CONNECT WITH US  

ನ್ಯಾಯದಾನ ವಿಳಂಬ ಕುರಿತು ಬೇಸರ; ಎಲ್ಲರೆದುರೇ ಸಿಜೆಐ ಕಣ್ಣೀರು

ಭಾರತದ ನ್ಯಾಯಾಲಯಗಳಲ್ಲಿ ಕೋಟ್ಯಂತರ ಪ್ರಕರಣಗಳು ಕೊಳೆಯುತ್ತಿದ್ದು, ಅವುಗಳ ಇತ್ಯರ್ಥಕ್ಕೆ ಸಾಕಷ್ಟು ನ್ಯಾಯಾಧೀಶರಿಲ್ಲದ ಬಗ್ಗೆ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳೇ ಅಸಹಾಯಕರಾಗಿ ಕಣ್ಣೀರಿಟ್ಟ ಅಚ್ಚರಿಯ ವಿದ್ಯಮಾನವಿದು. ದೇಶದ ಪ್ರಧಾನಮಂತ್ರಿ, ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು, ಉಚ್ಚ ನ್ಯಾಯಾಲಯಗಳ ಮುಖ್ಯ ನ್ಯಾಯಾಧೀಶರೆದುರೇ ನ್ಯಾಯಾಂಗದ ದುಸ್ಥಿತಿಯ ಬಗ್ಗೆ ಮಾತನಾಡುತ್ತ ಸಿಜೆಐ ಗದ್ಗದಿತರಾದ ದೃಶ್ಯ ದೇಶಾದ್ಯಂತ ಪ್ರಸಾರವಾಗಿ ಸಂಚಲನ ಮೂಡಿಸಿದ ಘಟನೆಯಿದು. ಸಿಜೆಐ ದುಃಖಕ್ಕೆ ತಕ್ಷಣವೇ ಪ್ರಧಾನಿ ಸ್ಪಂದಿಸಿದ್ದು, ಅದೇ ಸಮಾರಂಭದಲ್ಲಿ ತುರ್ತು ಕ್ರಮದ ನಿರ್ಣಯ ಕೈಗೊಂಡದ್ದು ವಿಶೇಷ.

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ, ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ರಾಜ್ಯ ಉಚ್ಚ ನ್ಯಾಯಾಲಯಗಳ ಮುಖ್ಯ ನ್ಯಾಯಾಧೀಶರ ಸಮ್ಮುಖದಲ್ಲೇ ಭಾರತದ ಮುಖ್ಯ ನ್ಯಾಯಾಧೀಶ ನ್ಯಾ|ಟಿ.ಎಸ್‌.ಠಾಕೂರ್‌ ಕಣ್ಣೀರಿಟ್ಟ ಪ್ರಸಂಗ ಭಾನುವಾರ ನಡೆದಿದೆ.

ರಾಜಧಾನಿಯಲ್ಲಿ ನಡೆದ ಪ್ರಧಾನಿ, ಸಿಎಂಗಳು ಮತ್ತು ಮುಖ್ಯ ನ್ಯಾಯಾಧೀಶರ ಜಂಟಿ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ನ್ಯಾಯಾಧೀಶರ ಕೊರತೆ ಮತ್ತು ನ್ಯಾಯದಾನ ವಿಳಂಬದಿಂದ ಹೇಗೆ ದೇಶದ ಮೇಲೆ ಪರಿಣಾಮವಾಗುತ್ತಿದೆ ಮತ್ತು ನ್ಯಾಯಾಂಗವು ಹೇಗೆ ಇತರರಿಂದ ಅವಹೇಳನಕ್ಕೆ ಗುರಿಯಾಗುತ್ತಿದೆ ಎಂದು ವಿವರಿಸಿ ನ್ಯಾ|ಟಿ.ಎಸ್‌. ಠಾಕೂರ್‌ ಅತ್ತುಬಿಟ್ಟರು.

ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಠಾಕೂರ್‌, "ಒಂದೆಡೆ ಅರ್ಜಿಗಳ ಹಿಮಪಾತವಾಗುತ್ತಿದೆ. ಇನ್ನೊಂದೆಡೆ ಅರ್ಜಿಗಳ ತ್ವರಿತ ವಿಲೇವಾರಿಗಾಗಿ ನ್ಯಾಯಾಧೀಶರ ಸಂಖ್ಯೆಯನ್ನು 21 ಸಾವಿರದಿಂದ 40 ಸಾವಿರಕ್ಕೆ ಹೆಚ್ಚುತ್ತಿಸಬೇಕು ಎಂಬ ದಶಕಗಳ ಬೇಡಿಕೆಯು ಸರ್ಕಾರದ ಒಪ್ಪಿಗೆ ಪಡೆಯದೇ ಹಾಗೇ ಕೊಳೆಯುತ್ತಿದೆ' ಎಂದು ಹೇಳಿದರು.

1987ರಿಂದ ಯಾವುದೇ ಪ್ರಗತಿ ಕಂಡಿಲ್ಲ. 50 ಲಕ್ಷ ಜನಕ್ಕೆ 10 ನ್ಯಾಯಾಧೀಶರು ಈಗ ಕಾರ್ಯನಿರ್ವಹಿಸುತ್ತಿದ್ದಾರೆ. ಇದರ ಸಂಖ್ಯೆಯನ್ನು 50ಕ್ಕೆ ಏರಿಸಬೇಕು ಎಂದು ನ್ಯಾಯಾಂಗ ಆಯೋಗ 87ರಲ್ಲೇ ಶಿಫಾರಸು ಮಾಡಿತ್ತು. ಆದರೆ ಸರ್ಕಾರ ಈ ಬಗ್ಗೆ ನಿಷ್ಕ್ರಿಯವಾಗಿದೆ. ನ್ಯಾಯಾಧೀಶರ ಹೆಚ್ಚಳ ಮತ್ತು ನ್ಯಾಯಾಂಗ ವ್ಯವಸ್ಥೆಗೆ ಮೂಲಸೌಕರ್ಯ ಒದಗಿಸುವುದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಜಂಟಿ ಹೊಣೆಗಾರಿಕೆಯಾಗಿದೆ ಎಂದು ಅವರು ಸಮಸ್ಯೆಯನ್ನು ಕೂಲಂಕುಷವಾಗಿ ಬಿಡಿಸಿ ಇಟ್ಟರು.

"ನಾನು ಕೇವಲ ಅರ್ಜಿದಾರರ ಪರ ಅಥವಾ ಜೈಲಲ್ಲಿ ಕೊಳೆಯುತ್ತಿರುವವರ ಪರ ಮಾತನಾಡುತ್ತಿಲ್ಲ. ದೇಶದ ಅಭಿವೃದ್ಧಿಯೂ ಇದರಲ್ಲಿ ಅಡಗಿದೆ. ಈಗಲೂ ತಡವಾಗಿಲ್ಲ. ಸಂದರ್ಭಕ್ಕೆ ತಕ್ಕಂತೆ ಸೆಟೆದು ನಿಲ್ಲಬೇಕು. ನ್ಯಾಯದಾನ ವಿಳಂಬಕ್ಕೆ ಕೇವಲ ನ್ಯಾಯಾಂಗ ಕಾರಣ ಎಂದು ಬೆಟ್ಟು ಮಾಡುವುದನ್ನು ಬಿಡಬೇಕು. ಏಕೆಂದರೆ ನ್ಯಾಯಾಧೀಶರ ನೇಮಕವು ಶಾಸಕಾಂಗ-ಕಾರ್ಯಾಂಗದ ಕೈಯಲ್ಲಿದೆಯೇ ವಿನಾ ನ್ಯಾಯಾಂಗದ ಕೈಯಲ್ಲಿಲ್ಲ' ಎಂದು ಹೇಳಿ ಗದ್ಗದಿತರಾದರು. ಈ ವೇಳೆ ಪ್ರಧಾನಿ ನರೇಂದ್ರ ಮೋದಿ, ಕಾನೂನು ಮಂತ್ರಿ ಡಿ.ವಿ. ಸದಾನಂದಗೌಡ ಆದಿಯಾಗಿ ವೇದಿಕೆಯ ಮೇಲೆ ಅನೇಕ ಗಣ್ಯರು ತದೇಕಚಿತ್ತದಿಂದ ನ್ಯಾ| ಠಾಕೂರ್‌ ಅವರ ಭಾಷಣವನ್ನು ಆಲಿಸುತ್ತಿದ್ದರು.

ಜಡ್ಜ್ ಗಳ ಕೊರತೆ ಆದದ್ದು ಹೀಗೆ...
ದೇಶದಲ್ಲಿ ನ್ಯಾಯಾಧೀಶರ ಕೊರತೆ ಹೇಗಾಯಿತು ಎಂದು ನ್ಯಾ| ಟಿ.ಎಸ್‌. ಠಾಕೂರ್‌ ಅವರೇ ಖುದ್ದಾಗಿ ಭಾನುವಾರ ವಿವರಿಸಿದರು.

- 1950ರಲ್ಲಿ ಸುಪ್ರೀಂ ಕೋರ್ಟ್‌ ಸ್ಥಾಪನೆಯಾದಾಗ ಇದರಲ್ಲಿ ಭಾರತದ ಮುಖ್ಯ ನ್ಯಾಯಾಧೀಶರು ಸೇರಿ 8 ನ್ಯಾಯಾಧೀಶರು ಇದ್ದರು. ಆಗ 1215 ಕೇಸುಗಳು ಇದ್ದವು. ಪ್ರತಿ ಜಡ್ಜ್ ಗಳ ಸರಾಸರಿ 100 ಪ್ರಕರಣಗಳಿದ್ದವು.

- 1960ರಲ್ಲಿ ಸುಪ್ರೀಂ ಕೋರ್ಟ್‌ ಜಡ್ಜ್ ಗಳ ಬಲ 14ಕ್ಕೇರಿತು. ಪ್ರಕರಣಗಳ ಸಂಖ್ಯೆ 3247ಕ್ಕೇರಿತು.

- 1977ರಲ್ಲಿ 18 ನ್ಯಾಯಾಧೀಶರಿದ್ದರು. 14,501 ಪ್ರಕರಣಗಳು ಬಾಕಿ ಇದ್ದವು.

- 2009ರಲ್ಲಿ ಸುಪ್ರೀಂ ಕೋರ್ಟ್‌ ಜಡ್ಜ್ಗಳ ಸಂಖ್ಯೆ 31ಕ್ಕೇರಿತು. ಆದರೆ ಪ್ರಕರಣಗಳ ಸಂಖ್ಯೆ 77,181ಕ್ಕೇರಿತು.

ನ್ಯಾ|ಠಾಕೂರ್‌ ಹೇಳಿದ್ದೇನು?
- ನ್ಯಾಯಾಧೀಶರ ಸಂಖ್ಯೆ 21 ಸಾವಿರದಿಂದ 40 ಸಾವಿರಕ್ಕೇರಿಸುವ ಪ್ರಸ್ತಾಪ 1987ರಿಂದಲೂ ನೆನೆಗುದಿಯಲ್ಲಿದೆ

- ಈ ಬಗ್ಗೆ ಸರ್ಕಾರ ನಿಷ್ಕ್ರಿಯವಾಗಿದೆ. ನ್ಯಾಯಾಧೀಶರ ಹೆಚ್ಚಳ ಕೇಂದ್ರ, ರಾಜ್ಯ ಸರ್ಕಾರಗಳ ಜಂಟಿ ಹೊಣೆಗಾರಿಕೆ

- ದೇಶದ ನ್ಯಾಯಾಲಯಗಳಲ್ಲಿ ನ್ಯಾಯಾಧೀಶರ ಕೊರತೆಯಿಂದ ನ್ಯಾಯಾಂಗದ ಕೈಯನ್ನು ಕಟ್ಟಿಹಾಕಿದಂತಾಗಿದೆ

- ಪರಿಸ್ಥಿತಿ ಹೀಗಿದ್ದರೂ ತ್ವರಿತ ನ್ಯಾಯದಾನ ಸಾಧ್ಯವಾಗದೆ ಇರುವುದಕ್ಕೆ ನ್ಯಾಯಾಂಗವನ್ನು ದೂಷಿಸಲಾಗುತ್ತಿದೆ

Trending videos

Back to Top