CONNECT WITH US  
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಇಂದಿನ ಮಕ್ಕಳೇ ನಾಳಿನ ಕಾರಕೂನರು

ಮುಂದೇನು? ಸೇವಕನಾ ಮಾಡೋ ತಂದೆ...
ಹತ್ತನೇ ತರಗತಿಯ ಫ‌ಲಿತಾಂಶ ಬಂದಿದೆ. ಪಿಯುಸಿ ಫ‌ಲಿತಾಂಶವೂ ಬರುತ್ತೆ. ಅಧಿಕ ಅಂಕ ಪಡೆದ ಮಕ್ಕಳ ಖುಷಿ ಅವರ ಹೆತ್ತವರ ಸಂತಸ ನೋಡಿದರೆ ಮನಸು ತುಂಬುತ್ತದೆ. ಇದರೊಂದಿಗೆ ಹಿಂದುಳಿದ ಸ್ಥಿತಿಗತಿಗಳಿಂದ ಬಂದೂ ಸಾಧನೆ ಮಾಡಿದ ಮಕ್ಕಳ ಬಗ್ಗೆಯೂ ಮಾಧ್ಯಮಗಳು ವಿವರ ನೀಡುತ್ತಿರುವುದು ಸಂತೋಷದ ವಿಷಯ. ಈ ಎಲ್ಲಾ ಸಂಭ್ರಮ, ಅಲ್ಲಿ ಇಲ್ಲಿ ವಿಷಾದಗಳ ಮಧ್ಯೆಯೂ ಗಮನಿಸಬೇಕಾದ್ದು ಈ ಮಕ್ಕಳ ಭವಿಷ್ಯ ಏನು ಎಂಬ ಬಗ್ಗೆ.

 ತಾನು ಏನು ಓದಬೇಕು? ಓದಿ ಏನಾಗಬೇಕು ಎಂಬ ಬಗ್ಗೆ ಮಕ್ಕಳ ಮತ್ತು ಹೆತ್ತವರ ಆಯ್ಕೆ ಬಲು ಸರಳ ಎಂಬಂತಿದೆ. ಇಂಜಿನಿಯರಿಂಗ್‌, ಮೆಡಿಕಲ್‌, ಐಎಎಸ್‌ ಹೀಗೆ. ಇವೆಲ್ಲಾ ಶಿಕ್ಷಣದ ಆದ್ಯಂತ ಗುರಿ ಎಂಬಂತೆ ಈ ಮಕ್ಕಳೂ ಹೆತ್ತವರೂ ಹೇಳುತ್ತಿದ್ದಾರೆ. 

 ಮೊನ್ನೆ ಗೆಳೆಯರೊಬ್ಬರು ಹೇಳಿದ ಘಟನೆ, ಅವರ ಮಿತ್ರ ಒಬ್ಬ ಗ್ಯಾರೇಜ್‌ ನಡೆಸುತ್ತಿದ್ದಾನೆ. ಕೈತುಂಬಾ ಕೆಲಸ; ಕಾಸೂ ಕೂಡಾ. ಅವನ ಮಗ ಬಿಕಾಂ ಮಾಡಿ ಮುಗಿಸುವ ಹಂತದಲ್ಲಿದ್ದಾನೆ. ""ನನ್ನ ಮಗನಿಗೆ ಎಲ್ಲಾದರೂ ಜಾಬ್‌ ಕೊಡಿÕ ಸಾರ್‌...'' ಎಂದು ನನ್ನ ಗೆಳೆಯನಲ್ಲಿ ವಿನಂತಿಸಿದನಂತೆ. ""ಅಲ್ಲಾ ಮಾರಾಯಾ, ನೀನೇ ನಾಕು ಜನಕ್ಕೆ ಕೆಲಸ ಕೊಟ್ಟಿದೀಯಾ, ನಿನ್ನ ಮಗನಿಗೆ ಊಳಿಗ ಮಾಡೋಕೆ ಕಳಿಸ್ತೀಯಲ್ಲಾ...?'' ಅಂದರೆ ""ಅವನಿಗೆ ಈ ಕೆಲಸ ಬರೋಲ್ಲಾ ಸಾರ್‌; ಎಲ್ರೂ ಜಾಬ್‌ ಮಾಡು ಅಂತಿದಾರೆ...'' ಅಂದನಂತೆ.

 ಕಾರಕೂನಗಿರಿ ಮಾಡೋದು; ಅದರಲ್ಲೂ ವೈಭವೀಕರಿಸಿದ ಕಾರಕೂನಗಿರಿ ಮಾಡುವುದು ಹೆಮ್ಮೆಯ ವಿಷಯವಾಗಿದೆ. 
ಆಧುನಿಕ ಪಳಗಿಸುವಿಕೆ ಹೇಗಿರುತ್ತದೆಂದರೆ, ಒಂದು ಮೂಸೆಗೆ ಬೇಕಾದ ರೀತಿಯಲ್ಲಿ ತಾನು ತಯಾರಾಗುವುದೇ ಹೆಗ್ಗಳಿಕೆ ಎಂಬ ಮನೋಭಾವವನ್ನು ಅದು ಬೆಳೆಸುತ್ತದೆ. ಇದನ್ನೇ "ಸ್ಕೂಲಿಂಗ್‌' ಎಂದು ಖ್ಯಾತ ಚಿಂತಕ ಇವಾನ್‌ ಇಲ್ಲಿಚ್‌ ಕರೆಯುವುದು.

ಉದಾ: ಸಿಲೆಬಸ್‌ನಲ್ಲಿ ಇದ್ದಿದ್ದನ್ನು ಮುಕ್ತವಾಗಿ ಕಲಿಯುವ ಬದಲು ಪ್ರಶ್ನೆ ಪತ್ರಿಕೆಯ ಪ್ಯಾಟರ್ನ್ಗೆ ತಕ್ಕ ಹಾಗೆ ತಯಾರಾಗುವಲ್ಲಿಂದ ಇದು ಶುರುವಾಗುತ್ತದೆ. ಕಲಿಯುವಿಕೆಯನ್ನು ಇದು ಸಂಕುಚಿತಗೊಳಿಸುತ್ತಾ ಹೋಗುತ್ತದೆ. ಅರ್ಜುನ ಹಕ್ಕಿಯ ಕಣ್ಣಿಗೆ ಗುರಿಯಿಟ್ಟ ಹಾಗೆ! ಬದುಕಿನ ದೊಡ್ಡದನ್ನು ಗಮನಿಸಲು ಇದು ಬಿಡುವುದಿಲ್ಲ. ಇದು ಹೀಗೇ ಮುಂದುವರಿದು, ಪಿಯುಸಿ ಆದ ಬಳಿಕ ಇಂಜಿನಿಯರಿಂಗ್‌/ಮೆಡಿಕಲ್‌ ಅದಾದ ಬಳಿಕ ಅದರಲ್ಲೇ ಇನ್ನೂ ಸಂಕುಚಿತವಾದ ಸ್ಪೆಷಲೈಸೇಷನ್‌, ಅದಾದ ಮೇಲೆ, ಅಂಥಾ ಸ್ಪೆಷಲೈಸೇಶನ್‌ಗೆ ತಕ್ಕುದಾದ ವಿಶೇಷ ಕಂಪೆನಿಗಳ ಹುದ್ದೆ - ಹೀಗೆ ಮುಂದುವರಿಯುತ್ತದೆ. ಮಸೂರದ ಮೂಲಕ ಹಾಯಿಸಿ ಬೆಳಕನ್ನು ಚೂಪುಗೊಳಿಸಿದ ಹಾಗೆ ಮಿದುಳನ್ನೂ ನಿರ್ದಿಷ್ಟ ಉಪಯೋಗಕ್ಕೆ ಮಾತ್ರಾ ಬೇಕಾದಂಥ ರೀತಿಯಲ್ಲಿ ಬೆಳೆಸಲಾಗುತ್ತದೆ. 

ನಮ್ಮ ಸರ್ಕಾರವೂ ಖಾಸಗೀ ಬಂಡವಾಳ, ಖಾಸಗೀಕರಣವನ್ನು ಪ್ರೋತ್ಸಾಹಿಸುತ್ತಿದೆಯಷ್ಟೇ. ಆದ್ದರಿಂದ  ಸಮಗ್ರ ವ್ಯಕ್ತಿತ್ವದ ವಿಕಾಸವನ್ನು ನೀಡುವ ಶಿಕ್ಷಣವನ್ನು ಸರ್ಕಾರದಿಂದಲೂ ನಿರೀಕ್ಷಿಸುವುದೂ ಸಾಧ್ಯವಿಲ್ಲ. ವೃತ್ತಿ ಅಗತ್ಯಕ್ಕೆ ತಕ್ಕಂಥ ಕೋರ್ಸ್‌ಗಳನ್ನು ರೂಪಿಸುವಂತೆ ಸರ್ಕಾರವೇ ಶಿಕ್ಷಣ ಸಂಸ್ಥೆಗಳಿಗೆ ಹೇಳುತ್ತಿದೆ. ವೃತ್ತಿಯನ್ನು ನಿರ್ಧರಿಸುವುದು ಕಂಪೆನಿಗಳು! ಇವು ವೃತ್ತಿಗೆ ಬೇಕಾದ ಕೌಶಲ್ಯ ಹೊಂದಿರುವುದನ್ನಷ್ಟೇ ಅಪೇಕ್ಷಿಸುತ್ತವೆ ಹೊರತು ಸ್ವತಂತ್ರ ಮನೋಭಾವದ ವ್ಯಕ್ತಿಗಳನ್ನಲ್ಲ. ವೃತ್ತಿ ಆಧಾರಿತ, ಉದ್ಯೋಗದಾತನ ಅಪೇಕ್ಷೆಗೆ ತಕ್ಕಂಥ‌ ತರಬೇತಿ ಪಡೆವ ಶಿಕ್ಷಣಕ್ಕೆ ಸದ್ಯದ ಉನ್ನತ ಶಿಕ್ಷಣವೂ ಒತ್ತು ನೀಡುತ್ತಿದೆ.  

ಈ ಚಲನೆ ಭಾರತಕ್ಕೆ ಗಂಡಾಂತರಕಾರಿ!
ಅಧ್ಯಯನ, ಸಂಶೋಧನೆಗೆ ಒತ್ತು ನೀಡುವ ಶಿಕ್ಷಣಕ್ಕೆ ಸರ್ಕಾರವೂ ಒತ್ತಾಸೆ ನೀಡುತ್ತಿಲ್ಲ. ಹೆತ್ತವರಿಗೂ ಇದು ಮುಖ್ಯ ಅನ್ನಿಸುತ್ತಿಲ್ಲ! ಸಾಧನೆ ಮಾಡಿರುವ ಬೇರೆ ದೇಶಗಳು, ಶಿಕ್ಷಣದಲ್ಲಿ ಮುಕ್ತ ಅಧ್ಯಯನಕ್ಕೆ ಸಂಶೋಧನೆಗೆ ಒತ್ತಾಸೆ ಕೊಟ್ಟ ಕಾರಣವೇ ಈ ಸಾಧನೆ ಸಾಧ್ಯವಾಗಿದೆ. ಓದುವಾಗ ತನ್ನ ಕ್ಷೇತ್ರದ ವಿಸ್ತೃತ ಜ್ಞಾನಾರ್ಜನೆ, ಬಳಿಕ ಆಸಕ್ತಿಯ ವಿಷಯದಲ್ಲಿ ಸಂಶೋಧನೆ ಇವೆಲ್ಲಾ ಸರ್ಕಾರ ಮತ್ತು ಶಿಕ್ಷಣ ವ್ಯವಸ್ಥೆ ಒತ್ತು ನೀಡಬೇಕಾಗಿರುವ ಸಂಗತಿ. ಅದಿಲ್ಲದಿದ್ದರೆ ಸೀಮಿತ ಕೌಶಲ್ಯದ ನಡೆದಾಡುವ ಯಂತ್ರಗಳನ್ನು ತಯಾರು ಮಾಡುವುದಾಗುತ್ತದೆ ಅಷ್ಟೇ. ಇದರ ದೂರಗಾಮಿ ಪರಿಣಾಮದ ಬಗ್ಗೆ ಡಾ. ಸಿ.ಎನ್‌.ಆರ್‌. ರಾವ್‌ ಅವರು ಪದೇ ಪದೇ ಎಚ್ಚರಿಸಿದ್ದಾರೆ. ಕಳೆದ ದಶಕವೊಂದರಲ್ಲಿ ನಮ್ಮ ಬುದ್ಧಿವಂತ ಹುಡುಗರೆಲ್ಲಾ ಸೇವಾ ಕ್ಷೇತ್ರದಲ್ಲಿ ಕಂಪ್ಯೂಟರ್‌ ಪರದೆ ಮೇಲೆ ಇಲಿ ಆಡಿಸುತ್ತಾ ಗ್ರಾಹಕ ಸೇವೆ ಮಾಡುತ್ತಿದ್ದಾರೆ.
ಸಂಶೋಧನೆ, ನಿಯಂತ್ರಣ ವಿದೇಶೀಯರದ್ದು. ಗುಮಾಸ್ತಗಿರಿ ನಮ್ಮ ಹುಡುಗರದ್ದು.

ಇದರ ಇನ್ನೊಂದು ಅಪಾಯ ಗಮನಿಸಬೇಕು
ನಾನು ಗಮನಿಸಿದ ಹಾಗೆ ಈ ರೀತಿಯ ವೃತ್ತಿಪರ ಶಿಕ್ಷಣದಲ್ಲಿ ಮುಂದಕ್ಕೆ ಹೋಗುವ ಮಕ್ಕಳ ಸಾಮಾಜಿಕ ಜ್ಞಾನ, ಚರಿತ್ರೆಯ ಅರಿವು, ಸರ್ಕಾರ, ಆಡಳಿತ ಪರಿಸರ ಸಂಬಂಧೀ ಅರಿವು ತೀರಾ ಎಳಸು ಮಟ್ಟದಲ್ಲಿರುತ್ತದೆ. ಹದಿಹರೆಯದ ಅರಿವಿಗಿಂತ ಮುಂದಕ್ಕೆ ಹೋಗುವುದೇ ಇಲ್ಲ. ಎಲ್ಲವನ್ನೂ ಸರಳೀಕೃತ ಭಾವಾವೇಶದ ನೆಲೆಯಲ್ಲಿ ನೋಡುವುದು; ಯಾರಾದರೂ ಅರೆಬರೆ ವಿಷಯಗಳನ್ನು ಭಾವುಕವಾಗಿ ಹೇಳಿದರೆ ತಾರ್ಕಿಕವಾಗಿ ಯೋಚಿಸದೇ ಜೈ ಅನ್ನುವುದು- ಹೀಗೆ ಇವರ ಪ್ರತಿಕ್ರಿಯೆಗಳು ಇರುತ್ತವೆ. ಇದಕ್ಕೆ ಕಾರಣ ಸ್ಪಷ್ಟವಾಗಿದೆ. ಹೆಚ್ಚಿನ ಮಕ್ಕಳು ಹೈಸ್ಕೂಲ್‌ ಬಳಿಕ ಚರಿತ್ರೆ, ಸಮಾಜಶಾಸ್ತ್ರ , ಭೂಗೋಳ, ಸಾಹಿತ್ಯ ಓದುವುದೇ ಇಲ್ಲ.  ಅವರ ಅರಿವು ಅಲ್ಲಿಗೇ ನಿಂತು ವಿಚಿತ್ರ ಬೌದ್ಧಿಕ ವೈಕಲ್ಯ ಒದಗಿರುತ್ತದೆ. ಅದರ ಪರಿಣಾಮವೇ ಸಾಮಾಜಿಕ ಭಾಗವಹಿಸುವಿಕೆಯಲ್ಲಿ ಹಿಂಜರಿಕೆ; ಬರವಣಿಗೆಯ ಹಿಂಜರಿಕೆ ಇತ್ಯಾದಿ ಆವರಿಸುತ್ತದೆ. 

ತೀರಾ ಸಿಲಬಸ್‌ನಲ್ಲಿರುವುದನ್ನಷ್ಟೇ ಓದುವ ಒತ್ತಡ ಹುಟ್ಟು ಹಾಕಿ ಹೆತ್ತವರೂ ಇದರಿಂದಾಚೆಗೆ ನೋಡದೇ ಇರುವ ಕಾರಣ ಈ ಮಕ್ಕಳಲ್ಲಿ ಸಾಮಾಜಿಕ ಅರಿವು, ಸಾಮಾಜಿಕ ಕೌಶಲ್ಯ ಬೆಳೆಯುವುದೇ ಇಲ್ಲ. ಹೊಸ ತಲೆಮಾರಿನ ಬಹುತೇಕ ಹೆತ್ತವರೂ ತೆಳುವಾದ ಓದು, ಹವ್ಯಾಸಗಳನ್ನು ಹೊಂದಿದ್ದು ಮಕ್ಕಳಲ್ಲೂ  ಅದು ಬೆಳೆಯಲು ಬೇಕಾದ ಒತ್ತಾಸೆ ನೀಡುವ ಮನಃಸ್ಥಿತಿ ಹೊಂದಿರುವುದಿಲ್ಲ. ನಗರಗಳ ಬಹುತೇಕ  ಮಕ್ಕಳು ನಗರೀಕರಣದ ವಿಚಿತ್ರ ಒತ್ತಡಗಳಿಂದಾಗಿ ರಾಗಿಯನ್ನೂ ನೋಡದೆ ದಿನ ಕಳೆದಿವೆ! ಇನ್ನು  ನಮ್ಮ ಸಾಂಸ್ಕೃತಿಕ ಹಂದರದಲ್ಲಂತೂ ಭಾಗವಹಿಸುವ ಬಗೆ ಕಾಣದೇ ಪೂರಾ ಅನ್ಯತೆ ಆವರಿಸಿ ದೈನೇಸಿ ಪೆದ್ದರ ಹಾಗಿರುತ್ತಾರೆ.

 ಗ್ರಾಹಕ ಸಂಸ್ಕೃತಿ ಮಾಧ್ಯಮಗಳ ಮೂಲಕ ಹರಿಬಿಡುವ ಎಲ್ಲವನ್ನೂ ಕೊಳ್ಳುವ; ಅನುಭವಿಸುವ ಮಟ್ಟಿಗೆ ಮಾತ್ರಾ ಇವರ ಇಂದ್ರಿಯಗಳು ಕೆಲಸ ಮಾಡುತ್ತವೆ. ಒಂದು ರೇಶನ್‌ ಕಾರ್ಡ್‌ ಮಾಡಿಸುವ ರೇಜಿಗೆಯನ್ನೂ ಸಹಿಸಲಾರದ ಸುಕುಮಾರ ಸ್ವಭಾವವನ್ನು ಇದು ಬೆಳೆಸುತ್ತದೆ. 

""ಹೌದು, ಆದರೆ, ಇದರ ವಿರುದ್ಧ ಈಜುವುದು ಕಷ್ಟ. ಒಂಟಿಯಾಗಿ ಹೋರಾಡುವ; ಪರಿಹರಿಸುವ ಸಮಸ್ಯೆ ಇದಲ್ಲ'' ಎಂದು ಹೆತ್ತವರೂ ಕೈಚೆಲ್ಲುತ್ತಾರೆ. ಆದರೂ ಹೆತ್ತವರು ನೆನಪಿಡಬೇಕಾದ್ದು, ಈ ಶಿಕ್ಷಣ ತಮ್ಮ ಕಂದಮ್ಮಗಳನ್ನು ಪೌಲಿóà ಕೋಳಿಗಳ ಹಾಗೆ ಮಾಡಿಬಿಡುತ್ತೆ ಎಂಬ ಸತ್ಯವನ್ನು.

ಏನಿಲ್ಲವೆಂದರೂ ಮಕ್ಕಳಿಗೆ, ""ನೋಡ್ರಪ್ಪಾ, ವಿಜಾnನ ಓದಬೇಕು, ಸಮಾಜ ಶಾಸ್ತ್ರ ಓದಬೇಕು, ಚರಿತ್ರೆ ಅರಿಯಬೇಕು, ಸಾಹಿತ್ಯ ಓದಬೇಕು. ಸಂಗೀತ ಆಟೋಟಗಳ ಮಜಾ ಅನುಭವಿಸಬೇಕು'' ಎಂದು ಹೇಳುವುದಲ್ಲದೇ ಅದಕ್ಕಿಷ್ಟು ಸಮಯ ಮೀಸಲಾಗಿಡುವುದನ್ನು ಮಾಡಬೇಕು. ಇಲ್ಲವಾದರೆ ಮಕ್ಕಳು ಬೆಳೆದು ದೊಡ್ಡವರಾದಾಗ, ಅವರ ಬದುಕಿನಲ್ಲೂ ತೃಪ್ತಿ ಇರುವುದಿಲ್ಲ; ಹೆತ್ತವರಿಗೂ ಸುಖ ಇರುವುದಿಲ್ಲ.

ಅಂದ ಹಾಗೆ ಐಎಎಸ್‌ ಎಂಬುದು ಸ್ಪರ್ಧಾತ್ಮಕ ಪರೀಕ್ಷೆ; ಅದೊಂದು ಡಿಗ್ರಿ ಅಲ್ಲ! ಅದನ್ನು ಮಾಡುವವರು, ""ತಾನು ಜನಸೇವೆ ಮಾಡಲು ಐಎಎಸ್‌ ಮಾಡುತ್ತಿದ್ದೇನೆ'' ಎನ್ನುತ್ತಾರೆ. ಅವರ ಸೇವೆಯ ಮೊದಲ ಕೆಲವು ವರ್ಷ ಅವರ ಧೀಮಂತ ಕಾರ್ಯಗಳ ಬಗ್ಗೆ ನಾವು ಓದುತ್ತೇವೆ. ಇಪ್ಪತ್ತು ವರ್ಷ ಕಳೆದ ಮೇಲೆ ಬಹುತೇಕ ಮಂದಿ ಭ್ರಷ್ಟರೂ ಅಧಿಕಾರ ಮೋಹಿಗಳೂ, ಅಧಿಕಾರಸ್ಥರಿಗೆ ಬೇಕಾದ್ದನ್ನು ಮಾಡುವ ನಾಜೂಕುತನವನ್ನೂ ಕಲಿತ ಹಿರಿಯರಾಗುತ್ತಾರೆ. ತಾರುಣ್ಯದ ಆದರ್ಶವನ್ನು ಬಿಟ್ಟು "ಪ್ರಾಕ್ಟಿಕಲ್‌' ಆಗುತ್ತಾರೆ. ಲಕ್ಷಾಂತರ ರೂಪಾಯಿ ವೆಚ್ಚ ಮಾಡಿ ಮೆಡಿಕಲ್‌ ಓದುವ ಮಕ್ಕಳಲ್ಲೂ  ಅಷ್ಟೇ; ನಮ್ಮ ಹಳ್ಳಿಗಾಡಲ್ಲಿ ಸೇವೆ ಸಲ್ಲಿಸಬೇಕೆಂಬ ಮನೋಭಾವವೇ ಮಾಯವಾಗಿರುತ್ತದೆ. 

 ಆಧುನಿಕ ಸಂವಹನ ಶಾಸ್ತ್ರದ ಪಿತಾಮಹ ಮಾರ್ಶಲ್‌ ಮೆಕ್‌ ಲುಹಾನ್‌ ಇದನ್ನು  ಮಾಧ್ಯಮವೇ ಸಂದೇಶ (Medium is Message) ಎನ್ನುತ್ತಾನೆ. ನಿಮ್ಮ ಓದಿನ ಚೌಕಟ್ಟೇನಿದೆ ಅದೇ ಒಂದು ಮನೋಭಾವವನ್ನೂ ಬೆಳೆಸುತ್ತದೆ. ಆಧುನಿಕ ಚೌಕಟ್ಟು ಪ್ರಶ್ನಿಸದ ಯಾಂತ್ರಿಕ ಕೌಶಲ್ಯದ ಓಡಾಡುವ ಮನುಷ್ಯ ರೂಪೀ ಯಂತ್ರಗಳನ್ನು ಬಯಸುತ್ತದೆ. ಇದನ್ನು ತಯಾರು ಮಾಡುವ ಮೂಸೆಯ ಆ ದೊಡ್ಡ ಯಂತ್ರಕ್ಕೆ ಮಕ್ಕಳನ್ನು ದೂಡಲು ಹೆತ್ತವರಿಗೆ ಖುಷಿಯೋ ಖುಷಿ!

ಕೆ. ಪಿ. ಸುರೇಶ

Back to Top