ಗೋಕಾಕ್‌ “ಮಾದರಿ’ ವಿಡಿಯೊ

ಕನ್ನಡಿಗರ ಹೋರಾಟದ ಏಕೈಕ ವಿಡಿಯೊ ಕತೆ

Team Udayavani, Nov 2, 2019, 4:11 AM IST

ಕನ್ನಡಿಗರನ್ನು ಅಪಾರ ಸಂಖ್ಯೆಯಲ್ಲಿ ಒಟ್ಟುಗೂಡಿಸಿದ ಹೋರಾಟವೇ, ಗೋಕಾಕ್‌ ಚಳವಳಿ. ಆ ಐತಿಹಾಸಿಕ ಘಟನೆಯ ಹತ್ತಾರು ಫೋಟೊಗಳ ಸಂಗ್ರಹವೇನೋ ಇದೆ. ಆದರೆ, ಆ ಚಳವಳಿಯನ್ನು ವಿಡಿಯೊ ರೂಪದಲ್ಲಿ ಸೆರೆ ಹಿಡಿದ ಏಕೈಕ ಕನ್ನಡಿಗ, ಬಿ.ಎಸ್‌. ಮನೋಹರ್‌. ಇತ್ತೀಚೆಗೆ ತೆರೆಕಂಡ “ಗೀತಾ’ ಚಿತ್ರದಲ್ಲೂ ಇವರು ಚಿತ್ರೀಕರಿಸಿದ ವಿಡಿಯೊದ ಪುಟ್ಟ ಝಲಕ್‌ ತೋರಿಸಲಾಗಿದೆ. ವಿಡಿಯೊ ಚಿತ್ರೀಕರಣವೇ ಸಾಹಸವೆನ್ನುವ ಆ ಕಾಲದಲ್ಲಿ, ವಿದೇಶಗಳಿಗೂ ಹೋಗಿಬಂದ, ಚಳವಳಿಯ ದೃಶ್ಯಾವಳಿ ಕತೆ ಹೀಗಿದೆ…

1982, ಏಪ್ರಿಲ್‌ 17ರ ಬೆಳಗ್ಗೆ 10 ಗಂಟೆಯ ಸುಮಾರು. ಗೋಕಾಕ್‌ ಚಳವಳಿಗೆ, ಪ್ರಥಮ ಬಾರಿಗೆ ವರನಟ ಡಾ. ರಾಜ್‌ಕುಮಾರ್‌ ಪ್ರವೇಶ ಕೊಟ್ಟ ಸುವರ್ಣ ಘಳಿಗೆ ಅದು. ಬೆಂಗಳೂರಿನ ಮೈಸೂರು ಬ್ಯಾಂಕ್‌ ಸರ್ಕಲ್‌ನಲ್ಲಿ ಕನ್ನಡಿಗರು ಕಿಕ್ಕಿರಿದಿದ್ದರು. ಶಿವರಾಮ್‌, ಅಂಬರೀಶ್‌, ಮುಸುರಿ ಕೃಷ್ಣಮೂರ್ತಿ, ಹೊನ್ನಪ್ಪ ಭಾಗವತರ್‌  ಸೇರಿದಂತೆ ಬಹುತೇಕ ಗಣ್ಯರ ಸಮಾಗಮ. ಮೈಸೂರು ಬ್ಯಾಂಕ್‌ ಸರ್ಕಲ್‌ನಿಂದ ವಿಧಾನಸೌಧದವರೆಗೆ ಸಾಗಿಬಂದ ಮೆರವಣಿಗೆಯಲ್ಲಿ, ಒಬ್ಬರ ನೆರಳು ಮತ್ತೂಬ್ಬರಿಗೆ ಕಾಣಿಸುತ್ತಿರಲಿಲ್ಲ. ಅಷ್ಟು ಜನಸಂದಣಿ. ಆ ಐತಿಹಾಸಿಕ ದೃಶ್ಯ ಸೆರೆಹಿಡಿಯಲು, ಸ್ಟಿಲ್‌ ಫೋಟೊಗ್ರಾಫ‌ರ್‌ಗಳೇನೋ ಇದ್ದರು;

ಆದರೆ, ಡಾಕ್ಯುಮೆಂಟರಿ ಮಾಡುವ ವಿಡಿಯೋಗ್ರಾಫ‌ರ್‌ ಇದ್ದಿರಲಿಲ್ಲ. ಚಳವಳಿಯನ್ನು ದೃಶ್ಯ ಮಾದರಿಯಲ್ಲಿ ಸೆರೆಹಿಡಿಯಲು ನಾನು ಹೋಗಿದ್ದೆ. ಅದೆಲ್ಲಿದ್ದರೋ ಕಿಡಿಗೇಡಿಗಳು, ಕಾರು- ಬೈಕುಗಳನ್ನು ಸುಟ್ಟು, ಸಭೆಗೆ ಭಗ್ನ ತಂದಿದ್ದರು. ಕನ್ನಡಿಗರ ಹೋರಾಟ ಅಲ್ಲಿಗೇ ನಿಲ್ಲಲಿಲ್ಲ. ಗೋಕಾಕ್‌ ಚಳವಳಿ ಕಾವು ಪಡೆಯಿತು. ರಾಜ್‌ಕುಮಾರ್‌ರ ನೇತೃತ್ವದಲ್ಲೇ ಹೋರಾಟಕ್ಕೆ ಸಜ್ಜಾದರು, ಕನ್ನಡಿಗರು. ಏಪ್ರಿಲ್‌ 20ರಿಂದ ಒಂದು ತಿಂಗಳು ರಾಜ್‌, ನಾಡಿನ ಉದ್ದಗಲಕ್ಕೂ ಓಡಾಡಿ, ಚಳವಳಿಗೆ ಶಕ್ತಿ ತುಂಬಿದರು. ಬೆಳಗಾವಿಯಿಂದ ಹೊರಟ ಜಾಥಾ, ಇಡೀ ರಾಜ್ಯ ತಿರುಗಿತು.

ಅಣ್ಣಾವ್ರು ಬರ್ತಾರೆ ಅಂತಾದ್ರೆ ಜನ ಮಧ್ಯರಾತ್ರಿವರೆಗೂ ಕಾಯುತ್ತಿದ್ದರು. ಅದರಲ್ಲೂ 90 ವರ್ಷದ ವೃದ್ಧೆಯೊಬ್ಬಳು, ಈ ಮೇರುನಟನನ್ನು ನೋಡಲಿಕ್ಕಾಗಿಯೇ ರಾತ್ರಿಯಿಡೀ, ಸುರಿವ ಮಳೆಯಲ್ಲಿ ಛತ್ರಿ ಹಿಡಿದು ಕಾದಿದ್ದಳು. ಅವರು ಬಂದಲ್ಲೆಲ್ಲ ರೊಟ್ಟಿ- ಚಟ್ನಿಯ ಉಪಚಾರ…- ಈ ಸುದ್ದಿಗಳನ್ನೆಲ್ಲ ರೇಡಿಯೊದಲ್ಲಿ ಕೇಳುವಾಗ, ಕನ್ನಡಿಗರ ಬಗ್ಗೆ ಹೆಮ್ಮೆ ಮೂಡುತ್ತಿತ್ತು. ಅದೇ ಸಮಯದಲ್ಲಿ, ಬೆಂಗಳೂರಿನಲ್ಲೂ ಚಳವಳಿ ತೀವ್ರ ಸ್ವರೂಪ ಪಡೆದಿತ್ತು. ಪ್ರತಿದಿನ ಇಲ್ಲಿ ಉಪವಾಸ ಸತ್ಯಾಗ್ರಹ, ಧರಣಿ, ಟೌನ್‌ಹಾಲ್‌, ಹೈಕೋರ್ಟ್‌ ಮುಂದೆಲ್ಲ ಹೋರಾಟ. ಆಗ ಚಂಪಾ ಅವರು “ಕನ್ನಡ ಕನ್ನಡ, ಬನ್ನಿ ನಮ್ಮ ಸಂಗಡ’ ಅಂತ ಕರೆ ನೀಡಿದ್ದರು. ಅದರಿಂದ ಪ್ರೇರಿತರಾದ ಜನ ಸ್ವ ಇಚ್ಛೆಯಿಂದ ಹೋರಾಟದಲ್ಲಿ ಪಾಲ್ಗೊಂಡು, ಪೊಲೀಸ್‌ ವ್ಯಾನ್‌ ಹತ್ತುತ್ತಿದ್ದರು. ಈ ಅಪರೂಪದ ಘಟನೆಗಳನ್ನೆಲ್ಲ ದೃಶ್ಯದಲ್ಲಿ ಸೆರೆಹಿಡಿದಿದ್ದೇನೆ.

ಮೈಸೂರಿನಲ್ಲಿ ಹೋರಾಟದ ಸಮಾರಂಭ ಏರ್ಪಟ್ಟಾಗ, ಬ್ಯಾಂಕ್‌ಗೆ ರಜೆ ಹಾಕಿ, ಕ್ಯಾಮೆರಾ ಎತ್ತಿಕೊಂಡು ಹೋಗಿದ್ದೆ. ಅನಂತನಾಗ್‌, ಶಂಕರ್‌ನಾಗ್‌, ತರಾಸು, ಪಾರ್ವತಮ್ಮ, ವಿಷ್ಣುವರ್ಧನ್‌, ಸಿನಿಮಾ ತಂತ್ರಜ್ಞರು, ಸಾಹಿತಿಗಳ ದಂಡೇ ಸೇರಿತ್ತು. ಸಾವಿರಾರು ಜನರು ಸೇರಿದ್ದರು. ಕೊನೆಯಲ್ಲಿ ರಾಜ್‌ ಅವರ ಭಾಷಣ. ಹತ್ತಡಿ ದೂರದಲ್ಲಿ ನನ್ನ ಕ್ಯಾಮೆರಾ ರೋಲ್‌ ಆಗುತ್ತಿತ್ತು. ಸುತ್ತಲೂ ನೋಡಿ, ಭಾವುಕರಾಗಿ, ಕಚೀಫ್ ಅನ್ನು ಮುಖದ ಮೇಲೆ ಹಾಕಿಕೊಂಡು, ಒಂದೇ ಸಮನೆ ಕಣ್ಣೀರು ಸುರಿಸಿಬಿಟ್ಟರು. ಅಂಥ ಮಹಾನ್‌ ವ್ಯಕ್ತಿ ಅಳುವುದೆಂದರೇನು? ನಾನು ಆ ಕ್ಷಣವನ್ನು ಸೆರೆ ಹಿಡಿಯಬಹುದೋ, ಸೆರೆ ಹಿಡಿದರೆ ಜನ ಎಲ್ಲಿ ಸಿಟ್ಟಾಗುತ್ತಾರೋ ಅಂತ ಗಾಬರಿಯಾಗಿದ್ದೆ. ಕೊನೆಗೂ, ಧೈರ್ಯ ಮಾಡಿ, ಅದನ್ನು ದೃಶ್ಯೀಕರಿಸಿದ್ದೆ. ಕೆಲ ಕ್ಷಣಗಳ ನಂತರ, ತಮ್ಮನ್ನು ತಾವು ಸಂತೈಸಿಕೊಂಡು ರಾಜ್‌, ಮಾತು ಆರಂಭಿಸಿದ್ದರು.

ಈಗ ಮೊಬೈಲ್‌ನಲ್ಲಿ ಸೆಕೆಂಡ್‌ಗಳೊಳಗೆ ವಿಡಿಯೊ ಶೂಟ್‌ ಮಾಡಿ, ಅಲ್ಲಿಯೇ ಎಡಿಟ್‌ ಮಾಡಿ, ತಕ್ಷಣ ಶೇರ್‌ ಮಾಡಿ ಬಿಡಬಹುದು. ಆದರೆ, ಹಿಂದೆ ಹೀಗಿರಲಿಲ್ಲ. ಏಪ್ರಿಲ್‌- ಜೂನ್‌, ಬೆಂಗಳೂರಿನಲ್ಲಿ ನಡೆದ ಚಳವಳಿ ಹಾಗೂ ಮೈಸೂರಿನಲ್ಲಿ ನಡೆದ ಜಾಥಾದ ಸುಮಾರು ಎರಡೂವರೆ ಗಂಟೆಯ ಫ‌ೂಟೇಜ್‌ ನನ್ನ ಬಳಿ ಇದೆ. ಅಂದು “ಸೂಪರ್‌ 8 ಮಿ.ಮೀ. ಕ್ಯಾಮೆರಾ’ದಲ್ಲಿ, ನಾಲ್ಕೈದು ನಿಮಿಷದ ವಿಡಿಯೊ ಸೆರೆ ಹಿಡಿಯಲು, 400- 500 ರೂ. ತಗುಲುತ್ತಿತ್ತು. ಆ ವಿಡಿಯೊಗಳನ್ನು ಪ್ರೊಸೆಸಿಂಗ್‌ಗಾಗಿ ಲ್ಯಾಬೊರೇಟರಿಗೆ ಕಳಿಸಬೇಕಿತ್ತು. ಆದರೆ, ಭಾರತದಲ್ಲಿ ಲ್ಯಾಬ್‌ ಇರಲಿಲ್ಲ. “ಕೊಡಾಕ್‌’ ಆದರೆ ಸಿಂಗಾಪುರವನ್ನೂ, “ಅಗಾ#’ ಆದರೆ ಜರ್ಮನಿಯನ್ನೂ ಆಶ್ರಯಿಸಬೇಕಿತ್ತು. “ಗೋಕಾಕ್‌’ ವಿಡಿಯೊದ ಕಾಟ್ರಿಡ್ಜ್ಗಳನ್ನು ಅಲ್ಲಿಗೆಲ್ಲ ಕಳಿಸಿದ್ದೆ.

ಆ ದೂರದ ದೇಶಗಳಿಂದ ವಿಡಿಯೊ, ನೋಡಲು ಯೋಗ್ಯ ರೂಪ ಪಡೆದು (ಫಾರ್ಮೆಟ್‌) ವಾಪಸು ಬರಲು, ಒಂದು ತಿಂಗಳು ಬೇಕಾಗುತ್ತಿತ್ತು. ಅಂಚೆಯ ಖರ್ಚು, ಪ್ರೊಸೆಸಿಂಗ್‌ ಶುಲ್ಕ ಎಲ್ಲಾ ಸೇರಿ, ಐದು ನಿಮಿಷದ ಫಿಲ್ಮ್ಗೆ ಸಾವಿರ ರೂ. ತಗುಲುತ್ತಿತ್ತು. ಎರಡೂವರೆ ಗಂಟೆಯ ರಾ ಫ‌ೂಟೇಜ್‌ ಈಗಲೂ ನನ್ನ ಬಳಿ ಇದೆ. ಅರ್ಧ ಗಂಟೆಯ ಪ್ರೊಸೆಸ್ಡ್ ವಿಡಿಯೊ ಈಗಾಗಲೇ ಹಲವೆಡೆ ಪ್ರದರ್ಶನ ಕಂಡಿದೆ. ಚಾಮುಂಡೇಶ್ವರಿ ಸ್ಟುಡಿಯೊದಲ್ಲಿ ರಾಜ್‌ಕುಮಾರ್‌ ಶೂಟಿಂಗ್‌ನಲ್ಲಿದ್ದಾಗ, ಅಲ್ಲಿಗೆ ಹೋಗಿ, ಚಳವಳಿಯ ವಿಡಿಯೊ ತೋರಿಸಿದ್ದೆ. ಬಹಳ ಸಂತಸಪಟ್ಟಿದ್ದರು.

ಆ ಕಾಲದಲ್ಲಿ ಸುದ್ದಿ ವಾಹಿನಿಗಳು ಇರಲಿಲ್ಲ. ಇಂಥದ್ದೊಂದು ಮಹತ್ವದ ಘಟನೆ ನಡೆಯುತ್ತಿರುವಾಗ, ಅದನ್ನು ಸೆರೆ ಹಿಡಿಯದೆ ಸುಮ್ಮನೆ ಕುಳಿತಿರಬಾರದು ಅನ್ನಿಸಿತು. ಫೋಟೊಗ್ರಫಿ ಮತ್ತು ವಿಡಿಯೊಗ್ರಫಿಯಲ್ಲಿ ಆಸಕ್ತಿ ಇದ್ದ ನಾನು, ಸುಮಾರು ಡಾಕ್ಯುಮೆಂಟರಿಗಳನ್ನು ಮಾಡಿದ್ದೇನೆ. ರಾಜೀವ್‌ ಗಾಂಧಿ ರಾಜಕೀಯ ಪ್ರವೇಶದ ದಿನ ನಡೆದ ರ್ಯಾಲಿ, ಶ್ರವಣಬೆಳಗೊಳದ ಮಹಾಮಸ್ತಕಾಭಿಷೇಕಕ್ಕೆ ಇಂದಿರಾ ಗಾಂಧಿ ಹೆಲಿಕಾಪ್ಟರ್‌ನಲ್ಲಿ ಬಂದಿಳಿದಿದ್ದು, ಕಳ್ಳಭಟ್ಟಿ ದುರಂತ ನಡೆದಾಗ ಅದನ್ನು ಸೆರೆ ಹಿಡಿದು, ಜಾಗೃತಿಗಾಗಿ ಮಾಡಿದ ಡಾಕ್ಯುಮೆಂಟರಿ, ವೀನಸ್‌ ಸರ್ಕಸ್‌ ದುರಂತ… ಹೀಗೆ ಐತಿಹಾಸಿಕ ಸಂತೋಷಗಳೂ, ಕರಾಳ ನೆನಪುಗಳ ಛಾಯೆಯನ್ನೂ ಸೆರೆಹಿಡಿದಿದ್ದೇನೆ.

“ಆ ಏಟು ನನಗೆ ಬೀಳಬಾರದಿತ್ತೇ?’: ಚಳವಳಿಯಲ್ಲಿ ಭಾಗವಹಿಸಿದವರಿಗೆ ಧನ್ಯವಾದ ಹೇಳಲು ಡಾ. ರಾಜ್‌ಕುಮಾರ್‌, ನ್ಯಾಷನಲ್‌ ಕಾಲೇಜು ಮೈದಾನದಲ್ಲಿ ಸಭೆ ಆಯೋಜಿಸಿದ್ದರು. ಅದೊಂದು ಬೃಹತ್‌ ಸಭೆ. ಅವತ್ತೂ ಗಲಾಟೆ ಆಗಿತ್ತು. ಶಂಕರಪುರಂನಲ್ಲಿ ಸಭೆ ನೋಡಲು ಬಂದಿದ್ದ ಒಬ್ಬ ಹುಡುಗ, ಗುಂಡೇಟಿಗೆ ಬಲಿಯಾದ. ಅವತ್ತು ರಾಜ್‌ ತುಂಬಾ ನೊಂದಿದ್ದರು. “ಒಬ್ಬ ಮುಗ್ಧ ಯುವಕ ಪ್ರಾಣ ಕಳಕೊಂಡ. ಆ ಗುಂಡೇಟು ನನಗೇ ಬೀಳಬೇಕಿತ್ತು’ ಅಂತ ಗದ್ಗದಿತರಾಗಿದ್ದರು.

ನಿರೂಪಣೆ: ಪ್ರಿಯಾಂಕ ಎನ್‌.

ಇಲ್ಲಿಯವರೆಗೂ ಏಷ್ಟೋ ದೈವ ದೇವರು ಜ್ಯೋತಿಷ್ಯರಲ್ಲಿ ಕೇಳಿ ಸರಿಯಾದ ಪರಿಹಾರ ಸಿಗದೆ ನೊಂದಿದ್ದರೆ.ಅಂತಃಹ ಯಾವುದೇ ಕಠಿಣ ಸಮಸ್ಯೆ ಗಳಿದ್ದರು ಉತ್ತಮ ಸಲಹೆ ಹಾಗೂ ಶಾಶ್ವತ ಪರಿಹಾರ ತಿಳಿಸುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 8884889444

ಈ ವಿಭಾಗದಿಂದ ಇನ್ನಷ್ಟು

  • ಜಗತ್ತಿನ ವಿಶೇಷ ವೃತ್ತಿಗಳಲ್ಲಿ ಹ್ಯಾಂಗ್‌ಮ್ಯಾನ್‌ ಕೆಲಸವೂ ಒಂದು. ಪಾಪಿಗಳನ್ನು ನೇಣಿಗೇರಿಸಿ, ಅವರ ಬದುಕಿಗೆ ಅಂತ್ಯ ಬರೆಯುವಾತನೆ ಹ್ಯಾಂಗ್‌ಮ್ಯಾನ್‌. ನಿರ್ಭಯಾ...

  • ಕನ್ನಡ‌ದ ಗರುಡ ಅಂತಲೇ ಬಣ್ಣಿಸಲ್ಪಟ್ಟಿದ್ದ ಚಿ.ಮೂ. ಇತ್ತೀಚೆಗೆ ನಮ್ಮಿಂದ ದೂರ ನಡೆದರು. ಪಂಪ, ಹರಿಹ‌ರ, ರಾಘವಾಂಕ, ರತ್ನಾಕರವರ್ಣಿಯ ವಂಶ‌ದ ಜಾಡು ಹಿಡಿದು ಹೊರಟ ಅಂದಿನ...

  • ಹಂಪಿಯಲ್ಲೊಂದು ವಿಶೇಷ ಹರಕೆಯೂ ಉಂಟು. ಹುಡುಗರಿಗೆ ಕಾಯಿಲೆ- ಕಸಾಲೆಗಳಾದರೆ ಜಾತ್ರೆಯಲ್ಲಿ ಅವನಿಗೆ ಹನುಮನ ವೇಷ ಹಾಕಿಸುತ್ತೇವೆ ಎಂದು ಹರಕೆ ಹೊರುತ್ತಾರೆ... ಶ್ರೀರಾಮ...

  • ಲಾಲ್‌ಬಾಗ್‌ನಲ್ಲಿ ಹೇಗೂ ಗಣರಾಜ್ಯೋತ್ಸವದ ಸಡಗರ ಏರ್ಪಟ್ಟಿದೆ. ಅಲ್ಲಿಗೆ ಹೋದಾಗ, ಸಸ್ಯಕಾಶಿಯಲ್ಲಿ ಮೌನವಾಗಿ ನಿಂತು, ನೆರಳನ್ನು ಹಬ್ಬಿಸುತ್ತಿರುವ, ವಿದೇಶಿ ಮೂಲದ...

  • ಸ್ವಾಮಿ ವಿವೇಕಾನಂದರ 157ನೇ ಜನ್ಮ ದಿನದ ಹಿನ್ನೆಲೆಯಲ್ಲಿ, ಈ ಬಾರಿಯ ಗಣರಾಜ್ಯೋತ್ಸವ ಫ‌ಲಪುಷ್ಪ ಪ್ರದರ್ಶನವನ್ನು ವಿವೇಕಾನಂದರಿಗೆ ಮೀಸಲಿಡಲಾಗಿದೆ. ಶುಕ್ರವಾರದಿಂದ...

ಹೊಸ ಸೇರ್ಪಡೆ