CONNECT WITH US  

ಕಾವೇರಿ ನೀರು ಈಗ ಬೆಂಗಳೂರಿಗೂ ಸಾಕಾಗಲ್ಲ! ಲೆಕ್ಕಚಾರ ಹೀಗಿದೆ...

ಬೆಂಗಳೂರು: ಸತತವಾಗಿ ತಮಿಳುನಾಡಿಗೆ ನೀರು ಹರಿಸುತ್ತಿರುವುದರಿಂದ ಖಾಲಿಯಾಗುತ್ತಿರುವ ಕಾವೇರಿ ಕೊಳ್ಳದ ನಾಲ್ಕೂ ಜಲಾಶಯದಲ್ಲೂ ಲಭ್ಯವಿರುವ ನೀರಿನಿಂದ ಕೇವಲ ಬೆಂಗಳೂರಿನ ದಾಹವನ್ನೂ ತೀರಿಸಲು ಪರದಾಡಬೇಕಾದ ಸ್ಥಿತಿ ನಿರ್ಮಾಣವಾಗಲಿದೆ.

ಹೇಗೆಂದರೆ, ಪ್ರಸ್ತುತ ಕಾವೇರಿ ಕಣಿವೆಯ ನಾಲ್ಕೂ ಜಲಾಶಯಗಳಲ್ಲಿ ಲಭ್ಯವಿರುವ ನೀರಿನ ಪ್ರಮಾಣ ಕೇವಲ
26.17 ಟಿಎಂಸಿ ನೀರಿನ ಸಂಗ್ರಹವಿದೆ. ಇದೀಗ ಕಾವೇರಿ ಮೇಲುಸ್ತುವಾರಿ ಸಮಿತಿ ಮುಂದಿನ 10 ದಿನ ಒಟ್ಟಾರೆ
2.59 ಟಿಎಂಸಿ ತಮಿಳುನಾಡಿಗೆ ಹರಿಸಲು ಆದೇಶ ನೀಡಿದೆ. ಜತೆಗೆ ಬೇಸಿಗೆ ಸೇರಿ ಮುಂದಿನ 10 ತಿಂಗಳಲ್ಲಿ ಅಂದಾಜು 3 ಟಿಎಂಸಿ ನೀರು ಆವಿಯಾಗುತ್ತದೆ. ಹೀಗಾಗಿ ವಾಸ್ತವವಾಗಿ ಲಭ್ಯವಾಗುವುದು 20.58 ಟಿಎಂಸಿ ನೀರು ಮಾತ್ರ. ಈ ನಡುವೆ ಮತ್ತೆ ತಮಿಳುನಾಡಿಗೆ ನೀರು ಪೂರೈಸುವಂತೆ ಮುಂದಿನ 3 ತಿಂಗಳಲ್ಲಿ ಆದೇಶಿಸಿದರೆ, ಲಭ್ಯವಿರುವ ನೀರು ಕೇವಲ ಬೆಂಗಳೂರಿನ ಅಗತ್ಯತೆಯನ್ನೂ ಪೂರೈಸಲಾರದು. ವಾಸ್ತವವಾಗಿ ಕಾವೇರಿ ಜಲ ಮೂಲಗಳಿಂದ ಬೆಂಗಳೂರಿಗೆ ಮಾತ್ರ ನೀರು ಪೂರೈಸಲು ಸಾಧ್ಯವಿಲ್ಲ. ನಗರ ಮಾತ್ರವಲ್ಲದೆ, ಮೈಸೂರು, ಮಂಡ್ಯ ಹಾಗೂ ಚಾಮರಾಜನಗರ ಜನತೆಯ ಜೂನ್‌ ವರೆಗೆ ಕುಡಿಯುವ ನೀರು ನೀಡಬೇಕು.

ಇದಕ್ಕಾಗಿ ಒಟ್ಟಾರೆ, ಬಳಕೆಗೆ 28 ಟಿಎಂಸಿ ನೀರು ಬೇಕು. ಹೀಗಾಗಿ ಮೇಲುಸ್ತುವಾರಿ ಸಮಿತಿ ಆದೇಶ ಕುಡಿಯುವ ನೀರಿಗಾಗಿ ಕಾವೇರಿ ನಂಬಿಕೊಂಡಿರುವ ಜನತೆ ಪಾಲಿಗೆ ಬರ ಸಿಡಿಲು. 
„
ಬೆಂಗಳೂರಿಗೆ ಹಾಹಾಕಾರ: 
ಬೆಂಗಳೂರು ಜಲಮಂಡಳಿಯ ಹಿರಿಯ ಅಧಿಕಾರಿಯೊಬ್ಬರ ಪ್ರಕಾರ, ಈಗ ನಾಲ್ಕೂ ಜಲಾಶಯಗಳಲ್ಲೂ ಬಳಕೆಗೆ ಲಭ್ಯವಿರುವ ನೀರು ಬೇಡಿಕೆಗಿಂತ ಕೆಳ ಮಟ್ಟಕ್ಕೆ ಕುಸಿದಿದೆ. ಈ ನಡುವೆ ಆವಿಯಾಗುವುದು ಮತ್ತಿತರ ಕಾರಣಗಳಿಗೆ ನೀರಿನ ಲಭ್ಯತೆಯ ಪ್ರಮಾಣ ಕುಸಿಯಲಿದೆ. ಹೀಗಾಗಿ ಕೇವಲ ಬೆಂಗಳೂರಿನ ಅಗತ್ಯತೆಗೆ ಪೂರೈಸಲಷ್ಟೇ ಹಾಲಿ ಇರುವ ನೀರು ಸಾಕಾಗುತ್ತದೆ.

ಬೇರೆ ಜಿಲ್ಲೆಗಳಿಗೆ ಕುಡಿಯುವ ನೀರು ಪೂರೈಸಲೂ ಸಹ ನೀರಿರುವುದಿಲ್ಲ ಎಂಬ ಆತಂಕ ವ್ಯಕ್ತಪಡಿಸಿದ್ದಾರೆ. 800 ಚ.ಕಿ.ಮೀ. ವಿಶಾಲ ಬೆಂಗಳೂರಿನ ಇತರೆ ಜಲಮೂಲಗಳು ಭಾಗಶಃ ಬತ್ತಿ ಹೋಗಿವೆ. ಶತಮಾನದಿಂದ ಕುಡಿಯುವ
ನೀರು ಒದಗಿಸುತ್ತಿದ್ದ ತಿಪ್ಪಗೊಂಡನಹಳ್ಳಿ ಜಲಾಶಯವೂ 2013ರಲ್ಲೇ ನಗರದ ಪಾಲಿಗೆ ಬಾಗಿಲು ಮುಚ್ಚಿದೆ. ಪರಿಣಾಮ ನಿತ್ಯ 600 ಕ್ಯೂಸೆಕ್‌ನಷ್ಟು ಭಾರಿ ಪ್ರಮಾಣದ ನೀರಿಗೆ ಕಾವೇರಿಯನ್ನೇ ಅವಲಂಬಿಸಬೇಕು. 

ಇದೀಗ ಕಾವೇರಿ ನೀರು ತಮಿಳುನಾಡಿಗೆ ಹರಿಯುವುದರಿಂದ ಉದ್ಯಾನನಗರಿಗೆ ಬರ ಎದುರಾಗಲಿದೆ. ಪ್ರಸ್ತುತ ನಾಲ್ಕೂ ಜಲಾಶಯಗಳ ನೀರಿನ ಮಟ್ಟ ಪಾತಾಳಕ್ಕೆ ಅಂಟಿದೆ. ಕಳೆದ ವರ್ಷ ಸೆ. 19ಕ್ಕೆ ಕೆಆರ್‌ಎಸ್‌ನಲ್ಲಿ ಕಳೆದ ವರ್ಷ 23.43 ಟಿಎಂಸಿ ನೀರಿತ್ತು. ಇದೀಗ ಸೆ.19 ರ ಮಾಹಿತಿ ಪ್ರಕಾರ ಕೇವಲ 8.31 ಟಿಎಂಸಿ ನೀರು ಮಾತ್ರ ನೀರು ಲಭ್ಯವಿದೆ. ಹೇಮಾವತಿ 6.32 ಟಿಎಂಸಿ, ಕಬಿನಿ 7.59 ಟಿಎಂಸಿ, ಹಾರಂಗಿ 3.95 ಟಿಎಂಸಿ ಸೇರಿ ಕೇವಲ 26.17 ಟಿಎಂಸಿ ನೀರು ಮಾತ್ರ ಲಭ್ಯವಿದೆ.

„ಕಾದಿದೆ ಕರಾಳ ದಿನಗಳು: 
ಜಲಮಂಡಳಿ ಅಧಿಕಾರಿಗಳೇ ಹೇಳುವಂತೆ ನಾಳೆ ಸುಪ್ರೀಂಕೋರ್ಟ್‌ನಲ್ಲೂ ರಾಜ್ಯದ ಪರ ತೀರ್ಪು ಬರಲಿಲ್ಲವೆಂದರೆ ಬೆಂಗಳೂರು ಕರಾಳ ದಿನಗಳನ್ನು ನೋಡಬೇಕಾಗುತ್ತದೆ. ಈ ಹಿಂದೆಯೂ ನಗರವು ಕಾವೇರಿ ವಿವಾದದಿಂದ ಕುಡಿಯುವ ನೀರಿನ ಸಮಸ್ಯೆ ಅನುಭವಿಸಿತ್ತು. ಆದರೆ, ಇದೀಗ ಸಮಸ್ಯೆಯ ಪ್ರಮಾಣ ತೀವ್ರ ಸ್ವರೂಪದಿಂದ
ಕೂಡಿರಲಿದೆ. ಡಿಸೆಂಬರ್‌ನಿಂದಲೇ ಬರ ಅಪ್ಪಳಿಸಲಿದೆ ಎಂದು ಹೇಳಿದ್ದಾರೆ.

ಬೆಂಗಳೂರು ಸೇರಿದಂತೆ ವಿವಿಧ ನಗರಗಳಿಗೆ ಜೂನ್‌ವರೆಗೆ 28 ಟಿಎಂಸಿ ನೀರು ಬೇಕು ಎಂದು ಈಗಾಗಲೇ ಸರ್ಕಾರಕ್ಕೆ ಜಲಮಂಡಳಿ ಪ್ರಸ್ತಾವನೆ ಸಲ್ಲಿಸಿದೆ. ದರೆ, ಈ ನೀರು ಪೂರೈಕೆ ಮಾಡುವ ಸ್ಥಿತಿಯಲ್ಲೂ ಸರ್ಕಾರವಿಲ್ಲ. ಹೀಗಾಗಿ ಉಂಟಾಗಬಹುದಾದ ಸಮಸ್ಯೆ ನಿವಾರಣೆಗಾಗಿ ಪ್ರಸ್ತುತ ಎರಡು ದಿನಕ್ಕೊಮ್ಮೆ ಬಿಡುತ್ತಿರುವ ನೀರನ್ನು ಮೂರ್‍ನಾಲ್ಕು ದಿನಗಳಿಗೆ ಒಮ್ಮೆ ನೀಡಬೇಕಾಗುತ್ತದೆ.

ಜತೆಗೆ, ನೀರು ಬಿಡುವ ಅವಧಿಯನ್ನು ಕಡಿಮೆ ಮಾಡಬೇಕಾಗುತ್ತದೆ. ಕೆಲವು ಪ್ರದೇಶಗಳಿಗೆ ಯತೇತ್ಛವಾಗಿ
ಹರಿಯುತ್ತಿರುವ ನೀರಿಗೆ ಕಡಿವಾಣ ಹಾಕಬೇಕು. ಸಾಧ್ಯವಾದರೆ ಕೆಲ ಪ್ರದೇಶಗಳಿಗೆ ಟ್ಯಾಂಕರ್‌ಗಳ ಮೂಲಕ
ಮಾತ್ರ ನೀರು ಪೂರೈಸಲು ಸಿದ್ಧರಾಗಬೇಕು ಎಂದು ಜಲಮಂಡಳಿಯ ಹಿರಿಯ ಅಧಿಕಾರಿಯೊಬ್ಬರು ಭವಿಷ್ಯದ
ಯೋಚನೆ ಬಗ್ಗೆ ಉದಯವಾಣಿ ಜತೆ ಹಂಚಿಕೊಂಡಿದ್ದಾರೆ.

„ಯಾವ್ಯಾವ ನಗರಕ್ಕೆ ಎಷ್ಟೆಷ್ಟು ನೀರು?:
ಬೆಂಗಳೂರಿಗೆ ಸಮರ್ಪಕವಾಗಿ ನೀರು ಪೂರೈಕೆ ಮಾಡಬೇಕಾದರೆ ನಿತ್ಯ 600 ಕ್ಯೂಸೆಕ್‌ ನೀರು ಬೇಕು. ಮುಂದಿನ 10 ತಿಂಗಳಲ್ಲಿ 15 ಟಿಎಂಸಿ ನೀರು ಕೇವಲ ಬೆಂಗಳೂರಿಗೇ ಬೇಕು. ಇದಲ್ಲದೇ, ನಿತ್ಯ ಮೈಸೂರು ನಗರಕ್ಕೆ 120 ಕ್ಯೂಸೆಕ್‌, ಚಾಮರಾಜನಗರ 160 ಕ್ಯೂಸೆಕ್‌, ರಾಮನಗರ 100 ಕ್ಯೂಸೆಕ್‌, ಮಂಡ್ಯ 200 ಕ್ಯೂಸೆಕ್‌ ನೀರು ಪೂರೈಕೆ ಮಾಡಬೇಕು. ಇದರ ನಡುವೆ ಮಂಡ್ಯ ರೈತರ ಕೃಷಿ ಅಗತ್ಯತೆಗೂ ನೀರು ಮೀಸಲಿಡಬೇಕು. ಹೀಗಾಗಿ ಸಮಸ್ಯೆ ತೀವ್ರಗೊಳ್ಳಲಿದೆ.

ಬೆಂಗಳೂರಿಗೆ ಪ್ರತಿ ತಿಂಗಳು 1.5 ಟಿಎಂಸಿಯಂತೆ 15 ಟಿಎಂಸಿ ಹಾಗೂ ಇತರೆ ನಗರಗಳಿಗೆ 12 ಟಿಎಂಸಿ ಸೇರಿ
27 ಟಿಎಂಸಿ ಕೇವಲ ಕುಡಿಯುವ ಬಳಕೆಗೆ ಬೇಕು. ಈ ಬಗ್ಗೆ ಸರ್ಕಾರಕ್ಕೆ ಮನವರಿಕೆ ಮಾಡಿದ್ದೇವೆ. ಇದೀಗ
ಮೇಲುಸ್ತುವಾರಿ ಸಮಿತಿ ತೀರ್ಪಿ ನಿಂದ ಸಮಸ್ಯೆ ಉಂಟಾಗಲಿದ್ದು, ಸರ್ಕಾರವು ಸುಪ್ರೀಂಕೋರ್ಟ್ನಲ್ಲಿ ಪ್ರಶ್ನೆ ಮಾಡಲಿದೆ. ಸುಪ್ರೀಂ ಆದೇಶದ ಮೇಲೆ ಮುಂದಿನ ನಿರ್ಧಾರ ಮಾಡುತ್ತೇವೆ. 
ತುಷಾರ್‌ ಗಿರಿನಾಥ್‌,
ಜಲಮಂಡಳಿ ಅಧ್ಯಕ್ಷ

Trending videos

Back to Top