ಬ್ರಿಕ್ಸ್ ನಲ್ಲಿ ಮತ್ತೆ ಮೋದಿ – ಕ್ಸಿ ಪಿಂಗ್ ಭೇಟಿ; ಮಾತುಕತೆಯಲ್ಲಿ RCEP ಪ್ರಸ್ತಾಪ ಸಾಧ್ಯತೆ

Team Udayavani, Nov 12, 2019, 9:09 PM IST

ನವದೆಹಲಿ: ಬ್ರಿಕ್ಸ್ ಸಮ್ಮೇಳನಕ್ಕಾಗಿ ಬ್ರಝಿಲ್ ದೇಶಕ್ಕೆ ತೆರಳಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಬ್ರಝಿಲ್ ರಾಜಧಾನಿ ಬ್ರಸಿಲಿಯಾದಲ್ಲಿ ಚೀನಾ ಅಧ್ಯಕ್ಷ ಕ್ಸಿ ಝಿನ್ ಪಿಂಗ್ ಅವರನ್ನು ಭೇಟಿಯಾಗಲಿದ್ದಾರೆ. ಆರ್.ಸಿ.ಇ.ಪಿ. ಒಪ್ಪಂದದಿಂದ ಭಾರತ ಹಿಂದೆ ಸರಿದ ಬಳಿಕ ಈ ಇಬ್ಬರು ನಾಯಕರು ಮೊದಲ ಬಾರಿಗೆ ಭೇಟಿಯಾಗುತ್ತಿರುವ  ಹಿನ್ನಲೆಯಲ್ಲಿ ಮೋದಿ – ಕ್ಸಿ ಪಿಂಗ್ ದ್ವಿಪಕ್ಷೀಯ ಮಾತುಕತೆ ಪ್ರಾಮುಖ್ಯತೆ ಪಡೆದಿದೆ. ಬ್ರಿಕ್ಸ್ ಸಮ್ಮೇಳನ ಬುಧವಾರದಿಂದ ಪ್ರಾರಂಭಗೊಳ್ಳಲಿದೆ.

ಕಳೆದ ತಿಂಗಳು ತಮಿಳುನಾಡಿನ ಮಹಾಬಲಿಪುರಂನಲ್ಲಿ ನಡೆದಿದ್ದ ಅನೌಪಚಾರಿಕ ಭೇಟಿಯ ಬಳಿಕ ಈ ಇಬ್ಬರೂ ನಾಯಕರ ನಡುವೆ ನಡೆಯುತ್ತಿರುವ ಪ್ರಥಮ ಭೇಟಿ ಇದಾಗಿರಲಿದೆ. ಮತ್ತು ಈ ಭೇಟಿಗೆ ಔಪಚಾರಿಕ ಮಹತ್ವವಿದ್ದು ತಮ್ಮ ಭೇಟಿಯ ಸಂದರ್ಭದಲ್ಲಿ ಉಭಯ ದೇಶಗಳ ನಾಯಕರು ಕೆಲವೊಂದು ಮಹತ್ವದ ವಿಚಾರಗಳ ಕುರಿತು ಮಾತುಕತೆ ನಡೆಸುವ ಸಾಧ್ಯತೆ ಇದೆ.

ಅದರಲ್ಲೂ ಮುಖ್ಯವಾಗಿ ಉಭಯ ನಾಯಕರ ಮಾತುಕತೆಯ ವೇಳೆ ಪ್ರಾದೇಶಿಕ ಸಮಗ್ರ ಆರ್ಥಿಕ ಪಾಲುದಾರಿಕೆ ಒಪ್ಪಂದದಿಂದ ಭಾರತ ಹಿಂದೆ ಸರಿದಿರುವ ವಿಚಾರವೇ ಪ್ರಮುಖವಾಗಿ ಚರ್ಚೆಗೆ ಬರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಭಾರತ ಆರ್.ಸಿ.ಇ.ಪಿ. ಒಪ್ಪಂದದಿಂದ ಹಿಂದೆ ಸರಿದಿರುವ ತನ್ನ ನಿಲುವನ್ನು ಪುನರ್ ಪರಿಶೀಲಿಸಬೇಕೆಂದು ಚೀನಾ ಬಯಸುತ್ತಿದೆ.

ಈ ದ್ವಿಪಕ್ಷೀಯ ಮಾತುಕತೆಯ ಸಂದರ್ಭದಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಪ್ರಧಾನಿ ಮೋದಿ ಜೊತೆಗಿರಲಿದ್ದಾರೆ ಮತ್ತು ಚೀನಾ ಅಧ್ಯಕ್ಷರಿಗೆ ಹು ಚುನ್ ಹುವಾ ಸಾಥ್ ನೀಡಲಿದ್ದಾರೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ