CONNECT WITH US  

ಮರದಂತೆ ಬದುಕೋಣ, ಎಲೆಯಂತೆ ಸಾಯೋಣ!

ನಾವು ಏನನ್ನು ಯೋಚಿಸುತ್ತೇವೋ ಅದೇ ನಾವಾಗಿರುತ್ತೇವೆ. ನೆನಪುಗಳನ್ನು ಮರೆತರೆ ಆಲೋಚನೆ ಎಲ್ಲಿರುತ್ತದೆ? ನೆನಪು ಕಾಲಕ್ಕೆ ಸಂಬಂಧಿಸಿದ್ದು. ಆದರೆ ಸಂತೋಷ ಕಾಲರಹಿತವಾದ ವರ್ತಮಾನದ ಸ್ಥಿತಿ. ಜೀವನ ಸೌಂದರ್ಯವೂ ಇರುವುದು ವರ್ತಮಾನದಲ್ಲಿಯೇ. ನಾವು ನೆನಪುಗಳ ಅದೆಷ್ಟು ದೊಡ್ಡ ಹೊರೆಯನ್ನು ಹೊತ್ತಿರುತ್ತೇವೆ ಎಂದರೆ, ಈ ಕ್ಷಣದ ಬದುಕನ್ನು ಅನುಭವಿಸಲು, ಹೊಸದನ್ನು ಕಾಣಲು ನಮಗೆ ಸಾಧ್ಯವೇ ಆಗುತ್ತಿಲ್ಲ. ವರ್ತಮಾನದಲ್ಲಿ ಬದುಕುವುದನ್ನು ರೂಢಿಸಿಕೊಂಡರೆ ಮಾತ್ರ ಅದು ಸಾಧ್ಯವಾಗುತ್ತದೆ. ನಿನ್ನೆ ನಿನ್ನೆಗೆ, ನಾಳೆ ನಾಳೆಗೆ ಎಂದು ಚಿಂತೆಯಿಲ್ಲದೆ ಬದುಕಿದರೆ ಮಾತ್ರ ಬದುಕಿನ ಅರ್ಥ ತಿಳಿದೀತು.

ಸತ್ಯಕ್ಕೆ ದಾರಿಗಳಿಲ್ಲ. ಯಾವ ಪೂರ್ವನಿಶ್ಚಿತ ದಾರಿಯಿಂದಲೂ ಸತ್ಯದ ನೆಲೆ ತಲುಪಲು ಸಾಧ್ಯವಿಲ್ಲ. ದುಷ್ಟ ಆಲೋಚನೆಗಳಿಲ್ಲದ, ಪ್ರೇಮಪೂರ್ಣ ಮನಸ್ಸನ್ನು ಹೊಂದಿರುವುದೇ ನಿಜವಾದ ಧಾರ್ಮಿಕತೆ - ಇದು ಜಿಡ್ಡು ಕೃಷ್ಣಮೂರ್ತಿ ಅವರ ಖಚಿತ ನಿಲುವು.

ಜಿಡ್ಡು ಕೃಷ್ಣಮೂರ್ತಿ

ಈ ಬದುಕಿಗೆ ಒಂದು ಅರ್ಥವಿದೆಯೇ? ನಾವು ಆಚರಿಸುವ ಧರ್ಮಗಳು, ಈ ಯುದ್ಧ, ಸಂಪ್ರದಾಯಗಳು, ಹಿಂಸೆ, ಕ್ರೌರ್ಯ, ನಮ್ಮ ಆದರ್ಶಗಳು, ರಾಷ್ಟ್ರೀಯತೆ- ಇದೇ ನಮ್ಮ ಜೀವನವೇ? ಅಥವಾ ಇದಕ್ಕೂ ಮೀರಿದ್ದು ಇನ್ನೇನಾದರೂ ಇದೆಯೇ? ಎಂಬ ಪ್ರಶ್ನೆಯನ್ನು ಮನುಷ್ಯ ಕೇಳಿಕೊಳ್ಳಬೇಕು. ನಮ್ಮೊಳಗೆ ಚಿಗುರೊಡೆಯಬೇಕಾಗಿದ್ದ ಪ್ರೀತಿಯ ಒಂದು ಹೂವು, ಅದರ ಸೊಬಗು ಹಾಗೂ ಆವಿಷ್ಕಾರಗಳು ನಮ್ಮ ಸಂಕುಚಿತ ಮನಃಸ್ಥಿತಿಯಿಂದಾಗಿ ತಾನಾಗಿ ಬಾಡಿ ಹೋಗುತ್ತಿವೆ. 

ಪ್ರೀತಿಸಲು ತಿಳಿದಿಲ್ಲ

ನಮಗೆ ಒಬ್ಬರನ್ನೂ ಪ್ರೀತಿಸಲು ತಿಳಿದಿಲ್ಲ ಎಂದ ಮೇಲೆ ಇಡೀ ಮಾನವ ಕುಲವನ್ನು ಪ್ರೀತಿಸುವುದು ಕಲ್ಪನೆಯಷ್ಟೇ ಆಗುತ್ತದೆ. ಇರುವಂತೆಯೇ ಒಪ್ಪಿಕೊಳ್ಳಿ. ಪರಿವರ್ತಿಸಲು ಬಯಸಿದಾಗ ಮಾತ್ರ ಸಮಸ್ಯೆ ಉದ್ಭವಿಸುತ್ತದೆ. ಎಲ್ಲಿ ಅಭಿಪ್ರಾಯ, ಹೋಲಿಕೆ ಅಥವಾ ತಿರಸ್ಕಾರ ಇರುತ್ತದೋ, ಅಲ್ಲಿ ಮನಸ್ಸಿನ ಮುಕ್ತತೆ ಇರಲಾರದು. ಎಲ್ಲದಕ್ಕೂ ಒಂದು ಚೌಕಟ್ಟು ಕಟ್ಟಿಕೊಂಡು, ಅರೆಬರೆ ತಿಳಿದುಕೊಂಡು, ಅನರ್ಹರಿಂದ ಆಳಿಸಿಕೊಂಡು ಸುಮ್ಮನಿರುತ್ತೇವೆ. ಹಠಾತ್ತಾಗಿ ಸಮಸ್ಯೆಗಳು ಎದುರಾದಾಗ ಕಂಗಾಲಾಗಿ ಯೋಚಿಸುತ್ತ, ಸ್ವಾತಂತ್ರ್ಯವನ್ನು ಧೇನಿಸುತ್ತ ನಮ್ಮ ಅನ್ವೇಷಣೆ ಆರಂಭಿಸುತ್ತೇವೆ! ಆದರೆ ನಮಗೆಂಥ ಸ್ವಾತಂತ್ರ್ಯ ಬೇಕು ಎನ್ನುವ ಪರಿಕಲ್ಪನೆಯೇ ಇರುವುದಿಲ್ಲ. ನಮ್ಮೊಳಗೆ ಹಾಗೂ ವಿಶ್ವದಲ್ಲಿ ಅಡಕವಾಗಿರುವ ರಹಸ್ಯಗಳು, ಗೊಂದಲಗಳನ್ನು ಅರ್ಥ ಮಾಡಿಕೊಳ್ಳಲು ಮೊದಲು ನಾವು ನಮ್ಮೊಳಗೆ ಸ್ಪಷ್ಟತೆಯನ್ನು ಕಂಡುಕೊಳ್ಳಬೇಕು. ಸ್ವಯಂ ಜ್ಞಾನವಿಲ್ಲದೆ ನಾವು ಚಿಂತಿಸುವುದು ಸತ್ಯವೂ ಅಲ್ಲ. ಸತ್ಯವೆಂಬುದು ದಾರಿಗಳಿಲ್ಲದ ಬಯಲು.

ಮರದ ಬಾಂಧವ್ಯ
ಆ ನದಿಯ ದಡದಲ್ಲೊಂದು ಮರ ನಿಂತಿದೆ. ಹಲವು ವಾರಗಳಿಂದಲೂ ದಿನಾಲೂ ಮುಂಜಾನೆ ಸೂರ್ಯೋದಯದ ವೇಳೆ ಅದನ್ನು ನೋಡುತ್ತಿದ್ದೇನೆ. ಹೊತ್ತು ಮೇಲೇರಿದಂತೆ ಆ ಮರ ನಿಧಾನವಾಗಿ ಹೊಂಬಣ್ಣ ತಾಳುತ್ತದೆ. ಎಲೆಗಳು ಜೀವಂತಿಕೆಯಿಂದ ತುಂಬಿ ತುಳುಕುತ್ತವೆ. ಆ ಮರದ ಅಪೂರ್ವ ಸೌಂದರ್ಯ ಆ ಪರಿಸರದಲ್ಲೆಲ್ಲ ಹಬ್ಬಿಕೊಳ್ಳುತ್ತದೆ. ಹೊತ್ತು ಇನ್ನೂ ಮೇಲೇರಿದಾಗ ಮರದ ಎಲೆಗಳು ಗಾಳಿಗೆ ಶಬ್ದ ಮಾಡುತ್ತ ಕುಣಿಯಲು ಆರಂಭಿಸುತ್ತವೆ. ಪ್ರತಿ ಕ್ಷಣವೂ ಆ ಮರ ಹೊಸ ಹೊಸ ರೂಪಗಳನ್ನು ತಾಳುತ್ತದೆ. ಸೂರ್ಯೋದಯದ ಮೊದಲು ಆ ಮರ ಕಪ್ಪು ರಾಶಿಯ ವೈಭವದಂತೆ ಗೋಚರಿಸುತ್ತದೆ. ಸ್ತಬ್ಧವಾಗಿ, ಮಂಕು ಕವಿದಂತೆ, ನಮ್ಮಿಂದ ದೂರವಾಗಿ ಒಂಟಿಯಾಗಿ ನಿಂತಂತೆ ಭಾಸವಾಗುತ್ತದೆ. ಬೆಳಕು ಹರಿದಂತೆ ಎಲೆಗಳು ಗಾಳಿ- ಬೆಳಕಿನ ಜತೆಗೆ ಆಡುತ್ತ ಸಂಪೂರ್ಣ ಹೊಸ ಅನುಭವ ಕೊಡುತ್ತವೆ. ಹೊತ್ತು ನೆತ್ತಿಗೇರಿದಂತೆ ಆ ಮರದ ನೆರಳು ದಟ್ಟವಾಗುತ್ತದೆ. ಬಿಸಿಲಿಗೆ ಸುಸ್ತಾದ ನಾವು ಅದರ ತಣ್ಣೆಳಲಿನಲ್ಲಿ ರಕ್ಷಣೆ ಪಡೆಯುತ್ತೇವೆ. ಆ ಮರದ ಸಂಗಾತಿಯಾದರೆ ನೀನು ಏಕಾಕಿತನದ ನೋವನ್ನು ಅನುಭವಿಸುವುದಿಲ್ಲ. ಅದರ ಜತೆಗೆ ಬೆಳೆದ ಸಂಬಂಧವು ಗಾಢವಾಗಿ ನಿನ್ನನ್ನು ಆವರಿಸಿಕೊಂಡು ನಿನಗೆ ಭದ್ರತೆ ಹಾಗೂ ಸ್ವಾತಂತ್ರ್ಯವನ್ನು ಕೊಡುತ್ತದೆ.

ಮರದ ಅಖಂಡತೆ, ಅಪಾರತೆ, ಘನತೆಯನ್ನು, ಒರಟಾದ ತೊಗಟೆಯ ಅಪೂರ್ವ ಸೌಂದರ್ಯವನ್ನು ನಾವು ಗ್ರಹಿಸಿದ್ದೇವೆಯೇ? ಗಾಳಿ-ಎಲೆಗಳ ಆಟದ ಸದ್ದಿಲ್ಲದೆ ಮರದ ಒಡಲಿನ ಧ್ವನಿಯನ್ನು, ತೂಗುವ ಗೆಲ್ಲುಗಳ ನಾದವನ್ನು, ಬೇರು ಕಾಂಡಗಳ ಆಳದ ಮೌನ ಕಂಪನವನ್ನು ಆಲಿಸಿದ್ದೇವೆಯೇ? ಮರದ ಬಿರುಕಿನಲ್ಲಿ ತನ್ನನ್ನು ತಾನು ನೂಕಿಕೊಂಡು ಚಿಗುರುವ ಗರಿಕೆಯಿಂದ ಸ್ಫೂರ್ತಿ ಪಡೆದಿದ್ದೇವೆಯೇ?
ನಾನು ಮೌನದಲ್ಲಿ ನಡೆಯುತ್ತ ಹೋಗುತ್ತಿರುವಾಗ ಚಳಿಯಲ್ಲಿ ಉದುರಿದ ಕೆಂಪು ಒತ್ತಿದ ಅರಸಿನ ಬಣ್ಣದ ಒಂದು ದಪ್ಪ ಎಲೆ ನೋಡಿದೆ. ಅದು ಬಾಡಿರಲಿಲ್ಲ. ಸಾವಿನಲ್ಲೂ ಆ ಎಲೆಯಲ್ಲಿ ಸರಳತೆ ತುಂಬಿತ್ತು, ಸುಂದರವಾಗಿತ್ತು. ಆ ಎಲೆಯಲ್ಲಿ ಇಡೀ ಮರದ ಸಣ್ತೀ ಅಡಗಿತ್ತು. ಮರದ ಸೌಂದರ್ಯ ಮತ್ತು ಜೀವಂತಿಕೆಯನ್ನು ಅದು ಸಾರುತ್ತಿತ್ತು.

ಆ ಎಲೆಯನ್ನು ಗಮನಿಸಿದೆ. ಅದರ ನರನಾಡಿ ಗಳೆಲ್ಲವೂ ಸ್ಪಷ್ಟವಾಗಿ ಕಾಣುತ್ತಿದ್ದು ಆ ಎಲೆಯೇ ಮರದಂತಿತ್ತು. 
ಮನುಷ್ಯ ಏಕೆ ಸಹಜವಾಗಿ ಸುಂದರವಾಗಿ ಸಾಯುವುದಿಲ್ಲ?

ಆನಂದ ನೀಡದವನು ಗುರುವೇ ಅಲ್ಲ !
ಡಾ| ಯು.ಆರ್‌. ಅನಂತಮೂರ್ತಿ ಅವರು ತಮ್ಮ "ಆಚಾರ್ಯರು ಮತ್ತು ಋಷಿಗಳು' ಲೇಖನದಲ್ಲಿ ಹೀಗೆ ಹೇಳಿದ್ದಾರೆ: ಗುರು ಪಟ್ಟವನ್ನು ಸಾರಾಸಗಟಾಗಿ ನಿರಾಕರಿಸುವ ಜಿಡ್ಡು ಕೃಷ್ಣಮೂರ್ತಿ, "ನಾನು ಗುರುವಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ನಾನು ನಿಮಗೆ ಯಾವುದೇ ಆನಂದವನ್ನು ನೀಡುತ್ತಿಲ್ಲ. ಏನು ಮಾಡಬೇಕು ಎಂಬುದನ್ನು ಸೂಚಿಸುತ್ತಿದ್ದೇನೆ. ನೀವು ಸ್ವೀಕರಿಸಬಹುದು ಅಥವಾ ಬಿಡಬಹುದು, ಅದು ನಿಮ್ಮನ್ನು ಅವಲಂಬಿಸಿದೆ. ನೀವು ಹೆಚ್ಚಿನವರು ಬಿಡುತ್ತೀರಿ. ಕಾರಣ ಸ್ಪಷ್ಟ. ನೀವು ಅದರಲ್ಲಿ ಯಾವುದೇ ಆನಂದವನ್ನು ಕಾಣುವುದಿಲ್ಲ' ಎರಡೂ ವ್ಯರ್ಥವೇ.

ಪಾಸಿಟಿವ್‌  ಕಿರುಕಥೆ
ಸಮತೋಲನವೇ ಸಾಮರ್ಥ್ಯ

ಮನಃಶಾಸ್ತ್ರ ಬೋಧಕರೊಬ್ಬರು ನೂರಾರು ವಿದ್ಯಾರ್ಥಿಗಳನ್ನು ತನ್ನ ಸುತ್ತ ಕುಳ್ಳಿರಿಸಿ ಪಾಠ ಮಾಡುತ್ತಿದ್ದರು. ಗಾಜಿನ ಲೋಟದಲ್ಲಿ ಅರ್ಧದಷ್ಟು ನೀರನ್ನು ತುಂಬಿಸಿ, ವಿದ್ಯಾರ್ಥಿಗಳಲ್ಲಿ "ಈ ಗಾಜಿನ ಲೋಟ ಎಷ್ಟು ಭಾರವಾಗಿದೆ?' ಎಂದು ಪ್ರಶ್ನಿಸಿದರು. ವಿದ್ಯಾರ್ಥಿಗಳೆಲ್ಲ ಪರಸ್ಪರ  ಮುಖ ನೋಡಿಕೊಳ್ಳಲಾರಂಭಿಸಿದರು. ಉಪನ್ಯಾಸಕರು ನಗುತ್ತಾ, "ಈ ಲೋಟವನ್ನು ಎಷ್ಟು ಹೊತ್ತು ನಾನು ಹಿಡಿದುಕೊಂಡಿರುತ್ತೇನೆ ಎನ್ನುವುದರ ಮೇಲೆ ಅದರ ಭಾರ ಅವಲಂಬಿತವಾಗಿದೆ. ನಾನು ಒಂದೆರಡು ನಿಮಿಷ ಹಿಡಿದಾಗ ಭಾರ ಅನಿಸದೇ ಇರಬಹುದು. ಇದನ್ನೇ ಗಂಟೆಗಟ್ಟಲೆ ಹಿಡಿದು ನಿಂತಾಗ ಅದೇ ಭಾರವೆನಿಸುತ್ತದೆ. ನೀರು ಎಷ್ಟಿದೆ  ಎನ್ನುವುದು ಮುಖ್ಯವಲ್ಲ. ಹಾಗೆಯೇ ಮನುಷ್ಯನ ಮನಸ್ಸು ಮತ್ತು ಮೆದುಳು. ಯಾವುದೇ ವಿಚಾರವನ್ನು° ನಾವು ಎಷ್ಟು ಹೊತ್ತು ಮನಸ್ಸಿನಲ್ಲಿ ಇರಿಸಿಕೊಳ್ಳುತ್ತೇವೆ ಎಂಬುದರ ಮೇಲೆ ನಮ್ಮ ನೋವು, ಅಸಂತೋಷ ನಿರ್ಧಾರವಾಗುತ್ತದೆ. ಅದು ಎಷ್ಟು ತೀವ್ರ ಅಥವಾ ಕ್ಷುಲ್ಲಕ ಎಂಬುದು ಬೇರೆ ವಿಚಾರ. ನೋವುಗಳೇನೇ ಇರಲಿ, ಅವು ಹೆಚ್ಚು ಹೊತ್ತು ನಮ್ಮನ್ನು ಕೊರೆಯುವುದಕ್ಕೆ ಆಸ್ಪದ ಕೊಡಬಾರದು. ನೆಮ್ಮದಿ ನೀಡುವ ಕಾರ್ಯಗಳಲ್ಲಿ ತೊಡಗಬೇಕು. ಜೀವನದಲ್ಲಿ ಸಮತೋಲನವೇ ಸಾಮರ್ಥ್ಯ ಎಂದರು.

ಯಶಸ್ಸಿನ ಸೂತ್ರ
1. ಶಿಕ್ಷಣಕ್ಕೆ ಕೊನೆ ಎಂಬುದಿಲ್ಲ. ಪುಸ್ತಕ ಓದಿ, ಪರೀಕ್ಷೆ ಪಾಸಾದರೆ ಮುಗಿದಂತಲ್ಲ. ಹುಟ್ಟಿದ ಕ್ಷಣದಿಂದ ಸಾವಿನ ತನಕ ಒಟ್ಟೂ ಬದುಕು ಕಲಿಯುವಿಕೆಯೇ.
2. ಭಯಕ್ಕೆ ಎದುರಾಗಿ ಪಲಾ ಯನ ಮಾಡುವುದು, ಪ್ರತಿರೋಧ ಒಡ್ಡುವುದಕ್ಕಿಂತ ಅದನ್ನು ಅರ್ಥ ಮಾಡಿಕೊಳ್ಳುವುದು, ಅದರತ್ತ ಸ್ನೇಹಹಸ್ತ ಚಾಚುವುದು ಅಗತ್ಯ.
3. ನಿಮ್ಮ ಹೃದಯದಲ್ಲಿ ಪ್ರೀತಿ ಯನ್ನು ತುಂಬಿಕೊಂಡು ಅದರ ವೈಶಾಲ್ಯ, ಆಳ, ಅದ್ಭುತಗಳನ್ನು ಅನುಭವಿಸಿದರೆ ಜಗತ್ತು ಪರಿವರ್ತನೆ ಹೊಂದುತ್ತದೆ.
4. ಸಮಸ್ಯೆಯನ್ನು ಅರ್ಥ ಮಾಡಿಕೊಳ್ಳಲು ಕಲಿತರೆ ಪರಿ ಹಾರವು ಅದರೊಳಗಿನಿಂದಲೇ ಹುಟ್ಟಿಬರುತ್ತದೆ.

ನಿಮ್ಮ ಮಕ್ಕಳಲ್ಲಿ, ವಿದ್ಯಾರ್ಥಿಗಳಲ್ಲಿ ಖನ್ನತೆ, ಆತಂಕ, ಉದ್ವಿಗ್ನತೆಯ ಲಕ್ಷಣ ಕಂಡುಬಂದರೆ ಈ ನಂಬರ್‌ಗೆ ವಾಟ್ಸ್‌ ಆ್ಯಪ್‌ ಮಾಡಿ ಸಮಸ್ಯೆ ಹೇಳಿಕೊಳ್ಳಿ. ಪರಿಣತರೊಂದಿಗೆ ಚರ್ಚಿಸಿ ಪರಿಹಾರಕ್ಕೆ  ಪ್ರಯತ್ನಿಸುತ್ತೇವೆ.
9964169554

ಅನಂತ ಹುದೆಂಗಜೆ

Trending videos

Back to Top