CONNECT WITH US  

ಬಯಲು ಬಹಿರ್ದೆಸೆ ಮುಕ್ತ ರಾಜ್ಯ: ಗುರಿ ಸಾಧನೆಗೆ ಇನ್ನೂ ಇವೆ ಅಡ್ಡಿ

ಮಹಾತ್ಮಾ ಗಾಂಧೀಜಿಯವರ ಸ್ವಚ್ಛತಾ ಪರಿಕಲ್ಪನೆಯ ಹೆಜ್ಜೆ ಗುರುತುಗಳಲ್ಲಿ ಸಾಗಿ ಪ್ರಧಾನಿ ನರೇಂದ್ರ ಮೋದಿಯವರ ಸ್ವಚ್ಛ ಭಾರತ್‌ ಯೋಜನೆಯ ಆಶಯಗಳೊಂದಿಗೆ 2018ರ ಅಕ್ಟೋಬರ್‌ ವೇಳೆಗೆ ಕರ್ನಾಟಕವನ್ನು ಸಂಪೂರ್ಣವಾಗಿ "ಬಯಲು ಬಹಿರ್ದೆಸೆ ಮುಕ್ತ' ರಾಜ್ಯವನ್ನಾಗಿ ಮಾಡಲು ರಾಜ್ಯ ಸರ್ಕಾರ ದಾಪುಗಾಲು ಇಡುತ್ತಿದ್ದು, ಶೇ.90ರಷ್ಟು ಪ್ರಗತಿ ಸಾಧಿಸಿದೆ.

ಆದರೆ, ಹೈದರಬಾದ್‌ ಕರ್ನಾಟಕ ಮತ್ತು ಉತ್ತರ ಕರ್ನಾಟಕ ಭಾಗದ ಕೆಲ ಜಿಲ್ಲೆಗಳ ಕಳಪೆ ಪ್ರಗತಿ ಸರ್ಕಾರದ ಗುರಿ ಸಾಧನೆಗೆ ಬಹುದೊಡ್ಡ ಅಡ್ಡಿಯಾಗಿದೆ. ಇನ್ನೂ 10 ಜಿಲ್ಲೆಗಳು, 61 ತಾಲೂಕುಗಳು, 108 ಸ್ಥಳೀಯ ಸಂಸ್ಥೆಗಳು, 1,915 ಗ್ರಾಮ ಪಂಚಾಯಿತಿಗಳು ಬಯಲು ಬಹಿರ್ದೆಸೆ ಮುಕ್ತ ಆಗಬೇಕಿದೆ. ಇನ್ನೂ ಶೇ.10ರಷ್ಟು ಮಾತ್ರ ಗುರಿ ಬಾಕಿ ಇದ್ದು, ಮುಂದಿನ ಮೂರು ತಿಂಗಳಲ್ಲಿ ಶೌಚಾಲಯ ನಿರ್ಮಾಣಕ್ಕೆ ಸಮರೋಪಾದಿಯಲ್ಲಿ ಕ್ರಮ ಕೈಗೊಳ್ಳಲು ಸರ್ಕಾರ ಅಧಿಕಾರಿಗಳಿಗೆ ಗಡುವು ಕೊಟ್ಟಿದೆ.

ಹಿಂದಿನ ಸರ್ಕಾರದಲ್ಲಿ ಗ್ರಾಮೀಣಾಭಿವೃದ್ಧಿ ಸಚಿವರಾಗಿದ್ದ ಎಚ್‌.ಕೆ. ಪಾಟೀಲರು, ರಾಜ್ಯವನ್ನು ಬಯಲು ಬಹಿರ್ದೆಸೆ ಮುಕ್ತ ಮಾಡಲು ಪಣತೊಟ್ಟು ಆಂದೋಲನದ ರೂಪದಲ್ಲಿ ಶೌಚಾಲಯಗಳ ನಿರ್ಮಾಣ ನಡೆಸಿದರು. ನಿಗದಿತ ಅವಧಿಯಲ್ಲಿ ಗುರಿ ಸಾಧಿಸಲೇಬೇಕು ಎಂಬ ಛಲದೊಂದಿಗೆ
2017-18ನೇ ಸಾಲಿನಲ್ಲಿ "ಶೌಚಾಲಯಕ್ಕಾಗಿ ಸಮರ' ಎಂಬ ವಿನೂತನ ಕಾರ್ಯಕ್ರಮ ಜಾರಿಗೆ ತಂದರು. ಇದಕ್ಕೆ ಸರಿಸಮಾನವಾಗಿ ನಗರಾಭಿವೃದ್ಧಿ ಇಲಾಖೆಯೂ ಸಾಥ್‌ ನೀಡಿತ್ತು. ಅದರಂತೆ, ವೈಯುಕ್ತಿಕ ಶೌಚಾಲಯ, ಸಾಮೂಹಿಕ ಶೌಚಾಲಯ, ಶಾಲೆಗಳಲ್ಲಿ ಮತ್ತು ಅಂಗನವಾಡಿಗಳಲ್ಲಿ ಶೌಚಾಲಯ, ಎಸ್ಸಿ, ಎಸ್ಟಿ ಜನಾಂಗದವರು ವಾಸ ಮಾಡುವ ಜನವಸತಿಗಳಲ್ಲಿ "ಗ್ರಾಮೀಣ ಗೌರವ' ಹೆಸರಲ್ಲಿ ಶೌಚ ಗೃಹಗಳ ನಿರ್ಮಾಣ ಸೇರಿದಂತೆ ಕಳೆದ ನಾಲ್ಕು ವರ್ಷಗಳಲ್ಲಿ ಒಟ್ಟು 38.10 ಲಕ್ಷ ಶೌಚಾಲಯಗಳನ್ನು ನಿರ್ಮಾಣ ಮಾಡಲಾಗಿದೆ.

                

2011 ಜನಗಣತಿ ಪ್ರಕಾರ ರಾಜ್ಯದಲ್ಲಿ ಒಟ್ಟು ಕುಟುಂಬಗಳ ಸಂಖ್ಯೆ 1.34 ಕೋಟಿ ಇದ್ದು, ಅದರಲ್ಲಿ 2012ರ ಬೇಸ್‌ಲೈನ್‌ ಸಮೀಕ್ಷೆ ಪ್ರಕಾರ ಶೇ.64ರಷ್ಟು ಕುಟುಂಬಗಳು ವೈಯುಕ್ತಿಕ ಶೌಚಾಲಯ ಸೌಲಭ್ಯ ಹೊಂದಿರಲಿಲ್ಲ. ಈ ಪೈಕಿ 2012-13ನೇ ಸಾಲಿನವರೆಗೆ 23.81 ಲಕ್ಷ ಕುಟುಂಗಳಿಗೆ ಶೌಚಾಲಯಗಳನ್ನು ಕಲ್ಪಿಸಿ ಶೇ.33ರಷ್ಟು ಪ್ರಗತಿಯನ್ನು ಸಾಧಿಸಲಾಗಿತ್ತು. 2013- 14ರಿಂದ 2017-18ರವರೆಗೆ ಸ್ವತ್ಛ ಭಾರತ್‌ ಮಿಷನ್‌ನಡಿ (ಗ್ರಾಮೀಣ) ಗ್ರಾಮೀಣ ಪ್ರದೇಶಗಳಲ್ಲಿ 34.65 ಲಕ್ಷ ಶೌಚಾಲಯಗಳು ಮತ್ತು ಸ್ವತ್ಛ ಭಾರತ್‌ ಮಿಷನ್‌ನಡಿ (ನಗರ) ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ 2.46 ಲಕ್ಷ ವೈಯುಕ್ತಿಕ ಶೌಚಾಲಯಗಳನ್ನು ಸೇರಿದಂತೆ ರಾಜ್ಯದಲ್ಲಿ ಒಟ್ಟು 37.10 ಲಕ್ಷ ವೈಯುಕ್ತಿಕ ಶೌಚಾಲಯಗಳನ್ನು ನಿರ್ಮಿಸುವ ಮೂಲಕ ಶೇ.90ರಷ್ಟು ಪ್ರಗತಿ ಸಾಧಿಸಲಾಗಿದೆ. ಇನ್ನೂ 10 ಜಿಲ್ಲೆಗಳು ಬಯಲು ಬಹಿರ್ದೆಸೆ ಮುಕ್ತ ಮಾಡಲು ಬಾಕಿಯಿದ್ದು, 2018ರ ಅಕ್ಟೋಬರ್‌ಗೆ ರಾಜ್ಯವನ್ನು ಸಂಪೂರ್ಣ "ಬಯಲು ಬಹಿರ್ದೆಸೆ ಮುಕ್ತ' ಮಾಡುವ ಗುರಿ ಇಟ್ಟುಕೊಳ್ಳಲಾಗಿದೆ.

 

ಗುರಿ ಸಾಧನೆಗೆ "ಹೈ-ಕ ಅಡ್ಡಿ'
2018ರ ಮಾರ್ಚ್‌ ವೇಳೆಗೆ ಕರ್ನಾಟಕವನ್ನು "ಬಯಲು ಬಹಿರ್ದೆಸೆ ಮುಕ್ತ' ಮಾಡುವ ಗುರಿ ಇಟ್ಟುಕೊಳ್ಳಲಾಗಿತ್ತು. ಆದರೆ, ಇದಕ್ಕೆ ಹೈದರಾಬಾದ್‌ ಕರ್ನಾಟಕದ ಜಿಲ್ಲೆಗಳು ಅಡ್ಡಿಯಾಗಿವೆ. ಮುಖ್ಯವಾಗಿ ಕೊಪ್ಪಳ, ಬಳ್ಳಾರಿ ಹೊರತುಪಡಿಸಿದರೆ ಬೀದರ ಶೆ.55.24, ರಾಯಚೂರು ಶೇ.55.31, ಕಲಬುರಗಿ ಶೇ.59.52, ಯಾದಗಿರಿ ಶೇ.57.32 ಇಡೀ ರಾಜ್ಯದಲ್ಲೇ ಅತಿ ಕಡಿಮೆ ಪ್ರಗತಿ ಸಾಧಿಸಿವೆ. ಜತೆಗೆ ವಿಜಯಪುರ ಜಿಲ್ಲೆ ಸಹ ಶೇ.57.13 ಪ್ರಗತಿ ಕಂಡಿದೆ. ಅಲ್ಲದೇ ಹೈದರಾಬಾದ್‌ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಶೌಚಾಲಯ ನಿರ್ಮಾಣ ಮತ್ತು ಬಳಕೆ ಬಗ್ಗೆ ಪ್ರತಿರೋಧವಿದೆ. ಜತೆಗೆ ಗ್ರಾಮೀಣ ಸಮುದಾಯದಲ್ಲಿ ಶೌಚಾಲಯಗಳ ಬಳಕಗೆ ಹೆಚ್ಚಿನ ಅರಿವು ಮತ್ತು ಮಾಹಿತಿಯ ಕೊರತೆಯಿದೆ. ಕೆಲವು ಗ್ರಾಮೀಣ ಪ್ರದೇಶಗಳಲ್ಲಿ ಸ್ಥಳದ ಅಭಾವವೂ ಇದೆ. ಗುರಿ ಸಾಧನೆಯಲ್ಲಿ ಇದು ಹಿನ್ನಡೆಗೆ ಕಾರಣವಾಗಿದೆ. 

21ನೇ ಸ್ಥಾನ
ಸ್ವಚ್ಛ ಭಾರತ್‌ ಮಿಷನ್‌ (ಗ್ರಾಮೀಣ) ಯೋಜನೆಯಡಿ ಶೌಚಾಲಯ ನಿರ್ಮಾಣದಲ್ಲಿ ಕರ್ನಾಟಕ 21ನೇ ಸ್ಥಾನದಲ್ಲಿದೆ. ಆದರೆ, ಭೌಗೋಳಿಕ ಪ್ರದೇಶ, ಜನಸಂಖ್ಯೆ ಹೆಚ್ಚಿರುವ ದೊಡ್ಡ ರಾಜ್ಯಗಳಿಗೆ ಹೋಲಿಸಿದಾಗ ಕರ್ನಾಟಕ ರಾಜ್ಯವು 14ನೇ ಸ್ಥಾನದಲ್ಲಿದೆ. 

ಸ್ವಚ್ಛತೆ ನಡೆದು ಬಂದ ದಾರಿ
1985ರಿಂದ ಕೇಂದ್ರ ಸರ್ಕಾರ ಹಾಗೂ ವಿದೇಶಿ ಸಂಸ್ಥೆಗಳಾದ ಡ್ಯಾನಿಡಾ, ರಾಯಲ್‌ ನೆದರ್‌ಲ್ಯಾಂಡ್‌, ವಿಶ್ವಬ್ಯಾಂಕ್‌, ಯುನಿಸೆಫ್ ಮುಂತಾದವುಗಳ ನೆರವಿನೊಂದಿಗೆ ರಾಜ್ಯ ಸರ್ಕಾರವು ಹಲವಾರು ಸ್ವತ್ಛತಾ ಕಾರ್ಯಕ್ರಮಗಳ ಯೋಜನೆಗಳನ್ನು ಅನುಷ್ಠಾನಗೊಳಿಸಿದೆ. ಗ್ರಾಮೀಣ ಸ್ವಚ್ಛತೆಗೆ ವಿಶೇಷ ಒತ್ತು ನೀಡುವ ಹಿನೆಲ್ಲೆಯಲ್ಲಿ 1995ರಲ್ಲಿ "ನಿರ್ಮಲ ಗ್ರಾಮ ಯೋಜನೆ' ಜಾರಿಗೆ ತಂದು 8 ವರ್ಷಗಳ ಕಾಲ ಅನುಷ್ಠಾನಗೊಳಿಸಿತು. ತದನಂತರ ಕೇಂದ್ರ ಪುರಸ್ಕೃತ ಯೋಜನೆಯಾದ "ಸಂಪೂರ್ಣ ಸ್ವಚ್ಛತಾ ಆಂದೋಲನವನ್ನು' 2005ರಿಂದ ಮಾರ್ಚ್‌ 2012ರವರೆಗೆ ಹಾಗೂ ನಿರ್ಮಲ್‌ ಭಾರತ್‌ ಅಭಿಯಾನವನ್ನು 2012ರ ಏಪ್ರಿಲ್‌ನಿಂದ ಅಕ್ಟೋಬರ್‌ 2014ರವರೆಗೆ ರಾಜ್ಯದ ಎಲ್ಲ 30 ಜಿಲ್ಲೆಗಳಲ್ಲಿ ಅನುಷ್ಠಾನಕ್ಕೆ ತರಲಾಯಿತು. ಪ್ರಸ್ತುತ ಕೇಂದ್ರ ಸರ್ಕಾರವು ಇದೇ ನಿರ್ಮಲ ಭಾರತ್‌ ಅಭಿಯಾನ ಕಾರ್ಯಕ್ರಮವನ್ನು ಪುನರ್‌ನಾಮಕರಣ ಮಾಡಿ ಹೊಸ ರೂಪದೊಂದಿಗೆ 2014ರ ಅ.2ರಿಂದ "ಸ್ವಚ್ಛ ಭಾರತ್‌ ಮಿಷನ್‌' ಹೆಸರಿನಡಿ ಅನುಷ್ಠಾನಕ್ಕೆ ತಂದಿದೆ. 

108 ನಗರ/ಪಟ್ಟಣಗಳು ಬಯಲು ಬಹಿರ್ದೆಸೆ ಮುಕ್ತ
2014ರಲ್ಲಿ ಮಾಡಲಾದ ಸಮೀಕ್ಷೆ ಪ್ರಕಾರ ಪಟ್ಟಣ ಪಂಚಾಯಿತಿ, ಪುರಸಭೆ, ನಗರಸಭೆ, ನಗರಪಾಲಿಕೆಗಳು ಸೇರಿದಂತೆ 280 ನಗರ ಸ್ಥಳೀಯ ಸಂಸ್ಥೆಗಳಲ್ಲಿ 3.50 ಲಕ್ಷ ವೈಯುಕ್ತಿಕ ಶೌಚಾಲಯ ನಿರ್ಮಾಣ ಮಾಡಬೇಕಿತ್ತು. ಅದರಲ್ಲಿ ಸ್ವತ್ಛ ಭಾರತ್‌ ಮಿಷನ್‌ (ನಗರ) ಸೇರಿದಂತೆ ವಿವಿಧ ಯೋಜನೆಗಳಡಿಯಲ್ಲಿ 2.46 ಲಕ್ಷ ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಇಲ್ಲಿವರೆಗೆ 108 ನಗರ/ಪಟ್ಟಣಗಳನ್ನು ಬಯಲು ಬಹಿರ್ದೆಸೆ ಮುಕ್ತವನ್ನಾಗಿ ಮಾಡಲಾಗಿದ್ದು, ಅಂದಾಜು ಇನ್ನೂ 1 ಲಕ್ಷ ಶೌಚಾಲಯಗಳ ನಿರ್ಮಾಣ ಮಾಡಿದರೆ ಗುರಿ ಪೂರ್ಣಗೊಳ್ಳಲಿದೆ. 

ಶೇ.100 ಬಯಲು ಬಹಿರ್ದೆಸೆ ಮುಕ್ತ ಜಿಲ್ಲೆಗಳು
ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಾಮರಾಜ  ನಗರ, ಚಿಕ್ಕಮಗಳೂರು, ಚಿಕ್ಕಬಳ್ಳಾಪುರ, ದಾವಣಗೆರೆ, ಧಾರವಾಡ, ಗದಗ, ಹಾಸನ, ಹಾವೇರಿ, ಕೊಡಗು, ಕೋಲಾರ, ಕೊಪ್ಪಳ, ಮಂಡ್ಯ, ದಕ್ಷಿಣ ಕನ್ನಡ, ಮೈಸೂರು, ರಾಮನಗರ, ಶಿವಮೊಗ್ಗ, ಉಡುಪಿ, ಉತ್ತರ ಕನ್ನಡ. 

● ರಫೀಕ್ ಅಹ್ಮದ್‌


Trending videos

Back to Top