ಒಲಿಂಪಿಕ್‌ ಅರ್ಹತಾ ಹಾಕಿ ಪಂದ್ಯಾವಳಿ: ಅಮೆರಿಕವನ್ನು ಮಗುಚಿದ ವನಿತೆಯರು

Team Udayavani, Nov 2, 2019, 12:02 AM IST

ಭುವನೇಶ್ವರ: ಒಲಿಂಪಿಕ್‌ ಅರ್ಹತಾ ಹಾಕಿ ಪಂದ್ಯಾವಳಿಯಲ್ಲಿ ಪ್ರಚಂಡ ಪ್ರದರ್ಶನ ನೀಡಿದ ರಾಣಿ ರಾಮ್‌ಪಾಲ್‌ ನೇತೃತ್ವದ ಭಾರತದ ವನಿತಾ ತಂಡ ಶುಕ್ರವಾರದ ಮೊದಲ ಮುಖಾಮುಖೀಯಲ್ಲಿ ಅಮೆರಿಕವನ್ನು 5-1 ಗೋಲುಗಳಿಂದ ಮಗುಚಿದೆ.

ಶನಿವಾರ 2ನೇ ಹಾಗೂ ಕೊನೆಯ ಪಂದ್ಯ ನಡೆಯಲಿದ್ದು, ಭಾರೀ ಅಂತರದ ಜಯ ಸಾಧಿಸಿದ್ದರಿಂದ ಭಾರತ ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಸಂಪಾದಿಸುವುದು ಬಹುತೇಕ ಖಚಿತಗೊಂಡಿದೆ. ಹಾಗೆ‌ಯೇ ಅಮೆರಿಕದ ಒಲಿಂಪಿಕ್‌ ಕನಸಿಗೆ ಭಾರೀ ಹೊಡೆತ ಬಿದ್ದಿದೆ. ಇದು ಅಮೆರಿಕ ವಿರುದ್ಧ ಭಾರತ ದಾಖಲಿಸಿದ ಕೇವಲ 4ನೇ ಗೆಲುವು.

ನಿರೀಕ್ಷೆಗೂ ಮೀರಿದ ಸಾಧನೆ
ತೀವ್ರ ಕಠಿನವೆಂದೇ ಭಾವಿಸಲಾಗಿದ್ದ ಈ ಪಂದ್ಯದಲ್ಲಿ ಭಾರತ ನಿರೀಕ್ಷೆಗೂ ಮೀರಿದ ಸಾಧನೆಗೈದು ಅಮೆರಿಕದ ಮೇಲೆ ಸವಾರಿ ಮಾಡಿತು. 28ನೇ ನಿಮಿಷದಲ್ಲಿ ಲಿಲಿಮಾ ಮಿಂಜ್‌ ಮೊದಲ ಗೋಲು ಬಾರಿಸಿ ಭಾರತಕ್ಕೆ ಮುನ್ನಡೆ ಒದಗಿಸಿದರು. ಡ್ರ್ಯಾಗ್‌ಫ್ಲಿಕರ್‌ ಗುರ್ಜಿತ್‌ ಕೌರ್‌ (42ನೇ ಹಾಗೂ 51ನೇ ನಿಮಿಷ) 2 ಗೋಲು ಸಿಡಿಸಿದರು. ಶರ್ಮಿಳಾದೇವಿ (40ನೇ ನಿಮಿಷ), ನವನೀತ್‌ ಕೌರ್‌ (46ನೇ ನಿಮಿಷ) ಉಳಿದ ಗೋಲು ಬಾರಿಸಿದರು. ಅಮೆರಿಕದ ಏಕೈಕ ಗೋಲನ್ನು 54ನೇ ನಿಮಿಷದಲ್ಲಿ ಎರಿನ್‌ ಮ್ಯಾಟ್ಸನ್‌ ಪೆನಾಲ್ಟಿ ಕಾರ್ನರ್‌ ಮೂಲಕ ಹೊಡೆದರು.

ವಿಶ್ವ ರ್‍ಯಾಂಕಿಂಗ್‌ನಲ್ಲಿ 9ನೇ ಸ್ಥಾನದಲ್ಲಿರುವ ಭಾರತ, ಶನಿವಾರದ ಮುಖಾಮುಖೀಯಲ್ಲಿ ತನ್ನ 4 ಗೋಲುಗಳ ಅಂತರವನ್ನು ಕಾಯ್ದುಕೊಂಡು ಬರಬೇಕಿದೆ. ಆಗ ಟೋಕಿಯೊ ಒಲಿಂಪಿಕ್‌ ಪ್ರವೇಶ ಅಧಿಕೃತಗೊಳ್ಳಲಿದೆ.ಭಾರತದ ಜಯಭೇರಿಯಲ್ಲಿ ಗೋಲ್‌ಕೀಪರ್‌ ಸವಿತಾ ಅವರ ಪಾತ್ರ ಅಮೋಘವಾಗಿತ್ತು. ಅಮೆರಿಕದ ಅನೇಕ ಅವಕಾಶಗಳನ್ನು ಅವರು ವ್ಯರ್ಥಗೊಳಿಸಿದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ