
ಟಾಯ್ಲೆಟ್: ಏಕ್ ಸೇಫ್ಟಿ ಕಥಾ
ಸ್ನಾನದಮನೆಯಲ್ಲಿ ಸುರಕ್ಷತಾ ಕ್ರಮಗಳು!
Team Udayavani, Jul 8, 2019, 5:00 AM IST

ಒಂದು ಕಾಲದಲ್ಲಿ ಮನೆಯ ಹೊರಗೆ ಇದ್ದು ಈಗ ಮನೆಯ ಇಂಟೀರಿಯರ್‌ನ ಭಾಗವೇ ಆಗಿರುವ ಸ್ನಾನದ ಮನೆ ಅಂದಕ್ಕೆ ಮಾತ್ರವಲ್ಲ; ಅದು, ಮನೆಯವರ ಆರೋಗ್ಯದ ಮೇಲೂ ಪ್ರಭಾವ ಬೀರುತ್ತದೆ. ಅದನ್ನು ಜಾರುವಿಕೆಯಿಂದ ಮುಕ್ತವಾಗಿಸಲು ಮೊದಲ ಆದ್ಯತೆ. ಸ್ನಾನದ ಮನೆ ನಿರ್ಮಾಣ ಹಂತದಲ್ಲಿ ಇಂಥ ಹಲವು ಸುರಕ್ಷತಾಕ್ರಮಗಳ ಕುರಿತೂ ಜಾಗ್ರತೆ ವಹಿಸಬೇಕಾಗುತ್ತದೆ.
ಸ್ನಾನದ ಕೋಣೆಯಲ್ಲಿ ಜಾರುವುದು ಹೆಚ್ಚು, ಹಿರಿಯರಂತೂ ಅತಿ ಜಾಗರೂಕತೆಯಿಂದ ಕಾಲಿಡಬೇಕಾದ ಸ್ಥಳ ಇದು. ಇನ್ನು ಸಣ್ಣಪುಟ್ಟ ಮಕ್ಕಳೂ ಅವಸರದಲ್ಲಿ ಒಡುತ್ತಾ ಹೋಗಿ ಜಾರುವುದು ಇದ್ದದ್ದೇ. ವಯಸ್ಕರೂ ಕೂಡ ಸ್ವಲ್ಪ ಏಮಾರಿದರೂ ಕಾಲು ಜಾರಿ ಉಳುಕು ನೋವು ಅನುಭವಿಸುವುದೂ ಉಂಟು. ಕೆಲ ದಿನಗಳಲ್ಲಿ ಉಳುಕು ಸರಿಹೋದರೂ ಹಿರಿಯರು ಜಾರಿದರೆ, ಮತ್ತೆ ಎದ್ದು ಓಡಾಡಲು ಕೆಲ ಸಮಯ ಬೇಕಾಗುತ್ತದೆ. ಸಣ್ಣಮಕ್ಕಳಿಗೆ ತಲೆಗೆ ತಗುಲು ಬೊಬ್ಬೆ ಬಂದರೆ, ಡಾಕ್ಟರ್ ಬಳಿ ಹೋಗುವುದು ಅನಿವಾರ್ಯ ಆಗುತ್ತದೆ. ಅತಿ ಅಗತ್ಯವಾದ ಹಾಗೂ ನೀರು ಹೆಚ್ಚು ಬಳಕೆ ಆಗುವ ಸ್ಥಳದ ವಿನ್ಯಾಸದ ಬಗ್ಗೆ ಕಾಳಜಿ ತೆಗೆದುಕೊಂಡರೆ ಮುಂದಾಗಬಹುದಾದ ಅನೇಕ ಅವಘಡಗಳನ್ನು ತಪ್ಪಿಸಬಹುದು.
ಸರಾಗವಾಗಿ ನೀರು ಹರಿದುಹೋಗುವಂತೆ ಮಾಡಿ
ನಮ್ಮ ಶೌಚಾಲಯಗಳಲ್ಲಿ ನೀರಿನ ಬಳಕೆ ಹೆಚ್ಚು, ಸ್ನಾನಕ್ಕೆ ಬಕೆಟ್‌ಗಟ್ಟಲೆ ನೀರು ಬಳಸಿದರೆ, ಶೌಚಕ್ಕೂ ಚೊಂಬುಗಟ್ಟಲೆ ನೀರು ಬಳಸಲಾಗುತ್ತದೆ. ಈ ಎಲ್ಲ ನೀರು, ಅದರಲ್ಲೂ ಸೋಪು ಮಿಶ್ರಿತವಾದದ್ದು ಅತಿ ಶೀಘ್ರವಾಗಿ ಹರಿದುಹೋಗುವಂತೆ ಮಾಡಬೇಕಾಗುತ್ತದೆ. ಆದರೆ ನಾವು ಹೆಚ್ಚು ಇಳಿಜಾರನ್ನು ಕೊಡಲೂ ಆಗುವುದಿಲ್ಲ! ಹೆಚ್ಚು ಇಳಿಜಾರು- ಸ್ಲೋಪ್ ಇದ್ದಷ್ಟೂ ಕಾಲು ಜಾರುವುದು ಹೆಚ್ಚಾಗುತ್ತದೆ. ಆದುದರಿಂದ ನಾವು ಎಷ್ಟು ಬೇಕೋ ಅಷ್ಟು ಮಾತ್ರ ಇಳಿಜಾರನ್ನು ನೀಡಬೇಕಾಗುತ್ತದೆ. ಐದು ಅಡಿಗೆ ಸುಮಾರು ಒಂದು ಇಂಚಿನಷ್ಟು ಇಳಿಜಾರು ನೀಡಿದರೆ ಸಾಕಾಗುತ್ತದೆ, ಅಂದರೆ, ಅರವತ್ತು ಇಂಚು ಉದ್ದಕ್ಕೆ ಒಂದು ಇಂಚಿನಷ್ಟು ಇಳಿಜಾರು 1:60 ಅನುಪಾತದಲ್ಲಿ ನೀಡಿದರೆ, ಈ ಕಡೆ ಕಾಲೂ ಜಾರದೆ, ನೀರೂ ಸರಾಗವಾಗಿ ಹರಿದು ಹೋಗಲು ಅನುಕೂಲವಾಗುತ್ತದೆ. ಟಾಯ್ಲೆಟ್‌ನಲ್ಲಿ ಸ್ನಾನ ಹಾಗೂ ಗಇ(ವಾಟರ್ ಕ್ಲಾಸೆಟ್) ಇದ್ದರೆ, ಆಗ ಈ ಎರಡಕ್ಕೂ ಪ್ರತ್ಯೇಕವಾದ ಇಳಿಜಾರನ್ನು ನೀಡಿ, ನೀರು ಸ್ನಾನದ ಕೋಣೆಯ ಎರಡೂ ಮೂಲೆಗಳನ್ನು ಅತಿ ಶೀಘ್ರವಾಗಿ ಹರಿದುಹೋಗುವಂತೆ ಮಾಡಲಾಗುತ್ತದೆ.
ನೀರು ನಿಲ್ಲದಂತೆ ಇಳಿಜಾರು ಇರಲಿ
ಕೆಲವೊಮ್ಮೆ ಸರಿಯಾಗಿ ಇಳಿಜಾರು ನೀಡದಿದ್ದರೆ, ಇಲ್ಲ ಟೈಲ್ಸ್ ಹಾಕುವಾಗ ಹೆಚ್ಚಾಕಡಿಮೆ ಆಗಿದ್ದರೆ, ನೀರು ಅಲ್ಲಲ್ಲಿ ನಿಲ್ಲಬಹುದು. ಇದು ಅತಿ ಹೆಚ್ಚು ತೊಂದರೆದಾಯಕ. ನೀರು ನಿಂತರೆ ಪಾಚಿ ಕಟ್ಟುವುದು ನಿಶ್ಚಯ. ಹಾಗಾಗಿ ಶೌಚಾಲಯಕ್ಕೆ ಬಿಲ್ಲೆಕಲ್ಲುಗಳನ್ನು ಅಳವಡಿಸಿದ ನಂತರ, ನೀರು ಹುಯ್ದು, ಇಳಿಜಾರು ಸರಿಯಿದೆಯೇ? ಎಂದು ಪರಿಶೀಲಿಸುವುದು ಉತ್ತಮ. ಏನಾದರೂ ಏರುಪೇರು ಇದ್ದರೆ, ಕೂಡಲೆ ಸರಿಪಡಿಸಬೇಕು. ನೀರು ನಿಂತರೆ, ಪಾಚಿ ಕಟ್ಟುವುದರ ಜೊತೆಗೆ ಕಾಲು ಜಾರುವುದೂ ಕೂಡ ಹೆಚ್ಚುತ್ತದೆ. ಜೊತೆಗೆ ಅಂದವಾದ ಟೈಲ್ಸ್ ಬೇಗನೆ ಬಣ್ಣಗೆಟ್ಟು ರಿಪೇರಿ ಮಾಡಲು ಕಷ್ಟ ಆಗುತ್ತದೆ.
ವಾಟರ್ ಕ್ಲಾಸೆಟ್ ಇದ್ದರೆ ವೆಂಟಿಲೇಟರ್ ಬೇಕು
WC- water close (ಫ್ಲಶ್ ಟಾಯ್ಲೆಟ್), ಅದರಲ್ಲೂ ಭಾರತೀಯ ಮಾದರಿಯದು- ನೆಲ ಮಟ್ಟದಲ್ಲಿ ಇರುವುದಾದರೆ ನಾವು ಅನಗತ್ಯವಾಗಿ ಕಾಲಿಡದ ಸ್ಥಳದಲ್ಲಿ ಅಂದರೆ ಶೌಚಾಲಯದ ಒಂದು ಮೂಲೆಗೆ, ಇಡುವುದು ಸೂಕ್ತ. ಗಇಗೆ ದೊಡ್ಡ ಗಾತ್ರದ ಕೊಳವೆ ಹಾಗೂ ಹೊರಗಿನ ನೇರ ಸಂಪರ್ಕ ಅಗತ್ಯವಿರುವುದರಿಂದ, ಇದನ್ನು ಹೊರಗೋಡೆ ಕಡೆಗೆ ಅಳವಡಿಸಲಾಗುತ್ತದೆ. ಜೊತೆಗೆ ಗಇಗೆ ಹೆಚ್ಚು ವೆಂಟಿಲೇಷನ್- ಗಾಳಿ ಆಡಬೇಕಾಗಿರುವುದರಿಂದ, ವೆಂಟಿಲೇಟರ್ ಇರುವ ಹೊರಗೋಡೆಯ ಕಡೆಗೆ ಅಳವಡಿಸುವುದು ಸೂಕ್ತ. ಶೌಚಾಲಯದಲ್ಲಿ ಅತಿ ಹೆಚ್ಚು ತೊಂದರೆ ಕೊಡುವ, ಅದರಲ್ಲೂ ನೀರು ಕಟ್ಟಿಕೊಂಡರೆ ಸುಲಭದಲ್ಲಿ ತೆರೆವಾಗದ ಕೊಳವೆ ಗಇದೇ ಆಗಿರುತ್ತದೆ. ಆದುದರಿಂದ, ನಾವು ಹೊರಗಿನಿಂದ ಸುಲಭದಲ್ಲಿ ಕ್ಲಿಯರ್- ತೆರವುಗೊಳಿಸುವಂತೆ ಒಂದು ಇನ್ಸ್‌ಪೆಕ್ಷನ್ ಚೇಂಬರ್ ಅಂದರೆ ಶೌಚ ಕೊಳವೆಯ ಪರಿವೀಕ್ಷಣೆಗೆಂದು ನೀಡಲಾಗುವ ಸಣ್ಣ ಪೆಟ್ಟಿಯನ್ನು ಮನೆಯ ಹೊರಗೆ ನೀಡಬೇಕು.
ಸ್ನಾನದ ಸ್ಥಳ ಒಂದು ಪಕ್ಕಕ್ಕೆ ಇರಲಿ
ನೀರು ಸರಾಗವಾಗಿ ಹೋಗುವಂತೆ ಇಳಿಜಾರು ನೀಡಿದ ಬಳಿಕ, ಅದನ್ನು ಹೊರಗೆ ಒಯ್ಯಲು ಟೈಲ್ಸ್ ಕೆಳಗೆ ಎರಡೂವರೆ ಇಲ್ಲವೇ ಮೂರು ಇಂಚಿನ ಕೊಳವೆಯನ್ನು ಅಳವಡಿಸಲಾಗುತ್ತದೆ. ಹಾಗಾಗಿ, ಈ ನೀರು ಇಡೀ ಕೋಣೆಯನ್ನು ಹಾಯ್ದು ಹೋಗಬೇಕಾಗಿಲ್ಲ. ಬರೀ ತ್ಯಾಜ್ಯ ನೀರನ್ನು ಹೊರುವ ಈ ಕೊಳವೆ ಕಟ್ಟಿಕೊಳ್ಳುವುದು ಕಡಿಮೆಯಾದರೂ ಈ ಕೊಳವೆಯೂ ಇನ್ಸ್‌ಪೆಕ್ಷನ್ ಚೇಂಬರ್‌ನ ನೇರಸಂಪರ್ಕದಲ್ಲಿ ಇರುವಂತೆ ನೋಡಿಕೊಳ್ಳಬೇಕು. ಆಗ, ಸ್ನಾನ ಮಾಡುವಾಗ ಎಷ್ಟೇ ಜೋರಾಗಿ ನೀರು ಸುರಿಯುತ್ತಿದ್ದರೂ, ಅಷ್ಟೇ ಬೇಗ ನೀರು ಹೊರಗೆ ಹರಿದು, ನೆಲ ಬೇಗನೆ ಒಣಗಲು ಅನುಕೂಲವಾಗುತ್ತದೆ.
ಒಂದು ಕಾಲದಲ್ಲಿ ಟಾಯ್ಲೆಟ್ ಮನೆಯ ಹೊರಗೆ ಇರುತ್ತಿತ್ತು. ಅದೀಗ ಮನೆಯೊಳಗೆ ಬಂದಿದೆ. ನಮ್ಮ ಆರೋಗ್ಯವನ್ನು ಉತ್ತಮ ರೀತಿಯಲ್ಲಿ ಕಾಪಾಡುವ ಟಾಯ್ಲೆಟ್‌ಗಳ ವಿನ್ಯಾಸದ ಬಗ್ಗೆ ಒಂದಷ್ಟು ಚಿಂತಿಸಿ ಮುಂದುವರೆದರೆ, ಹತ್ತಾರು ವರ್ಷ ನಮಗೆ ತೊಂದರೆ ಕೊಡದೆ ಕಾರ್ಯನಿರ್ವಹಿಸಬಲ್ಲವು!
ಒಣ ಹಾಗೂ ತೇವದ ಜಾಗ ಪ್ರತ್ಯೇಕವಾಗಿರಲಿ
ಟಾಯ್ಲೆಟ್ ವಿನ್ಯಾಸವನ್ನು ಸರಿಯಾಗಿ ಮಾಡದಿದ್ದರೆ, ಸ್ನಾನದ ನಂತರ ಇಡೀ ಕೋಣೆ ತೇವವಾಗಿ, ನಾವು ಬಟ್ಟೆ ಹಾಕಿಕೊಳ್ಳಲೂ ತೊಂದರೆಯಾಗಬಹುದು. ಸಾಮಾನ್ಯವಾಗಿ ಶೌಚಾಲಯದ ಬಾಗಿಲ ಬಳಿ ಒಂದಷ್ಟು ಜಾಗವನ್ನು ಒಣಗಿದ ರೀತಿಯಲ್ಲಿ ಉಳಿಯುವಂತೆ ವಿನ್ಯಾಸ ಮಾಡಬೇಕು. ಹಾಗೆಯೇ ನಾವು ಅತಿ ಹೆಚ್ಚು ಉಪಯೋಗಿಸುವ ವಾಶ್ ಬೇಸಿನ್ ಇರುವ ಜಾಗವೂ ಒಣಗಿರುವಂತೆ ನೋಡಿಕೊಳ್ಳಬೇಕು. ಸಾಮಾನ್ಯವಾಗಿ ಸ್ನಾನದ ಸ್ಥಳವನ್ನು ದಿನಕ್ಕೆ ಒಂದು ಬಾರಿ ಉಪಯೋಗಿಸಿದರೆ, ಕಮೋಡ್ ಅನ್ನು ನಾಲ್ಕಾರು ಬಾರಿ ಉಪಯೋಗಿಸಬಹುದು. ಆದರೆ ವಾಶ್ ಬೇಸಿನ್ ಅನ್ನು ಬೆಳಿಗ್ಗೆ ಹಲ್ಲುಜ್ಜುವುದರಿಂದ ಹಿಡಿದು ತಲೆ ಬಾಚಲು, ಕೈತೊಳೆಯಲು ಇತ್ಯಾದಿ ಹತ್ತಾರು ಬಾರಿ ಉಪಯೋಗಿಸುತ್ತೇವೆ. ಆದುದರಿಂದ ಟಾಯ್ಲೆಟ್ ಬಾಗಿಲು ತೆಗೆದ ಕೂಡಲೆ ಮೊದಲು ವಾಶ್ ಬೇಸಿನ್ ಕಂಡರೆ ಅನುಕೂಲ. ಜೊತೆಗೆ, ಈ ಸ್ಥಳ ಹೇಗಿದ್ದರೂ ಒಣಗಿರುವುದರಿಂದ, ಬಟ್ಟೆಬರೆ ಧರಿಸಲೂ ಸ್ಥಳ ಸಿಗುತ್ತದೆ.
ಸೇಫ್ಟಿ ಹ್ಯಾಂಡ್ ರೇಲ್ ಅಳವಡಿಸಿ
ನೆಲದ ಮೇಲೆ ಒಂದು ಹನಿ ನೀರು ಬಿದ್ದರೂ ಜಾರುವ ಸಾಧ್ಯತೆ ಇರುತ್ತದೆ, ಅದರಲ್ಲೂ ಸೋಪು ನೀರು ಬೀಳುವ ಸ್ಥಳ ಒಂದಷ್ಟು ಜಾರುವ ಗುಣ ಹೊಂದಿರುವುದು ಸ್ವಾಭಾವಿಕ. ಆದುದರಿಂದ, ಅಪ್ಪಿತಪ್ಪಿ ಕಾಲು ಜಾರಿದರೆ, ಕೈಗೆ ಸುಲಭದಲ್ಲಿ ಸಿಗುವಂತೆ ಒಂದೆರಡು ಕೈಪಿಡಿಗಳನ್ನು ಅಳವಡಿಸುವುದು ಉತ್ತಮ. ಇವು ಟವಲ್ ರ್ಯಾಕ್, ಅಂದರೆ ಮೈ ಒರೆಸುವ ಬಟ್ಟೆ ಹಾಗೂ ಇತರೆ ಬಟ್ಟೆಗಳನ್ನು ತಗುಲಿ ಹಾಕುವ ಕೊಳವೆಗಳಂತೆ ಇದ್ದರೂ ಸಾಲುತ್ತದೆ.
ಹೆಚ್ಚಿನ ಮಾಹಿತಿಗೆ ಫೋನ್ 9844132826
– ಆರ್ಕಿಟೆಕ್ಟ್ ಕೆ. ಜಯರಾಮ್
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ

ದೆಹಲಿ-ಎನ್‌ಸಿಆರ್‌ನಲ್ಲಿ ಗುಡುಗು ಸಹಿತ ಮಳೆ; 9 ವಿಮಾನಗಳು ಬೇರೆಡೆಗೆ

ಜಿಲ್ಲೆಯಲ್ಲಿ 1,239 ರೌಡಿಶೀಟರ್ ಗಳು: ವಿಜಯಪುರ ಡಿಸಿ ಡಾ.ವಿ.ಬಿ.ದಾನಮ್ಮನವರ

ಚುನಾವಣಾ ಕರ್ತವ್ಯಕ್ಕೆ ಹಾಜರಾಗದ ಅಧಿಕಾರಿ ವಿರುದ್ಧ ಕ್ರಮಕ್ಕೆ ಜಿಲ್ಲಾಧಿಕಾರಿ ಸೂಚನೆ

ಅಭ್ಯರ್ಥಿಗಳು ಅಪರಾಧದ ಬಗ್ಗೆ ಪತ್ರಿಕೆಗಳಲ್ಲಿ ಪ್ರಕಟಿಸಬೇಕು: ಬಳ್ಳಾರಿ ಡಿಸಿ ಪವನ್ ಕುಮಾರ್

ಅಭ್ಯರ್ಥಿಗಳು ತಮ್ಮ ಅಪರಾಧದ ಬಗ್ಗೆ ಪತ್ರಿಕೆಗಳಲ್ಲಿ ಪ್ರಕಟಿಸಬೇಕು; ಪವನ್ ಕುಮಾರ್