ಕಡಲೆ ಸಂಗಮ

Team Udayavani, Nov 23, 2019, 5:10 AM IST

ಬೆಂಗಳೂರಿನ ಸಡಗರವನ್ನು ಮತ್ತಷ್ಟು ಹೆಚ್ಚಿಸುವ ಮಧುರ ಕ್ಷಣವೇ- ಕಡಲೆಕಾಯಿ ಪರಿಷೆ. ಇದು, ಬೆಂಗಳೂರಿನ ಪಾಲಿಗೆ ಪ್ರತಿವರ್ಷವೂ ಜೊತೆಯಾಗುವ ಸಂಭ್ರಮ. ಪರಿಷೆಯಂದರೆ ವೈಭವ. ಅದೊಂದು ಉತ್ಸವ. ಒಂದು ಸಂಸ್ಕೃತಿ. ಮರೆಯದೇ ಆಚರಿಸಲ್ಪಡುವ ಸಂಪ್ರದಾಯ. ಈ ಸಂಭ್ರಮ ಮತ್ತೆ ಬಂದಿದೆ. ನ.25, 26, 27ರಂದು ನಡೆಯುವ ಕಡಲೆಕಾಯಿ ಪರಿಷೆಗೆ ಇಂದಿನಿಂದಲೇ ಸಡಗರ ಜೊತೆಯಾಗಿದೆ…

ನೋಡಲು ಪುಟ್ಟ ಕಡಲೆಕಾಯಿ. ಬೃಹತ್‌ ಬೆಂಗಳೂರನ್ನು ಒಂದು ಮಾಡುವ ಅದರ ಶಕ್ತಿ ಮಾತ್ರ ದೊಡ್ಡದು. ಅದೇ ಕಡಲೆಕಾಯಿ ಪರಿಷೆಯ ಮಹಿಮೆ. “ಟೈಂಪಾಸ್‌ ಕಳ್ಳೇಕಾಯಿ..’ ಎನ್ನುವ ಮಾತನ್ನು ಪಾರ್ಕಿನಲ್ಲೋ, ರಸ್ತೆಯ ಬದಿಯಲ್ಲೋ ಕೇಳುತ್ತಾ ಇದ್ದವರಿಗೆ, ಒಮ್ಮೆಲೇ ಕಣ್ಣೆದುರು ರಾಶಿ ರಾಶಿ ಕಡಲೆಕಾಯಿ ಗುಡ್ಡೆಗಳು ಆಸೆ ಹುಟ್ಟಿಸುತ್ತವೆ. ಪರಿಷೆಗೆ ಹೋಗಿ ಬರುವುದು ಅಂದರೆ, ಒಂದಿಡೀ ದಿನವನ್ನು ಬಸವನಗುಡಿ, ಗಾಂಧಿ ಬಜಾರ್‌, ಚಾಮರಾಜಪೇಟೆಯ ಆ ತುದಿಯಿಂದ ಈ ತುದಿಯವರೆಗೆ ಅಡ್ಡಾಡುತ್ತಲೇ ಕಳೆದು ಬಿಡುವುದು ಎಂದು ನಂಬಿದವರಿದ್ದರು.

ಈಗಲೂ ಇದ್ದಾರೆ. ರಾಮಕೃಷ್ಣಾಶ್ರಮದ ಸರ್ಕಲ್‌ನಿಂದ ಆರಂಭವಾಗಿ, ಬ್ಯೂಗಲ್‌ರಾಕ್‌ ಕಾಮತ್‌ ಹೋಟೆಲ್‌ ಇರುವ ಕೂಡು ರಸ್ತೆಯವರೆಗೂ ಕಡಲೆಕಾಯಿ ಪರಿಷೆಯ ಸಮ್ಮೋಹಕ ಚಿತ್ರಗಳ ಭರಾಟೆಯಿರುತ್ತದೆ. ಎಷ್ಟೋ ಜನರ ಪಾಲಿಗೆ, ಕಡಲೆಕಾಯಿ ಪರಿಷೆಯೆಂಬುದು ಜಾತ್ರೆ. ಅದೊಂದು ಊರ ಹಬ್ಬ. ಅದೊಂದು ಸಂಸ್ಕೃತಿ. ಅದೊಂದು ಆಚರಣೆ. ಪರಿಷೆಯಲ್ಲಿ ಅಲೆದಾಡಿದ ಸಂಭ್ರಮ ಇಡೀ ದಿನ ಜೊತೆಗಿರಲಿ ಎಂದು ಬಯಸುವವರು, ಮೊದಲು ಬಸವಣ್ಣನ ಗುಡಿಗೆ ಹೋಗುತ್ತಾರೆ. ಆನಂತರ ದೊಡ್ಡ ಗಣಪತಿಯ ಆಲಯಕ್ಕೆ.

ದೇವರ ದರ್ಶನದ ನಂತರ, ಅಲ್ಲಿಯೇ ಇರುವ ಕಹಳೆ ಬಂಡೆ ಪಾರ್ಕ್‌ನಲ್ಲಿ ಒಂದು ರೌಂಡ್‌ ಹೊಡೆದು, ಹತ್ತು ನಿಮಿಷ ನಡೆದು ಬಂದರೆ- ಅದು ಗಾಂಧಿ ಬಜಾರ್‌ ಸರ್ಕಲ್‌. ಅಲ್ಲಿಂದ ಹತ್ತು ಹೆಜ್ಜೆ ದೂರದಲ್ಲಿ, ದೋಸೆ­ಪ್ರಿಯರ ಪಾಲಿಗೆ ವಿದ್ಯಾರ್ಥಿ ಭವನ, ಕಾಫಿ ಮತ್ತು ಬೋಂಡಾ ಪ್ರಿಯರ ಪಾಲಿಗೆ ಮಹಾಲಕ್ಷ್ಮಿ ಟಿಫಿನ್‌ ರೂಮ್‌! ಗಾಂಧಿ ಬಜಾರ್‌ಗೆ ಬಂದಮೇಲೆ ವಿದ್ಯಾರ್ಥಿ ಭವನದ ದೋಸೆ ತಿನ್ನದೆ, ರಸ್ತೆಯುದ್ದಕ್ಕೂ ಸಿಗುವ ರುಚಿಯಾದ ತಿನಿಸುಗಳ ಮೆಲ್ಲದೆ ಹೋಗುವುದುಂಟೆ? ಬಸವಣ್ಣನ ದೇವಸ್ಥಾನವನ್ನು ನೋಡಿ ಮನಸ್ಸು ತೃಪ್ತಿ ಪಡೆದರೆ, ವಿದ್ಯಾರ್ಥಿ ಭವನದ ತಿಂಡಿ ಸವಿದು ಹೊಟ್ಟೆಗೂ ಸಂತೃಪ್ತಿ ದೊರೆಯುತ್ತದೆ.

ಕಡಲೆಕಾಯಿ ಪರಿಷೆ ನಡೆಯುವುದು ಬಸವನಗುಡಿಯಲ್ಲಿ ನಿಜ. ಆದರೆ, ಈ ಸಂಭ್ರಮಕ್ಕೆ ಆರಂಭ ಸಿಗುವುದೇ ಚಾಮರಾಜಪೇಟೆಯಿಂದ. ಬ್ಯೂಗಲ್‌ರಾಕ್‌ನಿಂದ ಚಾಮರಾಜಪೇಟೆ ಸರ್ಕಲ್‌ವರೆಗಿನ ಎರಡೂವರೆ ಕಿ.ಮೀ. ದೂರವನ್ನು ಜನ ಖುಷಿಯಿಂದ ಮಾತಾಡಿಕೊಂಡು ಕಾಲ್ನಡಿಗೆಯಲ್ಲೇ ಕ್ರಮಿಸುವುದು ಕಡಲೆಕಾಯಿ ಪರಿಷೆಯ ಇನ್ನೊಂದು ಹೆಚ್ಚುಗಾರಿಕೆ. ಪರಿಷೆಯಲ್ಲಿ ಕಡಲೆಕಾಯಿ ಮಾರುವವರೂ ಚೌಕಾಶಿಗೆ ನಿಲ್ಲುವುದಿಲ್ಲ. ಕೇಳಿದ್ದಕ್ಕಿಂತ ಹೆಚ್ಚಿಗೇ ಕೊಡುತ್ತಾರೆ.

ಪರಿಷೆಗೆ ಬಂದವರಿಗೆ ಮೊದಲಿನಿಂದಲೂ ಇರುವ ಇನ್ನೊಂದು ಆಕರ್ಷಣೆ- ಉಮಾ ಟಾಕೀಸ್‌. ಮಾರ್ನಿಂಗ್‌ ಶೋ ಸಿನಿಮಾ ನೋಡಿಕೊಂಡು, ಅಲ್ಲಿಯೇ ಎಲ್ಲಾದರೂ ಊಟದ ಶಾಸ್ತ್ರ ಮುಗಿಸಿ, ನಂತರ ಕಡ್ಲೆಕಾಯಿ ಪರಿಷೆಯೆಂಬ ಗಿಜಿಗಿಜಿ ಜಾತ್ರೆಗೆ ನುಗ್ಗಿ, ಸಂಜೆಯವರೆಗೂ ಮನದಣಿಯೇ ಸುತ್ತಾಡಿ, ದೇವರ ದರ್ಶನವೂ ಆಯ್ತು, ಪಿಚ್ಚರ್‌ ನೋಡಿದಂತೆಯೂ ಆಯ್ತು ಎಂದು ಖುಷಿಪಡುವವರು ನೂರಲ್ಲ, ಸಾವಿರದ ಸಂಖ್ಯೆಯಲ್ಲಿದ್ದಾರೆ. ಈ ಪರಿಷೆ ಒಂದು ಕೌಟುಂಬಿಕ ಚಿತ್ರವಿದ್ದಂತೆ.

ಗಂಡ, ಹೆಂಡತಿ, ಮಕ್ಕಳು ಕೈಕೈ ಹಿಡಿದು ಓಡಾಡುವ ದೃಶ್ಯಗಳು ಇಲ್ಲಿ ಸಾಮಾನ್ಯ. ಹಾದಿಯುದ್ದಕ್ಕೂ ಹೆಣ್ಮಕ್ಕಳ ಕಣ್ಣು ಕುಕ್ಕುವ ಬಳೆ, ಕಿವಿಯೋಲೆ ಮತ್ತು ಇತರೆ ಆಭರಣಗಳು, ಸೀರೆಯೂ ಸೇರಿದಂತೆ ಹಲವು ಬಗೆಯ ವಸ್ತ್ರಗಳ ಮಾರಾಟ ಮಳಿಗೆಗಳೂ ಇರುತ್ತವೆ. ಪರಿಷೆಗೆಂದು ಬಂದವರು, ಒಂದು ಬ್ಯಾಗ್‌ನಲ್ಲಿ ಕಡಲೆಕಾಯನ್ನೂ, ಇನ್ನೊಂದು ಬ್ಯಾಗಿನಲ್ಲಿ ಇಷ್ಟಪಟ್ಟು ಖರೀದಿಸಿದ ಬಟ್ಟೆ – ಇತ್ಯಾದಿ ವಸ್ತುಗಳನ್ನು ತುಂಬಿಕೊಂಡು, ಸಂತೃಪ್ತಿಯ ಭಾವದಿಂದ ಮನೆಯ ಹಾದಿ ಹಿಡಿಯುತ್ತಾರೆ ಎಂಬಲ್ಲಿಗೆ, ಕಡಲೆಕಾಯಿ ಪರಿಷೆಯ ಹಿಗ್ಗು ಸಂಪನ್ನವಾಗುತ್ತದೆ.

ಪರಿಷೆಯ ಹಿಂದೆ ದೇವನಂದಿ…: ಈಗಿನ ಬಸವನಗುಡಿ ಇರುವ ಪ್ರದೇಶ, ಮೊದಲು ಸುಂಕೇನಹಳ್ಳಿ ಆಗಿತ್ತು. ಈ ಊರಿಗೆ ಹೊಂದಿಕೊಂಡಂತೆ ಮಾವಳ್ಳಿ, ಗುಟ್ಟಳ್ಳಿ, ಹೊಸಕೆರೆಹಳ್ಳಿ, ದಾಸರಹಳ್ಳಿಗಳಿದ್ದವು. ಈ ಹಳ್ಳಿಗಳ ರೈತರೂ ಆಗ ಕಡ್ಡಾಯ ಎಂಬಂತೆ ಕಡಲೆಕಾಯಿ ಬೆಳೆಯುತ್ತಿದ್ದರು. ಬೆಳೆದು ನಿಂತ ಕಡಲೆಕಾಯನ್ನು, ಪ್ರತಿ ಹುಣ್ಣಿಮೆಯ ದಿನ ಒಂದು ಬಸವ ಬಂದು ತಿಂದುಹಾಕುತ್ತಿತ್ತಂತೆ. ಆ ಬಸವನಿಂದ ಬೆಳೆ ಹಾಳಾಗುತ್ತಿದೆ ಎಂದು ಸಿಟ್ಟಿಗೆದ್ದ ರೈತರು, ಅದನ್ನು ಹಿಡಿದುಹಾಕಲು ನಿರ್ಧರಿಸಿ ಒಂದು ರಾತ್ರಿ ಮರೆಯಲ್ಲಿ ಕಾದು ಕುಳಿತರಂತೆ.

ಅವತ್ತೂ ಎಂದಿನಂತೆ ಬಸವ ಬಂತು. ಅದು ಕಡಲೆ ಕಾಯಿ ಗಿಡಕ್ಕೆ ಬಾಯಿ ಹಾಕಿದ ತಕ್ಷಣ, ರೈತರೆಲ್ಲಾ ಕೂಗುತ್ತಾ, ಅದನ್ನು ಹಿಡಿಯಲು ಹೋದರು. ಅವರಿಂದ ತಪ್ಪಿಸಿಕೊಳ್ಳಲು ಬಸವ ಓಡುತ್ತಾ ಹೋಯಿತು. ರೈತರು ಹಿಂಬಾಲಿಸಿದರು. ಕಡೆಗೆ, ಒಂದು ಗುಡ್ಡದ ಮೇಲೆ ಓಡಿದ ಬಸವ, ಮರುಕ್ಷಣವೇ ಮಾಯವಾಯಿತಂತೆ. ಅದನ್ನು ಹಿಡಿಯಲೇಬೇಕು ಎಂದು ಬಂದವರಿಗೆ, ಆ ಗುಡ್ಡದ ಕೆಳಗೆ ಕಲ್ಲಾಗಿ ನಿಂತ ಬಸವನ ವಿಗ್ರಹ ಕಾಣಿಸಿತಂತೆ.

ದಿಢೀರ್‌ ಕಾಣಿಸಿಕೊಂಡ ಆ ವಿಗ್ರಹ ಕಂಡು ರೈತರು ಬೆರಗಾದರು. ತಮ್ಮ ಜಮೀನಿಗೆ ಬರುತ್ತಿದ್ದುದು, ಶಿವನ ವಾಹನವಾದ ನಂದಿಯೇ ಎಂದು ಊಹಿಸಿದರು. ಅದನ್ನು ಹಿಡಿಯಲು ಹೋಗಿದ್ದಕ್ಕೆ ಪರಿತಪಿಸಿದರು. ಬಸವಣ್ಣನನ್ನು, ಅವನಿಗೆ ಪ್ರಿಯವಾಗಿದ್ದ ಕಡಲೆಕಾಯಿಯ ಪ್ರಸಾದವನ್ನೇ ನೀಡುವ ಮೂಲಕ ಪೂಜಿಸಲು ನಿರ್ಧರಿಸಿದರು. ಹೀಗೆ ಆರಂಭವಾದದ್ದೇ ಕಡಲೆಕಾಯಿ ಪರಿಷೆ!

ಎಲ್ಲೆಲ್ಲಿಂದ ಬರುತ್ತವೆ?: ಕೋಲಾರ, ಚಿಂತಾಮಣಿ, ಶ್ರೀನಿವಾಸಪುರ, ಮಾಗಡಿ, ಚಿಕ್ಕಬಳ್ಳಾಪುರ, ತುಮಕೂರು, ಕುಣಿಗಲ್‌ ಅಲ್ಲದೆ, ಆಂಧ್ರಪ್ರದೇಶ, ತಮಿಳುನಾಡಿನ ರೈತರೂ ಕಡಲೆಕಾಯಿಗಳನ್ನು ಮಾರಾಟಕ್ಕೆ ತಂದಿರುತ್ತಾರೆ.

ಯಾವುದು ಆಕರ್ಷಣೆ?: ನಾಟಿ, ಸಾಮ್ರಾಟ್‌, ಜೆಎಲ್‌, ಗಡಂಗ್‌, ಬಾದಾಮಿ ತಳಿಯ ಕಡಲೆಕಾಯಿ…

* ನೀಲಿಮಾ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಮನೋ ಚಿಕಿತ್ಸಾ ಕೇಂದ್ರಗಳ ಕುರಿತಾಗಿ ನಮ್ಮ ನಡುವೆ ಅನೇಕ ತಪ್ಪು ಕಲ್ಪನೆಗಳಿವೆ. "ಹುಚ್ಚಾಸ್ಪತ್ರೆ' ಎಂಬ ಪದಪ್ರಯೋಗವೇ ನಮ್ಮ ನಡುವೆ ಕೆಟ್ಟ ಭಾವವನ್ನು ಹೊಮ್ಮಿಸುತ್ತದೆ....

  • ಚಟುವಟಿಕೆಯ ಚಿಲುಮೆ ರೋನಿಕಾ ಲವಲವಿಕೆಯಿಂದ ರಂಗಪ್ರವೇಶಿಸಿ, ಆತ್ಮವಿಶ್ವಾಸದಿಂದ ನೃತ್ಯ ಪ್ರಸ್ತುತಪಡಿಸಿದ ಬಗೆ ಮುದ ತಂದಿತ್ತು. ಅಂಗಶುದ್ಧಿ, ಕಲಾನೈಪುಣ್ಯದ...

  • ಶ್ರೀಲಂಕೆಯ ದೋಲುಕಂಡ ಪ್ರದೇಶ, ಆಯುರ್ವೇದ ಗಿಡಮೂಲಿಕೆಗಳಿಗೆ ಪ್ರಸಿದ್ಧವಾದ ತಾಣ. ಈ ಕುರಿತು ಸ್ಥಳೀಯರು ಹೇಳುವ ಕಥೆಯೇ ಬೇರೆ. ಸೈನ್ಯದಲ್ಲಿ ಆಘಾತಕ್ಕೊಳಗಾದ ರಾಮನ...

  • ಹೋಟೆಲ್‌ನ ಕಮರ್ಷಿಯಲ್‌ ರೂಲ್ಸ್‌ಗಳನ್ನೆಲ್ಲಾ ತೆಗೆದು ಹಾಕಿ, ಅಪ್ಪಟ ಮನೆಯ ರೀತಿಯಲ್ಲಿ ಆಹಾರ ಪದಾರ್ಥಗಳನ್ನು ತಯಾರಿಸುವುದು, "ಐಯ್ಯಂಗಾರ್‌ ತಟ್ಟೆ ಇಡ್ಲಿ'ಯ...

  • 12ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಅದ್ಧೂರಿಯಾಗಿ ಚಾಲನೆಗೊಂಡಿದೆ. ಜಗತ್ತಿನ ನೂರಾರು ಸಿನಿಮಾಗಳನ್ನು ಒಂದೆಡೆ ನೋಡುವಂಥ ಅವಕಾಶ ಸಿನಿಪ್ರಿಯರಿಗೆ....

ಹೊಸ ಸೇರ್ಪಡೆ