CONNECT WITH US  

ಸಾರ್ಥಕ ಕೊಂಕಣಿ ರಂಗ ಪ್ರಯೋಗ ಧರ್ಮಯುದ್ಧ

ಹೆಸರೇ ಸೂಚಿಸುವಂತೆ ಕೊಂಕಣ ಪ್ರದೇಶದಲ್ಲಿ ಹರಡಿಕೊಂಡಿ ರುವ ಕೊಂಕಣಿಗರಲ್ಲಿ ಗೌಡ ಸಾರಸ್ವತರಿಗೆ, ಸಾರಸ್ವತರಿಗೆ ವಿಶಿಷ್ಟ ಸ್ಥಾನವಿದೆ. ದೇವತಾರಾಧನೆಯೂ ಸೇರಿದಂತೆ ವಿವಿಧ ವ್ಯವಹಾರ- ಉದ್ಯಮಗಳಲ್ಲಿ ತೊಡಗಿರುವ ಇವರಿಗೆ ಕಲಾಸಕ್ತಿಯೂ ಕಡಿಮೆಯೇನಲ್ಲ. ಆದರೆ ಆಧುನಿಕ ರಂಗಭೂಮಿಯಲ್ಲಿ, ಕೊಂಕಣಿಗರೇ  ಸೇರಿಕೊಂಡು ಗಂಭೀರವಾಗಿ ಕೊಂಕಣಿ ನಾಟಕಕ್ಕೆ ಒಡ್ಡಿಕೊಂಡ ದಾಖಲೆಗಳಿಲ್ಲ. ಈಗ "ಧರ್ಮಯುದ್ಧ' ಕೊಂಕಣಿ ನಾಟಕ (ಮೂಲ ನಾಟಕ: ಪ್ರೊ| ವೇಣುಗೋಪಾಲ ಕಾಸರಗೋಡು; ಭಾಷಾಂತರ - ರಂಗವಿನ್ಯಾಸ - ನಿರ್ದೇಶನ : ಕಾಸರಗೋಡು ಚಿನ್ನಾ)ವನ್ನು ಮಂಗಳೂರಿನ ಪುರಭವನದಲ್ಲಿ ಅದ್ದೂರಿಯಾಗಿ ಮತ್ತು ಅಷ್ಟೇ ಯಶಸ್ವಿಯಾಗಿ ಪ್ರದರ್ಶಿಸುವ ಮೂಲಕ ಕೊಂಕಣಿ ಭಾಷೆಗೆ - ಕೊಂಕಣಿಗರಿಗೆ ಸಾರ್ಥಕ ರಂಗ ಪ್ರಯೋಗದ ಗೌರವ ದಕ್ಕಿದಂತಾಗಿದೆ.

ಕನ್ನಡದ ಖ್ಯಾತನಾಮರ ಕತೆಗಳನ್ನು ಈಗಾಗಲೇ ಕೊಂಕಣಿಗೆ ಭಾಷಾಂತರಿಸಿ ಪ್ರಕಟಿಸಿ ಯಶಸ್ವಿಯಾಗಿರುವ ಬಹುಪ್ರತಿಭೆಯ ಕಾಸರ ಗೋಡು ಚಿನ್ನಾ ತನ್ನ ಕೆಲಸದ ಪ್ರಖರತೆಗೆ ಆಯ್ದುಕೊಂಡದ್ದು ಕೊಂಕಣಿ ಸಾಂಸ್ಕೃತಿಕ ಸಂಘ (ರಿ.) ಮಂಗ್ಳೂರ್‌ ತಂಡದ ಸಂಘಟಕರನ್ನು; ಅಭಿನಯ ಕ್ಕಾಗಿ ಬೆಳಕಿಗೆ ಒಡ್ಡಿದ್ದು ರಂಗಚಿನ್ನಾರಿ (ರಿ.) ಸಂಸ್ಥೆಯ ಆಯ್ದ ಕಲಾವಿದ ರನ್ನು. ವೃತ್ತಿಪರರಿಂದ ತೊಡಗಿ ಮೊದಲ ಬಾರಿಗೆ ರಂಗ ಪ್ರವೇಶಿಸಿದ ಹವ್ಯಾಸಿಗಳೂ ಸೇರಿ 25 ಕಲಾವಿದರು ಬಣ್ಣ ಹಚ್ಚಿದರು, 25ಕ್ಕೂ ಹೆಚ್ಚು ತಂತ್ರಜ್ಞರು-ಪರಿಣತರು ಹಿನ್ನೆಲೆಯಲ್ಲಿ ದುಡಿದರು ಎಂಬುದರಿಂದಲೇ ತಂಡದ ಬೃಹತ್‌ ಗಾತ್ರದ ಸ್ವರೂಪದ ಅರಿವಾಗುತ್ತದೆ.

ತನ್ನ ಅನುಭವ-ದಕ್ಷತೆ ಮತ್ತು ಬದ್ಧತೆಗಳನ್ನು ಬಳಸಿಕೊಂಡ ನಿರ್ದೇಶಕ ಕಾಸರಗೋಡು ಚಿನ್ನಾ ತಾನು ಭಾಷಾಂತರಿಸಲು ಆಯ್ದು ಕೊಂಡ ನಾಟಕದ ವಸ್ತುವಿನಿಂದ ತೊಡಗಿ ಪ್ರತಿಪಾತ್ರದ ಸ್ವರೂಪ, ರಂಗವಿನ್ಯಾಸ ಚಲನೆ (movement), ಆಂಗಿಕಾಭಿನಯ, ಸಂಭಾಷಣೆ, ಸ್ತಬ್ಧತೆ (still)ಗಳ ಸಮಗ್ರ ದೃಷ್ಟಿಯನ್ನು ಯಶಸ್ವಿಯಾಗಿ ಗ್ರಹಿಸಿದ್ದರಿಂದ "ಧರ್ಮಯುದ್ಧ' ಅನ್ಯಭಾಷಿಗರೂ ಗ್ರಹಿಸಲು ಸಾಧ್ಯವಾಗುವಂತೆ ಮೂಡಿಬಂದು ಯಶಸ್ವೀ ಪ್ರಯೋಗವಾಯಿತು.

ಜಲೋದರ ರೋಗ ಪೀಡಿತನಾದ ರಾಜಾ ಹರಿಶ್ಚಂದ್ರ, ಬ್ರಹ್ಮರ್ಷಿ ವಿಶ್ವಾಮಿತ್ರನಲ್ಲಿಗೆ ಬಂದು, ಉಪಶಮನಕ್ಕಾಗಿ ನರಬಲಿಯುಕ್ತ ಯಾಗ ಪೌರೋಹಿತ್ಯಕ್ಕೆ ಒಪ್ಪಿಸುವಲ್ಲಿಂದ ತೊಡಗಿ ಶುನಶೆಪ ಪ್ರಕರಣದ ವರೆಗಿನ ಧರ್ಮಸೂಕ್ಷ್ಮಗಳು ನಾಟಕದ ವಸ್ತು. ರಾಜಸ್ವ, ಕುಟುಂಬ, ಆಡಳಿತ ವಿಚಾರಗಳ ನಿರ್ಣಯಗಳನ್ನು ಆಚರಣೆಗಳನ್ನು ಇಲ್ಲಿ ಒರೆಗೆ ಹಚ್ಚಲಾಗಿದೆ. ಪ್ರತಿಯೊಂದು ಮಹತ್ವಪೂರ್ಣ ವಿಜಯದ ಹಿಂದಿರುವ ಸಾಮುದಾಯಿಕ ನೋವನ್ನು - ಅನ್ಯಾಯವನ್ನು ಪ್ರಶ್ನಿಸಲಾಗಿದೆ. ವಿಧಿ-ನಿಷೇಧಗಳ ಆಚರಣೆ ಮಾತ್ರ ಧರ್ಮ ಅಲ್ಲ ಎನ್ನುವುದನ್ನು ಬಿಂಬಿಸಲಾಗಿದೆ. "ಇಲ್ಲಿ ಬಿದ್ದದ್ದು ವ್ಯವಸ್ಥೆಯ ಧ್ವನಿ ಮಾತ್ರ, ಅಭ್ರಕ್ತನಲ್ಲ' ಎನ್ನುವ ಮೂಲಕ ಪ್ರೇಕ್ಷಕರಲ್ಲಿ ಜಿಜ್ಞಾಸೆಯನ್ನು ಮೂಡಿಸಿ, ಚಿಂತನೆಗೆ ಹಚ್ಚುವಲ್ಲಿ ನಾಟಕ ಗೆದ್ದಿದೆ.

ಸಂಭಾಷಣಾ ಪ್ರಧಾನವಾದ, ಧಾರ್ಮಿಕ ವಿಚಾರಗಳ ತಾಕಲಾಟದ ವಸ್ತುವನ್ನು ಇಂದಿಗೂ ಅನ್ವಯವಾಗುವಂತೆ ಪ್ರಸ್ತುತಪಡಿಸುವುದು ಸವಾಲಿನ ಕೆಲಸ. ಭಾಷಾ ಪ್ರಯೋಗದಲ್ಲಿ ಗಟ್ಟಿತನವಿಲ್ಲದಿದ್ದರೆ ಒಟ್ಟು ನಾಟಕವೇ ಜಾಳು ಜಾಳಾಗಿ ಬಿಡುತ್ತದೆ. ಆದರೆ ಚಿನ್ನಾ ಅವರ ಸಮಗ್ರ ನಿರ್ದೇಶನ ಇವೆಲ್ಲವನ್ನೂ ಮೀರಿ ಕೆಲಸ ಮಾಡಿದೆ. ಎಲ್ಲ ನಟ- ನಟಿ ಯರ ಪಾತ್ರೋಚಿತ ಅವಕಾಶ-ಅಭಿನಯ, ಸೂಕ್ತ ವೇಷ ಭೂಷಣ - ರಂಗಸಜ್ಜಿಕೆ (ವಿದ್ಯಾ ಕಾಮತ್‌ - ಜಗನ್ನಾಥ್‌ ಮತ್ತು ಸುಹಾಸ್‌ ರಾವ್‌ - ಸುಧಾಕರ್‌ ಸಾಲ್ಯಾನ್‌ - ಪ್ರಕಾಶ್‌ ನಾಯಕ್‌) ಹಿತಮಿತವಾದ ಪ್ರಸಾಧನ (ದಿನೇಶ್‌ ಮಾಸ್ತರ್‌ - ವೇಣುಮಿತ್ರ), ಸಾಂದರ್ಭಿಕ ಗೀತ ರಚನೆ-ಗಾಯನ (ಶಕುಂತಲಾ ಆರ್‌. ಕಿಣಿ - ರವೀಂದ್ರ ಪ್ರಭು), ಸಹ ನಿರ್ದೇಶನ (ಗುರುಲೀಲಾ) ಮತ್ತು ವಿಶೇಷ ಸಹಕಾರ (ಎಂ. ಆರ್‌. ಕಾಮತ್‌ - ಗೀತಾ ಸಿ. ಕಿಣಿ- ನರೇಶ್‌ ಕಿಣಿ - ವಿ.ಜಿ. ಪಾಲ್‌) ನಾಟಕದ ಒಟ್ಟು ಗೆಲುವಿನಲ್ಲಿ ಸಮಪಾಲು ಪಡೆದಿವೆ. ಸಂಭಾಷಣೆಗಳು ಸರಿಯಾಗಿ ಪ್ರೇಕ್ಷಕರನ್ನು ತಲುಪುವಂತಿದ್ದ ಧ್ವನಿ (ಸುರಭಿ ಸೌಂಡ್ಸ್‌) ಮತ್ತು ಸಂಯಮದ ಹಿನ್ನೆಲೆ ಸಂಗೀತ (ಎ.ಕೆ. ವಿಜಯ್‌ರಂಗ ಪೈ) ಕೊಡುಗೆಗಳೂ ಗಮನಾರ್ಹವೇ. ಬೆಳಕು ನಿರ್ವಹಣೆ (ಈಶ್ವರ್‌)ಯೂ ಪೂರಕ ಕೆಲಸವನ್ನೇ ಮಾಡಿದೆ.

ಆದರೆ ಸಂಪೂರ್ಣ ನಾಟಕದ ಅರ್ಧಕ್ಕೂ ಅಧಿಕ ಯಶಸ್ಸನ್ನು ಕಬಳಿಸುವುದು ವಿಶ್ವಾಮಿತ್ರನಾಗಿ ಗೋಪಿನಾಥ ಭಟ್‌. ಶರೀರ ಮತ್ತು ಶಾರೀರಗಳೆರಡರಿಂದಲೂ ಪಾತ್ರಕ್ಕೆ ಜೀವ ತುಂಬುವ ಈ ಪ್ರಬುದ್ಧ ರಂಗ ಕಲಾವಿದ ವಿಶ್ವಾಮಿತ್ರನ ಹಟವನ್ನು, ಕಠೊರ ನಿರ್ಧಾರಗಳನ್ನು, ಸ್ವ ಪ್ರತಿಪಾದನೆಯನ್ನು, ಪುತ್ರ ವ್ಯಾಮೋಹವನ್ನು - ನೈಷ್ಠುರ್ಯವನ್ನು ಅಭಿವ್ಯಕ್ತಿಸುವ ಪರಿ ಅನನ್ಯ. ಉಳಿದಂತೆ ಹರಿಶ್ಚಂದ್ರ, ಅಭಕ್ತ, ಸತ್ಯವತಿ, ಗ್ರಾಮಸ್ಥರಾಗಿ ಅಭಿನಯಿಸಿದ ಕಲಾವಿದರೆಲ್ಲರೂ ತಮ್ಮ ತಮ್ಮ ಪಾತ್ರ ಗಳಿಗೆ ನ್ಯಾಯವೊದಗಿಸಿದ್ದಾರೆ. ಶಶಿಭೂಷಣ್‌ ಕಿಣಿ, ಡಾ| ಸುಧೇಶ್‌ ರಾವ್‌, ಎಚ್‌. ಸತೀಶ್‌ ನಾಯಕ್‌, ರಕ್ಷಿತ್‌ ಕಾಮತ್‌, ಮುರಳೀಧರ ಕಾಮತ್‌, ಸಂತೋಷ್‌ ಶೆಣೈ, ಪ್ರಕಾಶ್‌ ನಾಯಕ್‌, ಶ್ರೀನಿವಾಸ ಭಂಡಾರಿ, ವಿಠೊಭ ಭಂಡಾರ್‌ಕಾರ್‌, ಅಶೋಕ್‌ ಕಾಮತ್‌, ಪ್ರವೀಣ್‌ ಕಾಮತ್‌, ರಾಘವೇಂದ್ರ ಕಿಣಿ, ವೆಂಕಟೇಶ್‌ ಶೇಟ್‌, ನರಸಿಂಹ ಕಿಣಿ, ಮಾವಿನಕುರ್ವೆ ವೆಂಕಟೇಶ ಬಾಳಿಗಾ, ಮರೋಳಿ ಸಬಿತಾ ಕಾಮತ್‌, ಪ್ರಫ‌ುಲ್ಲಾ ಹೆಗ್ಡೆ , ನಿವೇದಿತಾ ಪ್ರಭು, ಮಾಲತಿ ಕಾಮತ್‌ ಮುಂತಾ ದವರೂ ನಾಟಕದ ಒಟ್ಟಂದವನ್ನು ಕಾಪಿಡುವಲ್ಲಿ ಪರಿಶ್ರಮಪಟ್ಟಿದ್ದಾರೆ.

ಹಾಗೆಂದ ಮಾತ್ರಕ್ಕೆ ನಾಟಕದಲ್ಲಿ ದೋಷಗಳೇ ಇಲ್ಲವೆಂದಲ್ಲ, ನಿವಾರಿಸಿಕೊಳ್ಳಬಹುದಾದ ಸಣ್ಣಪುಟ್ಟ ಲೋಪಗಳು ನುಸುಳಿ ಕೊಂಡಿದ್ದರೂ ಅವು ನಾಟಕವನ್ನು ಹಾಳುಗೆಡವುವಷ್ಟು ದೊಡ್ಡವಲ್ಲ. ಕೊಂಕಣಿ ಭಾಷಿಗರಲ್ಲದವರನ್ನೂ ಒಟ್ಟು ಸೇರಿಸಿಕೊಂಡು ನಡೆಸಿದ ಈ ಮಾದರಿಯ ಚೊಚ್ಚಲ ಪ್ರಯತ್ನವೆಂಬುದನ್ನು ಗಮನಿಸಿಕೊಂಡು, ಕೊಂಕಣಿ ಭಾಷೆಯಲ್ಲಿ ರಂಗಭೂಮಿ ಬೆಳೆಯಬಹುದಾದ ಮತ್ತು ಬೆಳೆಯಬೇಕಾದ ಗಮ್ಯವನ್ನು ಲಕ್ಷಿಸಿ "ಧರ್ಮಯುದ್ಧ'ವನ್ನು ಸಾರುವ ಈ ಕಾಲಘಟ್ಟದಲ್ಲಿ ಈ ಸಾಹಸವನ್ನು ಪ್ರಶಂಸಿಸಲೇಬೇಕಿದೆ.

ವ್ಯಾಪಕ ರಂಗಭೂಮಿಯ ಸೋದರ ಭಾಷೆಗಳವರು "ಧರ್ಮ ಯುದ್ಧ'ವನ್ನು ಆದರಿಸಿ ವೇದಿಕೆಯೊದಗಿಸುವ ಮುನ್ನ ಸ್ವತಃ ಕೊಂಕಣಿ ಭಾಷಿಗರು ಪೌರಾಣಿಕವಾದ ಈ ನಾಟಕದ ಮರು ಪ್ರದರ್ಶನಗಳಿಗೆ ಮನಮಾಡಬೇಕಿದೆ. ಧರ್ಮ ಭೀರುಗಳೂ ಉದ್ಯಮಶೀಲರೂ ಆದ ಕೊಂಕಣಿಗರು ಕಲಾ ಪ್ರೋತ್ಸಾಹಕರೂ ಆಗುವ ಮೂಲಕ ಭಾಷೆ- ಸಂಸ್ಕೃತಿ-ಒಗ್ಗಟ್ಟುಗಳ ಉಳಿವಿಗೆ ತಮ್ಮ ಪಾಲಿನ ಕೊಡುಗೆಯನ್ನು ನೀಡಬೇಕಿದೆ.

ಕೆ. ವಿ. ರಮಣ್‌


Trending videos

Back to Top