ಪ್ರವಾಹದಿಂದ ನೇಕಾರಿಕೆಗೆ ಆಘಾತ

Team Udayavani, Sep 30, 2019, 3:12 AM IST

ಮೊದಲೇ ಸೂಕ್ತ ಬೆಲೆ, ವ್ಯವಸ್ಥಿತ ಮಾರುಕಟ್ಟೆ ಇಲ್ಲದೇ ಒದ್ದಾಡುತ್ತಿದ್ದ ನೇಕಾರರಿಗೆ ಈ ಬಾರಿಯ ಪ್ರವಾಹದಿಂದಾಗಿ, ಗಾಯದ ಮೇಲೆ ಬರೆ ಎಳೆದಂತಾಗಿದೆ. ನೇಕಾರಿಕೆಯನ್ನೇ ನಂಬಿ ಬದುಕುತ್ತಿದ್ದ ಕುಟುಂಬಗಳು ಒಪ್ಪೊತ್ತಿನ ಊಟಕ್ಕೂ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಕೃಷ್ಣಾ ಮತ್ತು ಘಟಪ್ರಬಾ ಪ್ರವಾಹದಿಂದಾಗಿ ಕೃಷಿಯಷ್ಟೇ ಅಲ್ಲ, ಪ್ರಮುಖವಾಗಿ ನೇಕಾರಿಕೆ ಹಾಗೂ ಸಣ್ಣ ಕೈಗಾರಿಕೆಗಳಿಗೆ ಭಾರೀ ಹೊಡೆತ ಬಿದ್ದಿದೆ. ರೈತರು ಹಾಗೂ ನೇಕಾರರು ದೇಶದ ಎರಡು ಕಣ್ಣುಗಳು. ನೈಸರ್ಗಿಕ ವಿಕೋಪ ಈ ಬಾರಿ, ಈ ಎರಡು ಕಣ್ಣುಗಳಲ್ಲೂ ನೋವು ತುಂಬಿಸಿದೆ. ಪ್ರವಾಹದಿಂದಾಗಿ ಎರಡೂ ಕಣ್ಣುಗಳಲ್ಲಿ ಮುಂದೆ ನಾವು ಮೇಲೇಳುತ್ತೇವೆ ಎಂಬ ವಿಶ್ವಾಸವೇ ಮಾಯವಾಗಿದೆ.

ನೀರಲಿ ನೆಂದ ಕಚ್ಚಾವಸ್ತುಗಳು: ರಬಕವಿ- ಬನಹಟ್ಟಿ ನಗರಗಳಿಗೆ ಕರ್ನಾಟಕದ ಮ್ಯಾಂಚೆಸ್ಟರ್‌ ಎಂಬ ಹೆಸರಿದೆ. ಈ ನಗರಗಳಲ್ಲಿ ದಿನಪೂರ್ತಿ ಕಟಕಟ ಶಬ್ದ ಮಾಡುತ್ತಲೇ ಇರುತ್ತಿದ್ದ ಮಗ್ಗಗಳು ಪ್ರವಾಹದಿಂದಾಗಿ ಹಲವು ದಿನಗಳವರೆಗೆ ನಿಶ್ಯಬ್ದವಾಗಿದ್ದವು. ಕೈಮಗ್ಗ, ಪವರ್‌ ಲೂಮ್‌ ಮಗ್ಗಗಳ ಘಟಕ, ಅದಕ್ಕೆ ಬೇಕಾಗುವ ಕಚ್ಚಾ ವಸ್ತು ಸಿದ್ಧಪಡಿಸುವ ಘಟಕಗಳು ಪ್ರವಾಹಕ್ಕೆ ಸಿಲುಕಿ 300ಕ್ಕೂ ಹೆಚ್ಚು ಕುಟುಂಬಗಳ 600ಕ್ಕೂ ಹೆಚ್ಚು ಮಗ್ಗಗಳು ಸ್ಥಗಿತಗೊಂಡಿವೆ. ಇ,rಲ್ಲದೆ ನೇಕಾರರ ಮನೆಗಳಿಗೂ ನೀರು ನುಗ್ಗಿರುವುದರಿಂದ ಹಾನಿಯ ಪ್ರಮಾಣ ದುಪ್ಪಟ್ಟಾಗಿದೆ.

ಸಾವಿರಾರು ರೂಪಾಯಿಗಳ ದುರಸ್ತಿ: ಮನೆಗಳಲ್ಲಿ ನೇಕಾರಿಕೆಗಾಗಿ ತಂದಿಟ್ಟಿದ್ದ ಕಚ್ಚಾ ನೂಲು, ಸಿದ್ಧ ಪಡಿಸಿದ ಸೀರೆ ನೀರಲ್ಲಿ ತೋಯ್ದು ಅಪಾರ ಹಾನಿ ಸಂಭವಿಸಿದೆ. ಇಲ್ಲಿನ ನೇಕಾರರು ಲಕ್ಷಾಂತರ ರೂ ಸಾಲ ಮಾಡಿ ಹಾಕಿದ್ದ ಮಗ್ಗಗಳು ನೀರಲ್ಲಿ ನಿಂತು ಕೆಟ್ಟು ಹೋಗಿವೆ. ಪ್ರವಾಹದಿಂದ ಬೀಮ್‌ಗಳು ನೀರಲ್ಲಿ ತೋಯ್ದು ಹೋಗಿವೆ. ವೈಂಡಿಂಗ್‌, ವಾರ್ಪಿಂಗ್‌ ಸೇರಿದಂತೆ ಮಗ್ಗ ಪೂರ್ವ ಚಟುವಟಿಕೆಗಳ ಪರಿಕರಗಳು ಸಂಪೂರ್ಣ ಹಾಳಾಗಿವೆ.

ಒಂದು ಚಿಕ್ಕ ಭಾಗ ಹಾಳಾಗಿದ್ದರೂ ಸಂಪೂರ್ಣ ಸೆಟ್‌ಅನ್ನೇ ಬದಲಾಯಿಸಬೇಕಾಗುತ್ತದೆ. ದುರಸ್ತಿಗೆ ಕನಿಷ್ಠ ಎಂದರೂ 30ರಿಂದ 35 ಸಾವಿರದವರೆಗೆ ಖರ್ಚು ಬರುತ್ತದೆ. ಪೂರ್ಣ ಪ್ರಮಾಣ ಹಾನಿಯಾಗಿದ್ದರೆ ಒಂದು ಹೊಸ ಮಗ್ಗವನ್ನೇ ಕೊಂಡುಕೊಳ್ಳಬೇಕಾಗುತ್ತದೆ. ಹೊಸ ಮಗ್ಗವೆಂದರೆ ಒಂದರಿಂದ ಒಂದೂವರೆ ಲಕ್ಷದಷ್ಟಾದರೂ ಖರ್ಚು ಬೀಳುತ್ತದೆ. ಬೇರೆ ಉದ್ಯೋಗ ಗೊತ್ತಿಲ್ಲದ ನೇಕಾರರು, ಬದುಕು ಸಾಗಿಸಲು ಸಾಲ ಸೋಲ ಮಾಡಿ ಮಗ್ಗ ರಿಪೇರಿ ಮಾಡಿಸಿಕೊಂಡು ಮತ್ತೆ ಜೀವನ ಕಟ್ಟಿಕೊಳ್ಳುವ ಪ್ರಯತ್ನ ನಡೆಸಿದ್ದಾರೆ.

ನೇಕಾರರ 100 ಕೋಟಿ ರೂ. ಸಾಲ ಮನ್ನಾ ಮಾಡಿರುವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಘೋಷಿಸಿದ್ದಾರೆ. ಆದರೆ, ಅದು ಕೇವಲ ಸಹಕಾರ ಬ್ಯಾಂಕುಗಳ ಸಾಲಕ್ಕೆ ಮಾತ್ರ ಅನ್ವಯಿಸುತ್ತದೆ. ಸದ್ಯದ ಪರಿಸ್ಥಿತಿಯಲ್ಲಿ ರಾಷ್ಟ್ರೀಕೃತ ಬ್ಯಾಂಕುಗಳ ಸಾಲವನ್ನೂ ಸಹ ಮನ್ನಾ ಮಾಡಲೇಬೇಕಾಗಿದೆ. ಇಲ್ಲವಾದರೆ ಈಗಿನ ಸ್ಥಿತಿಯಲ್ಲಿ ನೇಕಾರರು ಸಾಲ ತುಂಬುವುದಂತೂ ಅಸಾಧ್ಯದ ಮಾತೇ ಸರಿ.

ಬಟ್ಟೆ ಸುಂದರ, ಬದುಕು ಬರ್ಬರ: ಇದೀಗ, ನಮ್ಮಲ್ಲಿ ಬಟ್ಟೆ ಖರೀದಿ ಮಾಡುವವರೇ ಇಲ್ಲದಂತಾಗಿದೆ. ಜಿಎಸ್‌ಟಿ ಜಾರಿಗೆ ತಂದ ಮೇಲೆ ನೇಕಾರ ಉದ್ಯಮ ಏಳುಬೀಳುಗಳ ಹಾದಿಯಲ್ಲಿ ಸಾಗುತ್ತಿತ್ತು. ಕಚ್ಚಾ ವಸ್ತುಗಳ ಕೊರತೆ, ಮಾರುಕಟ್ಟೆ ಏರಿಳಿತ, ತೆರಿಗೆ… ಹೀಗೆ ಹತ್ತಾರು ಸಮಸ್ಯೆಗಳಿಂದ ಕೂಡಿರುವ ನೇಕಾರನ ಬದುಕು ಆತ ನೇಯುವ ಬಟ್ಟೆಯಷ್ಟು ಸುಂದರವಾಗಿಲ್ಲ.

ರಬಕವಿ, ರಾಮದುರ್ಗ, ಕಮತಗಿ, ಗೋವಿನಕೊಪ್ಪ, ಖಾಸಬಾಗ, ವಡಗಾಂವ, ಸುಲೇಬಾಂವಿ, ಯಮಕನಮರಡಿ, ಸವದತ್ತಿ, ಮುನ್ನೋಳ್ಳಿ ಸೇರಿದಂತೆ ಕೈಮಗ್ಗ ಮತ್ತು ಪವರಲೂಮ್‌ ನೇಕಾರರು ಎಲ್ಲೆಲ್ಲಿ ಇದ್ದಾರೋ ಅಲ್ಲಿ ಜವಳಿ ಇಲಾಖೆಯವರು ಬಂದು ಕೂಡಲೇ ಸರ್ವೆ ಮಾಡಿ, ಅವರಿಗೆ ಅನುದಾನ, ಸಹಾಯಧನ ಒದಗಿಸಿ ಕೊಟ್ಟರೆ ಮಾತ್ರ ನೇಕಾರರ ಬದುಕು ಚೇತರಿಸಿಕೊಳ್ಳುತ್ತದೆ. ಇಲ್ಲವಾದರೆ ನೇಕಾರರ ಬದುಕು ಕಷ್ಟಕ್ಕೆ ಸಿಕ್ಕಿಕೊಳ್ಳುತ್ತದೆ. ಕಾರಣ ಇದರ ಕಡೆ ಸರಕಾರ ಗಮನ ಹರಿಸಬೇಕು.
-ಉಮಾಶ್ರೀ, ಮಾಜಿ ಸಚಿವರು, ಮಾಜಿ ಶಾಸಕರು

* ಕಿರಣ ಶ್ರೀಶೈಲ ಆಳಗಿ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ