ಚಳಿಗಾಲದಲ್ಲಿ ಬೆಚ್ಚನೆಯ ಮನೆ

Team Udayavani, Jan 27, 2020, 6:12 AM IST

ಚಳಿಗಾಲದಲ್ಲಿ ಹಿರಿಯರಿಗೆ, ಸಣ್ಣಮಕ್ಕಳಿಗೆ ಮನೆಯೊಳಗೆ ಬೆಚ್ಚನೆಯ ವಾತಾವರಣ ಅವಶ್ಯವಾಗಿ ಇರಬೇಕಾಗುತ್ತದೆ. ಇಲ್ಲದಿದ್ದರೆ ರೋಗ ರುಜಿನಗಳಿಗೆ ಸುಲಭದಲ್ಲಿ ತುತ್ತಾಗುತ್ತಾರೆ. ಹಾಗಾಗಿ, ಮನೆಯನ್ನು ಬೆಚ್ಚಗಿಡುವುದಕ್ಕೆ ಹಲವು ಮಾರ್ಗಗಳನ್ನು ಅನುಸರಿಸಬೇಕಾಗುತ್ತದೆ.

ಸಂಕ್ರಾಂತಿಯ ಸಮಯದಲ್ಲಿ ಸೂರ್ಯ ಉತ್ತರದತ್ತ ಚಾಲನೆಯಲ್ಲಿದ್ದರೂ ಕಿರಣಗಳು ನಮ್ಮತ್ತ ಕೆಳಕೋನದಲ್ಲಿ, ದಕ್ಷಿಣದಿಕ್ಕಿನಿಂದಲೇ ಬೀಳುತ್ತವೆ, ಹಾಗಾಗಿ, ನಮಗೆ ಚಳಿಯ ಅನುಭವ ಹೋಗಿರುವುದಿಲ್ಲ. ಮದ್ಯಾಹ್ನ ಹನ್ನೆರಡು ಗಂಟೆಗೂ ಸೂರ್ಯ ತಲೆಯ ಮೇಲೆ ನೇರವಾಗಿ ಇರದೆ, ನಮ್ಮ ನೆತ್ತಿಯನ್ನು ಸುಮಾರು 55 ಡಿಗ್ರಿ ಕೋನದಲ್ಲಿ ತಾಗುತ್ತಾನೆ. ಬೇಸಿಗೆಯಲ್ಲಿ ಬೆಳಗ್ಗೆ ಒಂಬತ್ತೂವರೆ ಗಂಟೆಗೆ ಇರುವಷ್ಟು ತೀಕ್ಷ್ಣವಾಗಿ ಮಾತ್ರ ಸೂರ್ಯನ ಕಿರಣಗಳು ಚಳಿಗಾಲದಲ್ಲಿ ಮಧ್ಯಾಹ್ನವೆಲ್ಲ ಇರುತ್ತದೆ.

ಹಾಗಾಗಿ ನಮಗೆ ಬಿಸಿಲಿನಲ್ಲಿ ನಡೆದಾಡಿದಾಗಲೂ ಸೂರ್ಯನ ಕಿರಣಗಳ ತೀರ್ವತೆಯ ಅನುಭವ ಆಗುವುದಿಲ್ಲ! ಇದು ಹೊರಗಿನ ಸ್ಥಿತಿಯಾದರೆ, ಮನೆಯೊಳಗೆ, ಅದರಲ್ಲೂ ರಾತ್ರಿಯ ಹೊತ್ತು ಚಳಿಯಿಂದಾಗಿ ಗಡಗಡ ನಡುಗುವಂತೆ ಆಗುತ್ತದೆ. ಇನ್ನು ಹಿರಿಯರಿಗೆ, ಸಣ್ಣಮಕ್ಕಳಿಗೆ ಈ ಅವಧಿಯಲ್ಲಿ ಬೆಚ್ಚಗಿರುವುದು ಮುಖ್ಯ, ಇಲ್ಲದಿದ್ದರೆ ರೋಗ- ರುಜಿನಗಳಿಗೆ ಸುಲಭದಲ್ಲಿ ಒಳಗಾಗುತ್ತಾರೆ. ಹಾಗಾಗಿ, ನಮ್ಮ ಮನೆಯನ್ನು ಬೆಚ್ಚಗಿಡುವ ಉಪಾಯ ಮಾಡುವುದು ಅನಿವಾರ್ಯ.

ಸೂರ್ಯ ರಶ್ಮಿಗೆ ತೆರೆದುಕೊಳ್ಳಿ: ಬೇಸಿಗೆಯಲ್ಲಿ ಬೇಡವಾಗುವ ಶಾಖ, ಚಳಿಗಾಲದಲ್ಲಿ ಆರೋಗ್ಯಕ್ಕೆ ಅಗತ್ಯ. ಜೊತೆಗೆ, ಮೈಮನಕ್ಕೂ ಹಿತವೆನಿಸುತ್ತದೆ. ಇತ್ತೀಚಿನ ದಿನಗಳಲ್ಲಿ ಮನೆಗಳನ್ನು ಒಂದಕ್ಕೊಂದು ಒತ್ತರಿಸಿ ಕಟ್ಟುವುದರಿಂದ ನಮಗೆ ಅಗತ್ಯವಾದಷ್ಟು ಸೂರ್ಯಕಿರಣಗಳು ಒಳಾಂಗಣಕ್ಕೆ ಸುಲಭದಲ್ಲಿ ಬೀಳುವುದಿಲ್ಲ. ಎಲ್ಲ ಅಡೆತಡೆಗಳನ್ನು ಮೀರಿ ಹೇಗೋ ಒಂದಷ್ಟು ಸೂರ್ಯ ಕಿರಣಗಳನ್ನು ಒಳಕ್ಕೆ ಸೇರಿಸಿಕೊಳ್ಳಲು ಹರಸಾಹಸವನ್ನೇ ಮಾಡಬೇಕಾಗುತ್ತದೆ. ಮನೆಯೊಳಗೆ ಕಿರಣಗಳಿಗೆ ದಾರಿ ಮಾಡಲು ನಾವು ಸೂರ್ಯ ರಶ್ಮಿಯ ಪಥವನ್ನು ಗಮನಿಸಿ,

ಅದರ ಬದಲಾವಣೆಗಳಿಗೆ ಅನುಗುಣವಾಗಿ ಸ್ಥಳಾವಕಾಶ ಮಾಡಿ ಕೊಡಬೇಕಾಗುತ್ತದೆ. ಬೆಳಗ್ಗೆ ಸೂರ್ಯ ಪೂರ್ವದಲ್ಲಿ ಹುಟ್ಟಿ ಸಂಜೆ ಪಶ್ಚಿಮದಲ್ಲಿ ಮುಳುಗುವುದು ಎಲ್ಲರಿಗೂ ಗೊತ್ತಿರುವ ಸಂಗತಿಯೇ ಆಗಿದೆ, ಆದರೆ ಸೂರ್ಯ ಚಳಿಗಾಲದಲ್ಲಿ ದಕ್ಷಿಣದಿಕ್ಕಿನಲ್ಲಿದ್ದು, ಬೇಸಿಗೆಯಲ್ಲಿ ಉತ್ತರದಲ್ಲಿ ಇರುವುದು ಸ್ವಲ್ಪ ಸಂಕೀರ್ಣ ಸಂಗತಿ. ಆದಕಾರಣ, ನಾವು ಸೂರ್ಯ ಪಥವನ್ನು ವೈಜ್ಞಾನಿಕವಾಗಿ ಗುರುತಿಸಿ, ನಂತರ ನಮ್ಮ ಮನೆಯ ಕಿಟಕಿ ಬಾಗಿಲುಗಳನ್ನು ವಿನ್ಯಾಸ ಮಾಡಿಕೊಂಡರೆ, ನೈಸರ್ಗಿಕ ಶಾಖ ಸ್ವಾಭಾವಿಕವಾಗಿಯೇ ಮನೆಯನ್ನು ಪ್ರವೇಶಿಸುತ್ತದೆ.

ದಕ್ಷಿಣ ದಿಕ್ಕಿನಲ್ಲಿ ಸೂರ್ಯ: ಚಳಿಗಾಲದಲ್ಲಿ ಸೂರ್ಯ ಕಿರಣಗಳು ದಕ್ಷಿಣದಿಕ್ಕಿನಿಂದ ಕೆಳಕೋನದಲ್ಲಿ ಅಂದರೆ, ಸುಮಾರು 55 ಡಿಗ್ರಿ ಕೋನದಲ್ಲಿ ಬೀಳುವುದರಿಂದ, ನಾವು ಮನೆಯನ್ನು ವಿನ್ಯಾಸ ಮಾಡುವಾಗ, ಯಾವ ಕೋಣೆಗೆ ಬಿಸಿಲು ಬರಬೇಕು ಎಂದಿರುತ್ತದೆಯೋ, ಅದರ ಮುಂದೆ ಕಿರಣಗಳಿಗೆ ಅಡೆತಡೆ ಇರದಂತೆ ನೋಡಿಕೊಳ್ಳಬೇಕು. ಹಾಗೆಯೇ ನಮಗೆ ಬೆಳಗಿನ ಸೂರ್ಯ ಕಿರಣಗಳು ಬೇಕೋ ಇಲ್ಲ ಸಂಜೆಯದ್ದು ಬೇಕೋ ಎಂದು ಮೊದಲು ನಿರ್ಧರಿಸಬೇಕು. ಬೆಳಗಿನದ್ದಾದರೆ, ಹಿರಿಯರಿಗೆ, ಸಣ್ಣಕಂದಮ್ಮಗಳಿಗೆ ಮೈಕಾಯಿಸಲು ಅನುಕೂಲಕರ. ಸಂಜೆಯ ಸೂರ್ಯ ಕೋಣೆ ಹೊಕ್ಕರೆ, ನಮಗೆ ರಾತ್ರಿಯಿಡೀ ಬೆಚ್ಚಗಿರುವಷ್ಟು ಶಾಖವನ್ನು ಗೋಡೆಗಳು ಹೀರಿಕೊಳ್ಳುತ್ತವೆ. ಇಡೀ ದಿನ, ಅದರಲ್ಲೂ ಮಧ್ಯಾಹ್ನದ ಹೊತ್ತು ಬಿಸಿಲು ಬೀಳಬೇಕೆಂದರೆ, ಕೋಣೆ ದಕ್ಷಿಣ ದಿಕ್ಕಿನಲ್ಲಿರುವುದು ಅನಿವಾರ್ಯ.

ಸ್ಕೈಲೈಟ್‌- ಗವಾಕ್ಷಿಗಳ ಮೂಲಕ ಸೂರ್ಯ ಕಿರಣ: ಬೇಸಿಗೆಯಲ್ಲಿ ತಣ್ಣಗಿರಿಸಲು ವಿನ್ಯಾಸ ಮಾಡುವ ಗವಾಕ್ಷಿಗಳು, ಚಳಿಗಾಲದಲ್ಲಿ ಮನೆಯನ್ನು ಬೆಚ್ಚಗೂ ಇಡಬಲ್ಲವು! ಗಾಳಿ ಹೊರಹೋಗುವ ವೆಂಟ್ಸ್‌- ಕಿಂಡಿಗಳನ್ನು ಮುಚ್ಚಿತೆಗೆಯುವಂತೆ ವ್ಯವಸ್ಥೆ ಮಾಡಿಕೊಳ್ಳಬೇಕು. ಸೆಕೆ ಎಂದೆನಿಸಿದಾಗ ಈ ಕಿಂಡಿಯನ್ನು ತೆರೆದು, ಚಳಿ ಆದಾಗ ಮುಚ್ಚಿಡಬಹುದು. ಸಾಮಾನ್ಯವಾಗಿ ಇದು ಒಂದು ಸಣ್ಣ ಕಿಟಕಿಬಾಗಿಲು ಅಥವಾ ಆರು ಅಂಗುಲದ ಪೈಪ್‌ಗ್ಳಾಗಿರುತ್ತವೆ, ಗವಾಕ್ಷಿಯ ಮಿಕ್ಕ ಕಡೆ ಗಾಜನ್ನು ಅಳವಡಿಸಬೇಕು. ಈ ಗಾಜಿನ ಮೂಲಕ ನಮಗೆ ಸೂರ್ಯ ಕಿರಣಗಳು ಮನೆಯನ್ನು ನೇರವಾಗಿ ಪ್ರವೇಶಿಸಲು ಅನುವಾಗುತ್ತದೆ.

ಈ ಮಾದರಿಯ ವಿನ್ಯಾಸ ಮಲಗುವ ಕೋಣೆಗಳಿಗೆ ಅಷ್ಟೊಂದು ಸೂಕ್ತ ಅಲ್ಲದಿದ್ದರೂ, ಲಿವಿಂಗ್‌- ಡೈನಿಂಗ್‌ ಕೋಣೆಗಳಲ್ಲಿ ಸುಲಭವಾಗಿ ಅಳವಡಿಸಬಹುದು. ಮಾರುಕಟ್ಟೆಯಲ್ಲಿ ಗಟ್ಟಿಮುಟ್ಟಾದ ಗಾಜುಗಳು ಲಭ್ಯ. ಕೆಲವೊಂದಕ್ಕೆ ಸಣ್ಣ ತಂತಿಗಳ ಮೆಶ್‌ ಅನ್ನೂ ಅಳವಡಿಸಿರುತ್ತಾರೆ ಹಾಗೂ ಇವು ಸುಲಭದಲ್ಲಿ ಮುರಿಯುವುದೂ ಇಲ್ಲ. ಹಾಗಾಗಿ ಇವುಗಳನ್ನು ಸೂರಿನಲ್ಲಿ, ಧಾರಾಳವಾಗಿ ಬಳಸಬಹುದು. ಸೂರು ಎಂದಮೇಲೆ ಅದು ಅತಿ ಹೆಚ್ಚು ಗಾಳಿ, ಮಳೆ ಬಿಸಿಲಿಗೆ ತೆರೆದುಕೊಂಡಿರುತ್ತದೆ. ಆದುದರಿಂದ, ನುರಿತ ಆರ್ಕಿಟೆಕ್ಟ್ ಇಂಜಿನಿಯರ್‌ಗಳಿಂದ ಗವಾಕ್ಷಿ- ವೆಂಟ್‌ಗಳನ್ನು ವಿನ್ಯಾಸ ಮಾಡಿಸಿದರೆ ಉತ್ತಮ.

ಅಡೆತಡೆ ಇಲ್ಲದಂತೆ ನೋಡಿಕೊಳ್ಳಿ: ಬೇಸಿಗೆಯಲ್ಲಿ ತಂಪಾಗಿಡುವ ಮರಗಿಡಗಳು ಚಳಿಗಾಲದಲ್ಲಿ ನಮ್ಮ ಮನೆಯ ಮೇಲೆ ಸೂರ್ಯ ಕಿರಣಗಳು ಬೀಳದಂತೆಯೂ ರಕ್ಷಣೆ ನೀಡುತ್ತವೆ. ಆದುದರಿಂದ ನಾವು ಮನೆಯನ್ನು ವಿನ್ಯಾಸ ಮಾಡುವಾಗ ನಿವೇಶನದಲ್ಲಿ ಹಾಗೂ ಅಕ್ಕಪಕ್ಕ ಇರುವ ಮರಗಳನ್ನು ಗಮನಿಸಿ ಮುಂದುವರಿಯಬೇಕು. ಹಾಗೆಯೇ ನಾವು ಹೊಸದಾಗಿ ಮರಗಿಡಗಳನ್ನು ನೆಡುವಂತಿದ್ದರೆ, ಅವು ಬೇಸಿಗೆಯಲ್ಲಿ ನೆರಳನ್ನು ನೀಡುವಂತಿದ್ದು, ಚಳಿಗಾಲದಲ್ಲಿ ನೆರಳು ನೀಡದ ಹಾಗೆ ನೋಡಿಕೊಳ್ಳಬೇಕು.

ಸೂರ್ಯನತ್ತ ಮುಖ ಮಾಡಿ…: ಇಡೀ ಕೋಣೆಯನ್ನು ಅಥವ ಮನೆಯನ್ನೇ ಸೂರ್ಯಮುಖ ಆಗಿಸುವುದು ಕಷ್ಟ! ಹಾಗಾಗಿ ಕೆಲವಾರು ಕಿಟಕಿಗಳನ್ನಾದರೂ ಸೂರ್ಯ ಕಿರಣಗಳು ಬೀಳುವ ದಿಕ್ಕಿನತ್ತ ವಾಲಿಸಿದರೆ, ಮನೆಯ ಒಂದು ಭಾಗವಾದರೂ ಬೆಚ್ಚಗಿರುತ್ತದೆ. ಹೀಗಾಗಿ ನಾವು ಕಿಟಕಿಗಳನ್ನು ಇಲ್ಲವೇ ಸಾಧ್ಯವಾದರೆ ಕೋಣೆಯನ್ನು ಸೂರ್ಯ ಚಳಿಗಾಲದಲ್ಲಿ ಇರುವ ಕಡೆ, ತಿರುಗಿಸಬಹುದು. ಆಗ ನಮಗೆ ಸೂರ್ಯ ಕಿರಣಗಳು ನೇರವಾಗಿ ಮನೆಯನ್ನು ಪ್ರವೇಶಿಸಲು ಸುಲಭವಾಗುತ್ತದೆ.

ನೇರ ಬಿಸಿಲೋ ಇಲ್ಲ ಶಾಖ ಮಾತ್ರ ಸಾಕೇ?: ಎಲ್ಲ ಪ್ರದೇಶದಲ್ಲೂ ನೇರವಾಗಿ ಸೂರ್ಯ ಕಿರಣಗಳು ಬೀಳುವುದು ಅಷ್ಟೊಂದು ಅನುಕೂಲಕರ ಅಲ್ಲ. ಕೆಲವೊಂದು ಪ್ರದೇಶಗಳಲ್ಲಿ, ಅದರಲ್ಲೂ ನೀವು ಮನೆಯೊಳಗೆ ಒಂದಷ್ಟು ಹಸಿರು ಬೆಳೆಸಿದ್ದರೆ, ಅದಕ್ಕೆ ನೇರವಾಗಿ ಕಿರಣಗಳು ತಾಗಿ ನಂತರ ಪ್ರತಿಫ‌ಲಿಸಿದರೆ ಹೆಚ್ಚು ಅನುಕೂಲಕರ. ನಾವು ಮಲಗುವ ಸ್ಥಳ, ಓದಿ ಬರೆಯುವ ಸ್ಥಳಕ್ಕೂ ನೇರವಾಗಿ ಸೂರ್ಯ ಕಿರಣಗಳು ಬೀಳದಂತೆ ವಿನ್ಯಾಸ ಮಾಡುವುದು ಉತ್ತಮ. ಮನೆಯೊಳಗೆ ಸಾಕಷ್ಟು ಬೆಳಕು ಬೀಳುತ್ತಲಿದ್ದು, ಶಾಖ ಮಾತ್ರ ಬೇಕಿದ್ದರೆ, ಕೆಲವೊಂದು ಗೋಡೆಗಳ ಮೇಲೆ ಸೂರ್ಯ ಕಿರಣಗಳು ಬೀಳುವಂತೆಯೂ ಮಾಡಬಹುದು. ಈ ಗೋಡೆಗಳು ಸಾಕಷ್ಟು ಶಾಖವನ್ನು ಹೀರಿಕೊಂಡು, ನಿಧಾನವಾಗಿ ಮನೆಯವರನ್ನು ರಾತ್ರಿಯಿಡೀ ಬೆಚ್ಚಗಿಡುತ್ತದೆ.

ಹೆಚ್ಚಿನ ಮಾಹಿತಿಗೆ: 9844132826

* ಆರ್ಕಿಟೆಕ್ಟ್ ಕೆ. ಜಯರಾಮ್‌

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಬ್ಯಾಂಕುಗಳು ದಿವಾಳಿಯಾದಾಗ ಖಾತೆದಾರರಿಗೆ ಇದುವರೆಗೂ 1 ಲಕ್ಷದವರೆಗೂ ಪರಿಹಾರ ಮೊತ್ತ ನೀಡಲಾಗುತ್ತಿತ್ತು. ಈ ಮೊತ್ತವನ್ನು ಇದೀಗ 5 ಲಕ್ಷದವರೆಗೂ ಏರಿಸಲಾಗಿದೆ! ಬ್ಯಾಂಕ್‌...

  • ಯಾವುದೇ ವ್ಯಕ್ತಿ ಅಥವಾ ಸಂಸ್ಥೆ ದೊಡ್ಡ ಮೊತ್ತದ ಸಾಲ ಪಡೆಯುವಾಗ, ಪಡೆಯುವ ಸಾಲದ ಮೊತ್ತಕ್ಕೆ ಅನುಗುಣವಾಗಿ ಸಾಲ ನೀಡುವ ಬ್ಯಾಂಕು ಅಥವಾ ಆರ್ಥಿಕ ಸಂಸ್ಥೆಗೆ, ಬೆಲೆ...

  • ಬೈಕುಗಳ ಮಾರುಕಟ್ಟೆಯಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಹೀರೋ ಮೋಟೋ ಕಾರ್ಪ್‌ ಕಂಪನಿ, ಮೂರು ಬೈಕುಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಭಾರತದ ಪಿಂಕ್‌ ಸಿಟಿ...

  • ಬೇಸಾಯ ಲಾಭದಾಯಕ ಅಲ್ಲ ಎನ್ನುವ ತೀರ್ಮಾನಕ್ಕೆ ಬಂದಿರುವ ರೈತರು ಪರ್ಯಾಯ ಉದ್ಯೋಗಗಳ ಹುಡುಕಾಟದಲ್ಲಿದ್ದಾರೆ. ಆದರೆ ಕೆಲವರು ಬೇಸಾಯದಲ್ಲೇ ಬದುಕು ರೂಪಿಸಿಕೊಳ್ಳುವ...

  • ಹಿಂದೆಲ್ಲಾ ಈಡೀ ಊರಿಗೆ ಒಂದೇ ಒಂದು ಎಸ್‌.ಟಿ.ಡಿ. ಬೂತ್‌ ಇರುತ್ತಿತ್ತು. ಇದು ದಶಕಗಳ ಹಿಂದಿನ ಮಾತು. ಆಗ, ಯಾರ ಬಳಿಯೂ ಮೊಬೈಲ್‌ ಇರುತ್ತಿರಲಿಲ್ಲವಾದ್ದರಿಂದ ಊರವರು...

ಹೊಸ ಸೇರ್ಪಡೆ