CONNECT WITH US  

ರೈತರಿಗೆ ಬೆಳೆ ವಿಮೆ ವಿತರಣೆಗೆ ಕ್ರಮ

ಶಿವಮೊಗ್ಗ: ರಾಜ್ಯವು ರಾಷ್ಟ್ರದಲ್ಲಿಯೇ ಪ್ರಥಮ ಬಾರಿಗೆ ಮಾಹಿತಿ ತಂತ್ರಜ್ಞಾನವನ್ನು ಅಳವಡಿಸಿ ಜಿಪಿಎಸ್‌ ತಂತ್ರಜ್ಞಾನಾಧಾರಿತ ಮೊಬೈಲ್‌ ಆ್ಯಪ್‌ ಬಳಸಿ ಯಶಸ್ವಿಯಾಗಿ ಬೆಳೆ ಕಟಾವು ಪ್ರಯೋಗಗಳನ್ನು ನಡೆಸಿ, ಅರ್ಹ ರೈತರಿಗೆ ಬೆಳೆ ವಿಮೆಯನ್ನು ಇನ್ಶೂರೆನ್ಸ್‌
ಕಂಪನಿಗಳ ಮೂಲಕ ವಿತರಿಸುತ್ತಿದೆ ಎಂದು ಜಿಲ್ಲಾಧಿಕಾರಿ ಕೆ.ಎ. ದಯಾನಂದ್‌ ಹೇಳಿದರು.

ಜಿಪಂ ಅಬ್ದುಲ್‌ ನಜೀರ್‌ಸಾಬ್‌ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್‌ಬಿಮಾ ಯೋಜನೆಯಡಿ ಬೆಳೆ ಕಟಾವು ಪ್ರಯೋಗಗಳ ಪರಿಣಾಮಕಾರಿ ಅನುಷ್ಠಾನ್ಕಕಾಗಿ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
 
ಇದುವರೆಗೂ ಸಂಬಂಧಿಸಿದ ಅಧಿಕಾರಿಗಳು ಖುದ್ದು ಭೇಟಿ ನೀಡಿ ಬೆಳೆ ಕಟಾವು ನಡೆಸುತ್ತಿದ್ದರು. ಪ್ರಸ್ತುತ ಪ್ರಧಾನ ಮಂತ್ರಿ ಫಸಲ್‌ ಬಿಮಾ ಯೋಜನೆ ಕರ್ನಾಟಕ ರೈತ ಸುರಕ್ಷಾ ಯೋಜನೆಯಡಿ ಮೊಬೈಲ್‌ ಆ್ಯಪ್‌ ಬಳಸಿ ಜಿಪಿಎಸ್‌ ಆಧಾರಿತ ಬೆಳೆ ಕಟಾವು ಪ್ರಯೋಗಗಳನ್ನು ನಡೆಸಲಾಗುತ್ತಿದೆ. ಪ್ರಸಕ್ತ ಸಾಲಿಗೂ ಈ ಬೆಳೆವಿಮೆ ತಂತ್ರಾಂಶದಲ್ಲಿ ಸಣ್ಣ ಪ್ರಮಾಣದ ಬದಲಾವಣೆಗಳೊಂದಿಗೆ ಅನುಷ್ಠಾನಕ್ಕೆ ತರಲಾಗಿದೆ ಎಂದರು.

ರೈತರ ಹಿತ ಕಾಯುವುದು ಅಧಿಕಾರಿಗಳ ಜಬಾಬ್ದಾರಿಯಾಗಿದೆ. ಅಧಿಕಾರಿಗಳು ಈ ಯೋಜನೆಯ ಕುರಿತು ರೈತರಲ್ಲಿ ಅರಿವು ಮೂಡಿಸಬೇಕು. ಕಟಾವಿಗೆ ಸಂಬಂಧಿಸಿದಂತೆ ಅಧಿಕಾರಿಗಳು ರೈತರಿಗೆ ಮಾಹಿತಿ ನೀಡಬೇಕು. ಈ ವಿಷಯಕ್ಕೆ ಸಂಬಂಧಿಸಿದಂತೆ ಮೇಲಧಿಕಾರಿಗಳು ತಮ್ಮ ಅಧೀನ ಅಧಿಕಾರಿಗಳಿಂದ ಕಾಲಕಾಲಕ್ಕೆ ವಿವರವಾದ ಮಾಹಿತಿ ಪಡೆದುಕೊಳ್ಳುವಂತೆ ಸೂಚಿಸಿದರು.

ಬೆಳೆ ಕಟಾವನ್ನು ಸಕಾಲದಲ್ಲಿ ನಿಯಮಾನುಸಾರ ನಡೆಸಿ, ಬೆಳೆವಾರು ವಿಸ್ತೀರ್ಣ ಮುಂತಾದ ಮಾಹಿತಿಯನ್ನು ಸಂರಕ್ಷಣೆ ತಂತ್ರಾಂಶದಲ್ಲಿ ಉನ್ನತೀಕರಿಸುವಂತೆ ಸೂಚಿಸಿದ ಅವರು, ಸಾರ್ವಜನಿಕ ವಲಯದಿಂದ ಹಾಗೂ ವಿಮಾ ಕಂಪನಿಗಳಿಂದ ಯಾವುದೇ ದೂರುಗಳು ಬರದಂತೆ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು.

 ಪ್ರಸಕ್ತ ಸಾಲಿನಲ್ಲಿ ಭತ್ತ, ಮುಸುಕಿನ ಜೋಳ, ರಾಗಿ, ಜೋಳ, ಬೆಳೆಗಳನ್ನು ವಿಮಾ ವ್ಯಾಪ್ತಿಗೆ ಒಳಪಡಿಸಲಾಗಿದೆ. ಬೆಳೆ ಕಟಾವು ಯೋಜನೆ ಮೊಬೈಲ್‌ ಆ್ಯಪ್‌ ನಿರ್ವಹಿಸುವ ಅಧಿಕಾರಿ-ಸಿಬ್ಬಂದಿ ಕಡ್ಡಾಯವಾಗಿ ತರಬೇತಿ ಪಡೆದುಕೊಳ್ಳಬೇಕು. ತರಬೇತಿ ಪಡೆದು ಕರ್ತವ್ಯ ನಿರ್ವಹಿಸುವಲ್ಲಿ ನಿರ್ಲಕ್ಷಾ ವಹಿಸುವ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವುದು ಅನಿವಾರ್ಯವಾಗಲಿದೆ.

ಕಳೆದ ಸಾಲಿನಲ್ಲಿ ಸಮೀಕ್ಷೆ ನಡೆಸುವ ಸಂದರ್ಭದಲ್ಲಿ ಎದುರಾದ ಸಮಸ್ಯೆಗಳು ಪುನರಾವರ್ತನೆಯಾಗದಂತೆ ಮೂಲ ಕಾರ್ಯಕರ್ತರು ಎಚ್ಚರ ವಹಿಸಬೇಕೆಂದು ತಿಳಿಸಿದರು. ಕಾರ್ಯನಿರ್ವಹಿಸುವ ಅಧಿಕಾರಿಗಳಲ್ಲಿ ಮುಖ್ಯ ತರಬೇತುದಾರರು ಹಾಗೂ ನೋಡೆಲ್‌ ಅಧಿಕಾರಿಗಳನ್ನು ಗುರುತಿಸಲಾಗಿದೆ. ಈಗಾಗಲೇ ಬೆಳೆಕಟಾವು ಯೋಜನೆಯ ಕಾರ್ಯ ಯೋಜನೆಯನ್ನು ಮೂಲ ಕಾರ್ಯಕರ್ತರಿಗೆ ನೀಡಲಾಗಿದೆ ಎಂದರು.

 ಜಿಲ್ಲಾ ಸಾಂಖೀಕ ಅಧಿಕಾರಿ ಬ್ರಿಜೆಟ್‌ ವರ್ಗಿಸ್‌ ಮಾತನಾಡಿ, ಅಧಿಕಾರಿಗಳು ತಾವು ಒದಗಿಸುವ ಮಾಹಿತಿಯನ್ನು ಯಾವುದೇ ವಿಮಾ ಕಂಪನಿಯವರು ಆಕ್ಷೇಪಣೆ ಸಲ್ಲಿಸದಂತೆ ಎಚ್ಚರಿಕೆಯಿಂದ, ನಿಷ್ಠೆಯಿಂದ ಹಾಗೂ ಪ್ರಾಮಾಣಿಕವಾಗಿ ವಾಸ್ತವ ಮಾಹಿತಿಯನ್ನು ಉನ್ನತೀಕರಿಸುವಂತೆ ತಿಳಿಸಿದ ಅವರು, ಸಕಾಲಿಕವಾಗಿ ಬೆಳೆ ಪ್ರಯೋಗ ನಡೆಸಿ ಮಾಹಿತಿ ಸಲ್ಲಿಸುವಂತೆ ಅವರು ಸೂಚಿಸಿದರು.

 ಜಿಲ್ಲೆಯಲ್ಲಿ ಒಟ್ಟು 2668 ಬೆಳೆ ಕಟಾವು ಪ್ರಯೋಗಗಳನ್ನು ಕೈಗೊಳ್ಳಲು 550 ಮೂಲ ಕಾರ್ಯಕರ್ತರನ್ನು ನಿಯೋಜಿಸಲಾಗಿದೆ. ಅವುಗಳಲ್ಲಿ 40- ಕೃಷಿ, 37-ತೋಟಗಾರಿಕೆ, 236-ಕಂದಾಯ ಹಾಗೂ 237-ಅಭಿವೃದ್ಧಿ ಇಲಾಖೆ ಸೇರಿದಂತೆ ಒಟ್ಟು 550 ಕಾರ್ಯಕರ್ತರನ್ನು ನಿಯೋಜಿಸಲಾಗಿದೆ. 

ನಿಯೋಜಿತ ಎಲ್ಲಾ ಅಧಿಕಾರಿಗಳಿಗೆ ತರಬೇತಿ ತರಬೇತಿ ನೀಡಲಾಗಿದೆ ಎಂದು ತಿಳಿಸಿದರು.  ಸಭೆಯಲ್ಲಿ ಜಿಪಂ ಉಪ ಕಾರ್ಯದರ್ಶಿ ರಂಗನಾಥ್‌, ಉಪವಿಭಾಗಾಧಿಕಾರಿ ದಾಸೇಗೌಡ, ಜಂಟಿ ಕೃಷಿ ನಿರ್ದೇಶಕ ಡಾ| ಕಿರಣ್‌ ಕುಮಾರ್‌, ತೋಟಗಾರಿಕೆ ಉಪನಿರ್ದೇಶಕ ಡಾ| ಯೋಗೀಶ್‌ ಸೇರಿದಂತೆ ಜಿಲ್ಲೆಯ ಎಲ್ಲಾ ತಾಲೂಕುಗಳ ತಹಶೀಲ್ದಾರರು, ಕಾರ್ಯ ನಿರ್ವಾಹಕ ಅಧಿಕಾರಿಗಳು ಇದ್ದರು

Trending videos

Back to Top