ಉಗ್ರರಿಗೇಕೆ ಖಾಸಗಿತನ?

ಸೋಷಿಯಲ್‌ ಮೀಡಿಯಾ-ಆಧಾರ್‌ ಜೋಡಣೆ ಬಗ್ಗೆ ಕೇಂದ್ರದ ವಾದ

Team Udayavani, Oct 23, 2019, 6:30 AM IST

ಹೊಸದಿಲ್ಲಿ: ಸಾಮಾಜಿಕ ಜಾಲತಾಣಗಳ ಮೂಲಕ ದೇಶದ ಭದ್ರತೆಗೆ ಸವಾಲೊಡ್ಡುವ ಭಯೋತ್ಪಾದಕನೊಬ್ಬನ ಸಂದೇಶಗಳನ್ನು ಪತ್ತೆ ಮಾಡಿ, ಆತನ ವಿರುದ್ಧ ಕ್ರಮ ಕೈಗೊಳ್ಳಲು ಮುಂದಾದರೆ ಅದು ಆತನ ಖಾಸಗಿತನದಲ್ಲಿ ಸರಕಾರ ಹಸ್ತಕ್ಷೇಪ ಮಾಡಿದಂತಲ್ಲ. ಜತೆಗೆ ಅವರಿಗೆ ಯಾವ ಕಾರಣಕ್ಕಾಗಿ ಖಾಸಗಿತನ ಬೇಕು ಎಂದು ಅಟಾರ್ನಿ ಜನರಲ್‌ ಕೆ.ಕೆ. ವೇಣುಗೋಪಾಲ್‌, ಸುಪ್ರೀಂ ಕೋರ್ಟ್‌ಗೆ ಸ್ಪಷ್ಟಪಡಿಸಿದ್ದಾರೆ.

ಸಾಮಾಜಿಕ ಜಾಲತಾಣಗಳ ಬಳಕೆದಾರರು ತಮ್ಮ ಖಾತೆಗಳಿಗೆ ಆಧಾರ್‌ ಕಾರ್ಡ್‌ ಜೋಡಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಮಂಗಳವಾರ ನಡೆದ ವಿಚಾರಣೆ ವೇಳೆ ನ್ಯಾಯಮೂರ್ತಿಗಳಾದ ದೀಪಕ್‌ ಗುಪ್ತಾ, ಅನಿರುದ್ಧ್ ಬೋಸ್‌ ನೇತೃತ್ವದ ನ್ಯಾಯಪೀಠಕ್ಕೆ ಈ ಬಗ್ಗೆ ಅರಿಕೆ ಮಾಡಿಕೊಂಡಿದ್ದಾರೆ.

ಕೇಂದ್ರದ ಪರವಾಗಿ ವಾದ ಮಂಡಿಸಿದ, ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ, “ರಾಷ್ಟ್ರೀಯ ಭದ್ರತೆಯ ದೃಷ್ಟಿಕೋನದಲ್ಲಿ ಸಾಮಾಜಿಕ ಜಾಲತಾಣಗಳ ಖಾತೆಗಳಿಗೆ ಆಧಾರ್‌ ಜೋಡಣೆ ಕಡ್ಡಾಯಗೊಳಿಸುವ ಇರಾದೆಯನ್ನು ಸರಕಾರ ಹೊಂದಿದೆ. ಇದರಲ್ಲಿ, ಖಾತೆದಾರರ ಖಾಸಗಿತನದಲ್ಲಿ ಹಸ್ತಕ್ಷೇಪ ಮಾಡುವ ಉದ್ದೇಶ ಸರಕಾರಕ್ಕಿಲ್ಲ’ ಎಂದರು.

ಆಗ, ಮಧ್ಯ ಪ್ರವೇಶಿಸಿದ ವೇಣುಗೋಪಾಲ್‌, “ಯಾವುದೇ ಭಯೋತ್ಪಾದಕನು ರಾಷ್ಟ್ರೀಯ ಭದ್ರತೆಗೆ ಧಕ್ಕೆಯುಂಟು ಮಾಡುವ ಉದ್ದೇಶದಿಂದ ಪ್ರಚೋದನಕಾರಿ ಸಂದೇಶಗಳನ್ನು ಸಾಮಾಜಿಕ ಜಾಲತಾಣಗಳ ಮೂಲಕ ಹರಡಲು ಯತ್ನಿಸಿದರೆ ಅದನ್ನು ಗ್ರಹಿಸಿ ತತ್‌ಕ್ಷಣವೇ ನಿಯಂತ್ರಿಸುವುದು ಸರಕಾರಗಳ ಕರ್ತವ್ಯವಾಗುತ್ತದೆ.

ಜನಾಭಿಪ್ರಾಯಗಳನ್ನು ರೂಪಿಸುವಲ್ಲಿ ಸಾಮಾಜಿಕ ಜಾಲತಾಣಗಳೂ ಮಹತ್ವ ಪಡೆದುಕೊಳ್ಳುತ್ತಿರುವ ಈ ದಿನಗಳಲ್ಲಿ ಇದು ಅನಿವಾರ್ಯವೂ ಹೌದು. ಹಾಗಿರುವಾಗ, ಭಯೋತ್ಪಾದಕನೊಬ್ಬನ ಸಂದೇಶಗಳನ್ನು ಅವಲೋಕಿಸಿದರೆ ಅದು ಆತನ ಖಾಸಗಿತನದಲ್ಲಿ ಹಸ್ತಕ್ಷೇಪ ಮಾಡಿದ ಪ್ರಶ್ನೆಯೇ ಏಳುವುದಿಲ್ಲ. ಹಾಗಾಗಿ, ಎಲ್ಲಾ ಸಾಮಾಜಿಕ ಜಾಲತಾಣಗಳ ಖಾತೆಗಳ ಮೇಲೆ ನಿಗಾ ವಹಿಸಲು ಆಧಾರ್‌ ಜೋಡಣೆ ಅನುಕೂಲ ಕಲ್ಪಿಸಲಿದೆ” ಎಂದರು.

ವರದಿ ಸಲ್ಲಿಸುವಂತೆ ಸೂಚನೆ: ವಾದ-ಪ್ರತಿವಾದಗಳನ್ನು ಆಲಿಸಿದ ಸುಪ್ರೀಂ ಕೋರ್ಟ್‌, ರಾಷ್ಟ್ರೀಯ ಭದ್ರತೆಯ ದೃಷ್ಟಿಕೋನದಿಂದ ಸಾಮಾಜಿಕ ಜಾಲತಾಣಗಳ ಮೇಲೆ ನಿಯಂತ್ರಣ ಸಾಧಿಸುವಲ್ಲಿ ಕೈಗೊಳ್ಳಬಹುದಾದ ನಿಯಮಗಳ ಬಗ್ಗೆ ತನಗೆ ವರದಿ ನೀಡಬೇಕು. ಜತೆಗೆ, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಸಂದೇಶಗಳ ಮೇಲೆ ಸರಕಾರ ನಿಗಾ ವಹಿಸಲು ಅನುಕೂಲವಾಗುವ ಡಿಕ್ರಿಪ್ಷನ್‌ ಸೌಲಭ್ಯವನ್ನು ನೀಡುವಂತೆ ಸಾಮಾಜಿಕ ಜಾಲತಾಣ ಸಂಸ್ಥೆಗಳನ್ನು ಸರಕಾರ ಯಾವ ರೀತಿಯಲ್ಲಿ ಒಪ್ಪಿಸಲಿದೆ ಎಂದು 2020ರ ಜನವರಿ ಮೊದಲ ವಾರದೊಳಗೆ ವರದಿ ನೀಡಬೇಕೆಂದು ಕೇಂದ್ರ ಸರಕಾರಕ್ಕೆ ಸೂಚಿಸಿತು.

ಎಲ್ಲಾ ಪ್ರಕರಣಗಳೂ ಸುಪ್ರೀಂಗೆ ವರ್ಗ
ಮಹತ್ವದ ಬೆಳವಣಿಗೆಯೊಂದರಲ್ಲಿ, ದೇಶದ ನಾನಾ ಹೈಕೋರ್ಟ್‌ಗಳಲ್ಲಿ ವಿಚಾರಣೆ ಹಂತದಲ್ಲಿರುವ “ಸಾಮಾಜಿಕ ಜಾಲತಾಣಗಳ ಖಾತೆಗಳಿಗೆ ಆಧಾರ್‌ ಸಂಖ್ಯೆ ಜೋಡಣೆ’ ಕುರಿತಾದ ಪ್ರಕರಣಗಳನ್ನು ಸುಪ್ರೀಂ ಕೋರ್ಟ್‌, ತನ್ನ ವ್ಯಾಪ್ತಿಗೆ ವರ್ಗಾಯಿಸಿಕೊಂಡಿದೆ. ಎಲ್ಲ ಪ್ರಕರಣಗಳ ವರ್ಗಾವಣೆ ಕೋರಿ ಫೇಸ್‌ಬುಕ್‌ ಸಂಸ್ಥೆಯು ಸಲ್ಲಿಸಿದ್ದ ಮನವಿಯನ್ನು ಪುರಸ್ಕರಿಸಿರುವ ಅವರುಳ್ಳ ನ್ಯಾಯಪೀಠ, 2020ರ ಜನವರಿ ಕೊನೆಯ ವಾರದೊಳಗೆ ಆ ಎಲ್ಲಾ ಪ್ರಕರಣಗಳನ್ನು ತನಗೆ ವರ್ಗಾಯಿಸುವಂತೆ ಸುಪ್ರೀಂ ಕೋರ್ಟ್‌ ರಿಜಿಸ್ಟ್ರಾರ್‌ರವರಿಗೆ ಸೂಚಿಸಿತು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ