CONNECT WITH US  
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

5.4 ಕೋಟಿ ರೂ.ಬಂಡವಾಳ ಹೂಡಿಕೆ: 3,400 ಉದ್ಯೋಗ ಸೃಷ್ಟಿ ನಿರೀಕ್ಷೆ

ಬೆಂಗಳೂರು: ಬೆಂಗಳೂರಿನಲ್ಲಿ ಸಮಗ್ರ ಸೌಲಭ್ಯವುಳ್ಳ ಟೌನ್‌ಶಿಪ್‌, ಹಾಸನದಲ್ಲಿ ವೈದ್ಯಕೀಯ ಕಾಲೇಜು ನಿರ್ಮಾಣ ಯೋಜನೆ ಹಾಗೂ ಒಂದು ವಿಸ್ತರಣಾ ಕಾರ್ಯಕ್ರಮದಡಿ ಒಟ್ಟು 5,484.90 ಕೋಟಿ ರೂ. ಬಂಡವಾಳ ಹೂಡಿಕೆಯ ಯೋಜನೆಗೆ ರಾಜ್ಯ ಉನ್ನತ ಮಟ್ಟದ ಒಪ್ಪಿಗೆ ನೀಡಿಕೆ ಸಮಿತಿ ಅನುಮೋದನೆ ನೀಡಿದೆ. ಇದರಿಂದ 3,400 ಹುದ್ದೆ ಸೃಷ್ಟಿಯಾಗುವ ನಿರೀಕ್ಷೆ ಇದೆ.

ಗೃಹ ಕಚೇರಿ "ಕೃಷ್ಣಾ'ದಲ್ಲಿ ಗುರುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಉನ್ನತ ಮಟ್ಟದ ಒಪ್ಪಿಗೆ ನೀಡಿಕೆ ಸಮಿತಿಯ ಸಭೆಯಲ್ಲಿ ಎರಡು ಹೊಸ ಯೋಜನೆ ಹಾಗೂ ಮತ್ತೂಂದು ಹಾಲಿ ಯೋಜನೆಯ ವಿಸ್ತರಣಾ ಯೋಜನೆಗೆ ಒಪ್ಪಿಗೆ ನೀಡಲಾಗಿದೆ. ಸಭೆಯಲ್ಲಿ ಅನುಮೋದನೆ ನೀಡಿದ ಯೋಜನಾ ಪ್ರಸ್ತಾವದ ವಿವರ ಹೀಗಿದೆ.

ಬೆಂಗಳೂರಿನ ಬಿಟಿಎಂ ಲೇಔಟ್‌ನ ಜಿ.ಎಂ.ಇನ್‌ಫಿನೈಟ್‌ ಡ್ವೆಲ್ಲಿಂಗ್‌ ಇಂಡಿಯಾ ಸಂಸ್ಥೆಯು ಬೆಂಗಳೂರು ಪೂರ್ವ ತಾಲ್ಲೂಕಿನ ದೊಡ್ಡಕನ್ನಳ್ಳಿ ಗ್ರಾಮದಲ್ಲಿ 73.24 ಎಕರೆ ಪ್ರದೇಶದಲ್ಲಿ ಇಂಟಿಗ್ರೇಟೆಡ್‌ ಟೌನ್‌ಶಿಪ್‌ಸಹಿತ ಟೆಕ್‌ಪಾರ್ಕ್‌, ಶಾಪಿಂಗ್‌ ಮಾಲ್‌, ಆಸ್ಪತ್ರೆ, ಅಪಾರ್ಟ್‌ಮೆಂಟ್‌, ಕ್ಲಬ್‌ ಹಾಗೂ ಇತರೆ ಸಮೂಹ ನಿರ್ಮಾಣ ಪ್ರಸ್ತಾವಕ್ಕೆ ಸಭೆಯ ಒಪ್ಪಿಗೆ ಸಿಕ್ಕಿದೆ. ಸುಮಾರು 4,795.90 ಕೋಟಿ ರೂ. ಮೊತ್ತದ ಯೋಜನೆಯಿಂದ 2,300 ಉದ್ಯೋಗಗಳು ಸೃಷ್ಟಿಯಾಗುವ ಸಾಧ್ಯತೆ ಇದೆ.

ಬೆಂಗಳೂರಿನ ಆರ್‌ಎಂವಿ ಎರಡನೇ ಹಂತದ ಡಾಲರ್ ಕಾಲೋನಿಯ ಮಂಜುನಾಥ ಎಜುಕೇಷನಲ್‌ ಫೌಂಡೇಶನ್‌ ಟ್ರಸ್ಟ್‌ ಹಾಸನದಲ್ಲಿ ಕೆಐಎಡಿಬಿ ಕೈಗಾರಿಕಾ ಪ್ರದೇಶದಲ್ಲಿ 40 ಎಕರೆ ಜಾಗದಲ್ಲಿ ವೈದ್ಯ ಕಾಲೇಜು, ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರವನ್ನು 515 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸುವ ಪ್ರಸ್ತಾವಕ್ಕೆ ಅನುಮೋದನೆ ದೊರಕಿದೆ. ಈ ಯೋಜನೆಯಡಿ 1,100 ಹುದ್ದೆಗಳು ಸೃಷ್ಟಿಯಾಗುವ ನಿರೀಕ್ಷೆ ಇದೆ.

ಬೆಂಗಳೂರಿನ ಸೆಂಚುರಿ ಸಾಫ್ಟ್ವೇರ್‌ ಸೊಲ್ಯೂಷನ್ಸ್‌ ಸಂಸ್ಥೆಯು ದೊಡ್ಡನೆಕ್ಕುಂದಿ ಕೈಗಾರಿಕಾ ಪ್ರದೇಶದಲ್ಲಿ 10 ಎಕರೆ ಪ್ರದೇಶದಲ್ಲಿ ಐಟಿ/ಐಟಿಇಎಸ್‌ ಕಚೇರಿ ಆವರಣ, ವಸತಿ ಮತ್ತು ವಾಣಿಜ್ಯ ಆವರಣ ಹಾಗೂ ಇತರೆ ಸೌಲಭ್ಯ ಕಲ್ಪಿಸುವ 559.74 ಕೋಟಿ ರೂ. ಮೊತ್ತದ ವಿಸ್ತರಣಾ ಯೋಜನೆಗೆ ಸಭೆ ಹಸಿರು ನಿಶಾನೆ ತೋರಿದೆ.

ಸಭೆಯಲ್ಲಿ ಭಾರಿ ಮತ್ತು ಮಧ್ಯಮ ಕೈಗಾರಿಕೆ ಸಚಿವ ಆರ್‌.ವಿ.ದೇಶಪಾಂಡೆ ಇತರ ಉನ್ನತ ಅಧಿಕಾರಿಗಳು ಉಪಸ್ಥಿತರಿದ್ದರು.

Back to Top