CONNECT WITH US  

ಪ್ರತಿಭೆ ಗುರುತಿಸುವ ವಿವಿಧ ಕಲಾ ಪ್ರಕಾರ

ನಿತ್ಯವೂ ಅದೇ ಕ್ಲಾಸ್‌, ಅದೇ ವಿಷಯ, ಅದೇ ಟೀಚರ್‌ ಬೋರ್‌ ಎಂದೆನಿಸುವ ವಿದ್ಯಾರ್ಥಿಗಳಿಗೆ ತರಗತಿಯ ಮಧ್ಯೆ ಸ್ವಲ್ಪ ಬ್ರೇಕ್‌ ಕೊಟ್ಟು ಸಂಗೀತ, ನೃತ್ಯ, ಚಿತ್ರಕಲೆ, ಯಕ್ಷಗಾನ ಪಾಠ ಮಾಡಿದರೆ ಹೇಗೆ? ಇಂತಹ ಆಲೋಚನೆ ಬಹಳಷ್ಟು ಹಿಂದಿನಿಂದಲೇ ಇದ್ದರೂ ಪರಿಪೂರ್ಣವಾಗಿ ಇನ್ನೂ ಇದು ಜಾರಿಯಾಗಿಲ್ಲ. ಕೆಲವೆಡೆ ಸಂಜೆ ವಿಶೇಷ ತರಗತಿಯಾಗಿ ಇದನ್ನು ನಡೆಸುತ್ತಿರುವುದರಿಂದ ಎಲ್ಲ ವಿದ್ಯಾರ್ಥಿಗಳಿಗೆ ಇದು ದಕ್ಕುತ್ತಿಲ್ಲ. ಹೀಗಾಗಿ ಇತರ ತರಗತಿಯಂತೆ ಇದನ್ನೂ ಪಠ್ಯ ರೂಪದಲ್ಲಿ ಅಳವಡಿಸಿದರೆ ಎಲ್ಲರೂ ಇದರ ಪ್ರಯೋಜನ ಪಡೆಯಬಲ್ಲರು.

ಉತ್ತಮ ಶಾಲೆ, ಕಾಲೇಜುಗಳಿಗೆ ಸೇರುವುದು, ಅಂಕ ಗಳಿಸಿ ಉದ್ಯೋಗ ಗಿಟ್ಟಿಸಿಕೊಳ್ಳುವ ಜತೆಗೆ ಇನ್ನಿತರ ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಆ ಮೂಲಕವೂ ಹೆಸರು ಗಳಿಸುವುದು ಸದ್ಯದ ಟ್ರೆಂಡ್‌. ವಿದ್ಯೆ ಮಾತ್ರವಲ್ಲದೆ ತಮಗಿಷ್ಟವಾದ ವಿವಿಧ ಕ್ಷೇತ್ರಗಳಲ್ಲೂ ತಮ್ಮ ಪ್ರತಿಭೆಯನ್ನು ಒರೆಗೆ ಹಚ್ಚುವ ಕೆಲಸವನ್ನು ಬಹುತೇಕ ಮಂದಿ ಮಾಡುತ್ತಿದ್ದಾರೆ.

ವೃತ್ತಿಯಲ್ಲಿ ಸಾಫ್ಟ್‌ವೇರ್‌ ಎಂಜಿನಿಯರ್‌ ಆದರೂ ರಜಾದಿನ ಹಾಗೂ ಬಿಡುವಿನ ವೇಳೆಯಲ್ಲಿ ಸಂಗೀತ ಕಾರ್ಯಕ್ರಮಗಳನ್ನು ನೀಡುತ್ತಾ ತಮ್ಮ ಆಸಕ್ತಿಯ ಕ್ಷೇತ್ರವನ್ನು ತಮ್ಮ ವೃತ್ತಿಯೊಂದಿಗೆ ಸರಿದೂಗಿಸಿಕೊಂಡು ಹೋಗುವುದು ಸವಾಲೇ ಸರಿ. ವಿದ್ಯೆಯೊಂದಿಗೆ ನೃತ್ಯ, ಯಕ್ಷಗಾನ, ಸಂಗೀತ ಹೀಗೆ ಸಾಂಸ್ಕೃತಿಕ ಕ್ಷೇತ್ರದಲ್ಲಿ ಗುರುತಿಸಿಕೊಂಡ ಅನೇಕ ಮಂದಿ ಸಾಧಕರು ನಮ್ಮ ಸುತ್ತ ಮುತ್ತಲಿದ್ದಾರೆ.

ಮಕ್ಕಳಿಗೆ ಎಳವೆಯಿಂದ ಆಸಕ್ತಿ ಇರುವ ಪಠ್ಯೇತರ ಚಟುವಟಿಕೆಗೆ ಕಡೆಗೆ ಹೆಚ್ಚು ಪ್ರಾಮುಖ್ಯ ನೀಡುವ ಕೆಲಸವನ್ನು ಹೆತ್ತವರು ಮಾಡುತ್ತಾರೆ. ಆ ಹಿನ್ನೆಲೆಯಲ್ಲಿ ತರಗತಿ ಮುಗಿದ ಬಳಿಕ ಅಥವಾ ವಾರದಲ್ಲಿ ಒಂದು ದಿನ ಸಂಗೀತ, ನೃತ್ಯ ಮೊದಲಾದ ಕಲಾ ಪ್ರಕಾರಗಳ ಅಭ್ಯಾಸಕ್ಕಾಗಿ ಕಳುಹಿಸುತ್ತಾರೆ. ಇದು ಮಕ್ಕಳ ಆಸಕ್ತಿಯ ಕ್ಷೇತ್ರದ ಬಗ್ಗೆ ಆಳವಾಗಿ ಅಧ್ಯಯನ ಮಾಡಲು ಸಹಕಾರಿಯಾಗುತ್ತದೆ. ಆದರೆ ಸಂಗೀತ, ನೃತ್ಯವನ್ನು ಪಠ್ಯವಾಗಿ ಮಾಡಬೇಕು ಎಂಬ ಬೇಡಿಕೆ ಹಲವು ವರ್ಷಗಳಿಂದ ಕೇಳಿ ಬರುತ್ತಿದೆ. ಆದರೆ ಈ ವಿಷಯದಲ್ಲಿ ಹೆಚ್ಚಿನ ಪ್ರಗತಿಯಾಗಿಲ್ಲ.

ಪಠ್ಯವಾಗಿ ಕಲಿಕೆ
ಶಾಲಾ ಕಾಲೇಜುಗಳಲ್ಲಿ ಇತರ ವಿಷಯಗಳಂತೆ ಸಂಗೀತ, ನೃತ್ಯ, ಯಕ್ಷಗಾನಗಳಂತಹ ಕಲಾ ಪ್ರಕಾರಗಳ ಕಲಿಕೆಗೆ ಹೆಚ್ಚು ಒತ್ತು ನೀಡಿದರೆ ವಿದ್ಯಾರ್ಥಿಗಳು ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಸಕ್ರಿಯರಾಗಿರುವಂತೆ ಮಾಡಬಹುದು. ಅಲ್ಲದೇ ಶಾಲೆಯಲ್ಲಿಯೇ ಇಂತಹ ಕಲಾ ಪ್ರಕಾರಗಳನ್ನು ಬೋಧಿಸುವುದರಿಂದ ಮಕ್ಕಳಿಗೆ ದೇಶದ ಸಂಸ್ಕೃತಿ, ಕಲಾ ಪ್ರಕಾರಗಳ ಅರಿವು ಮೂಡುತ್ತದೆ. ಇದರೊಂದಿಗೆ ಶಾಲೆಯನ್ನು ಹೊರತುಪಡಿಸಿ ಇತರ ತರಗತಿಗಳಿಗೆ ತೆರಳಿ ಕಲಿಯಲು ಶಕ್ತರಲ್ಲದ ವಿದ್ಯಾರ್ಥಿಗಳು ಕಲಾ ಪ್ರಕಾರಗಳನ್ನು ಅಭ್ಯಸಿಸಲು ಅವಕಾಶಗಳು ಲಭಿಸಿದಂತಾಗುತ್ತದೆ. ಶಾಲಾ ತರಗತಿಗಳು ಮುಗಿದ ಬಳಿಕ ಕಲಾ ಪ್ರಕಾರಗಳ ಅಭ್ಯಸಿಸುವುದರಿಂದ ಮಕ್ಕಳಲ್ಲಿ ಇನ್ನಷ್ಟು ಒತ್ತಡ ಬೀಳುವ ಸಾಧ್ಯತೆ ಇರುವುದರಿಂದ ಶಾಲೆಯಲ್ಲೇ ಇಂತಹ ತರಗತಿಗಳಿಗೆ ಅವಕಾಶ ಕಲ್ಪಿಸುವುದು ಹೆಚ್ಚು ಉತ್ತಮ. ಮಕ್ಕಳ ಆಸಕ್ತಿ, ಮನಸ್ಥಿತಿಯನ್ನು ಅರ್ಥಮಾಡಿಕೊಂಡು ಆ ವಿಚಾರಗಳಲ್ಲಿ ಅವರು ಹೆಚ್ಚು ತೊಡಗಿಸಿಕೊಳ್ಳುವಂತೆ ಪ್ರೋತ್ಸಾಹಿಸಲು ಸಹಕಾರಿಯಾಗುತ್ತದೆ.

ಸಾಮಾಜಿಕ ಜಾಲತಾಣಗಳ ಮೂಲಕ ಅಭ್ಯಾಸ
ವರ್ಷಗಳ ಹಿಂದೆ ಗುರುಗಳಿಂದಲೇ ಸಂಗೀತ, ನೃತ್ಯ ಹಾಗೂ ಇನ್ನಿತರ ಕಲಾ ಪ್ರಕಾರಗಳ ಅಭ್ಯಾಸ ನಡೆಯುತ್ತಿತ್ತು. ಆದರೆ ಮುಂದುವರಿದ ತಂತ್ರಜ್ಞಾನಗಳಿಂದಾಗಿ ಯೂ ಟ್ಯೂಬ್‌ ಅಥವಾ ಇನ್ನಿತರ ಸಾಮಾಜಿಕ ಮಾಧ್ಯಮಗಳಿಂದ ಏನನ್ನೂ ಕಲಿಯಬಹುದು ಎಂಬ ಯೋಚನೆ ಮೂಡಿದೆ.

ಹಾಗಾಗಿ ಯೂ ಟ್ಯೂಬ್‌ ಅಥವಾ ಇನ್ನಿತರ ಮಾಧ್ಯಮಗಳ ಮುಖೇನ ಸಂಗೀತ, ನೃತ್ಯ ಅಭ್ಯಾಸ ಮಾಡಲಾಗುತ್ತಿದೆ. ಇದರೊಂದಿಗೆ ವಿದೇಶದಲ್ಲಿ ಕುಳಿತು ಭಾರತದ ಗುರುಗಳಿಂದ ಸಂಗೀತ ಅಭ್ಯಾಸ ಮಾಡುವಂತಹ ವಿಚಾರಗಳು ನಡೆಯುತ್ತಿದೆ. ಇಂತಹ ಕಾಲಘಟ್ಟದಲ್ಲಿ ಪಠ್ಯದಲ್ಲೇ ಕಲಾ ಪ್ರಕಾರಗಳ ಅಧ್ಯಯನ ವಿದ್ಯಾರ್ಥಿಗಳಿಗೆ ಇನ್ನಷ್ಟು ಸಹಕಾರಿಯಾಗಲಿದೆ. ಸಂಗೀತ, ನೃತ್ಯ ಸಹಿತ ಇನ್ನಿತರ ಕಲಾ ಪ್ರಕಾರಗಳ ಕುರಿತಂತೆ ಕಲಿಸುವ ತರಗತಿ ಅಥವಾ ಶಾಲೆಗಳ ಕೊರತೆ ಇದೆ. ನಗರದಲ್ಲಿ ಒಂದೆರಡು ಸಂಸ್ಥೆಗಳು ಇಂತಹ ತರಗತಿಗಳನ್ನು ಮಾಡುತ್ತಿದ್ದವು. ಕಾಲಕ್ರಮೇಣ ಅವು ಮರೆಯಾಗಿವೆ. ಒಂದು ಕಲಾಪ್ರಕಾರದ ಕುರಿತಾಗಿ ಆಳವಾಗಿ ಅಧ್ಯಯನ ಹಾಗೂ ಅಭ್ಯಾಸ ನಡೆಸಬೇಕು ಎನ್ನುವ ವಿದ್ಯಾರ್ಥಿಗೆ ಈ ನಿಟ್ಟಿನಲ್ಲಿ ಮಾರ್ಗದರ್ಶನ ನೀಡಲು ಸೂಕ್ತ ಸಂಸ್ಥೆಗಳ ಕೊರತೆ ಕಾಡುತ್ತಿದೆ. ಆದರೆ ದೇಶ, ವಿದೇಶದಲ್ಲಿ ಕೆಲವು ಸಂಸ್ಥೆಗಳು ಇಂತಹ ಕೆಲಸ ಮಾಡುತ್ತಿದೆ.

ಪ್ರತಿ ತರಗತಿಯಲ್ಲೇ ಈ ಸೌಲಭ್ಯವಿರಲಿ
ಪ್ರಾಥಮಿಕ ಶಾಲೆಯಿಂದಲೇ ಇತರ ವಿಷಯಗಳಂತೆ ನೃತ್ಯ, ಸಂಗೀತ, ಯಕ್ಷಗಾನಗಳಂತಹ ಕಲಾಪ್ರಕಾರಗಳ ತರಗತಿಗಳು ಇರಬೇಕು. ಈ ತರಗತಿಗಳಲ್ಲಿ ಕಡ್ಡಾಯವಾಗಿ ಇರಬೇಕು ಎಂಬ ನೀತಿಯೂ ಜಾರಿಗೊಳಿಸಬೇಕು. ವಾರ ಅಥವಾ ತಿಂಗಳಿಗೊಮ್ಮೆ ಈ ಕುರಿತಂತೆ ಪರೀಕ್ಷೆಗಳು, ಶಾಲೆ ಅಥವಾ ಅಂತರ್‌ ಶಾಲಾ ಮಟ್ಟದ ಸ್ಪರ್ಧೆಗಳು ಆಯೋಜಿಸಿದರೆ ಈ ಬಗ್ಗೆ ಮಕ್ಕಳಿಗೆ ಕಲಾ ಪ್ರಕಾರಗಳ ಕುರಿತ ಆಸಕ್ತಿ ಹೆಚ್ಚಾಗುವುದರೊಂದಿಗೆ ಸಂಗೀತ ನೃತ್ಯದ ಕುರಿತು ಹೆಚ್ಚು ವಿಷಯಗಳನ್ನು ಅರಿತುಕೊಳ್ಳಲು ಸಹಕಾರಿಯಾಗುತ್ತದೆ.

ಏನು ಲಾಭ?
·ಬೋರ್‌ ಎನಿಸುವ ತರಗತಿಯ ಮಧ್ಯೆ ಬ್ರೇಕ್‌ ಸಿಕ್ಕಂತಾಗುತ್ತದೆ.
·ವಿದ್ಯಾರ್ಥಿಗಳ ಪ್ರತಿಭೆ, ಆಸಕ್ತಿ ಗುರುತಿಸಲು ಒಂದು ಅವಕಾಶ.
·ಮಾನಸಿಕ ವ್ಯಾಯಾಮದೊಂದಿಗೆ ದೈಹಿಕ ವ್ಯಾಯಾಮವೂ ದೊರೆತಂತಾಗುವುದು.
·ಕಲಾ ಪ್ರಕಾರಗಳನ್ನು ಉಳಿಸಿ, ಬೆಳೆಸಲು ಸಾಧ್ಯವಿದೆ.
·ಕಲಾ ಪ್ರಕಾರಗಳ ಬಗ್ಗೆ ವಿದ್ಯಾರ್ಥಿಗಳಲ್ಲಿ ಜಾಗೃತಿ, ಆಸಕ್ತಿ ಮೂಡಿಸಬಹುದು.
·ಕಲೆಗಳ ಮೂಲಕವೇ ಬದುಕು ರೂಪಿಸುವುದು ಹೇಗೆ ಎಂಬ ಅರಿವು ಮೂಡಿಸಲು ಸಾಧ್ಯವಿದೆ.
·ಒತ್ತಡದ ಬದುಕಿನ ಮಧ್ಯೆ ಹವ್ಯಾಸಗಳಿಗೂ ವೇದಿಕೆ ಕಲ್ಪಿಸಿದಂತಾಗುತ್ತದೆ.

ಪ್ರಜ್ಞಾ ಶೆಟ್ಟಿ

ಇಂದು ಹೆಚ್ಚು ಓದಿದ್ದು

Trending videos

Back to Top