ದಯವಿಟ್ಟು ಗಮನಿಸಿ; ರವಿಯ ಸರ್ಟಿಫಿಕೇಟ್ ಕಥೆ

"ನಮ್ಮಂತಹ ಹೊಸಬರಿಗೆ ಇಲ್ಲಿ ಸೂಕ್ತ ಭರವಸೆ ಇಲ್ಲ, ಭದ್ರತೆಯೂ ಇಲ್ಲ...'
- ಹೀಗೆ ತುಂಬ ಬೇಸರದಿಂದಲೇ ಮಾತಿಗಿಳಿದರು ನಿರ್ಮಾಪಕ ಕಮ್ ನಟ ಕಾರ್ತಿಕ್ಚಂದ್ರ. ಅವರು ಹೇಳಿಕೊಂಡಿದ್ದು "ರವಿ ಹಿಸ್ಟರಿ' ಚಿತ್ರಕ್ಕಾದ ಸಮಸ್ಯೆ ಬಗ್ಗೆ. ""ರವಿ ಹಿಸ್ಟರಿ' ನೋಡಿದ ಸೆನ್ಸಾರ್ ಮಂಡಳಿ, ಸಾಕಷ್ಟು ತೊಂದರೆ ಕೊಟ್ಟಿತ್ತಲ್ಲದೆ, ನಮ್ಮನ್ನು ತುಂಬಾ ಕೇವಲವಾಗಿ ನಡೆಸಿಕೊಂಡಿತು' ಎಂಬುದು ಕಾರ್ತಿಕ್ ಚಂದ್ರ ಅವರ ಆರೋಪ.
ಅಷ್ಟಕ್ಕೂ ಸೆನ್ಸಾರ್ ಮಂಡಳಿಯಿಂದ ಅವರಿಗಾದ ಸಮಸ್ಯೆ ಏನು? ಈ ಪ್ರಶ್ನೆಗೆ ಉತ್ತರಿಸಿದ ಕಾರ್ತಿಕ್ ಚಂದ್ರ, "ಮೇ 2ರಂದು ಸೆನ್ಸಾರ್ ಮಂಡಳಿಯವರು ನಮ್ಮ ಚಿತ್ರ ನೋಡಿದರು. ನನ್ನ ಒಬ್ಬನನ್ನೇ ಒಳಗೆ ಕರೆಸಿ, ಸಾಂಗ್ ಕಟ್ ಮಾಡ್ಬೇಕು, ಆಮೇಲೆ ಎರಡು ಸೀನ್ ಕಟ್ ಮಾಡಬೇಕು , ನೀವು ಓಕೆ ಅಂದ್ರೆ "ಯು/ಎ' ಪ್ರಮಾಣ ಪತ್ರ ಕೊಡ್ತೀನಿ, ಇಲ್ಲಾ ಅಂದ್ರೆ, "ಎ' ಪತ್ರ ಕೊಡ್ತೀನಿ ಅಂದ್ರು. ನಿರ್ದೇಶಕರ ಬಳಿ ಚರ್ಚಿಸೋಕೂ ಬಿಡದೆ, ಒಂದೇ ಮಾತಲ್ಲಿ "ಯೆಸ್ ಅನ್ನಿ, ಇಲ್ಲವೇ ಇಲ್ಲ ಅನ್ನಿ' ಅಂದ್ರು. ಒಂದೂವರೆ ನಿಮಿಷದ ಹಾಡು ಕಟ್ ಮಾಡಲು ಹೇಗೆ ಸಾಧ್ಯ? ಅಂತ ಪ್ರಶ್ನಿಸಿದರೆ, "ನೀವು ಕಟ್ ಮಾಡೋದಾದ್ರೆ ಹೇಳಿ "ಯು/ಎ' ಸಿಗುತ್ತೆ, ಇಲ್ಲಾಂದ್ರೆ, "ಎ' ಸಿಗುತ್ತೆ' ಅಂತ ಹೇಳಿ ಹೊರಟರು. ಕೊನೆಗೆ ಶೋಕಾಸ್ ನೋಟಿಸ್ ಕೊಟ್ಟರು. ಅವರ ಕಚೇರಿಗೆ ಹೋದರೆ ನಮಗೆ ಬೆಲೆಯೇ ಇಲ್ಲ. ಅಲ್ಲೂ ತುಂಬ ಕೇವಲವಾಗಿ ನಡೆದುಕೊಂಡರು. "ಯು/ಎ' ಕೊಡಿ ಅಂತ ಮನವಿ ಇಟ್ಟರೂ, ಕೇಳಲಿಲ್ಲ. ಸರಿ, ನಾವು ರಿವೈಸಿಂಗ್ ಕಮಿಟಿಗೆ ಹೋಗ್ತಿàನಿ ಬಿಡಿ ಅಂದಾಗಲೂ, "ಹೋಗಿ ಅಲ್ಲೂ ನಾನೇ ಇರಿ¤àನಿ, ಅಲ್ಲೂ ಇದೇ ಆಗೋದು' ಎಂದರು. ದೆಹಲಿಗೆ ಹೋಗೋಣ ಅಂತ ತೀರ್ಮಾನಿಸಿ, ಎಫ್ಸಿಐಟಿಗೆ ಹೋದೆ. ಅಲ್ಲಿ ತಿಂಗಳುಗಟ್ಟಲೆ ಕಾದೆ. ಕೊನೆಗೆ ಅಲ್ಲಿ ಅಧಿಕಾರಿಯೊಬ್ಬರು ಚಿತ್ರ ನೋಡಿ, ಯಾವುದೇ ಕಟ್ ಹೇಳದೆ "ಯು/ಎ'ಕೊಟ್ಟರು. ಇಲ್ಲಿ ನಮಗೆ ಸರಿಯಾದ ಗೌರವ ಸಿಗಲಿಲ್ಲ. ನಮ್ಮಂತಹ ಹೊಸಬರಿಗೆ ತೊಂದರೆಯಾಗುತ್ತಿದ್ದರೂ ಯಾರು ಗಮನಿಸುತ್ತಿಲ್ಲ' ಎಂದು ತಮಗಾದ "ಹಿಸ್ಟರಿ' ಹೇಳುತ್ತಾ ಹೋದರು ಕಾರ್ತಿಕ್ ಚಂದ್ರ.
ಅಂದಹಾಗೆ, ಸೆನ್ಸಾರ್ ಕಟ್ ಮಾಡಿ ಅಂತ ಹೇಳಿದ ಚಿತ್ರದ ಆ ಹಾಡನ್ನು ತೋರಿಸಿದ ಬಳಿಕ ಟ್ರೇಲರ್ ಅನ್ನು ಬಿಡುಗಡೆ ಮಾಡಲಾಯಿತು. ನಿರ್ದೇಶಕ ಮಧುಚಂದ್ರ, ಚಿತ್ರವನ್ನು ಆಗಸ್ಟ್ನಲ್ಲಿ ಬಿಡುಗಡೆ ಮಾಡುವ ಯೋಚನೆ ಮಾಡಿದ್ದಾಗಿ ಹೇಳಿಕೊಂಡರು. ಎಲ್ಲಾ ಸರಿ, "ರವಿ ಹಿಸ್ಟರಿ' ಅಂದರೆ, ಡಿ.ಕೆ.ರವಿ ಅವರ ಹಿಸ್ಟರಿನಾ ಅಥವಾ ರವಿ ಬೆಳಗೆರೆ ಅವರ ಹಿಸ್ಟರಿನಾ, ರವಿಚಂದ್ರನ್ ಹಿಸ್ಟರಿನಾ? ಎಂದರೆ, "ಇದು ಯಾರ "ಹಿಸ್ಟರಿ' ಅಲ್ಲ, ಒಬ್ಬ ಸಾಮಾನ್ಯ ಹುಡುಗನ ಸಾಧನೆ ಹಿಂದಿರುವ ಇತಿಹಾಸ. ಅದೇನೆಂಬುದನ್ನು ಚಿತ್ರದಲ್ಲೇ ನೋಡಬೇಕು' ಎಂದರು ನಿರ್ದೇಶಕರು. ಪಲ್ಲವಿ ರಾಜ್ ಚಿತ್ರದ ನಾಯಕಿ ಅವರಿಗೆ ಇಲ್ಲಿ ಪೊಲೀಸ್ ಅಧಿಕಾರಿ ಪಾತ್ರ ಸಿಕ್ಕಿದೆಯಂತೆ. ಚಿತ್ರಕ್ಕೆ ಸೂರಜ್ ಸರ್ಜಾ ಮತ್ತು ವಿಜೇತ್ ಕೃಷ್ಣ ಸಂಗೀತವಿದೆ. ಅನಂತ್ ಅರಸ್ ಚಿತ್ರಕ್ಕೆ ಕ್ಯಾಮೆರಾ ಹಿಡಿದಿದ್ದಾರೆ. ಅಬ್ದುಲ್ ಕರೀಂ ಸಂಕಲನವಿದೆ.