CONNECT WITH US  

ಸಾಲ ಮನ್ನಾ ಓಕೆ, ಖಜಾನೆ ಜೋಕೆ

ಆರ್ಥಿಕ ಮಿತವ್ಯಯ ಸಾಧಿಸದಿದ್ದರೆ ಸರ್ಕಾರ ಹೈರಾಣು 

ಸಚಿವರು, ಅಧಿಕಾರಿಗಳಿಗೆ ಹಾಗೂ ನಿಗಮ, ಮಂಡಳಿಗಳ ಅಧ್ಯಕ್ಷರು, ಜಿಪಂ, ತಾಪಂ ಅಧ್ಯಕ್ಷರು, ಉಪಾಧ್ಯಕ್ಷರಿಗೆ ನೀಡುವ ವಿಲಾಸಿ ಸೌಲಭ್ಯಗಳಿಗೆ ಕಡಿವಾಣ ಹಾಕುವುದರಿಂದ ಸಾಕಷ್ಟು ಪ್ರಮಾಣದ ಹಣ ಸರ್ಕಾರದ ಖಜಾನೆಯಲ್ಲಿ ಉಳಿಯುತ್ತದೆ. ಇಂಧನ ಭತ್ಯೆ, ಪ್ರವಾಸ ಭತ್ಯೆ, ಸಹಾಯಕರು ಮತ್ತಿತರ ಭತ್ಯೆಗಳಲ್ಲಿ ಕಡಿತ ಅಲ್ಲದೆ, ಎಲ್ಲಾ ಸಚಿವರು ಹಾಗೂ ಅಧಿಕಾರಿಗಳಿಗೆ ಶಾಸಕರ ಭವನದ ಮಾದರಿ ವಸತಿ ಸಮುತ್ಛಯ ನಿರ್ಮಿಸಿದರೆ ಸಾಕಷ್ಟು ಪ್ರಮಾಣದ ಸರ್ಕಾರದ ಹಣ ಉಳಿತಾಯವಾಗುತ್ತದೆ. 

ಈ ಬಾರಿಯ ರಾಜ್ಯ ಬಜೆಟ್‌ನಲ್ಲಿ 36 ಸಾವಿರ ಕೋಟಿ ರೂಪಾಯಿ ರೈತರ ಸುಸ್ತಿ ಸಾಲ ಮನ್ನಾ ಮಾಡುವ ಬಹುದೊಡ್ಡ ಸಾಹಸ ಮಾಡಿದೆ ಸರ್ಕಾರ. ಏಕೆಂದರೆ, ಇಷ್ಟೊಂದು ದೊಡ್ಡ ಮೊತ್ತದ ಹಣವನ್ನು ಜೋಡಿಸುವುದು ಸುಲಭದ ಕೆಲಸವಲ್ಲ. ಹಾಗಾಗಿ, ರಾಜ್ಯದ ಜನತೆಗೆ ಮತ್ತಷ್ಟು ತೆರಿಗೆ ಭಾರ ಹೊರಬೇಕಾದ ಅನಿವಾರ್ಯತೆ ಎದುರಾಗಿದೆ. ರೈತರ ಸುಸ್ತಿ ಸಾಲ ಮನ್ನಾದಿಂದ ರಾಜ್ಯದ ಖಜಾನೆಗೆ ಆಗಬಹುದಾದ ಹೊರೆಯನ್ನು ನಿಭಾಯಿಸುವ ನಿಟ್ಟಿನಲ್ಲಿ ಸರಕಾರ ಪೆಟ್ರೋಲ್‌, ಡೀಸೆಲ್‌, ಅಬಕಾರಿ ಮುಂತಾದವುಗಳ ಸುಂಕವನ್ನು ಹೆಚ್ಚಿಸಿದೆ. 

ಆದರೆ ಹೊರೆ ತಪ್ಪಿಸುವುದಕ್ಕೆ ತೆರಿಗೆದಾರರ ಮೇಲೆ ಭಾರ ಹಾಕುವುದೇ ಮುಖ್ಯ ದಾರಿ ಆಗಬೇಕೆ? ರಾಜ್ಯದ ಬೊಕ್ಕಸ ಭದ್ರವಾಗಿರಬೇಕೆಂದರೆ ಸರಕಾರ ಆರ್ಥಿಕ ಮಿತವ್ಯಯ ಸಾಧಿಸು ವುದಕ್ಕೆ ಆದ್ಯತೆ ನೀಡಬೇಕು. ಸರಕಾರದ ಸ್ಟೇಷನರಿ ಖರ್ಚು ವೆಚ್ಚಗಳಿಂದ ಹಿಡಿದು ಎಲ್ಲಾ ಹಂತದಲ್ಲೂ ಒಂದೊಂದು ರೂಪಾ ಯಿಗೂ ಕೂಡ ಲೆಕ್ಕಾಚಾರ ಹಾಕಬೇಕು ಮತ್ತು ಅನಗತ್ಯ ಖರ್ಚುಗಳಿಗೆ ಮುಲಾಜಿಲ್ಲದೇ ಕಡಿವಾಣ ಹಾಕಬೇಕು. 

"ಸರಕಾರದ ದುಡ್ಡು ದೇವರ ದುಡ್ಡು' ಎಂದು ಭಾವಿಸಿ ಮಿತವ್ಯಯ ಸಾಧಿಸುವ ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಈ ಕೆಲಸದಲ್ಲಿ ಎಲ್ಲರೂ ಸಹಕಾರ ನೀಡಿದಲ್ಲಿ ಮಾತ್ರ ಖಜಾನೆ ತಕ್ಕಮಟ್ಟಿಗಾದರೂ ಭದ್ರವಾಗಿರಲು ಸಾಧ್ಯ.
ಸರಕಾರದ ಯಾವುದೇ ಅಭಿವೃದ್ಧಿ ಕಾಮಗಾರಿಗಳಿಗೆ ಹಣ ಬಿಡುಗಡೆ ಮಾಡುವಾಗ ಅದರ ನಿಖರ ಅಂದಾಜು ವೆಚ್ಚ
ವನ್ನು ನಾಲ್ಕಾರು ಬಾರಿ ಪರಿಶೀಲಿಸಬೇಕು. ಸರಕಾರದಿಂದ ನಡೆಯುವ ಯಾವುದೇ ಸಭೆ, ಸಮಾರಂಭಗಳಲ್ಲಿ ಮಾಡಲಾಗುವ ದುಂದು ವೆಚ್ಚಗಳಿಗೆ ನಿಯಂತ್ರಣ ಹೇರಬೇಕು. ಹೀಗೆ ಮಾಡುವುದರಿಂದ "ಹನಿ ಹನಿ ಕೂಡಿದರೆ ಹಳ್ಳ' ಎನ್ನುವಂತೆ ಸಾವಿರಾರು ಕೋಟಿ ರೂ.ರೈತರ ಸಾಲ ಮನ್ನಾದಂತಹ ಕ್ರಮವನ್ನು ತಕ್ಕ ಮಟ್ಟಿಗಾದರೂ ನಿಭಾಯಿಸಲು ಸಾಧ್ಯವಾಗಬಹುದು. ಇಲ್ಲದಿದ್ದರೆ, ರಾಜ್ಯದ ಅರ್ಥ ವ್ಯವಸ್ಥೆಯ ಮೇಲೆ ಗಂಭೀರ ಪರಿಣಾಮ ಬೀಳುವ ಸಾಧ್ಯತೆಗಳೇ ಹೆಚ್ಚಾಗಿರುತ್ತವೆ. 

ಇಲ್ಲಿ ಗಮನಿಸಬೇಕಾದ ಮಹತ್ವದ ಅಂಶವೆಂದರೆ, ವಾರ್ಷಿಕ ನೂರಾರು ಕೋಟಿ ರೂ. ನಿವ್ವಳ ಲಾಭ ಗಳಿಸುವ ರಾಷ್ಟ್ರೀಕೃತ ಬ್ಯಾಂಕುಗಳಿಂದ ರೈತರ ಸಾಲ ಮನ್ನಾಕ್ಕೆ ನೆರವು ದೊರೆಯಬಹುದೇ ಎಂಬುದು. ಈ ನಿಟ್ಟಿನಲ್ಲಿ ಎಲ್ಲಾ ರಾಷ್ಟ್ರೀಕೃತ ಬ್ಯಾಂಕುಗಳ ಮುಖ್ಯಸ್ಥರ ಸಭೆ ಕರೆದು, ಅವರಿಂದ ಏನಾದರೂ ಕೊಡುಗೆ ಸಾಧ್ಯವಾಗಬಲ್ಲದೇ ಎಂಬುದರ ಬಗ್ಗೆ ಚರ್ಚಿಸುವ ಮೂಲಕ ನೆರವಿಗೆ ಅಹವಾಲು ಸಲ್ಲಿಸಬಹುದಲ್ಲ? ರಾಷ್ಟ್ರೀಕೃತ ಬ್ಯಾಂಕುಗಳೇ ನಾದರೂ ರೈತರಿಗಾಗಿ ಧಾರಾಳತೆ ತೋರಿ ತಮ್ಮ ಕೈಲಾದಷ್ಟು ಸಹಾಯ ಹಸ್ತ ಚಾಚಿದರೆ ಅದು ಕೂಡ ಬಂಡೆಗಲ್ಲಿಗೆ ಚೀಪುಗಲ್ಲು ಆಸರೆ ಎಂಬಂತೆ ಸಾಲ ಮನ್ನಾ ಹಣಕ್ಕೆ ಸಹಕಾರಿಯಾಗಬಲ್ಲದು. 

ರಾಜ್ಯ ಸರ್ಕಾರ ರೈತರ ಸುಸ್ತಿ ಸಾಲ ಮನ್ನಾ ವಿಚಾರಕ್ಕೆ ಸಂಬಂಧಿಸಿ ತನ್ನ ಬದ್ಧತೆಯನ್ನು ಪ್ರದರ್ಶಿಸಿರುವ ಈ ಹಂತದಲ್ಲಿ ಸಹಜವಾಗಿಯೇ ರಾಜ್ಯದ ಬೊಕ್ಕಸದ ಸ್ಥಿತಿಗತಿ ಬಗ್ಗೆ ಗಮನ ಹರಿಸಬೇಕಾಗುತ್ತದೆ. ಈ ನಿಟ್ಟಿನಲ್ಲಿ ಶಾಸಕರ ಕ್ಷೇತ್ರಾಭಿವೃದ್ಧಿ ನಿಧಿಯಲ್ಲಿ ಬಳಕೆಯಾಗದೇ ಇರುವ ಹಾಗೂ ಕಳೆದ ಬಜೆಟ್‌ನಲ್ಲಿ ಶಾಸಕರ ಕ್ಷೇತ್ರಾಭಿವೃದ್ಧಿಗೆ ಬಿಡುಗಡೆಯಾಗಿದ್ದ ಎಲ್ಲಾ ಅನುದಾನ ವನ್ನು ಮರಳಿ ಪಡೆಯಲು ನಿರ್ಧರಿಸಿದೆ. ಹೀಗೆ ಸಂಗ್ರಹವಾಗುವ ಹಣವನ್ನು ರೈತರ ಸಾಲ ಮನ್ನಾಕ್ಕೆ ಬಳಸುವುದು ಸರ್ಕಾರದ ಉದ್ದೇಶ ಎನ್ನಲಾಗುತ್ತಿದೆ.  ಇನ್ನುಳಿದ ಎಲ್ಲಾ ಅನಗತ್ಯ ಖರ್ಚು, ವೆಚ್ಚಗಳ ನಿಯಂತ್ರಣಕ್ಕೂ ಸರ್ಕಾರ ಗಮನ ಹರಿಸಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಇದು ಕೂಡ ಒಳ್ಳೆಯ ಕ್ರಮವೇ ಎನ್ನಬಹುದು. ಇದರ ಭಾಗವಾಗಿ ಹೇಳಬೇಕೆಂದರೆ, ಸಂಕಷ್ಟ ದಲ್ಲಿರುವ ರೈತರ ಹಿತದೃಷ್ಟಿಯಿಂದ ಮೊದಲು ಸಚಿವರು, ಅಧಿಕಾರಿಗಳು ಹಾಗೂ ನಿಗಮ, ಮಂಡಳಿಗಳ ಮುಖ್ಯಸ್ಥರು ಮುಂತಾದವರಿಗೆ ನೀಡಲಾಗುವ ವಿಲಾಸಿ ಸೌಲಭ್ಯಗಳ ಕಡೆಗೂ ಗಮನ ಹರಿಸಬೇಕಾದ ಅಗತ್ಯವಿದೆ.

ಸಚಿವರು, ಅಧಿಕಾರಿಗಳಿಗೆ ಹಾಗೂ ನಿಗಮ, ಮಂಡಳಿಗಳ ಅಧ್ಯಕ್ಷರು, ಜಿಪಂ, ತಾಪಂ ಅಧ್ಯಕ್ಷರು, ಉಪಾಧ್ಯಕ್ಷರಿಗೆ ನೀಡುವ ವಿಲಾಸಿ ಸೌಲಭ್ಯಗಳಿಗೆ ಕಡಿವಾಣ ಹಾಕುವುದರಿಂದ ಸಾಕಷ್ಟು ಪ್ರಮಾಣದ ಹಣ ಸರ್ಕಾರದ ಖಜಾನೆಯಲ್ಲಿ ಉಳಿಯುತ್ತದೆ. ಇಂಧನ ಭತ್ಯೆ, ಪ್ರವಾಸ ಭತ್ಯೆ, ಸಹಾಯಕರು ಮತ್ತಿತರ ಭತ್ಯೆಗಳಲ್ಲಿ ಕಡಿತ ಅಲ್ಲದೆ, ಎಲ್ಲಾ ಸಚಿವರು ಹಾಗೂ ಅಧಿಕಾರಿಗಳಿಗೆ ಶಾಸಕರ ಭವನದ ಮಾದರಿ ವಸತಿ ಸಮುತ್ಛಯ ನಿರ್ಮಿಸಿದರೆ ಸಾಕಷ್ಟು ಪ್ರಮಾಣದ ಸರ್ಕಾರದ ಹಣ ಉಳಿತಾಯವಾಗುತ್ತದೆ. ಸೌಲಭ್ಯ ಕಡಿತ ಎಂದಾಕ್ಷಣ ಎಲ್ಲವನ್ನೂ ನಿಲ್ಲಿಸಿಬಿಡಬೇಕು ಎಂದೇನೂ ಅಲ್ಲ. ಅವರಿಗೆ ಈಗ ನೀಡಲಾಗುತ್ತಿರುವ ಸೌಲಭ್ಯ ಗಳಲ್ಲಿಯೇ ತಕ್ಕ ಮಟ್ಟಿಗಿನ ಕಡಿತ ಮಾಡುವ ಮೂಲಕ ಮಿತವ್ಯಯ ಸಾಧಿಸುವಂತೆ ಸುತ್ತೋಲೆ ಹೊರಡಿಸಿದರೆ ಸರ್ಕಾರದ ಬೊಕ್ಕಸಕ್ಕೆ ನೂರಾರು ಕೋಟಿ ರೂ.ಅಲ್ಲದಿದ್ದರೂ ಕನಿಷ್ಠ ನಾಲ್ಕಾರು ಕೋಟಿ ರೂ. ಆದರೂ ಉಳಿಯುತ್ತದೆ. 

ಹಾಗೆಯೇ, ಅಧಿಕಾರಿಗಳಿಗೆ ನೀಡುವ ಸೌಲಭ್ಯಗಳ ಕಡೆಗೂ ಸ್ವಲ್ಪ ಗಮನ ಹರಿಸಬೇಕು. ಅಧಿಕಾರಿಗಳು ಕನಿಷ್ಠ ಸೌಲಭ್ಯಗಳಡಿಯೇ ತಮ್ಮ ದೈನಂದಿನ ಕೆಲಸ ಕಾರ್ಯಗಳನ್ನು ನಿರ್ವಹಿಸುವಂತೆ ಸೂಚನೆ ನೀಡಬೇಕು. ಇಂತಹ ಎಲ್ಲ ರೀತಿಯ ಖರ್ಚು ವೆಚ್ಚಗಳನ್ನು ನಿಯಂತ್ರಿಸಿದಾಗಲೇ ಖಜಾನೆಯಲ್ಲಿ ಹಣ ಸಂಗ್ರಹ ವಾಗಲು ಸಾಧ್ಯ.

ಈ ಸಮಯದಲ್ಲಿ, ನಾಡಿನ ಪ್ರತಿ ಹಳ್ಳಿಯಲ್ಲೂ ಕೊಳವೆ ಬಾವಿಗಳನ್ನು ಕೊರೆಸಿ ನೀರು ಕಲ್ಪಿಸಿಕೊಡುವ ಮೂಲಕ "ಜನ ಸೇವೆಯೇ ಜನಾರ್ದನ ಸೇವೆ' ಎಂದು ನಂಬಿ ತೀರಾ ಸಹಜ ಜೀವನ ನಡೆಸಿದ್ದ ಹಿಂದಿನ ಗ್ರಾಮೀಣಾಭಿವೃದ್ಧಿ ಸಚಿವ ದಿ.ಅಬ್ದುಲ್‌ ನಜೀರ್‌ಸಾಬ್‌(ನೀರು ಸಾಬ್‌)ಹಾಗೂ ಶಿಕ್ಷಣ ಸಚಿವ ಗೋವಿಂದೇಗೌಡರು ಸೇರಿದಂತೆ ಹಲವಾರು ನಾಯಕರ ಜೀವನ ಶೈಲಿ ನೆನಪಾಗುತ್ತದೆ. ಜನಪ್ರತಿನಿಧಿಗಳು ಹೇಗಿರಬೇಕೆಂಬುದನ್ನು ಅವರು ತೋರಿಸಿಕೊಟ್ಟಿದ್ದಾರೆ.

ಅಂತಹ ನಾಯಕರ ಆದರ್ಶಗಳ ಪಾಲನೆ ಇಂದಿನ ಅಗತ್ಯವಾಗಿದೆ. ಆದರೆ, ಇಂದಿನ ಬದಲಾದ ಜೀವನ ಶೈಲಿಯಲ್ಲಿ ಹಿಂದಿನವರ ಆದರ್ಶ ಪಾಲನೆ ಕಷ್ಟವೆನಿಸ ಬಹುದು. ಅಂತಹ ಸಂದರ್ಭದಲ್ಲಿ ಕನಿಷ್ಠ ಸೌಲಭ್ಯಗಳನ್ನು ಬಳಸಿಕೊಂಡು ಜನಸೇವೆ ಮಾಡುವುದೂ ಒಂದು ಆದರ್ಶವಾಗಬಲ್ಲದು. ಇದಕ್ಕೆ ಎಲ್ಲರೂ ಸ್ವಯಂ ಪ್ರೇರಣೆಯಿಂದ ಮುಂದಾದಾಗ ಮಾತ್ರ ಆರ್ಥಿಕ ಮಿತವ್ಯಯ ಸಾಧಿಸಲು ಸಾಧ್ಯವಾಗಬಹುದು. 

ಸಾಲ ಮನ್ನಾ ವಿಚಾರದಲ್ಲಿ ಸರ್ಕಾರ ಆರ್ಥಿಕ ಶಿಸ್ತು ಕಾಯ್ದು ಕೊಳ್ಳಬೇಕು. ಯೋಜನೆ ಹಾಗೂ ಯೋಜನೇತರ ಖರ್ಚು ವೆಚ್ಚಗಳ ಲೆಕ್ಕಾಚಾರವನ್ನು ಕರಾರುವಕ್ಕಾಗಿ ನೋಡಿಕೊಳ್ಳಬೇಕು. ಸಾಲ ಮನ್ನಾ ಮಾಡಿದ ಬೆನ್ನಲ್ಲೇ ರೈತರು ಭವಿಷ್ಯದಲ್ಲಿ ಮತ್ತೆ ಆರ್ಥಿಕ ಸಂಕಷ್ಟಕ್ಕೆ ಒಳಗಾಗದಂತೆ ಅವರಿಗೆ ಏನೆಲ್ಲಾ ಅಗತ್ಯ ಯೋಜನೆಗಳನ್ನು ಕಲ್ಪಿಸಬೇಕೆಂಬುದರ ಬಗ್ಗೆ ಈಗಿನಿಂದಲೇ ಚಿಂತನೆ ನಡೆಸಬೇಕು. ಅದು ಬೆಳೆಗೆ ಬೆಂಬಲ ಬೆಲೆ ಇರಬಹುದು ಅಥವಾ ಹವಾಮಾನ ವೈಪರೀತ್ಯಗಳಿಂದ ಬೆಳೆ ನಷ್ಟವೇ ಆಗಿರಬಹುದು. ಎಲ್ಲದಕ್ಕೂ ಅಗತ್ಯಕ್ಕಿಂತಲೂ ಹೆಚ್ಚಿನ ಮುಂಜಾಗ್ರತೆಯನ್ನು ಸರ್ಕಾರ ವಹಿಸಬೇಕು. ಹೀಗೆ ಮಾಡುವುದರಿಂದ ರೈತ ಪದೇ ಪದೇ ಸಾಲದ ಸೂಲಕ್ಕೆ ಸಿಲುಕುವುದನ್ನು ತಪ್ಪಿಸಬಹುದು. ಇದು ರೈತರ ಆತ್ಮಸ್ಥೈರ್ಯವನ್ನು ಹೆಚ್ಚಿಸಲು ಅನುಕೂಲವಾಗುತ್ತದೆ. ಅಲ್ಲದೇ, ಸಾಲ ಭಾದೆಯಿಂದ ಸಂಭವಿಸುವಂತಹ ರೈತರ ಆತ್ಮಹತ್ಯೆ ಪ್ರಕರಣಗಳನ್ನೂ ತಡೆಯಬಹುದಾಗಿದೆ.       

ಸರ್ಕಾರದ ಎಲ್ಲಾ ಹಂತಗಳಲ್ಲಿ ಅನಗತ್ಯವಾಗಿ ವ್ಯಯ ಆಗುತ್ತಿರುವ ಹಣದ ಬಗ್ಗೆ ಶೋಧನೆ ನಡೆಸಲೇಬೇಕಿದೆ. ಅಗತ್ಯ ಅನಗತ್ಯಗಳನ್ನು ತಕ್ಕಡಿ ಹಿಡಿದು ನೋಡಿ, ಅನಗತ್ಯ ಖರ್ಚುಗಳಿಗೆ ಕಡಿವಾಣ ಹಾಕಲೇಬೇಕು. ಇಲ್ಲದಿದ್ದರೆ, ರೈತರ ಸಾಲ ಮನ್ನಾದಂತಹ ದೊಡ್ಡ ಆರ್ಥಿಕತೆಯನ್ನು ನಿಭಾಯಿಸುವುದರಲ್ಲಿ ಹೈರಾಣಾಗಬ ಹುದು. ಹೀಗೆ ಮಾಡುವುದರಿಂದ ಸರ್ಕಾರದ ಸಂಕಲ್ಪಿತ ಯೋಜನೆ ಗಳನ್ನು ಕಾರ್ಯರೂಪಕ್ಕೆ ತರಲು ಹೆಚ್ಚು ಅನುಕೂಲವಾಗುತ್ತದೆ.

- ಬಿ.ಎಸ್‌.ಅಶೋಕ್‌ 

Trending videos

Back to Top