CONNECT WITH US  

ಸ್ಮಾರ್ಟ್‌ ಸಿಟಿಯ ನೆರಳಿರಲಿ, ಐಡಿಯಲ್‌ ಸಿಟಿಯ ಬೆಳಕಿಗೆ 

ಆದರ್ಶ ಗ್ರಾಮದ ಪರಿಕಲ್ಪನೆಯನ್ನು ಬಿತ್ತಿದ ನಾವು ಆದರ್ಶ ನಗರದ ಕನಸನ್ನು ಕಾಣಲು ಏಕೆ ಪ್ರಯತ್ನಿಸಲಿಲ್ಲ ಎಂಬುದೇ ಸದ್ಯ ಆಲೋಚಿಸಬೇಕಾದ ಪ್ರಶ್ನೆ.

ನಮ್ಮ ಸರಕಾರಗಳು ಇಂದು ಸ್ಮಾರ್ಟ್‌ ಸಿಟಿಗಳ ಬಗ್ಗೆ ಮಾತನಾಡುತ್ತಿವೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರಕಾರ, ದೇಶದ ನೂರು ನಗರಗಳನ್ನು ಸ್ಮಾರ್ಟ್‌ ಆಗಿಸಲು ಹೊರಟಿದೆ. ಈಗಾಗಲೇ ಕೇಂದ್ರ ನಗರಾಭಿವೃದ್ಧಿ ಸಚಿವಾಲಯ ಈ ಯೋಜನೆಗೆ 90 ನಗರಗಳನ್ನು ಆಯ್ಕೆ ಮಾಡಿದೆ. ಯೋಜನೆಯ ವಿವಿಧ ಹಂತಗಳು ಈ ನಗರಗಳಲ್ಲಿ ಜಾರಿಯಾಗಬೇಕಿದೆ. ಅದರಲ್ಲಿ ರಾಜ್ಯದ ಮಂಗಳೂರು, ಬೆಂಗಳೂರು, ಬೆಳಗಾವಿ, ದಾವಣಗೆರೆ, ತುಮಕೂರು, ಶಿವಮೊಗ್ಗ, ಹುಬ್ಬಳ್ಳಿ, ಧಾರವಾಡಗಳು ಸೇರಿವೆ. ಯೋಜನೆಯ ಜಾರಿಗೆ ವಿಶೇಷ ಉದ್ದೇಶಿತ ವಾಹನ (ಎಸ್‌ಪಿವಿ) ಎಂದರೆ ಒಂದು ವಿಭಾಗವನ್ನು ರಚಿಸಲಾಗುತ್ತದೆ. ಆ ವಿಭಾಗದ ಅಧಿಕಾರಿಗಳಿಗೆ ಯೋಜನೆ ಜಾರಿಗೆ ಅನುಕೂಲವಾಗುವಂತೆ ವಿಶೇಷ ಅಧಿಕಾರಗಳನ್ನು ನೀಡಲಾಗುತ್ತದೆ. ವ್ಯವಸ್ಥೆಯ ಲೋಪದೋಷಗಳಿಂದ ಅಥವಾ ವ್ಯವಸ್ಥೆಯ ಪ್ರಸ್ತುತ ಸಂರಚನೆಯ ಕ್ರಮದಿಂದಾಗಲೀ ಯೋಜನೆ ಜಾರಿಯಲ್ಲಿ ಯಾವುದೇ ವಿಳಂಬ ಆಗಕೂಡದೆಂಬ ಉದ್ದೇಶ ಈ ಎಸ್‌ಪಿವಿ ಸಂರಚನೆಯ ಹಿಂದಿನದು. ಅಂದರೆ ಸರಕಾರಗಳಿಗೆ ಅಥವಾ ನಮ್ಮನ್ನಾಳುವವರಿಗೆ (ಜನ ಪ್ರತಿನಿಧಿಗಳಿಗೆ) ಒಂದು ಯೋಜನೆ ಯಾವ ಯಾವ ಕಾರಣಗಳಿಂದ ವಿಳಂಬವಾಗಬಹುದು ಎಂಬುದರ ಅರಿವಿದೆ ಎನ್ನುವುದೂ ಒಂದು ಧನಾತ್ಮಕ ಲಕ್ಷಣವಾಗಿಯೇ ಪರಿಗಣಿಸುವುದೊಳಿತು. 

ಈ ಸ್ಮಾರ್ಟ್‌ ಸಿಟಿಗಳ ಬಗ್ಗೆ ಯೋಚಿಸುತ್ತಾ ಹೊರಟರೆ ನಮಗೆ ಕಾಣುವುದು ಒಂದು ವಿಚಿತ್ರ ಜಗತ್ತು. ತಾಂತ್ರಿಕ ಪರಿಣತಿಯನ್ನು ಬಳಸಿಕೊಂಡು ನಮ್ಮ ಮಾನವ, ಭೌಗೋಳಿಕ ಹಾಗೂ ಭೌತಿಕ ಸಂಪನ್ಮೂಲಗಳನ್ನು ಅತ್ಯಂತ ವಿವೇಚನಾಯುಕ್ತ ಹಾಗೂ ಸಮರ್ಥವಾಗಿ ಬಳಸಿಕೊಂಡು ಅಭಿವೃದ್ಧಿಯನ್ನು ಸಾಧಿಸುವ ಪ್ರಯತ್ನ ಈ ಸ್ಮಾರ್ಟ್‌ ಸಿಟಿ ಎನ್ನಬಹುದು. ಅಷ್ಟಲ್ಲದೇ ಬೇರ್ಯಾವ ಸಮರ್ಥ ಕಾರಣಗಳು ಇದರ ಹಿಂದೆ ಕಾಣುತ್ತಿಲ್ಲ. ಯಾಕೆಂದರೆ ಸ್ಮಾರ್ಟ್‌ ಎನ್ನುವುದೇ ಇತ್ತೀಚಿನ ಸಂದರ್ಭದ ತಾಂತ್ರಿಕ ನೆಲೆಯ ಪರಿಭಾಷೆ ಎನ್ನಬಹುದು. ಒಂದಲ್ಲಾ ಒಂದು ರೀತಿಯಲ್ಲಿ ನಮ್ಮ ನಗರಗಳು ಸ್ಮಾರ್ಟ್‌ ಭಾಷೆಯನ್ನು ಕಲಿಯತೊಡಗಿವೆ. ಸ್ಮಾರ್ಟ್‌ ತಂತ್ರಜ್ಞಾನವನ್ನು ರೂಢಿಸಿಕೊಳ್ಳತೊಡಗಿವೆ. ಇದು ಈ ಹೊತ್ತಿನ ಮಾತು.

ಆದರ್ಶ ಗ್ರಾಮ
ಹಾಗಾದರೆ ನಾವು ಸುಮಾರು 85 ವರ್ಷಗಳ ಹಿಂದಕ್ಕೆ ಹೋಗೋಣ. ಆಗ ಗಾಂಧಿಯುಗ, ಮಹಾತ್ಮಾ ಗಾಂಧೀಜಿ ಸ್ವಾತಂತ್ರ್ಯ ಚಳವಳಿಯನ್ನು ಮುನ್ನಡೆಸುತ್ತಿದ್ದ ಕಾಲ. ಆ ಹೊತ್ತಿಗಾಗಲೇ ದೇಶದ ನಾಗರಿಕರಲ್ಲಿ ನಮ್ಮ ದೇಶ, ನಮ್ಮ ಬದುಕು ಎಂಬ ಪರಿಕಲ್ಪನೆಯನ್ನು ಬಿತ್ತಲಾಗಿತ್ತು. ಆ ನೆಲೆಯಲ್ಲಿ ಆಲೋಚಿಸುವ ಕ್ರಮವನ್ನೂ ಆರಂಭಿಸಲಾಗಿತ್ತು. ನಮ್ಮದೇ ಬದುಕು ಎಂಬ ವಿಸ್ತೃತ ಪರಿಕಲ್ಪನೆ ಹೇಗಿರಬೇಕೆಂಬ ಚರ್ಚೆಯೂ ನಡೆದಿತ್ತು. ಇಂಥ ಸರಿ ಹೊತ್ತಿನಲ್ಲಿ ಗಾಂಧೀಜಿ ತಮ್ಮ ಹರಿಜನ ಪತ್ರಿಕೆಯಲ್ಲಿ ಒಮ್ಮೆ ಬರೆದದ್ದು ಆದರ್ಶ ಗ್ರಾಮದ ಕುರಿತು. ಒಂದು ಊರು ಅಥವಾ ಒಂದು ಗ್ರಾಮ ಯಾವ ಮಾದರಿಯಲ್ಲಿ ಆದರ್ಶವಾಗಿರಬೇಕು? ಹೇಗಿದ್ದರೆ ಅದನ್ನು ನಾವು ಸ್ವಾಯತ್ತತೆಯುಳ್ಳ ಸುಸ್ಥಿರ ಗ್ರಾಮ/ಊರೆಂದು ಕರೆಯಬಹುದು. ಅಂಥದೊಂದು ಸಾಧ್ಯತೆಗೆ ಇರುವ ಲಕ್ಷಣಗಳು ಯಾವುವು ಎಂಬುದನ್ನು ಹೇಳಿದ್ದರು. ಈ ಮೂಲಕ ಒಂದು ಅಪೂರ್ವವಾದ ಕನಸನ್ನು ಇಡೀ ದೇಶದ ನಾಗರಿಕರ ಮನಸ್ಸಿಗೆ ಹರಿಸಿದ್ದರು. ನನಸಾಗಿಸುವ ಹೊಣೆಗಾರಿಕೆಯನ್ನು ಎಲ್ಲರ ಹೆಗಲಿಗೇರಿಸಿದ್ದರು. 

ಏನಿತ್ತು ಆ ಕನಸು?
ಅವರೇ ಪತ್ರಿಕೆಯಲ್ಲಿ ಬರೆದಿರುವ ಭಾಗದ ಸಾರ ಇದು. ಒಂದು ಆದರ್ಶ ಭಾರತೀಯ ಗ್ರಾಮವನ್ನು ಅತ್ಯುತ್ತಮ ನೈರ್ಮಲ್ಯ ವ§ವಸ್ಥೆಯೊಂದಿಗೆ ರೂಪಿಸಿರಬೇಕು. ಸಾಕಷ್ಟು ಬೆಳಕು ಮತ್ತು ಗಾಳಿಗೆ ಅವಕಾಶ ಇರುವಂತೆ ಮನೆಗಳನ್ನು (ನಿವಾಸ) ಹೊಂದಿರಬೇಕು. ಆಯಾ ಗ್ರಾಮದ ಐದು ಕಿ.ಮೀ ಸುತ್ತಳತೆಯಲ್ಲೇ ಲಭ್ಯವಿರುವ ಸಂಪನ್ಮೂಲಗಳನ್ನು ಕ್ರೋಢೀಕರಿಸಿ ಇಂಥ ಮನೆಗಳನ್ನು ಕಟ್ಟಿರಬೇಕು. ಪ್ರತಿ ಮನೆಗೂ ಸಂಬಂಧಪಟ್ಟವರು ತಮಗೆ ಬೇಕಾದಷ್ಟು ತರಕಾರಿ ಬೆಳೆದುಕೊಳ್ಳಲು, ದನವನ್ನು ಸಾಕಲು ಜಾಗವನ್ನು ಹೊಂದಿರಬೇಕು. ಗ್ರಾಮದ ರಸ್ತೆಗಳು ಧೂಳಿನಿಂದ ಮಕ್ತವಾಗಿರಬೇಕು. ಈ ಗ್ರಾಮಗಳಲ್ಲಿ ಅಲ್ಲಿನ ಜನರಿಗೆ ಬೇಕಾದಷ್ಟು ಬಾವಿಗಳು ಇರಬೇಕು ಹಾಗೂ ಎಲ್ಲರೂ ಬಳಸುವಂತಿರಬೇಕು. ಸಮುದಾಯಗಳಿಗೆ ಪೂಜಿಸಲು ಸ್ಥಳವಿರಬೇಕು, ಎಲ್ಲರೂ ಸೇರುವಂಥ ಸ್ಥಳ (ಸಮುದಾಯ ಭವನದಂಥವು)ವಿರಬೇಕು, ಎಲ್ಲರ ದನಗಳಿಗೆ ಮೇವನ್ನು ಒದಗಿಸುವಂಥ ಸಾರ್ವಜನಿಕ ಹುಲ್ಲುಗಾವಲು ಇರಬೇಕು, ಸಹಕಾರ ತತ್ವದ ಹಾಲಿನ ಡೈರಿ, ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲೆ ಇರಬೇಕು. ಈ ಶಾಲೆಗಳಲ್ಲಿ ಔದ್ಯೋಗಿಕ ನೆಲೆಯ ಶಿಕ್ಷಣವನ್ನು ನೀಡುವಂತಿರಬೇಕು. ಗ್ರಾಮದ ಎಲ್ಲ ವ್ಯಾಜ್ಯಗಳನ್ನು ನಿವಾರಿಸಲು ಪಂಚಾಯತ್‌ ಇರಬೇಕು. ಪ್ರತಿ ಗ್ರಾಮವೂ ತನ್ನ ಅಗತ್ಯದ ಬೇಳೆ-ಕಾಳು, ತರಕಾರಿ, ಹಣ್ಣುಗಳೊಂದಿಗೆ ಉಡಲು ಬೇಕಾಗುವ ಖಾದಿಯನ್ನೂ ಉತ್ಪಾದಿಸಿಕೊಳ್ಳಬೇಕು. ಇದೇ ಲೇಖನದಲ್ಲಿ ಗಾಂಧೀಜಿ ಆದರ್ಶ ಗ್ರಾಮದ ನಿರ್ವಹಣೆ ಕುರಿತು ಹೇಳಿದ್ದಾರೆ. ಹೇಗೆ ಜನರ ಪಾಲ್ಗೊಳ್ಳುವಿಕೆ ಒಂದು ಗ್ರಾಮದ ಜೀವಾಳ ಎಂಬುದನ್ನೂ ಅದರಲ್ಲಿ ಉಲ್ಲೇಖೀಸಿದ್ದಾರೆ. 

ಈಗ ಆದರ್ಶ ಗ್ರಾಮದ ಕನಸನ್ನು ಬಿಡಿಸುತ್ತಾ ಹೋಗೋಣ. ಎಷ್ಟು ಅದ್ಭುತವಾದ ಕನಸು. ಒಂದು ಸ್ವಾವಲಂಬಿ ಗ್ರಾಮದ ನಿರ್ಮಾಣ ಅಂದಷ್ಟೇ ಅಗತ್ಯವಾಗಿರಲಿಲ್ಲ. ಹಾಗೆ ಹೇಳುವುದಾದರೆ ಅಂದಿಗಿಂತ ಆ ಕನಸಿನ ಅಗತ್ಯ ಇಂದೇ ತುಸು ಹೆಚ್ಚಿದೆ. ಸ್ಮಾರ್ಟ್‌ ಸಿಟಿಯ ಕನಸನ್ನೂ ಇಂಥದ್ದೇ ಒಂದು ನೆಲೆಯಲ್ಲಿ ನಾವು ಕಾಣುತ್ತಿರುವುದು. 

ಸ್ವಾವಲಂಬಿಯಾಗಿಸಬೇಕೆಂಬ ಉದ್ದೇಶದಿಂದಲೇ ಕಾಣುತ್ತಿರುವಂಥದ್ದು. ಎರಡೂ ಕನಸುಗಳ ನಡುವೆ ಇರಬಹುದಾದ ಸಣ್ಣದೊಂದು ಭಿನ್ನತೆ ಎಂದರೆ, ಗಾಂಧಿಯ ಕನಸಿನಲ್ಲಿ ನಾಗರಿಕರ ಪಾಲ್ಗೊಳ್ಳುವಿಕೆಯಿಂದಲೇ ಸಾಧಿಸುವ ಹಂಬಲವಿತ್ತು. ಈಗಿನ ಸ್ಮಾರ್ಟ್‌ ಕನಸಿನಲ್ಲಿ ತಂತ್ರಜ್ಞಾನಕ್ಕೆ ಜೋತು ಬೀಳಲು ಹೊರಟಿದ್ದೇವೆ ಎಂದರೆ ತಪ್ಪಾಗಲಾರದು. 

ಆದರ್ಶ ನಗರವೆಂಬ ಕನಸು ಏಕಿಲ್ಲ?
ಈ ಪ್ರಶ್ನೆಯೇ ಹೆಚ್ಚು ನನ್ನನ್ನು ಯೋಚನೆಗೀಡು ಮಾಡಿದ್ದು. ಗಾಂಧಿಯ ಆದರ್ಶ ಗ್ರಾಮಗಳ ಕಲ್ಪನೆ ಕುರಿತು ದೇಶದಲ್ಲಿ ಸಾಕಷ್ಟು ವರ್ಷಗಳಿಂದ ಚರ್ಚೆ ನಡೆದಿದೆ. ಅದರ ಅನುಷ್ಠಾನದತ್ತ ಆಳಿದ ಸರಕಾರಗಳೆಲ್ಲವೂ ಏನಾದರೊಂದು ಪ್ರಯತ್ನ ನಡೆಸಿವೆ. ಅಂಧನೊಬ್ಬ ಆನೆಯನ್ನು ತನ್ನ ಸ್ಪರ್ಶ ಜ್ಞಾನದಿಂದ ಕಂಡು ವಿವರಿಸಿದ ಹಾಗೆಯೇ ಪ್ರತಿ ಸರಕಾರಗಳು ತಮ್ಮ ದೃಷ್ಟಿಗೆ ಎಟುಕಿದ್ದನ್ನೇ ಆದರ್ಶವೆಂದು ಬೀಗಿಕೊಂಡು ಜಾರಿಗೊಳಿಸಲು ಪ್ರಯತ್ನಿಸಿವೆ. ಈ ದಿಸೆಯಲ್ಲೇ ಗ್ರಾಮೀಣಾಭಿವೃದ್ಧಿಗೊಂದು ಇಲಾಖೆಗಳನ್ನು ಸೃಜಿಸಿರುವ ಪ್ರಯತ್ನ, ಮಾಜಿ ರಾಷ್ಟ್ರಪತಿ ದಿವಂಗತ ಡಾ. ಎ.ಪಿ.ಜೆ. ಅಬ್ದುಲ್‌ ಕಲಾಂ ಅವರ ಪುರ ಯೋಜನೆಯ ಕಲ್ಪನೆಗಳು ಇಂಥ ನೂರಾರು ಪರಿಕಲ್ಪನೆಗಳು ಗಾಂಧಿಯ ಆದರ್ಶ ಗ್ರಾಮದ ಸುತ್ತಮುತ್ತಲಿನಿಂದಲೇ ಎದ್ದಿರುವಂಥವು. ಇಂಥದ್ದೇ ಒಂದು ಆಲೋಚನಾ ಸರಣಿಯ ಪ್ರಭಾವ ಆದರ್ಶ ನಗರಗಳೆಂಬ ಪರಿಕಲ್ಪನೆಯನ್ನು ಏಕೆ ಸೃಜಿಸಲಿಲ್ಲ ಎಂಬುದೇ ಸೋಜಿಗದ ಸಂಗತಿ.

ಪಾಶ್ಚಾತ್ಯ ನೆಲೆಯಲ್ಲಿ ಆದರ್ಶ ನಗರಗಳ ಬಗೆಗೆ ಸಣ್ಣದೊಂದು ಯೋಚನಾ ಲಹರಿ ಹರಿದಿದೆ. ಆದರ್ಶ ರಾಜ್ಯ ಕಲ್ಪನೆಯ ಗ್ರೀಕ್‌ ರಾಜನೀತಿಜ್ಞ ಪ್ಲೇಟೋವಿನ "ರಿಪಬ್ಲಿಕ್‌' ಗ್ರಂಥದಲ್ಲಿ ಆದರ್ಶ ನಗರದ ಬಗ್ಗೆಯೂ ಪ್ರಸ್ರಾಪಿಸಲಾಗಿದೆ. ಇಲ್ಲಿ ಆದರ್ಶ ಎಂಬುದು ಅಲ್ಲಿರಬಹುದಾದ ನಾಗರಿಕರ ಗುಣ ಸ್ವಭಾವವನ್ನೇ ಆಧರಿಸಿಕೊಂಡಿದ್ದು, ನೈತಿಕ ಮತ್ತು ಆಧಾ¾ತ್ಯಿಕ ಗುಣಗಳ ಸಂಪನ್ನ ನಾಗರಿಕರಿಂದ ನಿರ್ಮಾಣವಾದ ನಗರ ಸಂರಚನೆಗಳುಳ್ಳ ವ್ಯವಸ್ಥೆ ಎನ್ನುವ ಅರ್ಥದಲ್ಲಿ ಹೇಳಲಾಗಿತ್ತು. ಇದು ಸ್ವಲ್ಪ ರೋಮನ್‌ ಪಟ್ಟಣ ಸಂರಚನೆಯ ಕಲ್ಪನೆಯನ್ನು ಹೋಲುತ್ತದೆ. ಎಲ್ಲರೂ ಒಳ್ಳೆಯವರು, ಎಲ್ಲರೂ ಆದರ್ಶ ಪ್ರಾಯರೆಂಬ ಆದರ್ಶವಾದ ಕಲ್ಪನೆಯಡಿ ಹುಟ್ಟಿಕೊಂಡದ್ದು. ವಾಸ್ತವದ ನೆಲೆಗೆ ತೀರಾ ಅಪರಿಚಿತ ಎನ್ನಬಹುದೇನೋ?

ಇದನ್ನು ಹೊರತುಪಡಿಸಿದರೆ ಆದರ್ಶ ನಗರವೆಂಬ ಚರ್ಚೆ ನಡೆದಿರುವುದು ನಗರಗಳ ವಾಸ್ತು ಸಂರಚನೆಯ ಕುರಿತಾಗಿ. ಅದರ ಒಟ್ಟೂ ಮೂಲ ವ್ಯವಸ್ಥೆಯ ಕುರಿತಾಗಿ ನಡೆದಿರುವ ಚರ್ಚೆ ತೀರಾ ಇತ್ತೀಚಿನದ್ದು. ಅತ್ಯುತ್ತಮ ವ್ಯವಸ್ಥಿತ ನಗರಗಳೆಂಬ ಪರಿಕಲ್ಪನೆಗಳಿಗೂ 19 ನೇ ಶತಮಾನದ ಕೈಗಾರೀಕರಣದ ಕಲ್ಪನೆಗೂ ಸಂಬಂಧಗಳಿವೆ. ಕಾರ್ಖಾನೆಗಳ ಕಾರ್ಮಿಕರಿಗೆ ಸೃಷ್ಟಿಸಲಾದ ಕಾಲನಿಗಳೇ ಕ್ರಮೇಣ ನಗರಗಳಾಗಿ ಮಾರ್ಪಟ್ಟಿದ್ದಕ್ಕೆ ಬಹಳಷ್ಟು ಉದಾಹರಣೆಗಳಿವೆ. ರಾಜ್ಯದ ಭದ್ರಾವತಿ ಅಂಥ ಉದಾಹರಣೆಗಳಲ್ಲಿ ಬಹಳ ಮುಖ್ಯವಾದುದು. 

ಅಮೆರಿಕ ಸೇರಿದಂತೆ ಪಾಶ್ಚಾತ್ಯ ದೇಶಗಳಲ್ಲಿನ ಕೈಗಾರಿಕಾ ನಗರಗಳಿಗೂ ಭದ್ರಾವತಿಗೂ ಸಣ್ಣ ವ್ಯತ್ಯಾಸವಿದೆ. ಅದೆಂದರೆ, ಭದ್ರಾವತಿ ಕೈಗಾರಿಕೆಗೆಂದೇ ಸೃಷ್ಟಿಸಿದ ನಗರವಲ್ಲ. ಮೊದಲಿದ್ದ ಊರು ಕಬ್ಬಿಣ ಕಾರ್ಖಾನೆ ಮತ್ತು ಕಾಗದ ಕಾರ್ಖಾನೆಗಳ ಕಾರಣದಿಂದ ಪ್ರಸಿದ್ಧ ನಗರವಾಗಿ ಮಾರ್ಪಟ್ಟಿತು. ಆದರೆ ಅಮೆರಿಕದಲ್ಲಿ ಕೈಗಾರಿಕೆಗೆಂದೇ ಒಂದು ನಗರ ಸೃಷ್ಟಿಯಾಗಿರುವ ಉದಾಹರಣೆಗಳೂ ಇವೆ. ಹೀಗೆ ನೋಡುವಾಗ ಆದರ್ಶ ಗ್ರಾಮದ ಕಲ್ಪನೆ ಹೆಚ್ಚು ಸುಸ್ಪಷ್ಟವೆನಿಸುತ್ತದೆ. ಹಾಗಾದರೆ ದೊಡ್ಡ ಬಲೆಯನ್ನು ಇಟ್ಟುಕೊಂಡೂ ಸಣ್ಣ ಮೀನೊಂದನ್ನು ಹಿಡಿಯಲಾರದೇ ಹೋದೇವೆ ಎಂಬುದೇ ಸದ್ಯದ ಪ್ರಶ್ನೆ.

Trending videos

Back to Top