಕ್ಕಗೆ ಬಂದವರಿಗೇಕೆ ಈ ಬಾಧೆ? ಕುಜ ದೋಷ, ಸರ್ಪಬಾಧೆ, ಕೇತು ತೊಡಕು, ಗುರು ಯಾತನೆಗಳಲ್ಲಿ ಸಿಕ್ಕು ಬಿದ್ದ ಇವಳೂ ಆತ್ಮಹತ್ಯೆಗೆ ಯತ್ನಿಸಿದ್ದುಂಟು. ಪ್ರಬಲನಾದ ಗುರು, ಜೀವನದ ಸಾರ್ಥಕತೆಯನ್ನು ಸೂರ್ಯನ ಮೂಲಕ ಒದಗಿಸಿದರೂ, ಅಂತರಂಗದಲ್ಲಿ ಪರಿಪೂರ್ಣತೆ ಪಡೆಯಲು ಸಾಧ್ಯವಾಗದ ತಳಮಳದಲ್ಲೇ ಪ್ರತಿ ದಿನವೂ ಚಡಪಡಿಸಿದಳು. ತಂದೆ ತಾಯಂದಿರ ವಿಷಮ ಸಂಬಂಧದ ಫ‌ಲವಾದ ಮಗಳು ಒಂದು ಸಮತೋಲನ ಪಡೆಯದೇ ನರಳಿದಳು. ಗಂಡಸರನ್ನು ಕಣ್ಣಲ್ಲಿ ಕಾಡಿ ಎದೆಗೊರಗಿಸಿಕೊಂಡಳು. ಎದೆಗೆ ಒರಗಿದವರು ಅಸಮತೋಲನ ಪಡೆದರು.  ಜೀವನದಲ್ಲಿ ಎಡವಿದರು. ದಿವಾಳಿಯಾದರು. ಸತ್ತರು. ಬದುಕಿದ್ದರೂ ಸತ್ತಂತೆಯೇ ಇದ್ದರು. 

 ಬದುಕಿನ ಭಾಗ್ಯ ಏಕೆ ಸುವ್ಯವಸ್ಥಿತವಾಗದು?
  ಬದುಕೇ ಹೀಗೆ ಎಂದುಕೊಳ್ಳುವ ಹಾಗೆ ಆಗುತ್ತಿರುತ್ತದೆ. ಈ ಎರಡು ಮೇಲಿನ ಚಿತ್ರಗಳು ಎಲ್ಲಾ ಇದ್ದೂ, ಎಲ್ಲವನ್ನೂ ಕಳಕೊಂಡವರ ಚಿತ್ರಗಳು. ಎಲ್ಲಾ ಇದ್ದವರನ್ನು ಏನೂ ಇರದಂತೆ ಮರು ಭೂಮಿಯಾಗಿಸಿದವರ ಚಿತ್ರಗಳು. ಇದು ವಿಧಿ ಲೀಲೆಯೇ? ಪುರುಷ ಪ್ರಯತ್ನಕ್ಕೆ ಬೆಲೆಯೇ ಇಲ್ಲವೇ? ಇಲ್ಲಿ ನಾವು, ನೀವೆಲ್ಲಾ ತಿಳಿದಿರಲೇಬೇಕಾದ ಸಂಗತಿಯೊಂದಿದೆ. ಪುರುಷ ಪ್ರಯತ್ನಕ್ಕೆ ಬೇಕಾದ ಯಶಸ್ಸು ಸಿಗಲೂ ಕೂಡ ಗ್ರಹಗತಿಗಳು ನಮ್ಮ ಬೆಂಬಲಕ್ಕೆ ಬರಬೇಕು. ಅವನೊಲಿದರೆ ( ಅವನು ಎಂದರೆ ಆ ಪರಾತ್ಪರ ಶಕ್ತಿ) ಎಲ್ಲವೂ ಲಭ್ಯ. ಒಲಿಯದಿದ್ದರೆ ನಮ್ಮ ಜೀವನದ ಕೇಂದ್ರ, ಬಿಸಿಯಾಗಿ ಭುಸುಗುಡುವ ಕಾವಲಿಯ ಮೇಲೆ ಇದ್ದಂತೆ. ನಿರಂತರ ನೋವಿನ ಜ್ವಾಲಾಮುಖೀಯ ಮೇಲೆ. ಹೀಗಾಗಿ ನಮ್ಮನ್ನು ಮೀರಿದ ಒಂದು ಶಕ್ತಿಯ ಎದುರು ಶರಣಾಗಬೇಕು. ಶರಣಾದವರನ್ನು ಕೈ ಬಿಡದ ಒಂದು ಶಕ್ತಿ, ಕರುಣೆಯಿಂದ ನಮ್ಮನ್ನು ಕಾಪಾಡುವ ದೈವ ಇದ್ದೇ ಇದೆ. 

ಅನಂತ ಶಾಸ್ತ್ರಿ 


Trending videos

Back to Top