CONNECT WITH US  

ವಾಟ್ಸ್‌ಆಪ್‌ ಗೆಳತಿ

ಊಟಕ್ಕೆ ಉಪ್ಪಿನಕಾಯಿ ಇಲ್ಲದಿದ್ದರೂ ಚಿಂತೆಯಿಲ್ಲ; ನಿಮ್ಮ ಮೊಬೈಲಿನಲ್ಲಿ "ವಾಟ್ಸ್‌ಆಪ್‌' ಇಲ್ಲದಿದ್ದರೆ ಅದರಷ್ಟು ದೊಡ್ಡ ಹೆಡ್ಡುತನ ಇನ್ನೊಂದಿಲ್ಲ. ನನ್ನ ಮತ್ತು "ವಾಟ್ಸ್‌ಆಪ್‌' ನಂಟು ಶುರುವಾಗಿ ಸರಿಸುಮಾರು ಎರಡು ವರ್ಷ, ಮೇಲೊಂದಿಷ್ಟು ತಿಂಗಳುಗಳು. ಹೀಗೆ ಸಂಬಂಧ ಬೆಳೆಯುವುದಕ್ಕೂ ಬೇರೊಂದು ಕಥೆಯಿದೆ.  ನನ್ನ ಕಿರಿತಲೆಮಾರಿನ ಬುದ್ಧಿವಂತ ತಲೆಗಳು ಮದುವೆ-ಮುಂಜಿ ಸಮಾರಂಭಗಳಲ್ಲಿ ಗುಂಪುಗೂಡಿದಾಗ ನನಗೂ ಅದರ ಭಾಗವಾಗುವ ಆಸೆ. ಹೀಗೆ ಪಟ್ಟಾಂಗಕ್ಕೆ ಕುಳಿತಾಗ ಅವರ ನುಡಿಮುತ್ತುಗಳಲ್ಲಿ "ವಾಟ್ಸ್‌ಆಪ್‌'ಅನ್ನೋ ಹೊಸ ಪದವನ್ನ ಕೇಳಿದ್ದೆ. ಅದೇನೋ ಹೊಸದಾಗಿ ಹುಟ್ಟಿಕೊಂಡ ತಂತ್ರಜ್ಞಾನವೇನೋ ಎಂಬ ಕುತೂಹಲ. ಮನಸ್ಸಲ್ಲಿ ಉದಯಿಸಿದ ಈ ಕುತೂಹಲದ ಮಥನವೇ, ನನ್ನ ಇಂದಿನ "ವಾಟ್ಸ್‌ಆಪ್‌' ಒಲವಿಗೆ ಕಾರಣ.

ಹಾಯ್‌.......''
""ಹೇಗಿದ್ದೀಯಾ......?''
""ತುಂಬಾ ದಿನವಾಯ್ತಲ್ಲಾ ಭೇಟಿಯಾಗಿ...''
ಊಟಕ್ಕೆ ಉಪ್ಪಿನಕಾಯಿ ಇಲ್ಲದಿದ್ದರೂ ಚಿಂತೆಯಿಲ್ಲ; ನಿಮ್ಮ ಮೊಬೈಲಿನಲ್ಲಿ "ವಾಟ್ಸ್‌ಆಪ್‌' ಇಲ್ಲದಿದ್ದರೆ ಅದರಷ್ಟು ದೊಡ್ಡ ಹೆಡ್ಡುತನ ಇನ್ನೊಂದಿಲ್ಲ. ನನ್ನ ಮತ್ತು "ವಾಟ್ಸ್‌ಆಪ್‌' ನಂಟು ಶುರುವಾಗಿ ಸರಿಸುಮಾರು ಎರಡು ವರ್ಷ, ಮೇಲೊಂದಿಷ್ಟು ತಿಂಗಳುಗಳು. ಹೀಗೆ ಸಂಬಂಧ ಬೆಳೆಯುವುದಕ್ಕೂ ಬೇರೊಂದು ಕಥೆಯಿದೆ. ನನ್ನ ಕಿರಿತಲೆಮಾರಿನ ಬುದ್ಧಿವಂತ ತಲೆಗಳು ಮದುವೆ-ಮುಂಜಿ, ಸಮಾರಂಭಗಳಲ್ಲಿ ಗುಂಪುಗೂಡಿದಾಗ ನನಗೂ ಅದರ ಭಾಗವಾಗುವ ಆಸೆ. ಹೀಗೆ ಪಟ್ಟಾಂಗಕ್ಕೆ ಕುಳಿತಾಗ ಅವರ ನುಡಿಮುತ್ತುಗಳಲ್ಲಿ "ವಾಟ್ಸ್‌ ಆಪ್‌' ಅನ್ನೋ ಹೊಸ ಪದವನ್ನ ಕೇಳಿದ್ದೆ. ಅದೇನೋ ಹೊಸದಾಗಿ ಹುಟ್ಟಿಕೊಂಡ ತಂತ್ರಜ್ಞಾನವೇನೋ ಎಂಬ ಕುತೂಹಲ. ಮನಸ್ಸಲ್ಲಿ ಉದಯಿಸಿದ ಈ ಕುತೂಹಲದ ಮಥನವೇ, ನನ್ನ ಇಂದಿನ "ವಾಟ್ಸ್‌ ಆಪ್‌' ಒಲವಿಗೆ ಕಾರಣ.

ಹೊಸಕಾಲಕ್ಕೆ ಹಳೆಯದರಂತಿದ್ದ ನನ್ನ ಮೊಬೈಲನ್ನು ಬದಲಿಸಿ "ವಾಟ್ಸ್‌ಆಪ್‌' ಬಗ್ಗೆ ಶುರುವಾಯ್ತು ಅಧ್ಯಯನ. ಪ್ರಯೋಗಾರ್ಥವಾಗಿ "ವಾಟ್ಸ್‌ಆಪ್‌' ಮೊದಲ ಸಂದೇಶವನ್ನ ಪ್ರೀತಿಯ ಪತಿರಾಯನಿಗೆ ಕಳುಹಿಸಿದ್ದೂ ಆಯಿತು.  ದಿನದ ಇಪ್ಪತ್ನಾಲ್ಕು ಗಂಟೆಗಳ ಕಾಲ "ವಾಟ್ಸ್‌ಆಪ್‌' ಚಾಲೀಸವನ್ನು ಪಠಿಸುವುದೇ ಪ್ರಮುಖ ಕಾರ್ಯವಾಯಿತು. ಭಕ್ತರು ಬೇಡಿದರೆ ದೇವರು ವರ ಕರುಣಿಸದಿರುತ್ತಾನೆಯೇ? ಪಾಪದ ಪತಿರಾಯ ದಿನವೂ ಉಪ್ಪಿಟ್ಟೆಂಬ ಮೃಷ್ಟಾನ್ನಕ್ಕೆ ತೃಪ್ತಿಪಡಬೇಕಾಯಿತು. ಮನೆಯ ಮುದ್ದಿನ ಅರಗಿಣಿಯ ಮೊಗದಲ್ಲಿ ನಗುವಿದ್ದರೆ ತಾನೇ ಸಂಸಾರ ಸುಖ? ಎಂದಿಗೋ ಮರೆತು ಹೋದಂತಿದ್ದ ಹಳೆಯ ಮುಖಗಳು ಆಕಸ್ಮಿಕವಾಗಿ ಎದುರಾದಾಗ, ಧೈರ್ಯವಾಗಿ "ನಿಮ್ಮ ವಾಟ್ಸ್‌ಆಪ್‌ ನಂಬರೂÅ !' ಅಂತ ಕಿರುನಕ್ಕು, ನಂಬರನ್ನ ನನ್ನ ಮೊಬೈಲಿನಲ್ಲಿ ಭದ್ರಪಡಿಸಿದರೆ ಅದೇನೋ ಗೆದ್ದಂಥ ಅನುಭವ.

ಬೇರೆ ಬೇರೆ ಆಕಾರ, ಅಳತೆ, ಬಣ್ಣಗಳ ಬಟ್ಟೆಗಳನ್ನು ಹೊಲಿಗೆ ಯಂತ್ರವು ಒಂದೇ ನೂಲಿನಲ್ಲಿ ಜೋಡಿಸಿದಂತೆ, "ವಾಟ್ಸ್‌ಆಪ್‌' ಎಂಬ ಮಾಯಾಜಾಲವು ವೈವಿಧ್ಯ ವ್ಯಕ್ತಿತ್ವಗಳನ್ನ ಬೆಸೆಯುತ್ತದೆ. ದೇಶ-ವಿದೇಶಗಳಲ್ಲಿ ನೆಲೆಯೂರಿರುವ, ಮರೆತರೂ ಮರೆಯದಂತಿರುವ ಸಂಪರ್ಕದ ಕೊಂಡಿ ಧುತ್ತನೆ ಎದುರಾದಾಗ ಆಗುವ ಖುಷಿಯೇ ಬೇರೆ. ಹದಿಹರೆಯದ ಎಳೆ ಮನಸ್ಸುಗಳಿಗೆ ತಮ್ಮ ಸ್ವಚಿತ್ರಿಕೆಯನ್ನು ಹಂಚುವ ಆತುರ. "ವಾಟ್ಸ್‌ಆಪ್‌' ಇಲ್ಲದಿದ್ದರೆ ಇದು ಸಾಧ್ಯವಿತ್ತೇ? ನಮ್ಮ ಇಂದಿನ ಮನೋಸ್ಥಿತಿಯನ್ನ ಒಂದೆರದು ವಾಕ್ಯಗಳಲ್ಲಿ "ಸ್ಟೇಟಸ್‌ನಲ್ಲಿ ಮುದ್ರಿಸಿದರೆ ಮುಗಿಯಿತು. ಅಂದಿನ ದಿನದ ಕೆಲಸ. 

ಕ್ಷಣ-ಕ್ಷಣಕ್ಕೂ ಬದಲಾಗುವ ಮನಸ್ಸಿನ ವೇಗವನ್ನು ಯಾರೂ ಕೂಡ ಅಳೆಯಲು ಸಾಧ್ಯವಿಲ್ಲವೇನೋ? "ವಾಟ್ಸ್‌ಆಪ್‌'ನ ಇನ್ನೊಂದು ವಿಶೇಷವೆಂದರೆ, ಸುದ್ದಿಯೊಂದು "ವಿಷಯ'ವಾಗುವ ಮುನ್ನವೇ ಗೆಳೆಯರ ಗುಂಪಿನಲ್ಲಿ ಹರಿದಾಡುತ್ತಿರುತ್ತದೆ. ಅದೂ ಕೂಡಾ ಭಾವನೆಗಳ ಅಭಿವ್ಯಕ್ತಿ ಸಹಿತ. ಇನ್ನೂ ಹೇಳುವುದಾದರೆ ಒಂದಿಷ್ಟು ಹರಟೆ, ಹುಚ್ಚುತನ, ನಗು, ಹಾಡು-ಚಿತ್ರಿಕೆಗಳ ಹಂಚಿಕೆ. ಒಂಟಿತನವನ್ನೂ ನೀಗಿಸುತ್ತದೆ; ಮುಖಾ-ಮುಖೀ ಭೇಟಿಯಿಲ್ಲದೆ. ದೂರದೂರಿನಲಿದ್ದುಕ್ಕೊಂಡು ತವರುಮನೆಯನ್ನ ನೆನಪಿಸುತ್ತ ಮರುಗುವವರಿಗೆ; ಇಲ್ಲಿನ ಆಗುಹೋಗುಗಳನ್ನ ಚಿತ್ರಿಕೆಗಳ ಸಮೇತವಾಗಿ ರವಾನಿಸುತ್ತಿದ್ದರೆ ಅದೇನೋ ಸಂಭ್ರಮ. 

ಯಾರದೇ ಮದುವೆ-ಮುಂಜಿಯಾದರೂ  "ವಾಟ್ಸ್‌ಆಪ್‌' ಅಂಕಣದಲ್ಲಿ ಕರೆಯೋಲೆಯೊಂದು ಇದ್ದೇ ಇರುತ್ತದೆ. ಅಂಚೆಯಣ್ಣನ ಜಂಜಡವಿಲ್ಲ.

ಎಲ್ಲಿ ಅಭಿವೃದ್ಧಿಯ ತುತ್ತತುದಿಯಲ್ಲಿ ನಾವಿದ್ದೇವೆಂದು ಬೀಗುತಿರುತ್ತೇವೆಯೋ, ಅದರ ಇನ್ನೊಂದು ಕರಾಳ ಮುಖದ ಪರಿಚಯ ನಮಗಿರುವುದೇ ಇಲ್ಲ. ಯಾವುದಾದರೂ ಕೂಡ ಮಿತಿಯಲ್ಲಿದ್ದರೆ ಉತ್ತಮ. ಇತ್ತೀಚಿನ ದಿನಗಳಲ್ಲಿ ಓದುಗರ ಸಂಖ್ಯೆ ಕಡಿಮೆಯೇ ಎಂದು ಹೇಳಬಹುದು. 

ಆದರೆ, "ವಾಟ್ಸ್‌ಆಪ್‌' ಹಸಿ-ಬಿಸಿ ಸುದ್ದಿಗಳು ಗೆಳೆಯರ ಗುಂಪಿನಲ್ಲಿ ಚರ್ಚೆಗೆ ಒಳಪಡುತ್ತಿರುತ್ತದೆ. ದುರಂತವೆಂದರೆ, ಜೀವನದ ಋಣಾತ್ಮಕತೆಯೇ ಬಹುಪ್ರೀತಿಯ ವಸ್ತುವಾಗಿರುತ್ತದೆ. ವಾಟ್ಸ್‌ಆಪ್‌ ಲವ್‌, ಗುಂಪು ಗಲಭೆ, ಮತೀಯ ಭಿನ್ನಾಭಿಪ್ರಾಯಗಳು, ಭಯೋತ್ಪಾದನಾ ಚಟುವಟಿಕೆಗಳ ಪ್ರೋತ್ಸಾಹಕ್ಕೂ ನೇರ ನಾಂದಿ ಹಾಡಿದೆ. ಸಮಾಜದ ಉನ್ನತೋನ್ಮುಖ ಅಭಿವೃದ್ಧಿಯ ಭದ್ರ ಬುನಾದಿಯನ್ನ ಸಡಿಲಿಸಿದೆ. 

ಸುಳ್ಳು ಸುದ್ದಿಯೊಂದು ಜಗತ್ತಿನ ಮೂಲೆ-ಮೂಲೆಗಳಲ್ಲಿ ಹರಡಲು ಸೆಕುಂಡುಗಳನ್ನೂ ಎಣಿಸಬೇಕಿಲ್ಲ. ಎಳೆಯ ಮಕ್ಕಳು ಕಲಿಯುವುದು ಬೇಗ. ಆದರೆ ಒಳ್ಳೆಯದು-ಕೆಟ್ಟದರ ವರ್ಗೀಕರಣದಲ್ಲಿ ಸೋಲನ್ನನುಭವಿಸುತ್ತಾರೆ. ಪಿಯು ಪರೀಕ್ಷೆಯ ಪ್ರಶ್ನಾಪತ್ರಿಕೆ ಸೋರಿಕೆಯಲ್ಲಿ "ವಾಟ್ಸ್‌ಆಪ್‌' ವಿದ್ಯಾರ್ಥಿಗಳನ್ನ ಹೆಮ್ಮಾರಿಯಾಗಿ ಕಾಡಿತು. ಭವಿಷ್ಯವನ್ನ ರೂಪಿಸುವ ಹೊಸ್ತಿಲಲ್ಲಿರುವ ಕಂದಮ್ಮಗಳು ಹಾಗೂ ಅವರ ಹೆತ್ತವರ ಅದೆಷ್ಟು ಶಾಪ ತಟ್ಟಿತೇನೋ? "ವಾಟ್ಸ್‌ಆಪ್‌' ಅಂಗಳ ಅದೆಷ್ಟು ಬಣ್ಣಗಳಿಂದ ಕೂಡಿದ್ದರೂ ಇಂತಹ ನಿದರ್ಶನಗಳು ಎಲ್ಲಾ ಬಣ್ಣವನ್ನು ಮಸಿ ನುಂಗಿದಂತೆ.

"ವಾಟ್ಸ್‌ಆಪ್‌'ನ ವೇಗದ ಭರದಲ್ಲಿ ನಮ್ಮ ಜೊತೆಗಿರುವ ಸಂಬಂಧಗಳನ್ನ ಮರೆತರೆ ಅದು ಬದುಕಿನ ನಷ್ಟವೇ ಸರಿ. 
ಎಲ್ಲೋ ಇರುವ ಸಂಬಂಧಗಳ ಬೆಸುಗೆಗೆ ಹೋಗಿ ನಮ್ಮ ಸುತ್ತಮುತ್ತಲಿನ ಪರಿಸರವನ್ನ ಮರೆತರೆ ಹೇಗೆ? ಊಟ-ತಿಂಡಿ, ನಿದ್ರೆಗಳನ್ನ ಈ ಮಾಯಾಜಾಲ ಒದಗಿಸಲಾರದಲ್ಲವೆ? ಒಂದೇ ಸೂರಿನಡಿಯಲ್ಲಿ ಜೀವಿಸುತ್ತಿರುವವರು ತಮ್ಮ ದಿನನಿತ್ಯದ ವಹಿವಾಟನ್ನ ಮರೆತು, ಬರಿಯ "ವಾಟ್ಸ್‌ಆಪ್‌'ಗಾಗಿ ಮೀಸಲಿಟ್ಟರೆ ಹೇಗಾದೀತು? ಅಮ್ಮ , ಅಡುಗೆಮನೆಯಿಂದ ಊಟಕ್ಕೆ ಕರೆದರೂ ಕೇಳಿಸದೆ, ಮಕ್ಕಳು ತಮ್ಮ ಲೋಕದಲ್ಲಿ ಮಗ್ನರಾಗಿರುತ್ತಾರೆ. ಬಂಧಗಳ ಒಡಕಿಗೆ ಇದು ಸಾಕಲ್ಲವೇ? ಕಳೆದುಹೋದ ಸಂಪರ್ಕಗಳು ಸಿಕ್ಕಿದ ಭರದಲ್ಲಿ, ಜೊತೆಗಿರುವ ಸಂಬಂಧಗಳು ಹಳಸಬಾರದಲ್ಲವೆ? 

- ಪ್ರಜ್ಞಾ   ಜಿ. ಕೆ.


Trending videos

Back to Top