ಇತಿಹಾಸದ ಪುಟ ಸೇರಿದ ಡೇರೆ ಮೇಳಗಳ ಮಹಾಪರ್ವ


Team Udayavani, May 3, 2019, 6:00 AM IST

deremela

ಸ್ವಾತಂತ್ರ್ಯಪೂರ್ವ ಯಕ್ಷಗಾನ ಮೇಳಗಳು ಬಯಲಾಟಗಳನ್ನಷ್ಟೇ ಪ್ರದರ್ಶಿಸುತ್ತಿದ್ದವು. ಧರ್ಮಸ್ಥಳ, ಕೂಡ್ಲು, ಇಚ್ಲಂಪಾಡಿ ಮುಂತಾದ ಮೇಳಗಳು ಪ್ರಸಿದ್ಧಿಯಲ್ಲಿದ್ದ ಕಾಲವದು. ಜೋಡಾಟ, ಮೂರಾಟಗಳ ಸ್ಪರ್ಧೆಯ ಕುಣಿತಗಳು ಆ ಕಾಲದ ಆಕರ್ಷಣೆಯಾಗಿತ್ತು. ಆದರೆ ಪ್ರದರ್ಶನಗಳನ್ನು ಮಾತ್ರ ಕಾಡಿಬೇಡಿಯೇ ನಡೆಸಬೇಕಾದ ಅನಿವಾರ್ಯತೆ ಇತ್ತು. ಆಡ್ಯರ ಮನೆಯ ಮುಂದೆ ತಲೆತಗ್ಗಿಸಿ ನಿಂತು ಪಡಿಯಕ್ಕಿಗಾಗಿ ಕೈನೀಡಿ ತಾಳಮದ್ದಳೆ ಹಾಕಿ ಅವರನ್ನು ಮೆಚ್ಚಿಸಿ ಆಟ ಆಡಬೇಕಾದ ಪರಿಸ್ಥಿತಿ. ಅವರು ನಿರಾಕರಿಸಿದರೆ ಮೇಳದ ಸದಸ್ಯರಿಗೆ ಏಕಾದಶಿ ಅನಿವಾರ್ಯ. “ಹಲಸಿನ ಹಣ್ಣೇ ನಮ್ಮನ್ನು ಬದುಕಿಸಿದ್ದು’ ಎಂದು ಹೇಳಿದ್ದ ಕಲಾವಿದರು ಅನೇಕರಿದ್ದರು. ಇಂತಹ ಕಷ್ಟಕಾರ್ಪಣ್ಯಗಳ ಕೆಂಡದುಂಡೆಯ ಹಾದಿಯಲ್ಲಿ ನಡೆದು ಯಕ್ಷಗಾನವನ್ನು ಉಳಿಸಿ ಬೆಳೆಸಿದ ಹಿರಿಯ ಕಲಾವಿದರ ಕಲಾ ಅಸ್ಮಿತೆ ಮತ್ತು ಕಷ್ಟ ಸಹಿಷ್ಣುತೆ ನಿಜಕ್ಕೂ ಬೆರಗುಗೊಳಿಸುವಂಥದ್ದು.

ಇದಕ್ಕೊಂದು ಪೂರ್ಣವಿರಾಮವೀಯಲು ಸಂಕಲ್ಪ ಮಾಡಿದವರು ಕಲ್ಲಾಡಿ ಕೊರಗ ಶೆಟ್ಟರು. ಅನ್ಯರ ಮುಂದೆ ಕೈಚಾಚದೆ ಕಲಾವಿದರು ಮತ್ತು ಮೇಳಗಳು ಸ್ವಾಭಿಮಾನದಿಂದ ಬಾಳುವಂತೆ ಆಗಬೇಕೆಂದು ಅವರು ಆರಂಭಿಸಿದ್ದು ಡೇರೆ ಮೇಳ. ದೇಶ ಸ್ವತಂತ್ರವಾಗುತ್ತಿದ್ದಂತೆಯೇ ಕಲಾವಿದರೂ ಸ್ವಾತಂತ್ರ್ಯ ಮತ್ತು ಸ್ವಾಭಿಮಾನದಿಂದ ಬಾಳಲು ಬುನಾದಿ ಹಾಕಿದರು. ಇರಾ ಶ್ರೀ ಸೋಮನಾಥೇಶ್ವರ ಯಕ್ಷಗಾನ ನಾಟಕ ಮಂಡಳಿ ಕುಂಡಾವು 1947ರಲ್ಲಿ ಜೈತ್ರಯಾತ್ರೆಯನ್ನು ಆರಂಭಿಸಿತು.

ಆಯತಾಕೃತಿಯ ಡೇರೆ, ರಂಗಸ್ಥಳದ ಮುಂಭಾಗದಲ್ಲಿ ಪ್ರಥಮ ದರ್ಜೆಯ ಪ್ರೇಕ್ಷಕರಿಗಾಗಿ ಆರಾಮ ಕುರ್ಚಿಗಳು, ಅದಕ್ಕೆ ಪ್ರವೇಶ ದರ ಒಂದೂವರೆ ರುಪಾಯಿ. ಎರಡನೇ ದರ್ಜೆಯ ಪ್ರೇಕ್ಷಕರಿಗಾಗಿ ಸ್ಥಳೀಯ ಶಾಲೆಗಳ ಬೆಂಚುಗಳು. ಈ ಆಸನದ ಪ್ರವೇಶ ದರ ಒಂದು ರುಪಾಯಿ. ಅನಂತರ ಚಾಪೆ. ಪ್ರವೇಶ ದರ ಎಂಟಾಣೆ. ಬಳಿಕ ನೆಲ. ಇಲ್ಲಿಗೆ ಪ್ರವೇಶ ದರ ನಾಲ್ಕಾಣೆ. ಚಾಪೆ ಮತ್ತು ನೆಲ ರಂಗಸ್ಥಳದ ಇಕ್ಕೆಲಗಳಲ್ಲಿ. ಒಟ್ಟು ಒಂದು-ಒಂದೂವರೆ ಸಾವಿರ ಕಲೆಕ್ಷನ್‌ ವ್ಯವಸ್ಥೆ.

ಭಾಗವತರು ಮೈಂದಪ್ಪ ರೈಗಳು, ನೆಡ್ಲೆ ನರಸಿಂಹ ಭಟ್ಟರು ಮದೆಗಾರರು. ಮಲ್ಪೆ ಶಂಕರನಾರಾಯಣ ಸಾಮಗರು, ಅಳಿಕೆ ಮೋನಪ್ಪ ಶೆಟ್ಟಿ, ಬೋಳಾರ ನಾರಾಯಣ ಶೆಟ್ಟಿ, ರಾಮಚಂದ್ರ ಬಲ್ಯಾಯ, ಅಳಿಕೆ ರಾಮಯ್ಯ ರೈ, ಡಾ| ಕೋಳ್ಯೂರು ರಾಮಚಂದ್ರ ರಾವ್‌, ಮಂಕುಡೆ ಸಂಜೀವ ಶೆಟ್ಟಿ…ಹೀಗೆ ಘಟಾನುಘಟಿ ಕಲಾವಿದರ ತಂಡವಾಗಿ ಕುಂಡಾವು ಮೇಳ 1947-48ನೇ ವರ್ಷದ ತಿರುಗಾಟವನ್ನು ಯಶಸ್ವಿಯಾಗಿ ನಡೆಸಿತು.

ಜನಾಕರ್ಷಣೆಗೆ ಬೇಕಾದ ಹೊಸಹೊಸ ಪ್ರಯೋಗಗಳು, ವಿದ್ಯುದ್ದೀಪಗಳು, ಝಗಝಗಿಸುವ ವೇಷಭೂಷಣಗಳು ಮುಂತಾದ ವಿನೂತನ ಆವಿಷ್ಕಾರಗಳು ಯಕ್ಷಗಾನದ ಅನಿವಾರ್ಯ ಭಾಗಗಳಾಯಿತು. ಬಯಲಾಟವೇ ಅಧಿಕವಾಗಿದ್ದ ಯಕ್ಷಗಾನ ಪ್ರದರ್ಶನಗಳನ್ನು ಡೇರೆಯ ಒಳಗೆ ಪ್ರದರ್ಶಿಸಿ ವಿನೂತನ ಕ್ರಾಂತಿಯನ್ನು ಮಾಡಿದ ಕಲ್ಲಾಡಿ ಕೊರಗ ಶೆಟ್ಟರು ಡೇರೆಮೇಳದ ಜನಕನೆಂದೇ ಖ್ಯಾತರಾದರು.

ಮುಂದೆ ಬಯಲಾಟ ಮೇಳವಾಗಿದ್ದ ಧರ್ಮಸ್ಥಳ ಮೇಳ 1962ರಲ್ಲಿ ಡೇರೆಮೇಳವಾಯಿತು. ಜಟಾಧಾರಿ ಮೇಳ, ಮಂತ್ರಾಲಯ ಮೇಳ, ಹಂಪನಕಟ್ಟೆ ಮೇಳ…ಹೀಗೆ ಅನೇಕ ಡೇರೆಮೇಳಗಳು ತಲೆಯೆತ್ತಿದವು. ಹಾಗೆಯೇ ಮಲಗಿದವು.
ಬಡಗುತಿಟ್ಟಿನಲ್ಲಿ ಮೊತ್ತಮೊದಲಿಗೆ ಡೇರೆ ಮೇಳವನ್ನು ಸ್ಥಾಪಿಸುವ ಧೈರ್ಯ ತೋರಿದವರು ಯಜಮಾನ ಶ್ರೀಧರ ಹಂದೆಯವರು. 1968ರಲ್ಲಿ ಸಾಲಿಗ್ರಾಮ ಮೇಳವನ್ನು ಕಟ್ಟಿ ಆದಾಯಕ್ಕಿಂತ ಖರ್ಚು ಹೆಚ್ಚಾಗಿ ಕೈ ಸುಟ್ಟುಕೊಂಡು ಆ ಮೇಳವನ್ನು ಪಳ್ಳಿ ಸೋಮನಾಥ ಹೆಗ್ಡೆಯವರಿಗೆ ನೀಡಿದರು. ಅಷ್ಟಕ್ಕೇ ಹಿಮ್ಮುಖರಾಗದೆ ಮುಂದೆ ಕೋಟ ಅಮೃತೇಶ್ವರೀ ಮೇಳವನ್ನು ಸ್ಥಾಪಿಸಿ, 1970ರಿಂದ 1984ರ ತನಕ ವ್ಯವಸ್ಥಿತವಾಗಿ ನಡೆಸಿದರು. ಉತ್ತರ ಕನ್ನಡದ ಕಲಾವಿದರನ್ನು ದಕ್ಷಿಣ ಕನ್ನಡಕ್ಕೆ ಪರಿಚಯಿಸಿ ಹೊಸ ಸ್ಥಿತ್ಯಂತರಕ್ಕೆ ಕಾರಣರಾದರು. ಉತ್ತರ ಕನ್ನಡದಲ್ಲಿ 1952ರಲ್ಲಿ ಕೆರೆಮನೆ ಶಿವರಾಮ ಹೆಗಡೆಯವರು ಸ್ಥಾಪಿಸಿದ ಇಡಗುಂಜಿ ಮೇಳವೇ ಉತ್ತರ ಕನ್ನಡದ ಮೊದಲ ಡೇರೆಮೇಳ. ಅನಂತರ ಪುರ್ಲೆ, ಬಚ್ಚಗಾರು, ಶಿರಸಿ ಮೇಳಗಳು ತಿರುಗಾಟಕ್ಕೆ ಹೊರಟರೂ ಬಹುಕಾಲ ಬಾಳಲಿಲ್ಲ.

1980ರ ದಶಕದಲ್ಲಿ ತೆಂಕು ಮತ್ತು ಬಡಗು, ಬಡಾಬಡಗುತಿಟ್ಟುಗಳಲ್ಲಿ ಅನೇಕ ಮೇಳಗಳು ಆರಂಭವಾದುದು. ತೆಂಕಿನಲ್ಲಿ ತುಳು ಪ್ರಸಂಗಗಳು, ಬಡಗಿನಲ್ಲಿ ಸಾಮಾಜಿಕ ಪ್ರಸಂಗಗಳು ಜನಾಕರ್ಷಣೆಯ ಕೇಂದ್ರಬಿಂದುಗಳಾಗಿದ್ದವು. ದಿ.ಜಿ.ಆರ್‌.ಕಾಳಿಂಗ ನಾವಡರ ಕ್ರಾಂತಿಕಂಠ ಭಾಗವತಿಕೆಯ ಸ್ವರೂಪವನ್ನೇ ಬದಲಿಸಿತು. ಧರ್ಮಸ್ಥಳ ಮೇಳ, ಇಡಗುಂಜಿ ಮೇಳಗಳು ಸಂಪ್ರದಾಯನಿಷ್ಠ ಮೇಳಗಳಾಗಿ ಪ್ರಜ್ಞಾವಂತ ಪ್ರೇಕ್ಷಕರನ್ನು ಉಳಿಸಿಕೊಂಡವು. ವರ್ಷಕ್ಕೊಂದರಂತೆ ಹುಟ್ಟಿದ ಡೇರೆಮೇಳಗಳು ವರ್ಷಕ್ಕೊಂದರಂತೆ ವಿಶ್ರಾಂತಿ ಪಡೆಯತೊಡಗಿದವು. 1985-86ರ ಹೊತ್ತಿಗೆ ತೆಂಕಿನ ಡೇರೆಮೇಳಗಳು ಸೊರಗತೊಡಗಿದವು. ಅದಕ್ಕೆ ಕಾರಣ ಆ ಕಾಲದ ಕುಖ್ಯಾತ ದರೋಡೆಕೋರ ಚಂದ್ರನ್‌ ಎಂದು ಜನರ ಅಭಿಮತ. ಏನಿದ್ದರೂ ಆ ಕಾಲದಲ್ಲಿ ಬಿದ್ದ ಮೇಳಗಳು ಮತ್ತೆ ಏಳಲೇ ಇಲ್ಲ. ತೆಂಕಿನಲ್ಲಿ ಡೇರೆಮೇಳಗಳ ಮಹಾಪರ್ವ ಈಗ ಇತಿಹಾಸ. ಬಡಗಿನಲ್ಲಿ ಸಾಲಿಗ್ರಾಮ ಮತ್ತು ಪೆರ್ಡೂರು ಮೇಳಗಳು ಅಸ್ತಿತ್ವದಲ್ಲಿವೆ. ಬಡಾಬಡಗಿನಲ್ಲಿ ಕಲಾವಿದ ವಿದ್ಯಾಧರ ಜಲವಳ್ಳಿಯವರು ಡೇರೆಮೇಳವನ್ನು ತಿರುಗಾಟಕ್ಕೆ ಸಜ್ಜುಗೊಳಿಸುವ ಪ್ರಯತ್ನ ನಡೆಸಿದರೂ ಆಟಗಳ ಕೊರತೆ ಆ ಮೇಳವನ್ನು ಕಾಡಿತು.

ಪ್ರಸಿದ್ಧ ಕಲಾವಿದರ ಮಿತಿಮೀರಿದ ಸಂಬಳ, ಸಾಮಾನು-ಸರಂಜಾಮುಗಳ ಸಾಗಾಟದ ಖರ್ಚು, ಹತ್ತಿಪ್ಪತ್ತು ಮಂದಿಗಳಾದರೂ ಡೇರೆ ಕೆಲಸದ ಕಾರ್ಮಿಕರು ಇರಬೇಕಾದ ಅನಿವಾರ್ಯತೆ. ಆಟಗಳ ಸಂಖ್ಯೆ ಹೆಚ್ಚಾಗಿರುವುದು. ಪ್ರಸಂಗಗಳು ಆಕರ್ಷಣೆ ಕಳೆದುಕೊಂಡಿರುವುದು. ಡೇರೆ ಹಾಕಲು ಇರುವ ಮೈದಾನಗಳ ಕೊರತೆ. ಹಣ ಕೊಟ್ಟು ಆಟ ನೋಡುವವರ ಸಂಖ್ಯೆ ಕಡಿಮೆಯಾಗಿರುವುದು…ಹೀಗೆ ಡೇರೆಮೇಳದ ಅವನತಿಗೆ ನೂರಾರು ಕಾರಣಗಳು. ಆದುದರಿಂದ ಹೆಚ್ಚಿನ ಮೇಳಗಳು ಬಯಲಾಟದೆಡೆಗೆ ಹೊರಳುತ್ತಿವೆ. ಇದೀಗ 30-40 ಮೇಳಗಳು ಸಂಚಾರದಲ್ಲಿವೆ. ಹೆಚ್ಚಿನ ಎಲ್ಲಾ ಮೇಳಗಳು ಕಾಲನಿಗೆ ತಲೆಬಾಗಿ ಬಯಲಾಟದ ಮೇಳಗಳಾಗಿಯೇ ತಿರುಗಾಟ ನಡೆಸುತ್ತಿವೆ. ಸಾಲಿಗ್ರಾಮ ಮತ್ತು ಪೆರ್ಡೂರು ಮೇಳಗಳು ಪ್ರವಾಹದ ವಿರುದ್ಧ ಧೈರ್ಯದಿಂದ ಈಜುತ್ತಿವೆ.

-ತಾರಾನಾಥ ವರ್ಕಾಡಿ

ಟಾಪ್ ನ್ಯೂಸ್

New Gang; ಮೋಸದಾಟದಲ್ಲಿ ಸಕ್ರಿಯವಾಗಿದೆ “ಆರ್ಡರ್‌ ಗ್ಯಾಂಗ್‌’

New Gang; ಮೋಸದಾಟದಲ್ಲಿ ಸಕ್ರಿಯವಾಗಿದೆ “ಆರ್ಡರ್‌ ಗ್ಯಾಂಗ್‌’

1-kanwar-msid

Uttara Khand; ಕನ್ವರ್‌ ಯಾತ್ರೆ: ಮಸೀದಿಗೇ ಪರದೆ ಹಾಕಿದ ಹರಿದ್ವಾರ ಆಡಳಿತ!

court

Court; ದೇಶಾದ್ಯಂತ 5 ಕೋಟಿ ಕೇಸು ಇತ್ಯರ್ಥಕ್ಕೆ ಬಾಕಿ: ಉ.ಪ್ರ.ದಲ್ಲೇ ಹೆಚ್ಚು!

robbers

Note!;ಕಳ್ಳತನಕ್ಕೆಂದು ಬಂದವ ತಾನೇ 20 ರೂಪಾಯಿ ನೋಟು ಇಟ್ಟು ಹೋದ!

1-tatoo

Mumbai: 22 ಶತ್ರುಗಳ ಹೆಸರು ಟ್ಯಾಟೂ ಹಾಕಿಸಿಕೊಂಡಾತನ ಕೊಲೆ!

1-wewqewq

Mumbai; 2005ರ ಭೀಕರ ಪ್ರವಾಹ ನೆನಪಿಸಿದ ಮಳೆ!:19 ವರ್ಷ ಹಿಂದಿನ ಸ್ಥಿತಿ ಮರುಕಳಿಸಲಿದೆಯೇ?

rahul-Gandhi-Car

Defamation case; ಪ್ರಚಾರಕ್ಕಾಗಿ ನನ್ನ ವಿರುದ್ಧ ಮಾನಹಾನಿ ಕೇಸ್‌: ರಾಹುಲ್‌ ಆರೋಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3

Yakshagana: ಚಪ್ಪಾಳೆಗಾಗಿ ರಸಾಭಾಸ ಮಾಡಬಾರದು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

MUST WATCH

udayavani youtube

ಸರ್ಕಾರದ ವಿರುದ್ಧ ವಿಧಾನಸಭೆಯಲ್ಲಿ ಬಿಜೆಪಿ-JDS ಶಾಸಕರಿಂದ ಭಜನೆ

udayavani youtube

ಶಿರೂರು ಗುಡ್ಡಕುಸಿತ; ಕಾಣೆಯಾದವರ ಹುಡುಕಾಟಕ್ಕೆ ಡ್ರೋನ್ ಬಳಸಿ ಕಾರ್ಯಾಚರಣೆ

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

ಹೊಸ ಸೇರ್ಪಡೆ

New Gang; ಮೋಸದಾಟದಲ್ಲಿ ಸಕ್ರಿಯವಾಗಿದೆ “ಆರ್ಡರ್‌ ಗ್ಯಾಂಗ್‌’

New Gang; ಮೋಸದಾಟದಲ್ಲಿ ಸಕ್ರಿಯವಾಗಿದೆ “ಆರ್ಡರ್‌ ಗ್ಯಾಂಗ್‌’

1-kanwar-msid

Uttara Khand; ಕನ್ವರ್‌ ಯಾತ್ರೆ: ಮಸೀದಿಗೇ ಪರದೆ ಹಾಕಿದ ಹರಿದ್ವಾರ ಆಡಳಿತ!

court

Court; ದೇಶಾದ್ಯಂತ 5 ಕೋಟಿ ಕೇಸು ಇತ್ಯರ್ಥಕ್ಕೆ ಬಾಕಿ: ಉ.ಪ್ರ.ದಲ್ಲೇ ಹೆಚ್ಚು!

robbers

Note!;ಕಳ್ಳತನಕ್ಕೆಂದು ಬಂದವ ತಾನೇ 20 ರೂಪಾಯಿ ನೋಟು ಇಟ್ಟು ಹೋದ!

Kohli IPL 2024

Champions Trophy; ಕೊಹ್ಲಿ ಪಾಕ್‌ನಲ್ಲಿ ಆಡಲಿ: ಯೂನಿಸ್‌ ಖಾನ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.