CONNECT WITH US  

ಬೆಳ್ಳಿ ಕೂದಲ ನಿವಾರಣೆ

ರೇಷ್ಮೆಯ ಹೊಳಪಿನ ಕಪ್ಪು ಕೂದಲು, ಆಕರ್ಷಕ ಚರ್ಮದಲ್ಲಿ ನೆರಿಗೆ ಹಾಗೂ ಬೆಳ್ಳಿ ಕೂದಲು (ಬಿಳಿ ಕೂದಲು) ಇವು ವಯಸ್ಸಾದಂತೆ ಹೆಚ್ಚುತ್ತದೆ. ಕೂದಲು ಬೆಳ್ಳಗಾಗುವಿಕೆಗೆ ವಂಶಪಾರಂಪರ್ಯ ಕಾರಣಗಳು, ಅಧಿಕ ತಂಬಾಕು ಸೇವನೆ, ದೀರ್ಘ‌ಕಾಲೀನ ಮಾನಸಿಕ ಒತ್ತಡ, ಆತಂಕ, ಉದ್ವೇಗ ಮುಂತಾದವು; ಪೋಷಕಾಂಶಗಳ ಕೊರತೆ (ಕಬ್ಬಿಣ, ತಾಮ್ರ, ಅಯೋಡಿನ್‌, ವಿಟಮಿನ್‌ಗಳೇ ಮೊದಲಾದವು) ರಕ್ತಹೀನತೆ, ಹೈಪೋಥೈರಾಯಿಡ್‌ ತೊಂದರೆ, ಟ್ಯುಬರ್‌ಕ್ಯುಲೋಸಿಸ್‌, ಸ್ಕಿರೋಸಿಸ್‌ ಹಾಗೂ ನ್ಯೂರೋ ಫೈಬೊಮಾ ಮೊದಲಾದ ಕಾರಣಗಳಿಂದ ಕೂದಲು ವಯಸ್ಸಿಗೆ ಮೊದಲು ಬಿಳಿಯಾಗುವುದು ಹೆಚ್ಚು.

ಕೂದಲಿನ ಮೆಲಾನಿನ್‌ ಪಿಗ್‌ಮೆಂಟ್‌ ನಷ್ಟವಾದಾಗ ಕೂದಲು ಬೆಳ್ಳಗಾಗುತ್ತದೆ. 

ಈ ಕೆಳಗೆ ಹಲವು ಸುಲಭ ಸಾಧ್ಯವಾದ ದೀರ್ಘ‌ಕಾಲ ಬಳಕೆಗೆ ಯೋಗ್ಯವಾದ ಔಷಧೋಪಚಾರ ಗೃಹೌಷಧಿಗಳ ರೂಪದಲ್ಲಿ ತಿಳಿಸಲಾಗಿದೆ.

ಕರಿಬೇವು ಹಾಗೂ ಕೊಬ್ಬರಿ ಎಣ್ಣೆಯ ಪ್ರಯೋಗ
ಕರಿಬೇವಿನಲ್ಲಿ ಸಮೃದ್ಧವಾಗಿರುವ ವಿಟಮಿನ್‌ "ಬಿ'ಯ ಅಂಶವು ಮೆಲಾನಿನ್‌ ಸ್ರಾವ ವರ್ಧನೆಗೆ ಸಹಕಾರಿ. ಕೂದಲು ಬೆಳ್ಳಗಾಗುವುದನ್ನು ತಡೆಗಟ್ಟಲು ಹೀಗೆ ಮಾಡಬೇಕು.

ವಿಧಾನ: 1 ಕಪ್‌ ಕೊಬ್ಬರಿ ಎಣ್ಣೆ, 1 ಮುಷ್ಟಿ ಕರಿಬೇವಿನ ಎಲೆಗಳನ್ನು ತೆಗೆದುಕೊಂಡು ಒಂದು ಪಾತ್ರೆಯಲ್ಲಿ 15 ನಿಮಿಷ ಬಿಸಿ ಮಾಡಬೇಕು. ಆರಿದ ಬಳಿಕ ನಿತ್ಯ ಈ ಎಣ್ಣೆ ಬಳಸಿ ಕೂದಲನ್ನು ಮಾಲೀಶು ಮಾಡಿ ಬಾಚಬೇಕು.

ನೆಲ್ಲಿಕಾಯಿ, ಮೆಂತ್ಯೆಯ ಹೇರ್‌ಪ್ಯಾಕ್‌
ನೆಲ್ಲಿಕಾಯಿಯು ಆ್ಯಂಟಿ ಆಕ್ಸಿಡೆಂಟ್‌ಗಳಿಂದ ವಿಟಮಿನ್‌ "ಸಿ' ಜೀವಧಾತುವಿನಿಂದ ಸಮೃದ್ಧವಾಗಿದೆ. ನೆಲ್ಲಿಕಾಯಿಯಲ್ಲಿ ವಯಸ್ಥಾಪಕ ಗುಣವಿದ್ದು ಇದು ಮುಪ್ಪಿನ ಲಕ್ಷಣಗಳನ್ನು ಮುಂದೂಡುತ್ತದೆ.

ಮೆಂತ್ಯೆಯಲ್ಲಿ ಕಬ್ಬಿಣ, ಲೈಸಿನ್‌, ಪೊಟ್ಯಾಶಿಯಂ ಅಧಿಕವಾಗಿದೆ ಹಾಗೂ ಕೆಲವು ಆಲ್ಕಲಾಯ್ಡಗಳು ಕೂದಲಿನ ಕಪ್ಪು ಬಣ್ಣಕ್ಕೆ ಹಾಗೂ ಬೆಳವಣಿಗೆಗೆ ಹಿತಕಾರಿ.

ವಿಧಾನ: ಒಣ ನೆಲ್ಲಿಕಾಯಿ 3, ಮೆಂತ್ಯೆ 5 ಚಮಚ, 1/2 ಕಪ್‌ ಕೊಬ್ಬರಿಎಣ್ಣೆ.

ಮೊದಲು ಮೆಂತ್ಯೆಯನ್ನು ನಯವಾಗಿ ಪುಡಿಮಾಡಬೇಕು. ಒಣ ನೆಲ್ಲಿಕಾಯಿಯನ್ನು ಬೀಜ ತೆಗೆದು ಕುಟ್ಟಿ ಪುಡಿ ಮಾಡಬೇಕು. ಮೊದಲು ಎಣ್ಣೆಯನ್ನು ಪಾತ್ರೆಯಲ್ಲಿ ಬಿಸಿಮಾಡಿ, ಅದಕ್ಕೆ ನೆಲ್ಲಿಕಾಯಿ ಪುಡಿ ಬೆರೆಸಿ ಕುದಿಸಿ, ತದನಂತರ ಮೆಂತ್ಯೆ ಪುಡಿ ಬೆರೆಸಿ ಎರಡು ನಿಮಿಷ ಕುದಿಸಬೇಕು. ತದನಂತರ ಆರಿದ ಬಳಿಕ ಸೋಸಿ ಈ ಎಣ್ಣೆಯನ್ನು ನಿತ್ಯ ರಾತ್ರಿ ದಪ್ಪಗೆ ಕೂದಲಿಗೆ ಹಚ್ಚಿ ಮಾಲೀಶು ಮಾಡಿ ಮರುದಿನ ಗಿಡಮೂಲಿಕೆಯ ಶ್ಯಾಂಪೂ ಅಥವಾ ಸೀಗೆಕಾಯಿ ಪುಡಿಯಿಂದ ತಲೆಸ್ನಾನ ಮಾಡಬೇಕು.
ನಿತ್ಯ ಖಾಲಿಹೊಟ್ಟೆಯಲ್ಲಿ ನೆಲ್ಲಿಕಾಯಿಯ ಜ್ಯೂಸ್‌ ಸೇವಿಸಿದರೆ ಪರಿಣಾಮಕಾರಿ.

ನಿಂಬೆರಸ ಹಾಗೂ ಬಾದಾಮಿ ತೈಲ
ಹಲವು ಆ್ಯಂಟಿಆಕ್ಸಿಡೆಂಟ್‌, ವಿಟಮಿನ್‌ "ಈ'ಯಿಂದ ಸಮೃದ್ಧವಾಗಿರುವ ಬಾದಾಮಿ ತೈಲ ಉತ್ತಮ ಕೂದಲಿನ ಟಾನಿಕ್‌. ಲಿಂಬೆಹಣ್ಣಿನ ರಸವೂ ವಿಟಮಿನ್‌ "ಬಿ', "ಸಿ' ಹಾಗೂ ಗಂಧಕದಿಂದ ಕೂಡಿದ್ದು ಕೂದಲಿನ ಬುಡವನ್ನು ಗಟ್ಟಿ ಮಾಡುತ್ತದೆ.

ವಿಧಾನ: 10 ಚಮಚ ಬಾದಾಮಿ ಎಣ್ಣೆ, 10 ಚಮಚ ನಿಂಬೆರಸ ಬೆರೆಸಿ ಚೆನ್ನಾಗಿ ಕಲಕಬೇಕು. ಇದನ್ನು ಕೂದಲಿಗೆ ಲೇಪಿಸಿ 10 ನಿಮಿಷ ಮಾಲೀಶು ಮಾಡಬೇಕು. ಅರ್ಧ ಗಂಟೆಯ ಬಳಿಕ ಕೂದಲು ತೊಳೆಯಬೇಕು.

ಬ್ಲ್ಯಾಕ್‌ ಟೀ ಮಸಾಜ್‌
ಬ್ಲ್ಯಾಕ್‌ ಟೀಯಲ್ಲಿ ಆ್ಯಂಟಿಆಕ್ಸಿಡೆಂಟ್‌, ಕೆಫೀನ್‌ಗಳಿದ್ದು ಕೂದಲಿಗೆ ಕಪ್ಪು ಬಣ್ಣ ಉಂಟುಮಾಡಲು ಹಾಗೂ ಹೊಳಪು ನೀಡಲು ಸಹಕಾರಿ.

ವಿಧಾನ: 10 ಚಮಚ ಬ್ಲ್ಯಾಕ್‌ಟೀ ಪುಡಿ ಹಾಗೂ ಉಪ್ಪು 1/4 ಚಮಚ ತೆಗೆದುಕೊಂಡು ಸ್ವಲ್ಪ ನೀರು ಬೆರೆಸಿ 2 ನಿಮಿಷ ಕುದಿಸಬೇಕು. ಆರಿದ ಬಳಿಕ ಸೋಸಿ, ಅದನ್ನು ಕೂದಲಿಗೆ ಲೇಪಿಸಬೇಕು. ಕೂದಲು ತೊಳೆಯಕೂಡದು. ಆರಿದ ಬಳಿಕ ಬಾಚಬೇಕು. ಹೀಗೆ ವಾರಕ್ಕೆ 2-3 ಸಾರಿ ಬಳಸಿದರೆ ಕೂದಲು ಕಪ್ಪಾಗುತ್ತದೆ. ವಾರಕ್ಕೊಮ್ಮೆ ತಲೆಸ್ನಾನ ಮಾಡಬೇಕು.

ಈರುಳ್ಳಿ ಮತ್ತು ನಿಂಬೆರಸದ ಹೇರ್‌ಪ್ಯಾಕ್‌
ವಯಸ್ಸಿಗೆ ಮೊದಲೇ ಕೂದಲು ಬಿಳಿಯಾಗಲು ಅದರಲ್ಲಿರುವ ಹೈಡ್ರೋಜನ್‌ ಪೆರಾಕ್ಸೆ„ಡ್‌ ಹಾಗೂ ಆ್ಯಂಟಿ ಆಕ್ಸಿಡೆಂಟ್‌ಗಳ ಕೊರತೆ ಕಾರಣ ಎಂದು ಸಂಶೋಧನೆಯಿಂದ ತಿಳಿದುಬಂದಿದೆ. ಈರುಳ್ಳಿಯ ರಸದಲ್ಲಿ ಆ್ಯಂಟಿ ಆಕ್ಸಿಡೆಂಟ್‌ ಕ್ಯಾಟಲೇಸ್‌ ಅಧಿಕವಾಗಿದೆ. ಜೊತೆಗೆ ಹೈಡ್ರೋಜನ್‌ ಪೆರಾಕ್ಸೆ„ಡ್‌ನ‌ ಅಂಶವನ್ನು ಇದು ನಿವಾರಣೆ ಮಾಡುತ್ತದೆ. ನಿಂಬೆರಸವೂ ವಿಟಮಿನ್‌ಗಳಿಂದ ಸಮೃದ್ಧವಾಗಿದ್ದು ಕೂದಲಿಗೆ ಹೊಳಪು ನೀಡುತ್ತದೆ.

ವಿಧಾನ: 10 ಚಮಚ ಈರುಳ್ಳಿ ರಸ ಹಾಗೂ 5 ಚಮಚ ನಿಂಬೆರಸ ಬೆರೆಸಿ ಕೂದಲಿಗೆ ಚೆನ್ನಾಗಿ ಲೇಪಿಸಬೇಕು. ಅರ್ಧ ಗಂಟೆಯ ಬಳಿಕ ಕೂದಲನ್ನು ತೊಳೆಯಬೇಕು. ಹೀಗೆ ವಾರಕ್ಕೆ 4-5 ಬಾರಿಯಂತೆ ಎರಡು ವಾರ ಲೇಪಿಸಿದರೆ ಪರಿಣಾಮಕಾರಿ.

ಹೀರೆಕಾಯಿ ತೈಲ
ಹೀರೆಕಾಯಿಯಲ್ಲಿ ಇರುವ ಕಿಣ್ವಗಳು ಕೂದಲಿನಲ್ಲಿ ಮೆಲಾನಿನ್‌ ಸ್ರಾವ ವರ್ಧಿಸಿ ಕೂದಲು ಬೆಳ್ಳಗಾಗುವುದನ್ನು ಪ್ರತಿಬಂಧಿಸುತ್ತದೆ.
ವಿಧಾನ: ಹೀರೆಕಾಯಿಯ ಸಣ್ಣ ತುಂಡುಗಳು 1 ಕಪ್‌ ತೆಗೆದುಕೊಂಡು, 1 ಕಪ್‌ ತೆಂಗಿನೆಣ್ಣೆಯಲ್ಲಿ ಹಾಕಿ 15 ನಿಮಿಷ ಸಣ್ಣ ಉರಿಯಲ್ಲಿ ಕುದಿಸಬೇಕು. ಆರಿದ ಬಳಿಕ ಸೋಸಿ ನಿತ್ಯ ಈ ಎಣ್ಣೆಯನ್ನು ತಲೆಯ ಕೂದಲಿಗೆ ಲೇಪಿಸಿ ಮಾಲೀಶು ಮಾಡಬೇಕು.ಇದರಿಂದ ಕೂದಲು ಬೆಳ್ಳಗಾಗುವುದನ್ನು ತಡೆಗಟ್ಟಬಹುದು.

ಡಾ| ಅನುರಾಧಾ ಕಾಮತ್‌

Trending videos

Back to Top