CONNECT WITH US  

ರೇಣುಕಾ ಪರ್‌ಪಂಚ

ಭಟ್ರ "ಮುಗುಳುನಗೆ'ಯ ಮಲ್ಲಿಗೆ

ರೇಣುಕಾ ಭಟ್‌ ಅವರ ಹೆಸರನ್ನು ಕೇಳಿದವರು ಕಡಿಮೆ. ಅವರು ಕನ್ನಡದ ಸ್ಟಾರ್‌ ನಿರ್ದೇಶಕ ಯೋಗರಾಜ್‌ ಭಟ್‌ರ ಪತ್ನಿ. ಚಿತ್ರ ನಿರ್ದೇಶನ, ಸಾಹಿತ್ಯ ರಚನೆ, ರಿಯಾಲಿಟಿ ಶೋ ಅಂತೆಲ್ಲಾ ಭಟ್ಟರು ಸದಾ ಬ್ಯುಸಿ ಇರಲು ಅವರ ಹಿಂದಿನ ಈ ಶಕ್ತಿಯ ಸಹಕಾರ ದೊಡ್ಡದು. ರೇಣುಕಾ, ಮನೆ ಜವಾಬ್ದಾರಿ, ಮಕ್ಕಳ ಜವಾಬ್ದಾರಿಗಳನ್ನು ನಿರ್ವಹಿಸಿತ್ತಾ ಭಟ್ಟರ ಜೀವನವನ್ನು ಸರಾಗಗೊಳಿಸುತ್ತಿರುವರು.

ಗ್ಲೋಬಸ್‌ ಟೆಕ್ನಾಲಜಿ ಎಂಬ ಸಂಸ್ಥೆಯಲ್ಲಿ ಉದ್ಯೋಗಿಯಾಗಿದ್ದ ಇವರು, ಈಗ ಹೋಮ್‌ ಮೇಕರ್‌. ಪುನರ್ವಸು ಮತ್ತು ಪಂಚಮಿ ಎಂಬ ಇಬ್ಬರು ಹೆಣ್ಣು ಮಕ್ಕಳ ತಾಯಿ. ನಮ್ಮಿಬ್ಬರದ್ದೂ ತದ್ವಿರುದ್ಧ ವ್ಯಕ್ತಿತ್ವ ಎನ್ನುವ ಇವರು, ಯೋಗರಾಜ್‌ ತುಂಬಾ ಸರಳ ವ್ಯಕ್ತಿ ಎಂದು ಮೆಚ್ಚುಗೆಯನ್ನೂ ಸೂಚಿಸುತ್ತಾರೆ. ಭಟ್ಟರ ಬಗ್ಗೆ ಅವರು ಏನಂತಾರೆ ಕೇಳಿ...

* ಯೋಗರಾಜ್‌ ಭಟ್‌ ಮುಂದೊಂದು ದಿನ ಖ್ಯಾತ ನಿರ್ದೇಶಕರಾಗುತ್ತಾರೆ ಅಂತ ನೀವು ಊಹಿಸಿದ್ದಿರಾ?
ನಾವು ಮದುವೆಯಾಗುವಾಗ ಯೋಗರಾಜ್‌ "ಸಾಧನೆ' ಧಾರಾವಾಹಿ ಮುಗಿಸಿ "ಎಲ್ಲೋ ಜೋಗಪ್ಪ ನಿನ್‌ ಅರಮನೆ' ಧಾರಾವಾಹಿಯನ್ನು ಕೈಗೆತ್ತಿಕೊಂಡಿದ್ದರು. ಇವರು ಮುಂದೊಂದು ದಿನ ಸಿನಿಮಾ ರಂಗದಲ್ಲಿ ಇಷ್ಟು ದೊಡ್ಡ ಹೆಸರು ಮಾಡುತ್ತಾರೆ ಅಂತ ಆಗ ನಾನು ಖಂಡಿತಾ ಊಹಿಸಿರಲಿಲ್ಲ. ಮತ್ತೂಂದು ಮುಖ್ಯ ವಿಷಯವೆಂದರೆ, ಮದುವೆಯಾದ ಹೊಸತರಲ್ಲಿ ನಾವಿಬ್ಬರು ಭೇಟಿಯಾಗುವುದೇ ಅಪರೂಪವಿತ್ತು. ನಾನು ಬೆಳಗ್ಗೆ ಎದ್ದು ಆಫೀಸ್‌ಗೆ ಹೋಗುತ್ತಿದ್ದೆ. ಸಂಜೆ ಮನೆಗೆ ಬರುವುದರೊಳಗೆ ಇವರು ಮನೆಯಿಂದ ಹೊರಟಿರುತ್ತಿದ್ದರು. ನನಗೆ ಅವರು ಏನು ಕೆಲಸ ಮಾಡುತ್ತಿದ್ದಾರೆ, ಅವರ ವೃತ್ತಿಜೀವನ ಹೇಗಿದೆ ಅಂತಲೇ ಗೊತ್ತಾಗುತ್ತಿರಲಿಲ್ಲ. 

* ನಿಮ್ಮದು ಅರೇಂಜ್ಡ್ ಮ್ಯಾರೇಜಾ? ಮೊದಲ ಭೇಟಿಯಲ್ಲೇ ಒಪ್ಪಿಗೆ ಕೊಟ್ಟಿದ್ರಾ?
ಹೌದು, ಪಕ್ಕಾ ಅರೇಂಜ್ಡ್ ಮ್ಯಾರೇಜ್‌. ಮೊದಲಿಗೆ ಅವರನ್ನು ಭೇಟಿಯಾದಾಗ, ನಾನು ಅಪ್ಪನ ಬಳಿ "ನನಗೆ ಹುಡುಗ ಇಷ್ಟ ಆಗಲಿಲ್ಲ. ನನಗೆ ಈ ಮದುವೆ ಬೇಡ' ಅಂತ ಹೇಳಿದ್ದೆ. ನಮ್ಮ ಅಪ್ಪ "ನಿನ್ನನ್ನು ಮದುವೆ ಮಾಡಿಕೊಡುವುದಾದರೆ ಆ ಹುಡುಗನಿಗೆ ಮಾತ್ರ. ಬೇಡ ಎಂದರೆ ನಾನು ಮತ್ಯಾವತ್ತೂ ನಿನಗೆ ಮದುವೆ ಮಾಡುವ ಪ್ರಯತ್ನವನ್ನೇ ಮಾಡುವುದಿಲ್ಲ' ಅಂದಿದ್ದರು. ಅಪ್ಪನಿಗೆ ಅವರಲ್ಲಿ ಅಷ್ಟೊಂದು ವಿಶ್ವಾಸ ಇದ್ದದ್ದು ನೋಡಿ ನಾನು ಒಪ್ಪಿಗೆ ಕೊಟ್ಟೆ. 

* ಮದುವೆಗೆ ಮೊದಲಿನ ಭೇಟಿಗಳು ಹೇಗಿರುತ್ತಿದ್ದವು? ಏನೆಲ್ಲಾ ಉಡುಗೊರೆ ವಿನಿಮಯ ಮಾಡಿಕೊಳ್ತಾ ಇದ್ರಿ?
ಮದುವೆಗೆ ಮೊದಲು ಆಗಾಗ ಭೇಟಿ ಆಗುತ್ತಿದ್ದೆವು. ಅವರು ಚಾಕೋಲೆಟ್‌ ಮತ್ತು ಗುಲಾಬಿ ತಂದು ಕೊಡ್ತಾ ಇದ್ರು. ಆಮೇಲಾಮೇಲೆ ನನಗೆ ಅದು ರೇಜಿಗೆ ಅನ್ನಿಸಲು ಶುರುವಾಯಿತು. ಅವರ ವ್ಯಕ್ತಿತ್ವಕ್ಕೆ ಚಾಕೋಲೆಟ್‌ ಮತ್ತು ರೋಸ್‌ ಹೊಂದಿಕೆಯಾಗುವುದಿಲ್ಲ ಅಂತನ್ನಿಸುತ್ತಿತ್ತು. ಅದಕ್ಕೆ, ಇನ್ಮುಂದೆ ಇವನ್ನೆಲ್ಲಾ ತರಬೇಡಿ ಎಂದು ನಾನೇ ಹೇಳಿದೆ. ಅವರಿಗೆ ಏನು ಕೊಡಬೇಕು ಅಂತ ನನಗೆ ಗೊತ್ತೇ ಆಗುತ್ತಿರಲಿಲ್ಲ. ನಾನು ಖಾಲಿ ಕೈಯಲ್ಲಿಯೇ ಅವರನ್ನು ಭೇಟಿಯಾಗುತ್ತಿದ್ದೆ.

* ಭಟ್ರೂ ಕೂಡ ಅಡುಗೆ ಮಾಡುತ್ತಾರೆ ಎಂದು ಕೇಳಿದ್ದೇವೆ. ಇಬ್ಬರಲ್ಲಿ ಚೆನ್ನಾಗಿ ಅಡುಗೆ ಮಾಡೋದು ಯಾರು? 
ತುಂಬಾ ಚೆನ್ನಾಗಿ ಅಡುಗೆ ಮಾಡೋದು ಅವರೇ. ನನಗೆ ಉಪ್ಪಿಟ್ಟು ಎಂದರೆ ತುಂಬಾ ಇಷ್ಟ. ಮಧ್ಯರಾತ್ರಿ ಎಬ್ಬಿಸಿ ಉಪ್ಪಿಟ್ಟು ಕೊಟ್ಟರೂ ತಿನ್ನುತ್ತೇನೆ. ಯೋಗರಾಜ್‌ ಉಪ್ಪಿಟ್ಟು ಮಾಡುವುದರಲ್ಲಿ ಎಕ್ಸ್‌ಪರ್ಟ್‌. ಮೊದಲು ಬಿಡುವಾಗಿದ್ದಾಗಲೆಲ್ಲಾ ಏನಾದರೂ ಅಡುಗೆ ಮಾಡಿ ಕೊಡುತ್ತಿದ್ದರು. ನಾನು ಅವರಿಂದ ಉಪ್ಪಿಟ್ಟು ಮಾಡಿಸಿಕೊಂಡು ತಿನ್ನುತ್ತಿದ್ದೆ. ನಿರ್ದೇಶಕರಾಗಿ ಬ್ಯುಸಿ ಆದ ಮೇಲೆ ಈಗ ಅಡುಗೆ ಮನೆಗೆ ಕಾಲಿಡುವುದೇ ಇಲ್ಲ. ಅಪ್ಪನಿಗೆ ಅಡುಗೆ ಬರುತ್ತದೆ ಎಂಬ ವಿಷಯ ಮಕ್ಕಳಿಗೇ ಗೊತ್ತಿಲ್ಲ. ನಾನು ಹೇಳಿದರೂ ಅವರು ನಂಬಲ್ಲ. 

* ಸದಾ ಬ್ಯುಸಿ ಇರುವ ಭಟ್ರಾ ಮನೆ, ಮಕ್ಕಳಿಗೆ ಅಂತ ಸಮಯ ಕೊಡ್ತಾರ? ಮಕ್ಕಳ ಜವಾಬ್ದಾರಿಯನ್ನು ನಿಮ್ಮಿಬ್ಬರಲ್ಲಿ ಯಾರು ಹೆಚ್ಚು ವಹಿಸಿಕೊಳ್ಳುತ್ತೀರಿ?
ಮಕ್ಕಳ ಸಂಪೂರ್ಣ ಜವಾಬ್ದಾರಿ ನನ್ನದೇ. ಅವರ ಬೇಕು ಬೇಡಗಳನ್ನು ನಾನೇ ನೋಡಿಕೊಳ್ಳುವುದು. ಆದರೆ, ಯೋಗರಾಜ್‌ ಎಷ್ಟೇ ಬ್ಯುಸಿ ಇದ್ದರೂ ಮಕ್ಕಳಿಗೆ ಸಮಯ ಕೊಡುತ್ತಾರೆ. ಕೆಲಸ ಬೇಗ ಮುಗಿದರೆ ಸೀದಾ ಮನೆಗೆ ಬಂದು ಮಕ್ಕಳೊಂದಿಗೆ ಇರುತ್ತಾರೆ. ಅವರ ಜೊತೆ ಆರಾಮಾಗಿ ಹರಟುತ್ತಾರೆ. ಹತ್ತಿರದಲ್ಲಿ ಶೂಟಿಂಗ್‌ ಇದ್ದರೆ ಎಲ್ಲರನ್ನೂ ಕರೆದುಕೊಂಡು ಹೋಗುತ್ತಾರೆ. 

* ಭಟ್ರಾ ಹೊರಗೆ ತಿನ್ನುವುದನ್ನು ಇಷ್ಟಪಡಲ್ಲ ಅಂತ ಹೇಳಿದ್ರಿ. ನಿಮಗೆ ಹೋಟೆಲ್‌ಗ‌ಳಿಗೆ ಹೋಗುವುದು ಇಷ್ಟ ಆಗುತ್ತಾ?
ನನಗೆ ತುಂಬಾ ಇಷ್ಟ. ಹೋಟೆಲ್‌ಗೆ ಹೋಗಿ ಡಿನ್ನರ್‌, ಲಂಚ್‌ ಮಾಡುವ ಅವಕಾಶಕ್ಕಾಗಿ ಕಾಯ್ತಾ ಇರ್ತಿನಿ. ಕೆಲವೊಮ್ಮೆ ಒತ್ತಾಯವಾಗಿ ಅವರನ್ನು ರೆಸ್ಟೋರೆಂಟ್‌ಗಳಿಗೆ ಕರೆದುಕೊಂಡು ಹೋಗುತ್ತೇನೆ. ನಾವೆಲ್ಲ ಖುಷಿಯಿಂದ ಹೊಟ್ಟೆ ತುಂಬಾ ಊಟ ಮಾಡಿದರೆ, ಅವರು ಗುಬ್ಬಚ್ಚಿಯಂತೆ ಸ್ವಲ್ಪವೇ ತಿನ್ನುತ್ತಾರೆ. ಮತ್ತೆ ಮನೆಗೆ ಬಂದು ಮೊಸರನ್ನ ತಿನ್ನುವುದು ಇದ್ದೇ ಇದೆ. ದೊಡ್ಡ ಮಗಳು ಪುನರ್ವಸು ನನಗೆ ಒಳ್ಳೆಯ ಜೊತೆಗಾರ್ತಿ. ನನಗೆ ಬೀದಿ ಬದಿ ಚಾಟ್ಸ್‌ ತಿನ್ನುವುದೆಂದರೆ ಬಹಳ ಇಷ್ಟ. ಪುನರ್ವಸು ಯಾವಾಗಲೂ ಕಂಪೆನಿ ಕೊಡುತ್ತಾಳೆ. 

* ಯೋಗರಾಜ್‌ ಭಟ್‌ ನಿಮ್ಮ ಜೊತೆಯೇ ಇರಬೇಕು ಎಂದು ನೀವು ಜಗಳ ಆಡಿದ್ದು ಇದೆಯೇ?
ನಮ್ಮ ನಮ್ಮ ಪ್ರಪಂಚದಲ್ಲಿ ನಾವು ಸದಾ ಬ್ಯುಸಿ ಇರುತ್ತೇವೆ. ಅವರ ಕೆಲಸಕ್ಕೆ ಯಾವತ್ತೂ ಅಡ್ಡಿಪಡಿಸಿಲ್ಲ. ಅವರು ನನ್ನ ಕಣ್ಣ ಎದುರೇ ಇರಬೇಕು. ಮಾಡುವ ಎಲ್ಲಾ ಕೆಲಸಗಳ ವರದಿ ಒಪ್ಪಿಸಬೇಕು ಎಂದು ಕೂಡ ನಿರೀಕ್ಷಿಸುವುದಿಲ್ಲ. ಅವರ ಕೆಲಸವನ್ನು ಅವರು ಖುಷಿಯಾಗಿ ಮಾಡಿಕೊಂಡು ಹೋಗಬೇಕು ಎಂದು ಬಯಸುತ್ತೇನೆ. 

* ಬಿಡುವಿನ ವೇಳೆಯನ್ನು ಹೇಗೆ ಕಳೆಯುತ್ತೀರ?
ನಾನು ಸಂಗೀತ ಅಭ್ಯಾಸ ಮಾಡುತ್ತಿದ್ದೇನೆ. ಶಾಲೆಯ ದಿನಗಳಿಂದಲೂ ನನಗೆ ಹಾಡುವ ಆಸಕ್ತಿ ಇತ್ತು. ಈಗ ಸಂಗೀತ ಕಲಿಯಲು ಸಮಯ ಸಿಕ್ಕಿದೆ. ಮೊದಲು ಓದುವ ಆಸಕ್ತಿ ಇರಲಿಲ್ಲ. ಯೋಗರಾಜ್‌ ಪುಸ್ತಕಗಳಲ್ಲಿ ಮುಳುಗಿ ಹೋಗುವುದನ್ನು ನೋಡಿ ನೋಡಿ ನನಗೂ ಓದುವ ಆಸಕ್ತಿ ಬಂದಿದೆ. ಉಳಿದಂತೆ ಮಕ್ಕಳನ್ನು ನೋಡಿಕೊಳ್ಳುವುದರಲ್ಲೇ ಸಮಯ ಹೋಗುತ್ತದೆ.

* ಇದುವರೆಗಿನ ನಿಮ್ಮ ನೆಚ್ಚಿನ ಪ್ರವಾಸದ ಬಗ್ಗೆ ಹೇಳಿ?
ನನಗೆ ಪ್ರಳಯವಾಗುವ ಮೊದಲು ಇಡೀ ಪ್ರಪಂಚ ಸುತ್ತಬೇಕು ಅಂತ ಮಹದಾಸೆ ಇದೆ. ವಿದೇಶ ಪ್ರವಾಸ ಮಾಡುವುದನ್ನು ಈಗಷ್ಟೇ ಆರಂಭಿಸಿದ್ದೇವೆ. ಸ್ವಿಡ್ಜರ್‌ಲೆಂಡ್‌, ಆಸ್ಟ್ರೇಲಿಯ, ದುಬೈಗೆ ಕುಟುಂಬ ಸಮೇತ ಹೋಗಿದ್ದೇವೆ. ಇನ್ನೂ ಸಾಕಷ್ಟು ದೇಶಗಳಿಗೆ ಹೋಗುವ ಯೋಚನೆ ಇದೆ. 

* ಭಟ್ಟರ ಸಿನಿಮಾಗಳಲ್ಲಿ ನಿಮ್ಮ ಫೇವರಿಟ್‌ ಸಿನಿಮಾ ಯಾವುದು?
"ಡ್ರಾಮಾ' ನನಗೆ ತುಂಬಾ ಇಷ್ಟ. ಅದರಲ್ಲಿ ಯಶ್‌, ಸತೀಶ್‌ ತುಂಬಾ ಚೆನ್ನಾಗಿ ಅಭಿನಯಿಸಿದ್ದಾರೆ. ಆ ಸಿನಿಮಾದಲ್ಲಿ ಒಂದು ಜೀವಂತಿಕೆ ಇದೆ. ಪ್ರತಿ ಸಂಭಾಷಣೆಗೂ ನಾನು ಮನಸಾರೆ ನಕ್ಕಿದ್ದೇನೆ. 

* ನೀವು ಒಟ್ಟಿಗೇ ನೋಡಿದ ಚಿತ್ರಗಳು ನೆನಪಿವೆಯೇ? ಸಿನಿಮಾಕ್ಕೆ ಕರೆದರೆ ಭಟ್ಟರು ಬರುತ್ತಾರೆಯೇ?
ಮದುವೆಯಾದ ಹೊಸತರಲ್ಲಿ ಅಮೃತಧಾರೆ, ರೇಸ್‌, ನೋ ಎಂಟ್ರಿ ಸಿನಿಮಾಗಳನ್ನು ನೋಡಿದ್ದು ನೆನಪಿದೆ. ಇತ್ತೀಚೆಗೆ ಜೋರ್‌ ಲಗಾ ಕೆ ಐಸಾ, ಪದ್ಮಾವತ್‌ ಸಿನಿಮಾ ನೋಡಿದೆವು. ಸಿನಿಮಾ ನೋಡೋಕೆ ಯೋಗರಾಜ್‌ ಖಂಡಿತಾ ಕಂಪನಿ ಕೊಡುತ್ತಾರೆ. 

ಪತ್ನಿ ಕಣ್ಣಲ್ಲಿ ಭಟ್ರಾ!: ನಮಗೆ ನಿಜ ಜೀವನದಲ್ಲಿ ಹೇಗೆ ಬದುಕಲು ಸಾಧ್ಯವಿಲ್ಲವೋ ಅದನ್ನು ನಾವು ಕಲ್ಪನೆ ಮಾಡಿಕೊಳ್ಳುತ್ತೇವೆ. ಬಹುಶಃ ಯೋಗರಾಜ್‌ ಕೂಡ ಅದನ್ನೇ ಮಾಡುತ್ತಾರೆ ಅನ್ನಿಸುತ್ತೆ. ವೈಯಕ್ತಿಕವಾಗಿ ಅವರಿಗೆ ವರ್ಣರಂಜಿತವಾಗಿ ಬದುಕಲು ಬರುವುದಿಲ್ಲ. ಆದರೆ ಅದನ್ನೆಲ್ಲಾ ಅವರು ತೆರೆ ಮೇಲೆ ಮೂಡಿಸುತ್ತಾರೆ.

ಶಾಪಿಂಗ್‌ ಅನ್ನೋ ಪಂಚವಾರ್ಷಿಕ ಯೋಜನೆ: ನಾವಿಬ್ಬರೂ ಒಟ್ಟಿಗೇ 5 ವರ್ಷಗಳಿಗೊಮ್ಮೆ ಶಾಪಿಂಗ್‌ ಹೋದರೆ ಅದೇ ಹೆಚ್ಚು. ಯೋಗರಾಜ್‌ಗೆ ಶಾಪಿಂಗ್‌ ಎಂದರೇ ಆಗುವುದಿಲ್ಲ. ನನಗೆ ಸಿಕ್ಕಾಪಟ್ಟೆ ಶಾಪಿಂಗ್‌ ಹುಚ್ಚು. ಮಕ್ಕಳನ್ನು ಕರೆದುಕೊಂಡು ನಾನೊಬ್ಬಳೇ ಶಾಪಿಂಗ್‌ ಹೋಗುತ್ತೇನೆ. ಯೋಗರಾಜ್‌ಗೂ ಬಟ್ಟೆಗಳನ್ನು ನಾನೇ ತರುತ್ತೇನೆ. ಫಾರಿನ್‌ಗೆ ಹೋದಾಗ ಅನಿವಾರ್ಯವಾಗಿ ಅವರು ನಮ್ಮ ಜೊತೆ ಶಾಪಿಂಗ್‌ಗೆ ಬರುತ್ತಾರೆ. 

ಅವ್ರಿಗೆ ಸ್ಟಾರ್‌ ಹೋಟೆಲ್‌ ಬಿರಿಯಾನಿಗಿಂತ ನಮ್ಮನೆ ಮೊಸರನ್ನ ಇಷ್ಟ!: ಯೋಗರಾಜ್‌ ಹೊರಗಡೆ ಊಟ ಮಾಡುವುದನ್ನು ಸ್ವಲ್ಪವೂ ಇಷ್ಟ ಪಡುವುದಿಲ್ಲ. ಎಂಥದ್ದೇ ಬ್ಯುಸಿ ಕೆಲಸವಿದ್ದರೂ ಅವರು ಮನೆಗೆ ಬಂದೇ ಊಟ ಮಾಡುವುದು. ಅನಿವಾರ್ಯವಾಗಿಯೋ ಅಥವಾ ನನ್ನ ಒತ್ತಾಯಕ್ಕಾಗಿಯೋ ಹೊರಗೆಲ್ಲಾದರೂ ಊಟ ಮಾಡಿದರೆ, ಮನೆಗೆ ಬಂದು ತಪ್ಪದೇ ಸ್ವಲ್ಪವಾದರೂ ಮೊಸರನ್ನ, ಉಪ್ಪಿನಕಾಯಿ ತಿನ್ನುತ್ತಾರೆ. ಮನೆಯಲ್ಲಿ ಮೊಸರನ್ನ ತಿನ್ನದಿದ್ದರೆ ಅವರ ಆ ದಿನದ ಊಟ ಸಂಪೂರ್ಣವಾಗುವುದಿಲ್ಲ.

ಮಕ್ಳು ಒಂದು ರಾಶಿ ಪ್ರಶ್ನೆ ಕೇಳ್ತಾರೆ: ಮಕ್ಕಳಿಗೆ ಕುತೂಹಲ ಜಾಸ್ತಿ. ಒಂದು ರಾಶಿ ಪ್ರಶ್ನೆ ಕೇಳುತ್ತಾರೆ. ನನಗೆ ಅವರ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸುವಷ್ಟು ವ್ಯವಧಾನ ಇರುವುದಿಲ್ಲ. ಆದರೆ ಯೋಗರಾಜ್‌, ಮಕ್ಕಳು ಕೇಳುವ ಪ್ರತಿ ಪ್ರಶ್ನೆಗಳಿಗೂ ತಾಳ್ಮೆಯಿಂದ ಉತ್ತರಿಸುತ್ತಾರೆ. ಗೊತ್ತಿಲ್ಲದಿದ್ದರೆ ತಿಳಿದುಕೊಂಡಾದರೂ ಮಕ್ಕಳಿಗೆ ವಿವರಿಸುತ್ತಾರೆ. ಮಕ್ಕಳ ಆಸಕ್ತಿಗೆ ಅವರು ಯಾವತ್ತೂ ಭಂಗ ಮಾಡಿಲ್ಲ. 

* ಪ್ರಳಯ ಆಗೋ ಮುಂಚೆ ಪ್ರಪಂಚ ನೋಡ್ಬೇಕು!
* ನನ್ನನ್ನ ಪಟಾಯಿಸೋಕೆ ಮುಂಚೆ ಅವ್ರು ಅಪ್ಪನನ್ನ ಪಟಾಯಿಸಿದ್ದರು!
* ಅಪ್ಪಂಗೆ ಅಡುಗೆ ಬರುತ್ತೆ ಅಂತ ಮಕ್ಕಳಿಗೇ ಗೊತ್ತಿಲ್ಲ

* ಚೇತನ ಜೆ.ಕೆ.


Trending videos

Back to Top