ಮುದ ನೀಡಿದ ಪಂಚ ದಿನ ಯಕ್ಷೋತ್ಸವ

Team Udayavani, May 17, 2019, 6:00 AM IST

ರಾಮ ನವಮಿ ಆರಾಧನ ಮಂಡಳಿ(ರಿ.) ಕುಳಾಯಿ ಇದರ 17ನೇ ವರ್ಷದ ರಾಮೋತ್ಸವದ ಸಲುವಾಗಿ ನಿರಂತರ 5ದಿನ ಸರಣಿ ಯಕ್ಷಗಾನ ಬಯಲಾಟವು ಜರಗಿತು.

ಮೊದಲ ದಿನದಲ್ಲಿ ಜಯ- ವಿಜಯ ಮತ್ತು ಹಿರಣಾಕ್ಷ ಆಖ್ಯಾನವನ್ನು ಆಡಿ ತೋರಿಸಲಾಯಿತು. ತ್ರಿಜನ್ಮ ಮೊಕ್ಷದ ಜಯ- ವಿಜಯದಿಂದ ಮೂರು ಪ್ರಸಂಗಗಳನ್ನು ಎಲ್ಲೂರು ರಾಮಚಂದ್ರ ಭಟ್ರರ ಯಕ್ಷಕೂಟ ಕದ್ರಿ ಇದರ ಕಲಾವಿದರು ಪ್ರದರ್ಶಿಸಿದರು. ಹಿಮ್ಮೇಳದಲ್ಲಿ ಭಾಗವತರಾಗಿ ದಯಾನಂದ ಕೋಡಿಕಲ್‌, ಚೆಂಡೆಯಲ್ಲಿ ಸುಬ್ರಮಣ್ಯ ಚಿತ್ರಾಪುರ, ಮದ್ದಲೆಯಲ್ಲಿ ಕೃಷ್ಣರಾಜ ನಂದಳಿಕೆ ಸಹಕರಿಸಿದರು. ದಯಾನಂದ ಕೋಡಿಕಲ್‌ ತನ್ನ ನೈಜ ಸುಶ್ರಾವ್ಯ ಕಂಠದಿಂದ ಜನಸ್ತೋಮವನ್ನು ರಂಜಿಸಿದರು. ಮಮ್ಮೇಳದಲ್ಲಿ ರಂಜಿತಾ ಎಲ್ಲೂರು, ತನ್ನ ಗತ್ತು ಗಾಂಭಿರ್ಯದ ನೈಜ ನಟನೆಯನ್ನು ಮೆರೆದರು. ಉಳಿದಂತೆ ವನಿತಾ ಆರ್‌. ಭಟ್‌, ರಕ್ಷಿತಾ ಎಲ್ಲೂರು, ಪ್ರಕೃತಿ, ಪೂರ್ಣಿಮಾ, ಶ್ರೀಶ ಕದ್ರಿಯವರು ತಮ್ಮ ಒಳಗಿರುವ ನಟನೆಯನ್ನು ಪ್ರದರ್ಶಿಸಿ ಮುದ ನೀಡಿದರು.

ಎರಡನೇ ದಿನ ತ್ರಿಜನ್ಮ ಮೋಕ್ಷದ ಮುಂದುವರಿದ ಭಾಗ ಹಿರಣ್ಯಕಶ್ಯಪು, ರಾವಣ-ಕುಂಭಕರ್ಣ, ಆಖ್ಯಾನವು ಪ್ರದರ್ಶಿಸಲ್ಪಟ್ಟಿತು. ಭಾಗವತರಾಗಿ ದಯಾನಂದ ಕೋಡಿಕಲ್‌, ಚೆಂಡೆಯಲ್ಲಿ ಸುಬ್ರಮಣ್ಯ ಚಿತ್ರಾಪುರ, ಮದ್ದಲೆಯಲ್ಲಿ ನಂದಳಿಕೆ ಭಾಗವಹಿಸಿದ್ದರು. ಮುಮ್ಮೇಳದಲ್ಲಿ ತೆಂಕು ತಿಟ್ಟುವಿನ ಪ್ರಸಿದ್ಧ ಸ್ತ್ರೀ ವೇಷಧಾರಿ ಸಂಜಯ್‌ ಕುಮಾರ್‌ ಗೋಣಿ ಬೀಡು ಖಯಾದುವಿನ ಪಾತ್ರದಲ್ಲಿ ಮಿಂಚಿದರು. ಹಿರಣ್ಯಕಶ್ಯಪುವಾಗಿ ವಿಜಯಕುಮಾರ್‌ ಶೆಟ್ಟಿ ಮೈಲೊಟ್ಟು ಪಾತ್ರಕ್ಕೆ ತಕ್ಕ ಗಣತೆಯನ್ನು ತಂದುಕೊಟ್ಟರು. ಉಳಿದಂತೆ ರಾಮಕೃಷ್ಣ ನಂದಿಕೂರು, ಸುರೇಶ್‌ ಕೊಲಕಾಡಿ, ಸಚಿನ್‌ ಉದ್ಯಾವರ,ಆಯುಷ್‌ ಕುಲಾಲ್‌ ತಮ್ಮ ಪಾತ್ರಕ್ಕೆ ತಕ್ಕಂತೆ ರಂಗಕ್ಕೊಂದು ಮೆರಗು ಕೊಟ್ಟರು.

ಮೂರನೇ ದಿನ ಜಯ- ವಿಜಯರ ಮೂರನೇ ಮತ್ತು ಕೊನೆಯ ಅವತಾರ ಶಿಶುಪಾಲ- ದಂತವಕ್ರ ಆಖ್ಯಾನವು ಬಯಲಾಟವಾಗಿ ಮೂಡಿ ಬಂತು. ಹಿಮ್ಮೇಳದಲ್ಲಿ ಕೋಡಿಕಲ್‌,ನಂದಳಿಕೆ, ಚಿತ್ರಾಪುರ,ಮುಮ್ಮೇಳದಲ್ಲಿ ಶಿಶುಪಾಲರಾಗಿ ಎಲ್ಲೂರು ರಾಮಚಂದ್ರ ಭಟ್‌ ರಂಗದಲ್ಲಿ ತಮ್ಮ ನೈಜ ಅಭಿನಯ ಚಾತುರ್ಯದಿಂದ ಜನರ ಮನಮುಟ್ಟಿದರು. ದಂತವಕ್ರನಾಗಿ ರಾಮಕೃಷ್ಣ ನಂದಿಕೂರು ವಿಜೃಂಭಿಸಿದರು. ಭಗದತ್ತನಾಗಿ ನಿತಿನ್‌ ಕುತ್ತೆತ್ತೂರು ಸಹಜ ಅಭಿನಯದಿಂದ ಗಮನ ಸೆಳೆದರು.

ನಾಲ್ಕನೇ ದಿನದ ಭಕ್ತ ಪಾರಮ್ಯ (ಸುದರ್ಶನ) ಆಖ್ಯಾನವು ಹೆಚ್ಚಿನ ಮಹತ್ವ ಪಡೆಯಿತು. ಕಾರಣ ಇಲ್ಲಿ ತೆಂಕುತಿಟ್ಟುವಿನ ಪ್ರಸಿದ್ಧ ಭಾಗವತರಾದ ಪಟ್ಲ ಸತೀಶ್‌ ಶೆಟ್ಟರ ಭಾಗವತಿಕೆಯನ್ನು ಕೇಳಲೆಂದೆ ಜನರು ಸೇರಿದ್ದರು. ಅವರೊಂದಿಗೆ ಮದ್ದಲೆಯಲ್ಲಿ ಕೃಷ್ಣಪ್ರಸಾದ್‌ ಉಳಿತ್ತಾಯ, ಚೆಂಡೆಯಲ್ಲಿ ಪದ್ಮನಾಭ ಉಪಾಧ್ಯಾಯ, ಚಕ್ರತಾಳದಲ್ಲಿ ಅನಿರುದ್ಧ ಅತ್ತಾವರ ಭಾಗವಹಿಸಿದ್ದರು.ಸುದರ್ಶನನಾಗಿ ಕು|ರಂಜಿತಾ ಎಲ್ಲೂರರ ನಟನೆಗೆ ಜನಸ್ತೋಮ ಬೆರಗಾಯಿತು. ಯಕ್ಷಗಾನದ ಯಾವುದೇ ದೊಡ್ಡ ಕಲಾವಿದರಿಗೆ ಸರಿಸಮಾನವಾಗಿ ಅಭಿನಯಿಸಿದ್ದರು ಉಳಿದಂತೆ ಎಲ್ಲರ ನಟನೆಯು ಸಾಮಾನ್ಯವಾಗಿತ್ತು.

ಕೊನೆಯ ದಿನ ರಾಮೇಶ್ವರ ಮಹಾತ್ಮೆ, ರಾಮ ಪಟ್ಟಾಭಿಷೇಕ ಭಾಗವತರಾಗಿ ಪ್ರಪುಲ್ಲ ಚಂದ್ರ ನೆಲ್ಯಾಡಿ ಇದ್ದರು. ಮುಮ್ಮೇಳದಲ್ಲಿ ರಾಮನಾಗಿ ಉಜಿರೆ ಅಶೋಕ್‌ ಭಟ್‌ ತಮ್ಮ ವಾಕ್‌ ಚಾತುರ್ಯದಿಂದ ಮನ ಗೆದ್ದರು. ಸೀತೆಯಾಗಿ ಸಂಜಯ್‌ ಕುಮಾರ್‌ ಗೋಣಿಬೀಡು ಸರಿಸಾಟಿಯಾಗಿ ಅಭಿನಯಿಸಿದರು. ಹನುಮಂತನಾಗಿ ಎಲ್ಲೂರು ರಾಮಚಂದ್ರ ಭಟ್‌ ಇವರ ಅಭಿನಯ ಮನೋಜ್ಞವಾಗಿತ್ತು.

ಯೋಗೀಶ್‌ ಕಾಂಚನ್‌

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ