ಗಾಂಧಾರಿ ಬಾಣಸಿಗನ ಕತೆ

Team Udayavani, Oct 12, 2019, 4:10 AM IST

ಕಣ್ಣಗಲಿಸಿಕೊಂಡು ಅಡುಗೆ ಮಾಡುವವರಿಗೇ, ಒಮ್ಮೊಮ್ಮೆ ಪಾಕಪ್ರಯೋಗಗಳು ಕೈಕೊಡುತ್ತವೆ ಅಥವಾ ರುಚಿಸುವುದೇ ಇಲ್ಲ. ಇನ್ನು ಈ ಹುಡುಗ ಏನು ಮಾಡಿಯಾನು? ಎಂದು ಅಚ್ಚರಿಪಟ್ಟೆ. ನನ್ನ ಪ್ರಶ್ನೆಗಳೆಲ್ಲ ಉಲ್ಟಾ ಹೊಡೆದವು. ಆತ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು, ಲೀಲಾಜಾಲವಾಗಿ ಸ್ವಾದಿಷ್ಟ ಖಾದ್ಯಗಳನ್ನು ಸಿದ್ಧಗೊಳಿಸುತ್ತಿದ್ದ. ಅಡುಗೆಯನ್ನು ಆರ್ಟ್‌ ಆಗಿ ಸ್ವೀಕರಿಸುವ ಈ ತಪಸ್ವಿಯ, “ಗಾಂಧಾರಿ ಕಲೆ’ಯೇ ಒಂದು ವಿಸ್ಮಯ…

ಅಲ್ಲಿ ಆಹಾರಪ್ರಿಯರೆಲ್ಲ ಇರುವೆಯಂತೆ ಲಗ್ಗೆ ಇಟ್ಟಿದ್ದರು. ಬೆಂಗಳೂರಿನ ಆರ್‌.ಟಿ. ನಗರದ ಮೈದಾನದಲ್ಲಿ ಹಾಗೆ ಜಾತ್ರೆ ರೂಪುಗೊಳ್ಳಲು ಕಾರಣ ಒಂದು, “ಅಡುಗೆ’ ಎನ್ನುವ ಆಕರ್ಷಣೆ. ಇನ್ನೊಂದು, ಅಲ್ಲಿಗೆ ಬಂದಿದ್ದ ಒಬ್ಬ ವಿಶಿಷ್ಟ ಬಾಣಸಿಗ. ಆತ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು, ಅಕ್ಷರಶಃ ಗಾಂಧಾರಿಯಂತೆ ನಿಂತುಬಿಟ್ಟಿದ್ದ. ಮಹಾಭಾರತದಲ್ಲಿ ಗಾಂಧಾರಿ ಏನಾದರೂ, ಅಡುಗೆ ಮಾಡುವಂತಿದ್ದರೆ, ಆ ದೃಶ್ಯಗಳು ಹೇಗಿರುತ್ತಿದ್ದವು? ಎನ್ನುವುದನ್ನು ನಿಂತಲ್ಲೇ ನಾವೆಲ್ಲ ಕಲ್ಪಿಸಿಕೊಳ್ಳುತ್ತಿದ್ದೆವು.

“ದೃಷ್ಟಿಶೂನ್ಯನಂತೆ ನಟಿಸಿ, ಅದ್ಹೇಗೆ ನಳ ಮಹಾರಾಜನ ಪೌರುಷ ತೋರುತ್ತಾನೆ?’ ಅನ್ನೋದು ನಮ್ಮ ಪ್ರಶ್ನೆಯಾಗಿತ್ತು. ಕಣ್ಣಗಲಿಸಿಕೊಂಡು ಅಡುಗೆ ಮಾಡುವವರಿಗೇ, ಒಮ್ಮೊಮ್ಮೆ ಪಾಕಪ್ರಯೋಗಗಳು ಕೈಕೊಡುತ್ತವೆ ಅಥವಾ ರುಚಿಸುವುದೇ ಇಲ್ಲ. ಇನ್ನು ಈ ಹುಡುಗ ಏನು ಮಾಡಿಯಾನು? ಎಂಬ ಅಚ್ಚರಿ ಕೆಲವರಿಗಾದರೆ, ಬೆಂಕಿಯ ಜೊತೆಗೆ ಇಂಥ ಚೆಲ್ಲಾಟ ಬೇಕಿರಲಿಲ್ಲವೇನೋ ಎನ್ನುವ ಕಳಕಳಿ ಮತ್ತೂಂದಿಷ್ಟು ಮಂದಿಗೆ.

ಕುತೂಹಲದಿಂದ ಅರಳಿದ ಇಂಥ ನೂರಾರು ಕಣ್ಣುಗಳ ಮಧ್ಯೆ, ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ನಿಂತ ಯುವಕ ಮಾತ್ರ ಯಾವೊಂದೂ ಯೋಚನೆಯಿಲ್ಲದೇ, ಕೈಯಲ್ಲಿ ಸೌಟು ಹಿಡಿದಿದ್ದ. ಸುತ್ತಲೂ ಇಟ್ಟುಕೊಂಡಿದ್ದ, ಪದಾರ್ಥಗಳನ್ನು ಅತ್ಯಂತ ಕರಾರುವಾಕ್ಕಾಗಿ ಗುರುತಿಸಿ, ಉರಿಯ ಮೇಲಿದ್ದ ಬಾಣಲೆಗೆ ಹಾಕುತ್ತಿದ್ದ. “ಚೊಂಯ್ಯ್ ಚೊಂಯ್ಯ್’ ಎನ್ನುವ ಶ್ರುತಿಯೊಂದಿಗೆ, ಬಾಣಲೆ ತನ್ನೊಳಗೇ ಪಾಕ ಕಲಾಕೃತಿಯನ್ನು ಅರಳಿಸಿಕೊಳ್ಳುತ್ತಿತ್ತು. ಬಾಣಸಿಗ ನಸುನಗೆಯೊಂದಿಗೆ, ತನ್ನ ಕ್ರಿಯೆಯಲ್ಲಿ ಮಗ್ನನಾಗಿದ್ದ.

ಅದೇನು ಪರಿಮಳವೋ. ಅಲ್ಲಿದ್ದ ಅನೇಕರಿಗೆ ಪರಿಮಳದಲ್ಲೇ ಆತ ಮೋಡಿ ಮಾಡಿಬಿಟ್ಟ. ಮೂಲತಃ ಉಡುಪಿಯವನಾಗಿ, ಗಂಗಾವತಿಗೆ ಗುಳೆ ಹೋಗಿ, ಬದುಕು ಕಟ್ಟಿಕೊಂಡ ಈ ಬಾಣಸಿಗನ ಹೆಸರು, ಸಂದೇಶ್‌ ಅಡುಗೆಮನೆ. ಇಪ್ಪತ್ತೇಳು ವರುಷದ, ಪಾಕ ನಿಸ್ಸೀಮ. ಪ್ರಸ್ತುತ, ಹೈದರಾಬಾದ್‌ನ ತಾಜ್‌ ಹೋಟೆಲ್‌ನಲ್ಲಿ ಹೆಡ್‌ ಶೆಫ್ (ಮುಖ್ಯ ಬಾಣಸಿಗ) ಆಗಿ, ಅಲ್ಲಿ ಕರುನಾಡಿನ ಖಾದ್ಯಸಂಸ್ಕೃತಿಯ ಪರಿಮಳವನ್ನು ಹಬ್ಬಿಸುತ್ತಿದ್ದಾನೆ. ಆಗಾಗ್ಗೆ, ಬೆಂಗಳೂರಿಗೆ ಬಂದು, ಹೀಗೆ ವಿಸ್ಮಯಗೊಳಿಸಿ, ಹೋಗುತ್ತಾನೆ.

ನನಗೆ ಈತನ ಬಗ್ಗೆ ಕುತೂಹಲ ತಡೆಯಲಾಗಲಿಲ್ಲ. “ಗಾಂಧಾರಿಯಂತೆ ಬಟ್ಟೆ ಕಟ್ಟಿಕೊಂಡು, ಅದ್ಹೇಗೆ ಅಡುಗೆ ಮಾಡುತ್ತೀರಿ?’ ಎಂದು ಕೇಳಿದೆ. “ಹೊರಗಿನ ಕಣ್ಣು ಮುಚ್ಚಿದ್ದರೂ ದೇಹವೇ ಕಣ್ಣಾಗಿ ನನ್ನೊಳಗಿನ ಚೈತನ್ಯ ಜಾಗೃತವಾಗುತ್ತದೆ. ಅಡುಗೆಯ ಪರಿಮಳವೇ ಪದಾರ್ಥದ ರುಚಿಯನ್ನು, ಬೆಂದ ಹದವನ್ನೂ ಸೂಕ್ಷ್ಮವಾಗಿ ಹೇಳುತ್ತದೆ. ಹೀಗಾಗಿ, ನಾನು ಈ ಹೊತ್ತಿನಲ್ಲಿ ನನ್ನ ಲಕ್ಷ್ಯವನ್ನು ಪರಿಮಳದತ್ತ ಕೇಂದ್ರೀಕರಿಸುತ್ತೇನೆ’ ಎಂದು ತನ್ನ ಅಡುಗೆಯ ಗುಟ್ಟನ್ನು ಹೇಳಿದ.

“ಇದು ಸರಸವಲ್ಲ, ಸಾಹಸವೂ ಅಲ್ಲ. ಕಲೆಯನ್ನು ಕ್ಯಾನ್ವಾಸ್‌ನ ಮೇಲೆ, ಚಿತ್ರಿಸುವುದಿಲ್ಲವೇ. ಇದೂ ಹಾಗೇ. ಆದರೆ, ಎಲ್ಲ ದಿನವೂ ನನ್ನ ದಿನವೇ ಆಗಿರಬೇಕಿಲ್ಲವಲ್ಲ? ಹೀಗಾಗಿ, ಬೆಂಕಿ ಅವಘಡ ತಪ್ಪಿಸಲು ನೀರನ್ನು ಹತ್ತಿರವೇ ಇಟ್ಟುಕೊಂಡಿರುತ್ತೇನೆ. ಈ ಕಲೆಯನ್ನು ತಪಸ್ಸಿನ ಶ್ರದ್ಧೆಯಲ್ಲಿ ಮಾಡುವುದರಿಂದ, ಇಲ್ಲಿಯತನಕ ಅಂಥದ್ದೇನೂ ದುರ್ಘ‌ಟನೆ ಸಂಭವಿಸಿಲ್ಲ’ ಎಂದು ಮಾತು, ವಿಸ್ತರಿಸಿದ.

ಆರಂಭದಲ್ಲಿ ಈತ ಬ್ಲೈಂಡ್‌ ಫೋಲ್ಡ್‌ ಕುಕ್ಕಿಂಗ್‌ ಪರಿಚಯಿಸಿದಾಗ, ಜನ ಇದೇನು ಹುಚ್ಚಾಟ ಎಂದಿದ್ದರಂತೆ. ಆದರೆ, ಸಂದೇಶ್‌ಗೆ ಕಲಿತ ಕಲೆಯಲ್ಲಿ ವಿಶ್ವಾಸವಿತ್ತು. ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಮಾಡಿದ, ಗೋಬಿ ಮಂಚೂರಿಯ ಮೊದಲ ಪ್ರಯತ್ನದಲ್ಲಿ, ಯಶಸ್ಸು ಸಿಕ್ಕಿತು. ಕ್ರಮೇಣ, ಆ ಕಲೆ ಈತನಿಗೆ ಒಲಿದುಬಂತು. ಬಾಲ್ಯದಿಂದಲೂ ಅಡುಗೆಯ ಜೊತೆಗೆ ಆಪ್ತ ನಂಟು ಇಟ್ಟುಕೊಂಡು, ಗಂಗಾವತಿಯಲ್ಲಿ ಈತ ಹೋಟೆಲ್‌ ತೆರೆದಾಗ, ಬಡವರ ಬಗ್ಗೆ ಕನಿಕರ ಹುಟ್ಟುತ್ತಿತ್ತಂತೆ.

ಭಿಕ್ಷುಕರಿಗೆ 2 ರೂ.ಗೆ ಉಪಾಹಾರ ಕೊಟ್ಟ ದಿನಗಳನ್ನೂ ಈತ ಸ್ಟಾರ್‌ ಹೋಟೆಲ್‌ನಲ್ಲಿದ್ದರೂ, ಮರೆಯುತ್ತಿಲ್ಲ. ಕಣ್ಣು ಕಟ್ಟಿಕೊಂಡೇ, ತರಕಾರಿಯನ್ನು ಹೆಚ್ಚುವುದು; ಕರುನಾಡಿನ ನಾನಾ ಖಾದ್ಯಗಳು, ಉತ್ತರ ಮತ್ತು ದಕ್ಷಿಣ ಭಾರತೀಯ ವಿಶೇಷಗಳನ್ನು ಲೀಲಾಜಾಲವಾಗಿ ತಯಾರಿಸುವುದು; ಪರಿಮಳದಿಂದಲೇ, “ಇದು ಇಂಥ ಪದಾರ್ಥ’ ಎಂದು ಹೇಳುವ ಈತನ ಜಾಣ್ಮೆ ನಿಜಕ್ಕೂ ಅಚ್ಚರಿ.

“ನಾವು ದಿನಕ್ಕೆ ಕೋಟಿ ಗಳಿಸಬಹುದು. ಆದರೆ, ಒಂದು ಅಗುಳನ್ನು ಒಂದೇ ದಿನಕ್ಕೆ ಸೃಷ್ಟಿಸಲಾರೆವು. ಅನ್ನದ ಬೆಲೆ ಅಷ್ಟು ದೊಡ್ಡದು. ನಮಗೆ ಹೆಚ್ಚಾಗಿ, ಚೆಲ್ಲುವ ಒಂದೇ ತುತ್ತಿಗಾಗಿ, ಇನ್ನೆಲ್ಲೋ ಒಂದು ಜೀವ ಕಾದು ಕುಳಿತಿರುತ್ತದೆ. ದಯವಿಟ್ಟು ಆಹಾರ ವ್ಯರ್ಥ ಮಾಡಬೇಡಿ’ ಎನ್ನುವ ಸಲಹೆ ಕೊಟ್ಟು, ಆತ ಕಾರ್ಯಕ್ರಮ ಮುಗಿಸಿದ್ದ.

* ಕವಿತಾ ಭಟ್‌

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಇಲ್ಲಿ ಇಬ್ಬರು ಅಪರೂಪದ ವ್ಯಕ್ತಿಗಳ ಪರಿಚಯವಿದೆ. ಇಬ್ಬರ ಸಾಧನೆಯೂ ಮೆಚ್ಚುಗೆಗೆ ಅರ್ಹವಾದದ್ದು. ಒಬ್ಬರು ಆರೋಗ್ಯದ ಕುರಿತು ಜಾಗೃತಿ ಮೂಡಿಸಲು ಬೆಂಗಳೂರಿನಿಂದ...

  • ಡಾ. ರಾಜ್‌ಕುಮಾರ್‌ ನಂಜನಗೂಡಿಗೆ ಹೋದಾಗೆಲ್ಲ ಉರುಳು ಸೇವೆ ಮಾಡುತ್ತಿದ್ದದ್ದು ನಿಮಗೆ ಗೊತ್ತೇ ಇದೆ. ಅದೇ ರೀತಿ ಬೆಂಗಳೂರಿನ ಹನುಮಂತ ನಗರದ ಗೋಪಾಲಕೃಷ್ಣ ಆಚಾರ್‌ಗೆ...

  • ರೊಟ್ಟಿ... ಉತ್ತರ ಕರ್ನಾಟಕದ ಜನರ ಬಹುಮುಖ್ಯ ಆಹಾರ. ಊಟ ಅಂದ್ಮೇಲೆ ಜೋಳದ ರೊಟ್ಟಿ, ಶೇಂಗಾ ಹಿಂಡಿ, ಕಾಳು ಕಡಿ ಹಾಕಿ ಮಾಡಿದ ರುಚಿಕಟ್ಟಾದ ಪಲ್ಯ ಇರಲೇಬೇಕು. ಅಲ್ಲಿನವರ...

  • ಅಂತರಂಗ ರಂಗ ತಂಡವು, ಮಾಸ್ಟರ್‌ ಹಿರಣ್ಣಯ್ಯ ಸ್ಮರಣಾರ್ಥ ಹಾಸ್ಯಮೇಳವನ್ನು ಹಮ್ಮಿಕೊಂಡಿದೆ. ಅಂಕಲ್‌ ಶ್ಯಾಮ್‌ ನೇತೃತ್ವದಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ,...

  • ಬೆಂಗಳೂರು ಲಿಟರೇಚರ್‌ ಫೆಸ್ಟಿವಲ್‌ನ 8ನೇ ಆವೃತ್ತಿಯು ಈ ವಾರಾಂತ್ಯ ನಡೆಯಲಿದೆ. ರಾಷ್ಟ್ರ, ಅಂತಾರಾಷ್ಟ್ರ ಮಟ್ಟದ 230ಕ್ಕೂ ಹೆಚ್ಚು ಬರಹಗಾರರು, ಉಪನ್ಯಾಸಕರು ಭಾಗವಹಿಸಲಿದ್ದಾರೆ....

ಹೊಸ ಸೇರ್ಪಡೆ