CONNECT WITH US  
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಕೊನೆಗೂ ಆಟ ಶುರು! ತಮಿಳಿನ ಕಥೆಗೆ ಕನ್ನಡದ ಟ್ವಿಸ್ಟ್‌

"ಚಿತ್ರ ತಡವಾಗೋದಕ್ಕೆ ಕಾರಣ ನಾನೇ ...'
ಇಡೀ ಜವಾಬ್ದಾರಿಯನ್ನು ತಮ್ಮ ಮೇಲೇ ಹಾಕಿಕೊಂಡರು ಜಗನ್‌. ಅವರು ಕೆಲವು ವರ್ಷಗಳ ಹಿಂದೆ "ಆಡೂ ಆಟ ಆಡೂ' ಎಂಬ ಚಿತ್ರವನ್ನು ಶುರು ಮಾಡಿದ್ದರು. ಚಿತ್ರ ಕಾರಣಾಂತರಗಳಿಂದ ತಡವಾಗಿತ್ತು. ಇದೀಗ ಬಿಡುಗಡೆಗೆ ಸಿದ್ಧವಾಗಿದ್ದು, ಚಿತ್ರ ಇಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಚಿತ್ರ ಬಿಡುಗಡೆಯಾಗುತ್ತಿರುವ ಕುರಿತು ಜಗನ್‌ ತಮ್ಮ ತಂಡದೊಂದಿಗೆ ಮಾಧ್ಯಮದವರೆದುರು ಬಂದು ಕುಳಿತಿದ್ದರು.

"ಚಿತ್ರ ತಡವಾಗೋದಕ್ಕೆ ಕಾರಣ ನಾನೇ. ನನ್ನ ಕಡೆಯಿಂದ ಚಿತ್ರ ತಡವಾಯೆ¤à ಹೊರತು, ಬೇರೆ ಯಾರಿಂದಲೂ ಸಮಸ್ಯೆ ಆಗಿಲ್ಲ. ಚಿತ್ರ ತಡವಾಗೋದಕ್ಕೆ ಕಾರಣ ಬಜೆಟ್‌ ಜಾಸ್ತಿಯಾಗಿದ್ದು. ನಾವಂದುಕೊಂಡಿದ್ದಕ್ಕಿಂತ ಬಜೆಟ್‌ ಸ್ವಲ್ಪ ಜಾಸ್ತಿ ಆಯ್ತು. ದುಡ್ಡು ಹೊಂದಿಸುವುದಕ್ಕೆ ಸ್ವಲ್ಪ ಸಮಯವಾದ್ದರಿಂದ ಚಿತ್ರ ತಡವಾಯಿತು. ಈಗ ಚಿತ್ರ ಬಿಡುಗಡೆ ಮಾಡುತ್ತಿದ್ದೇವೆ. ಇಷ್ಟು ದಿನ ಬಿಡುಗಡೆಗೆ ಹೊಡೆದಾಡಿದ್ದು, ಈಗ ಜನರಿಗೆ ತಲುಪಿಸುವ ಹೋರಾಟ ಮಾಡಬೇಕಿದೆ' ಎಂದರು.

ಇನ್ನು ಚಿತ್ರದ ಕುರಿತು ಮಾತನಾಡಿದ ಅವರು, "ಇದೊಂದು ಹಳ್ಳಿಯಿಂದ ಬಂದ ಹುಡುಗನ ಕಥೆ. ಇದು ತಮಿಳಿನ "ತಿರಿಟ್ಟು ಪಯಲೆ' ಚಿತ್ರದ ರೀಮೇಕು. ಮೂಲ ಕಥೆಗೆ ಒಂದಿಷ್ಟು ಬದಲಾವಣೆಗಳನ್ನು ಮಾಡಿಕೊಂಡು ಚಿತ್ರ ಮಾಡಿದ್ದೇವೆ. ನಾವು ಈ ಚಿತ್ರದ ಹಕ್ಕುಗಳನ್ನು ಕೇಳುವುದಕ್ಕೆ ಮೂಲ ಚಿತ್ರದ ನಿರ್ದೇಶಕ ಸೂಸಿ ಗಣೇಶನ್‌ ಅವರ ಬಳಿ ಹೋದಾಗ, "ಮುಂಚೆಯೇ ಸಿಕ್ಕಿದ್ದರೆ ನಿಮ್ಮನ್ನೇ ಹೀರೋ ಮಾಡ್ತಿದ್ವಿ' ಅಂತ ಹೇಳಿದ್ದರು. ಇಲ್ಲಿ ಹೀರೋಯಿಸಂ ಇಲ್ಲ, ಬಿಲ್ಡಪ್‌ ಇಲ್ಲ' ಎಂದು ಹೇಳಿಕೊಂಡರು.

ಚಿತ್ರವನ್ನು ನಿರ್ದೇಶಿಸಿರುವುದು ರಾಮನಾಥ್‌ ಋಗ್ವೇದಿ. "ಅನೇಕ ತಿರುವುಗಳಿರುವ ಚಿತ್ರ ಇದು. ಅದಕ್ಕೆ ಹೊಸ ರೂಪ ಕೊಟ್ಟು ಮಾಡಿದ್ದೇವೆ. ಜಗನ್‌ ಅವರಿಂದ ಒಳ್ಳೆಯ ಸಹಕಾರ ಸಿಕ್ಕಿದ್ದರಿಂದ ಚಿತ್ರ ಚೆನ್ನಾಗಿ ಬರುವುದಕ್ಕೆ ಸಾಧ್ಯವಾಯಿತು. ಮಲೇಷ್ಯಾದಲ್ಲಿ ಸುಮಾರು 24 ದಿನಗಳ ಕಾಲ ಚಿತ್ರೀಕರಣ ಮಾಡಿದ್ದೇವೆ' ಎಂದರು. ಇನ್ನು "ಬುದ್ಧಿವಂತ' ನಂತರ ಯಾವೊಂದು ಚಿತ್ರ ಮಾಡದಿರುವ ಬಗ್ಗೆ ಕೇಳಿದಾಗ, "ನಿರ್ಮಾಪಕರನ್ನು ಹುಡುಕೊಂಡು ಹೋಗುವುದಿಲ್ಲ ನಾನು.

ಯಾರಾದರೂ ಕರೆದರೆ ಬಂದು ಚಿತ್ರ ಮಾಡುತ್ತೇನೆ. ಜಗನ್‌ ಗುರುತಿಸಿ ಚಿತ್ರ ಮಾಡುವ ಅವಕಾಶ ಕೊಟ್ಟರು. ಈ ಚಿತ್ರವನ್ನು ನೀವು ಮಾಡಿ ಎಂದು ವಿ. ಮನೋಹರ್‌ ಸಹ ಹೇಳಿದ್ದರಿಂದ ಒಪ್ಪಿದೆ' ಎಂದರು ರಾಮನಾಥ್‌ ಋಗ್ವೇದಿ.

ಚಿತ್ರಕ್ಕೆ ವಿ. ಮನೋಹರ್‌ ಸಾಹಿತ್ಯ ರಚಿಸುವುದರ ಜೊತೆಗೆ ಸಂಗೀತವನ್ನು ಸಂಯೋಜಿಸಿದ್ದಾರೆ. "ಬಹಳ ಅನಿರೀಕ್ಷಿತ ತಿರುವುಗಳಿರುವ ಚಿತ್ರ ಇದು. ಇಲ್ಲಿ ಹೀರೋನೇ ವಿಲನ್‌ ಆಗುತ್ತಾನೆ. ನಂತರ ಇನ್ನೇನೋ ಆಗುತ್ತದೆ. ಒಟ್ಟಾರೆ ಬಹಳ ಜಾಣ್ಮೆಯಿಂದ ಚಿತ್ರಕಥೆಯನ್ನು ಹೆಣೆಯಲಾಗಿದೆ. ಜಗನ್‌ ಜೊತೆಗೆ ಶ್ರುತಿ, ತಿಲಕ್‌, ಸುಮನ್‌ ರಂಗನಾಥ್‌, ಬಿಜು ಮೆನನ್‌ ಮುಂತಾದವರು ನಟಿಸಿದ್ದಾರೆ' ಎಂದು ಮಾಹಿತಿ ಕೊಟ್ಟರು.

ಅಂದು ಉಮೇಶ್‌ ಬಣಕಾರ್‌ ಸಹ ಹಾಜರಿದ್ದರು. ಅವರು ಚಿತ್ರದಲ್ಲಿ ನಟಿಸದಿದ್ದರೂ, ಜಗನ್‌ ದಾವಣಗೆರೆಯವರಾದ್ದರಿಂದ ಅವರಿಗೆ ಸಹಕಾರ ಕೊಡುವುದಕ್ಕೆ ಬಂದಿದ್ದರು. ಈ ಚಿತ್ರ ಗೆಲ್ಲಲಿ ಎಂದು ಹಾರೈಸಿ ಮಾತು ಮುಗಿಸಿದರು.

Back to Top