CONNECT WITH US  

ಸಾಯೋ ಮುನ್ನ ನೊಂದ ಭಗ್ನಪ್ರೇಮಿ ಮನದಾಳದ ಮಾತು!ಫೇಸ್ಬುಕ್ ವಿಡಿಯೋ

ಬೆಂಗಳೂರು: ಪ್ರೇಯಸಿಯ ಸಂಬಂಧಿಕನ ಕಿರುಕುಳದಿಂದ ಭರಿಸಲಾಗದೇ ನೊಂದ ಯುವಕನೊಬ್ಬ ತನಗಾದ ಮಾನಸಿಕ ಹಾಗೂ ದೈಹಿಕ ಹಿಂಸೆ ಬಗ್ಗೆ ಸವಿಸ್ತಾರ ವಿವರವುಳ್ಳ ವಿಡಿಯೋವನ್ನು ಫೇಸ್‌ಬುಕ್‌ ಜಾಲತಾಣದಲ್ಲಿ  ಅಪ್‌ಲೋಡ್‌ ಮಾಡಿ ಅನಂತರ ಆತ್ಮಹತ್ಯೆ ಮಾಡಿಕೊಂಡ ವಿಲಕ್ಷಣ ಘಟನೆ ನಗರದಲ್ಲಿ ನಡೆದಿದೆ.

ಆ ಮೂಲಕ ಡೆತ್‌ನೋಟ್‌ಗೆ ಹೊಸ ಭಾಷ್ಯ ಬರೆದಿರುವ ಬಿ.ಜಿ. ರಸ್ತೆಯ ವೀವರ್ಸ್‌ ಕಾಲೋನಿ ನಿವಾಸಿಯಾಗಿದ್ದ ಅರುಣ್‌ಕುಮಾರ್‌ (25), ತಾನೇ ಚಿತ್ರೀಕರಿಸಿರುವ ವಿಡಿಯೋದಲ್ಲಿ  "ನಾನು ಮತ್ತು ಸ್ವಾತಿ ಪರಸ್ಪರ ಪ್ರೀತಿಸುತ್ತಿದ್ದೆವು. ಆಕೆಯ ಭಾವನೇ ನಮ್ಮ ಪ್ರೀತಿ ಮುರಿದು ಬೀಳಲು ಕಾರಣ. ಆತ ಹಲವು ಭಾರಿ ರೌಡಿಗಳ ಮೂಲಕ ನನಗೆ ಬೆದರಿಕೆಯೊಡ್ಡಿದ್ದ. ಅಲ್ಲದೆ, ಸ್ವಾತಿಯನ್ನು ಪ್ರೀತಿಸಬೇಡ ಎಂದು ರೌಡಿಗಳಿಂದ ಹಲ್ಲೆ ನಡೆಸಿದ್ದ. ನನ್ನ ಸಾವಿಗೆ ಆತನೇ ನೇರ ಕಾರಣ. ಅವನಿಗೆ ಶಿಕ್ಷೆಯಾಗಬೇಕು' ಎಂದು ಆತ್ಮಹತ್ಯೆಗೂ ಅಪ್‌ಲೋಡ್‌ ಮಾಡಿದ ವಿಡಿಯೋದಲ್ಲಿ  ಆಗ್ರಹಿಸಿದ್ದಾನೆ.

ಹುಳಿಮಾವು ಪೊಲೀಸ್‌ ಠಾಣೆ ವ್ಯಾಪ್ತಿಯ ಬಿ.ಜಿ. ರಸ್ತೆ ವೀವರ್ಸ್‌ ಕಾಲೋನಿ ನಿವಾಸಿ ಅರುಣ್‌ಕುಮಾರ್‌ ಹಾಗೂ ಸ್ವಾತಿ (ಹೆಸರು ಬದಲಿಸಲಾಗಿದೆ) ಪರಸ್ಪರ ಪ್ರೀತಿಸುತ್ತಿದ್ದರು. ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದ ಸ್ವಾತಿ ಭಾವ ಆಗಾಗ ಅರುಣ್‌ಕುಮಾರ್‌ಗೆ ತೊಂದರೆ ನೀಡುತ್ತಿದ್ದ ಎಂದು ತಿಳಿದುಬಂದಿದೆ. ಈ ಸಂಬಂಧ ಅರುಣ್‌ ಕುಮಾರ್‌ ಪೋಷಕರು ತಮ್ಮ ಪುತ್ರನ ಸಾವಿಗೆ ಯುವತಿಯ ಮನೆಯವರೇ ಕಾರಣ ಎಂದು ಆರೋಪಿಸಿ ಹುಳಿವುಮಾವು ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಏನಿದು ಘಟನೆ?
ಅರುಣ್‌ ಕುಮಾರ್‌ ಮತ್ತು ಸ್ವಾತಿ ಕಳೆದ ಏಳು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಇವರಿಬ್ಬರ ಪ್ರೀತಿಯ ವಿಚಾರ ತಿಳಿದು ಸ್ವಾತಿ ಮನೆಯವರಿಗೆ ಹಲವು ಬಾರಿ ಆತನೊಂದಿಗೆ ಸಂಪರ್ಕ ಕಡಿದುಕೊಳ್ಳುವಂತೆ ಎಚ್ಚರಿಸಿದ್ದರು. ಹೀಗಿದ್ದರೂ ಅರುಣ್‌ಕುಮಾರ್‌ ಜತೆ ಸ್ವಾತಿ ತನ್ನ ಪ್ರೀತಿ ಕಡಿದುಕೊಳ್ಳಲು ಮನಸ್ಸು ಮಾಡಲಿಲ್ಲ. ಹೀಗೆ ಮುಂದುವರಿದ ಪ್ರೀತಿಯನ್ನು ಸಹಿಸಲಾಗದೆ ಕೊನೆಗೆ ಸ್ವಾತಿಯ ಭಾವ ಹಾಗೂ ನಗರದ ಎನ್‌ಬಿಎಸ್‌ ಶಾಲೆಯ ಮಾಲೀಕರೂ ಆದ ರೇಣುಕೇಶ್‌ ಎಂಬುವರು ಅರುಣ್‌ ಕುಮಾರ್‌ಗೆ ರೌಡಿಗಳಿಂದ ಬೆದರಿಕೆ ಹಾಕಿಸಿದ್ದರು. ಇದರಿಂದ ನೊಂದು ತಮ್ಮ ಮಗ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೋಷಕರು ಹೇಳಿದ್ದಾರೆ.

ಇದಲ್ಲದೇ, ಯುವತಿ ಕಳೆದ ಜನವರಿ 29 ರಂದು ಮೈಕೋಲೇಔಟ್‌ ಪೊಲೀಸ್‌ ಠಾಣೆಯಲ್ಲಿ ಅರುಣ್‌ ಕುಮಾರ್‌ ನನಗೆ ತೊಂದರೆ ಕೊಡುತ್ತಿದ್ದಾನೆ ಎಂದು ದೂರು ದಾಖಲಿಸಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ. ಅರುಣ್‌ಕುಮಾರ್‌ ಆತ್ಮಹತ್ಯೆ ಸಂಬಂಧ ಹುಳಿಮಾವು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ನಾವು ಬಡವರು, ಅವರು ಶ್ರೀಮಂತರು 
ಶನಿವಾರ ಮಧ್ಯಾಹ್ನ 12 ಗಂಟೆ ಸುಮಾರಿಗೆ ಮನೆಯ ಮಹಡಿ ಮೇಲೆ ಒಬ್ಬನೇ ಬಿಸಿಲಿನಲ್ಲಿ ಕುಳಿತಿದ್ದ.ಇದನ್ನು ಪ್ರಶ್ನಿಸಿದ್ದಕ್ಕೆ ನನ್ನ ಮುಟ್ಟ ಬೇಡ, ಏಕಾಂತವಾಗಿರಲು ಬಿಡು ಎಂದು ಹೇಳಿದ. 

ಏನಾಯ್ತು ಎಂದು ಹಲವು ಬಾರಿ ಕೇಳಿದರೂ ಅದಕ್ಕೆ ಉತ್ತರಿಸದೆ ಹೊರಗೆ ಹೋದ. ಬಳಿಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮಗ ಸ್ವಾತಿಯನ್ನು ಹೆಚ್ಚು ಪ್ರೀತಿಸುತ್ತಿದ್ದ. ಇದು ಹುಡುಗಿಯ ಮನೆಯವರಿಗೆ ಇಷ್ಟವಿರಲಿಲ್ಲ. ನಾವು ಬಡವರು, ಹುಡುಗಿ ಮನೆಯವರು ಶ್ರೀಮಂತರು ಎಂಬುದೇ ಇದಕ್ಕೆ ಕಾರಣ. 

ಸ್ವಾತಿಯನ್ನು ಪ್ರೀತಿಸುವುದನ್ನು ಬಿಟ್ಟು ಬಿಡು ಎಂದು ಹಲವು ಬಾರಿ ಆಕೆಯ ಭಾವ ರೌಡಿಗಳನ್ನು ಬಿಟ್ಟು ಹಲ್ಲೆ ನಡೆಸಿದ್ದರು. ಆದರೂ ಪಟ್ಟು ಬಿಡದೆ ಆಕೆಯನ್ನು ಪ್ರೀತಿಸುತ್ತಿದ್ದ. ಈಗ ಮಗನನ್ನು ಕಳೆದುಕೊಂಡಿದ್ದಾನೆ.

ಈ ರೀತಿ ಯಾರಿಗೂ ಆಗಬಾರದು ಎಂದು ಮಾಧ್ಯಮಗಳ ಎದುರು ಮೃತ ಅರುಣ್‌ ಕುಮಾರ್‌ ತಾಯಿ ಅಳಲು ತೋಡಿಕೊಂಡಿದ್ದಾರೆ.

Trending videos

Back to Top