CONNECT WITH US  

27 ಸಾವಿರ ಕಿ.ಮೀ. ಆರ್ಥಿಕ ಕಾರಿಡಾರ್‌ಗೆ ಕೇಂದ್ರ ಸಿದ್ಧತೆ

ಹೊಸದಿಲ್ಲಿ: ಕೇಂದ್ರ ಸರಕಾರ ದೇಶದಲ್ಲಿನ 27,000 ಕಿ.ಮೀ. ಉದ್ದದ 44 ರಾಷ್ಟ್ರೀಯ ಹೆದ್ದಾರಿಗಳನ್ನು ಆರ್ಥಿಕ ಕಾರಿಡಾರ್‌ಗಳೆಂದು ಪರಿವರ್ತಿಸುವ ಮಹದೋದ್ದೇಶ ಇಟ್ಟುಕೊಂಡಿದೆ. ಇದು ಸಾಕಾರಗೊಂಡರೆ  ಸರಕು ಸಾಗಣೆ ಸುಗಮವಾಗಲಿದೆ. ಅಲ್ಲದೆ, ದೇಶದ 30 ನಗರಗಳಲ್ಲಿ ರಿಂಗ್‌ ರಸ್ತೆಗಳು ನಿರ್ಮಾಣವಾಗಿ ನಗರದ ವಾಹನ ಸಂಚಾರ ಒತ್ತಡ ತಗ್ಗಲಿದೆ. ಅಟಲ್‌ ಬಿಹಾರಿ ವಾಜಪೇಯಿ ಅವರು ಜಾರಿಗೆ ತಂದಿದ್ದ 13 ಸಾವಿರ ಕಿ.ಮೀ. ಸುವರ್ಣ ಚತುಷ್ಪಥ ಯೋಜನೆ ನಂತರದ ಮಹತ್ತರ ರಸ್ತೆ ಯೋಜನೆ ಇದಾಗಲಿದೆ. ದೇಶದ ದೊಡ್ಡ ಆರ್ಥಿಕ ಚಟುವಟಿಕೆಯ ನಗರಿಗಳನ್ನು, ಉತ್ಪಾದಕ ನಗರಗಳನ್ನು ಮತ್ತು ಬಂದರುಗಳನ್ನು ಸಂಪರ್ಕಿಸುವ ರಸ್ತೆಗಳನ್ನು ಆರ್ಥಿಕ ಕಾರಿಡಾರ್‌ ಎಂದು ಗುರುತಿಸಲಾಗುತ್ತದೆ. ಇದು 6 ವರ್ಷದಲ್ಲಿ ಪೂರ್ಣಗೊಳ್ಳುವ ಸಾಧ್ಯತೆ ಇದೆ. ಇದಕ್ಕಾಗಿ ವಿವಿಧ ಮೂಲಗಳಿಂದ ಹಣ ಸಂಗ್ರಹದಲ್ಲಿ ಸರಕಾರ ನಿರತವಾಗಿದೆ. ಸುಮಾರು 6 ಲಕ್ಷ ಕೋಟಿ ರೂ. ಇದಕ್ಕೆ ಬೇಕಾಗಬಹುದಾಗಿದೆ.

27 ಸಾವಿರ ಕಿ.ಮೀ. ಪೈಕಿ 15 ಸಾವಿರ ಕಿ.ಮೀ. ರಸ್ತೆಗಳು ಈ ಆರ್ಥಿಕ ಕಾರಿಡಾರ್‌ಗಳನ್ನು ಸಂಪರ್ಕಿಸುವ ರಸ್ತೆಗಳಾಗಲಿವೆ. ಗುರುತಿಸಲಾದ 44 ಹೆದ್ದಾರಿಗಳು ದೇಶದ ಶೇ.80ರಷ್ಟು ಸರಕು ಸಾಗಣೆ ಒಯ್ಯಲಿವೆ. ರಾಷ್ಟ್ರೀಯ ಹೆದ್ದಾರಿ ಸ್ಥಾನಮಾನದಿಂದ ಆರ್ಥಿಕ ಕಾರಿಡಾರ್‌ ದರ್ಜೆಗೆ ಈ ರಸ್ತೆಗಳನ್ನು ಮೇಲ್ದರ್ಜೆಗೇರಿಸಲಾಗುತ್ತದೆ. 'ಭಾರತ ಮಾಲಾ' ಎಂಬ ಹೆದ್ದಾರಿ ಸಂಪರ್ಕ ಯೋಜನೆಯಡಿ 6 ಪಥಗಳಿಗೆ ಇವುಗಳ ಅಗಲೀಕರಣ ಮತ್ತು ಉನ್ನತೀಕರಣ ಕಾಮಗಾರಿ ಕೈಗೊಳ್ಳಲಾಗುತ್ತದೆ. ಅಲ್ಲದೆ, ಇಲ್ಲಿನ ಟೋಲ್‌ ನಾಕಾಗಳು ಶೇ.100ರಷ್ಟು ವಿದ್ಯುನ್ಮಾನ ಟೋಲಿಂಗ್‌ ವ್ಯವಸ್ಥೆ ಹೊಂದಲಿವೆ. ಅಂದರೆ, ಟೋಲ್‌ ಗೇಟ್‌ಗಳಲ್ಲಿ ದುಡ್ಡು ತೆರಲು ಸರದಿಯಲ್ಲಿ ನಿಲ್ಲುವ ಅಗತ್ಯವಿಲ್ಲ. ಇದಕ್ಕೆ ಸಂಬಂಧಿಸಿದ ಪಾಸ್‌ ತೆಗೆದುಕೊಂಡರೆ ದುಡ್ಡು ತನ್ನಿಂತಾನೇ ಕಡಿತಗೊಳ್ಳುತ್ತದೆ. ಹೆದ್ದಾರಿಯುದ್ದಕ್ಕೂ ಪಾರ್ಕಿಂಗ್‌ ತಾಣಗಳು, ಸರಕು ಇಳಿಸುವ ವ್ಯವಸ್ಥೆ, ಟ್ರಕ್‌ಗಳಿಗೆ ಪ್ರತ್ಯೇಕ ಮಾರ್ಗ ಇರಲಿದೆ. ಒಟ್ಟಾರೆಯಾಗಿ ವಾಹನ ಸಂಚಾರಕ್ಕೆ ಯಾವುದೇ ಅಡೆತಡೆ ಇರುವುದಿಲ್ಲ. ಇದಕ್ಕಾಗಿ ಸಂಪುಟ ಅನುಮೋದನೆ ಬೇಕಾಗಿದ್ದು ಸಾರಿಗೆ ಸಚಿವಾಲಯ, ಇದರ ಪ್ರಸ್ತಾವನೆ ಸಿದ್ಧಪಡಿಸುತ್ತಿದೆ.


Trending videos

Back to Top