ನವರಾತ್ರಿಗೆ ಹೊಸತು ಮನೆ ತುಂಬಿಸುವ ಕಾತರ

Team Udayavani, Sep 29, 2019, 5:15 AM IST

ನಾಡಹಬ್ಬ ದಸರಾ ಆಚರಣೆಗೆ ಈಗಾಗಲೇ ಸಿದ್ಧತೆ ಜೋರಾಗಿ ನಡೆದಿದೆ. ಹಬ್ಬದ ನೆನಪು ಮತ್ತು ಶುಭ ಘಳಿಗೆ ಎಂಬ ನಂಬಿಕೆಯಿಂದ ಗ್ರಾಹಕರು ವಸ್ತುಗಳನ್ನು ಖರೀದಿಸುವುದು ಸರ್ವೇ ಸಾಮಾನ್ಯ. ಏತನ್ಮಧ್ಯೆ ಗ್ರಾಹಕರು ಮಾರುಕಟ್ಟೆಯಲ್ಲಿ ಹಬ್ಬದ ಪ್ರಯುಕ್ತ ಸಿಗುವ ರಿಯಾಯಿತಿ ದರವನ್ನು ಸದ್ಬಳಕೆ ಮಾಡುವ ನಿಟ್ಟಿನಲ್ಲಿ ಸ್ಮಾರ್ಟ್‌ಫೋನ್‌, ಕಾರು, ಬೈಕ್‌ ಖರೀದಿಗೆ ಮುಂದಾಗಿರುವುದು ಮಂಗಳೂರಿನಲ್ಲಿ ಕಂಡು ಬಂದಿದೆ. ಹಬ್ಬದ ಪ್ರಯುಕ್ತ ವ್ಯಾಪಾರ, ಬೆಲೆ ಹಾಗೂ ಬೇಡಿಕೆ ಕುರಿತು ಮಾಹಿತಿ ಇಲ್ಲಿದೆ.

ನವರಾತ್ರಿ ಹಿಂದೂ ಸಂಪ್ರದಾಯದಲ್ಲಿ ವಿಶೇಷ ಹಬ್ಬ. ರವಿವಾರದಿಂದಲೇ ನವರಾತ್ರಿ ರಂಗು ಕಳೆಗಟ್ಟಲಿದ್ದು, ದಸರಾ ವೈಭವಕ್ಕೆ ಇಡೀ ನಾಡು ಸಾಕ್ಷಿಯಾಗಲಿದೆ. ಮಂಗಳೂರಿನಲ್ಲಿಯೂ ಮಂಗಳೂರು ದಸರಾವನ್ನು ಕಣ್ತುಂಬಿಕೊಳ್ಳಲು ಜನ ಉತ್ಸುಕರಾಗಿದ್ದಾರೆ. ಈ ನಡುವೆ ನವರಾತ್ರಿಗೆಂದೇ ಖರೀದಿ ಭರಾಟೆಯೂ ಜೋರಾಗಿದೆ. ಈ ನವರಾತ್ರಿಗೆ ಹೊಸತನ್ನು ಮನೆ ತುಂಬಿಸುವ ಆಲೋಚನೆಯಲ್ಲಿ ಜನರಿದ್ದಾರೆ.

ಪ್ರತಿ ಹಬ್ಬಕ್ಕೂ ಹೊಸತನ್ನು ಖರೀದಿಸಿದರೆ ಶುಭಕಾರಕ ಎಂಬ ನಂಬಿಕೆ ನಮ್ಮಲ್ಲಿದೆ. ದಸರಾ ಸಂದರ್ಭದ ಹತ್ತು ದಿನಗಳಲ್ಲಿ ಖರೀದಿ ಪ್ರಕ್ರಿಯೆ ಜೋರಾಗಿರುತ್ತದೆ. ಅದಕ್ಕಾಗಿ ಕೆಲವು ಶೋರೂಂಗಳಲ್ಲಿ ಮುಂಗಡ ಬುಕ್ಕಿಂಗ್‌ ಕೂಡ ನಡೆಯುತ್ತಿವೆ. ಈ ಹಬ್ಬವನ್ನು ರಂಗು ರಂಗಾಗಿಸಿ, ಖುಷಿಯಿಂದ ಕಳೆಯಬೇಕೆಂಬುದು ಪ್ರತಿಯೊಬ್ಬರ ಆಲೋಚನೆಯಿದೆ. ಕಾರು, ಬೈಕ್‌, ಮೊಬೈಲ್‌ ಫೋನ್‌, ಹೊಸ ಬಟ್ಟೆ, ಆಭರಣಗಳ ಶೋರೂಂ, ಅಂಗಡಿಗಳತ್ತ ಜನರ ಚಿತ್ತ ಹರಿದಿದೆ.

ನವರಾತ್ರಿಗೆ ಹೊಸ ಮೊಬೈಲ್‌
ಮಂಗಳೂರಿನ ಮಾರುಕಟ್ಟೆಗಳಲ್ಲಿ ಕಾರು, ಬೈಕ್‌ ಜತೆಗೆ ಮೊಬೈಲ್‌ ಸ್ಮಾರ್ಟ್‌ಫೋನ್‌ಗಳ ಬಗ್ಗೆ ಜನ ವಿಚಾರಿಸುತ್ತಿರುವುದು ಹೆಚ್ಚುತ್ತಿದೆ. ಹೊಸ ಫೀಚರ್ಗಳನ್ನು ಒಳಗೊಂಡ ಮೊಬೈಲ್‌ ಫೋನ್‌ಗಳಿಗಾಗಿ ಜನರು ಹುಡುಕಾಡುತ್ತಿದ್ದಾರೆ. ಮಂಗಳೂರಿನ ಪ್ಲಾನೆಟ್‌ ಜಿ ಸಂಸ್ಥೆಯ ಸಿಬಂದಿ ಹೇಳುವ ಪ್ರಕಾರ, ವಿವೋ ವಿ17 ಪ್ರೊ ಮೊಬೈಲ್‌ ಫೋನ್‌ ಬಗ್ಗೆ ಯುವಕರು ಹೆಚ್ಚಾಗಿ ವಿಚಾರಿಸುತ್ತಾರಂತೆ. ಫ್ರಂಟ್‌ ಡ್ಯುವಲ್‌ ಕೆಮ ರಾ ಹೊಂದಿರುವ ಈ ಮೊಬೈಲ್‌ನಲ್ಲಿ ಮುಂಭಾಗದಲ್ಲಿ 32, 8 ಎಂಪಿ ಮತ್ತು ಹಿಂಭಾಗದಲ್ಲಿ 48, 13 ಮೆಗಾ ಫಿಕ್ಸೆಲ್‌ ಕೆಮ ರಾಗಳಿವೆ. ಉತ್ತಮ ಪ್ರೋಸೆಸರ್‌, ರ್ಯಾಮ್‌, ಸ್ಟೋರೇಜ್‌ ಸಾಮರ್ಥ್ಯ, ಉತ್ತಮ ಬ್ಯಾಟರಿ ಸಾಮರ್ಥ್ಯ ಹೊಂದಿರುವ ಈ ಮೊಬೈಲ್‌ ಖರೀದಿಗೆ ಈಗಾಗಲೇ ಜನ ಮುಗಿಬೀಳುತ್ತಿದ್ದಾರೆ.

ಹರ್ಷ ಮಳಿಗೆಯ ಸಿಬಂದಿ ಹೇಳುವ ಪ್ರಕಾರ ಈ ಸ್ಮಾರ್ಟ್‌ಫೋನ್‌ನೊಂದಿಗೆ ಐಫೋನ್‌ 11 ಕೂಡ ಶುಕ್ರವಾರ ಮಾರುಕಟ್ಟೆಗೆ ಬಿಡುಗಡೆಯಾಗುತ್ತಿದೆ. ಅದರ ಬಗ್ಗೆಯೂ ಯುವಕರ ಕುತೂಹಲ ಹೆಚ್ಚುತ್ತಿದೆ ಎನ್ನುತ್ತಾರೆ.

ಗೂಡುದೀಪ, ಲೈಟಿಂಗ್ಸ್‌ಗೂ ಬೇಡಿಕೆ
ಇವೆಲ್ಲ ಕಾರು, ಬೈಕು, ಮೊಬೈಲ್‌ಗ‌ಳ ಮಾತಾದರೆ, ನವರಾತ್ರಿ, ದೀಪಾವಳಿಗೆ ಮನೆಯ ಸುತ್ತಮುತ್ತ ಲೈಟಿಂಗ್ಸ್‌ ಅಳವಡಿಕೆಗೂ ಪೇಟೆ ಮಂದಿ ಉತ್ಸುಕರಾಗಿದ್ದು, ಈಗಾಗಲೇ ವೈವಿಧ್ಯ ಲೈಟಿಂಗ್ಸ್‌ಗಳನ್ನು ಖರೀದಿಸುತ್ತಿದ್ದಾರೆ. ಈ ನಡುವೆ ವಿವಿಧ ಅಂಗಡಿಗಳ ಮುಂಭಾಗದಲ್ಲಿ ವೈವಿಧ್ಯ ಗೂಡುದೀಪಗಳ ಹೊಸ ಲೋಕವೇ ತೆರೆದುಕೊಂಡು ನವರಾತ್ರಿಯ ರಂಗನ್ನು ಹೆಚ್ಚಿಸಿದೆ. ವಿವಿಧ ಶೈಲಿಯಲ್ಲಿರುವ ಈ ಗೂಡುದೀಪಗಳು ಗ್ರಾಹಕರನ್ನು ಆಕರ್ಷಿಸುತ್ತಿವೆ.

ಕಾರುಗಳಿಗೆ ಭರ್ಜರಿ ಡಿಸ್ಕೌಂಟ್‌
ದಸರಾ, ದೀಪಾವಳಿಗೆಂದೇ ಮಾರುತಿ, ಟಾಟಾ, ಹುಂಡೈ ಕಾರು ಸಂಸ್ಥೆಗಳಿಂದ ಭಾರೀ ಆಫರ್‌ಗಳನ್ನು ಪ್ರಕಟಿಸಲಾಗಿದ್ದು, 1.50 ಲಕ್ಷ ರೂ. ಗಳವರೆಗೂ ರಿಯಾಯಿತಿಯನ್ನು ಕಲ್ಪಿಸಲಾಗುತ್ತಿದೆ. ಆಲ್ಟೋ 800, ಆಲ್ಟೋ ಕೆ10, ಸ್ವಿಪ್ಟ್ ಡೀಸೆಲ್‌, ಸೆಲೆರಿಯೋ ಮುಂತಾದ ಕಾರುಗಳ ಮೇಲೆ ದರ ತಗ್ಗಿಸಲಾಗಿದೆ. ಈ ಬಗ್ಗೆ ಈಗಾಗಲೇ ಗ್ರಾಹಕರು ವಿಚಾರಿ ಸುತ್ತಿದ್ದು, ಕೆಲವರು ತಮ್ಮಿಷ್ಟದ ಕಾರುಗಳನ್ನು ಮುಂಗಡ ಬುಕ್ಕಿಂಗ್‌ ಮಾಡಿ ದ್ದಾರೆ ಎನ್ನುತ್ತಾರೆ ಮಂಗಳೂರಿನ ಮಾರುತಿ ಸುಝುಕಿ ಸಿಬಂದಿ.

ರಿಯಾಯಿತಿಗಳ ಸುರಿಮಳೆ
ಎಲೆಕ್ಟ್ರಾನಿಕ್‌ ಅಂಗಡಿಗಳು, ಬಟ್ಟೆ ಅಂಗಡಿಗಳು, ಕಾರು, ಬೈಕ್‌, ಸ್ಮಾರ್ಟ್‌ ಫೋನ್‌ ಶೋರೂಂಗಳು ವಿವಿಧ ರಿಯಾಯಿತಿ ಮಾರಾಟಗಳನ್ನು ದಸರಾ ಹಬ್ಬಕ್ಕೆಂದೇ ಪ್ರಕಟಿಸಿವೆ. ಶೇ.5, ಶೇ. 10ರಷ್ಟು ಕ್ಯಾಶ್‌ಬ್ಯಾಕ್‌ ಆಫರ್‌ಗಳು, ಎಲೆಕ್ಟ್ರಾನಿಕ್‌ ಐಟಂಗಳ ಮೇಲೆ ಶೇ.5ರಿಂದ ಶೇ.25ರವರೆಗೆ ರಿಯಾಯಿತಿ, ಬಟ್ಟೆಗಳ ಮೇಲೆ ಶೇ. 50ರ ವರೆಗೂ ರಿಯಾಯಿತಿಗಳನ್ನು ಈಗಾಗಲೇ ಪ್ರಕಟಿಸಿ ಗ್ರಾಹಕರನ್ನು ಸೆಳೆಯುತ್ತಿವೆ. ಚಿನ್ನಾಭರಣದ ಬೆಲೆ ಸದ್ಯಕ್ಕೆ ಕೊಂಚ ಇಳಿಕೆಯಾಗಿದ್ದು, ಪ್ರತಿ ಗ್ರಾಂ ಮೇಲೆ 100 ರೂ. ಗಳನ್ನು ಇಳಿಸುವ ಮೂಲಕ ಹೆಚ್ಚಾದ ಬೆಲೆಯನ್ನು ತಗ್ಗಿಸಿ ಗ್ರಾಹಕರನ್ನು ಸೆಳೆಯಲು ಚಿನ್ನದಂಗಡಿಗಳು ಮುಂದಾಗಿವೆ. ಎಲ್ಲವೂ ನವರಾತ್ರಿಯ ನವರಂಗನ್ನು ಜನಸಾಮಾನ್ಯರೂ ಅನುಭವಿಸಬೇಕೆಂಬ ಕಾರಣದಿಂದ ಆಗಿದೆ.

-  ಧನ್ಯಾ ಬಾಳೆಕಜೆ


ಈ ವಿಭಾಗದಿಂದ ಇನ್ನಷ್ಟು

  • ವಸಂತ ಬದುಕಿನ ಹಾದಿಯುದ್ದಕ್ಕೂ ವಿಧವಿಧದ ಬಣ್ಣಗಳ ಚಿತ್ತಾರ, ಭಾವ ಜಗತ್ತನ ನಂಬಿಕೆಯ ಹಾದಿಯಲ್ಲಿ ಮೌನದ ಆಗಮನ. ಹೊಸ ಪರ್ವದ ನವ ಭಾವನೆಗಳ ಜತೆಯಲ್ಲಿ ಒಂಟಿತನದಲ್ಲೂ...

  • ಆಧುನಿಕತೆ ಬೆಳೆದಂತೆ, ತಂತ್ರಜ್ಞಾನ ಮುಂದುವರಿದಂತೆ ಮಾನಸಿಕ ನೆಮ್ಮದಿ ಎನ್ನುವುದು ಮರೀಚಿಕೆಯಾಗುತ್ತಿದೆ. ಎಲ್ಲವೂ ಬೆರಳ ತುದಿಯಲ್ಲೇ ದೊರೆಯುತ್ತದೆ ಎನ್ನುವುದೇನೋ...

  • ನೀವು ದಿನಕ್ಕೊಮ್ಮೆಯಾದರೂ ನಿಮ್ಮೊಳಗೆ ನೀವೇ ಮಾತನಾಡಿಕೊಳ್ಳಿ, ಆಗ ನೀವು ಒಬ್ಬ ಅತ್ಯದ್ಭುತ ವ್ಯಕ್ತಿಯನ್ನೇ ಭೇಟಿಯಾಗುತ್ತೀರಿ ಎಂದು ಸ್ವಾಮಿ ವಿವೇಕಾನಂದರು...

  • ನಿನ್ನೆಯ ದಿನ ಒಂದೊಳ್ಳೆಯ ನೆನಪಾಗಿರಬೇಕು..ನಾಳೆ ಎಂಬುದು ಇಂದಿಗೆ ಸ್ಫೂರ್ತಿಯಾಗಿರಬೇಕು. ಆದರೆ ಅದೇ ನಾಳೆಯ ಚಿಂತೆಯಲ್ಲಿ ಇಂದಿನ ಖುಷಿ ಕಳೆದುಕೊಳ್ಳುವಂತಿರಬಾರದು....

  • ಜಪಾನಿನಲ್ಲಿ ಒಮ್ಮೆ ಏಡಿಗಳ ಸ್ಪರ್ಧೆ ಆಯೋಜಿಸಲಾಗಿತ್ತು. ಎಲ್ಲ ದೇಶಗಳ ಏಡಿಗಳನ್ನು ಒಂದು ಡಬ್ಬದಲ್ಲಿ ಹಾಕಲಾಯಿತು. ಅದರಲ್ಲಿ ಯಾವ ಏಡಿ ಬಹುಬೇಗನೆ ಮೇಲೆ ಬರುತ್ತದೆ...

ಹೊಸ ಸೇರ್ಪಡೆ