CONNECT WITH US  

ವಿಜಯ್‌ ರುಪಾಣಿ ಸೆಕೆಂಡ್‌ ಇನ್ನಿಂಗ್ಸ್

ಗಾಂಧಿನಗರ: ಸತತ ಎರಡನೇ ಬಾರಿಗೆ ವಿಜಯ್‌ ರುಪಾಣಿ ಅವರು ಗುಜರಾತ್‌ ಮುಖ್ಯಮಂತ್ರಿಯಾಗಿ ಮಂಗಳವಾರ ಪ್ರಮಾಣ ವಚನ ಸ್ವೀಕರಿಸಿದ್ದಾರೆ. 2016ರ ಆಗಸ್ಟ್‌ 7ರಂದು ಅವರು ಮೊದಲ ಬಾರಿಗೆ ಗುಜರಾತ್‌ ಮುಖ್ಯಮಂತ್ರಿಯಾಗಿ ನೇಮಕಗೊಂಡಿದ್ದರು. 

ಮಂಗಳವಾರ ನಡೆದ ಸರಳ ಸಮಾರಂಭದಲ್ಲಿ ರಾಜ್ಯಪಾಲ ಓ.ಪಿ. ಕೊಹ್ಲಿ, ರುಪಾಣಿಯವರಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ರುಪಾಣಿ ಅವರೊಂದಿಗೆ, ಉಪ ಮುಖ್ಯಮಂತ್ರಿಯಾಗಿ ನಿತಿನ್‌ ಪಟೇಲ್‌ ಹಾಗೂ 18 ಸಚಿವರು ಪ್ರಮಾಣ ವಚನ ಸ್ವೀಕರಿಸಿದ್ದಾರೆ. 

ಸಮಾರಂಭಕ್ಕೆ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್‌ ಶಾ, ಬಿಜೆಪಿ ಧುರೀಣ ಎಲ್‌.ಕೆ. ಆಡ್ವಾಣಿ, ಕೇಂದ್ರ ಸಚಿವ ರಾಜ್‌ನಾಥ್‌ ಸಿಂಗ್‌, ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌, ಉತ್ತರ ಪ್ರದೇಶ ಮುಖ್ಯ ಮಂತ್ರಿ ಯೋಗಿ ಆದಿತ್ಯನಾಥ್‌, ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫ‌ಡ್ನವೀಸ್‌ ಮೊದಲಾದ ಗಣ್ಯರು ಸಾಕ್ಷಿಯಾದರು. 
ಪ್ರತಿಜ್ಞಾ ವಿಧಿ ಸ್ವೀಕರಿಸಿದವರಲ್ಲಿ ರುಪಾಣಿ ಸೇರಿ 9 ಸಚಿವರು ಕ್ಯಾಬಿನೆಟ್‌ ದರ್ಜೆಯವರಾಗಿದ್ದರೆ, 10 ಸಚಿವರು ರಾಜ್ಯ ಸಚಿವರಾಗಿದ್ದಾರೆ. ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೂ ಮುನ್ನ, ರುಪಾಣಿ ಹಾಗೂ ಅವರ ಪತ್ನಿ ಅಹ್ಮದಾಬಾದ್‌ನ ಪಂಚದೇವ್‌ ಮಹಾದೇವ್‌ ದೇಗುಲಕ್ಕೆ ತೆರಳಿ ಪೂಜೆ ಸಲ್ಲಿಸಿದರು. 

ಬಾಲ್ಯದಿಂದಲೇ ಆರೆಸ್ಸೆಸ್‌ಗೆ ನಿಷ್ಠಾವಂತ 
ಒಂದಾನೊಂದು ಕಾಲದಲ್ಲಿ, ಆರೆಸ್ಸೆಸ್‌ನ ಸಾಮಾನ್ಯ ಕಾರ್ಯಕರ್ತನಾಗಿ ತಮ್ಮ ರಾಜಕೀಯ ಜೀವನ ಆರಂಭಿಸಿದ್ದ ವಿಜಯ್‌ ರುಪಾಣಿ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್‌ ಶಾ ಹಾಗೂ ಪ್ರಧಾನಿ ಮೋದಿಯವರ ನಂಬಿಗಸ್ಥ ನಾಯಕರಾಗುವವರೆಗೆ ಬೆಳೆದಿದ್ದೇ ಒಂದು ಮಹಾ ಸಾಧನೆ. 1956ರ 1956ರ ಆಗಸ್ಟ್‌ 2ರಂದು ರಂಗೂನ್‌ನಲ್ಲಿ (ಈಗ ಇದರ ಹೆಸರು ಯಂಗೂನ್‌, ಮ್ಯಾನ್ಮಾರ್‌ ದೇಶಕ್ಕೆ ಸೇರಿದೆ) ಜನಿಸಿದ ಇವರು, ಶಾಲಾ ದಿನಗಳಲ್ಲೇ ಆರೆಸ್ಸೆಸ್‌ಗೆ ಸೇರ್ಪಡೆಗೊಂಡವರು. ಯುವಕರಾಗಿದ್ದಾಗ ಅಖೀಲ ಭಾರತೀಯ ವಿದ್ಯಾರ್ಥಿ ಪರಿಷತ್‌ ನಲ್ಲಿ (ಎಬಿವಿಪಿ) ತಮ್ಮ ಸಂಘಟನಾ ಚಾತುರ್ಯ ತೋರಿದ ಇವರು ಹಂತಹಂತವಾಗಿ ಬೆಳೆದು ಇಂದು ಗುಜರಾತ್‌ ಮುಖ್ಯಮಂತ್ರಿಯಾಗುವವರೆಗೆ ಬೆಳೆದಿದ್ದಾರೆ.

ತಾಯಿಯನ್ನು ಭೇಟಿಯಾದ ಮೋದಿ
ಪ್ರಮಾಣ ಸ್ವೀಕಾರ ಸಮಾರಂಭ ಕ್ಕೆಂದು ಗುಜರಾತ್‌ಗೆ ಆಗಮಿಸಿದ್ದ ಪ್ರಧಾನಿ ಮೋದಿ ಅವರು ರಾಯ್‌ಸನ್‌ ಗ್ರಾಮಕ್ಕೆ ತೆರಳಿ ತಮ್ಮ ತಾಯಿ ಹಿರಾಬಾರನ್ನು ಭೇಟಿಯಾದರು. ಅಹಮದಾಬಾದ್‌ ವಿಮಾನ ನಿಲ್ದಾಣದಿಂದ ನೇರವಾಗಿ ಅಲ್ಲಿಗೆ ತೆರಳಿದ ಮೋದಿ, ತಾಯಿ ಜತೆಗೆ ಸ್ವಲ್ಪಹೊತ್ತು ಕಳೆದರು. ಅವರ ಆರೋಗ್ಯ ವಿಚಾರಿಸಿದರು. ಅದಾದ ಬಳಿಕ ಅವರು ಪ್ರಮಾಣ ವಚನ ಕಾರ್ಯಕ್ರಮದ ಸ್ಥಳಕ್ಕೆ ಬಂದರು.

Trending videos

Back to Top