
ಏನೋ ಕೇಳ್ಬೇಕು, ಆದ್ರೆ ಭಯ…
Team Udayavani, May 7, 2019, 7:53 PM IST

ನಿನ್ನ ಕುಡಿ ಹುಬ್ಬು, ವಾರೆಗಣ್ಣಿನ ನೋಟ, ಕಿರುನಗೆಯನ್ನು ನೆನಪಿಸಿಕೊಂಡರೂ ನನ್ನ ಮನಸ್ಸು ಹಕ್ಕಿಯಂತೆ ಹಾರುತ್ತದೆ. ನಿನ್ನ ಕಾಲ್ಗೆಜ್ಜೆಯ ನಾದ, ನನ್ನೆದೆಯ ತುಂಬಾ ಮಾರ್ದನಿಸುವಾಗ ಹೃದಯದಲ್ಲೇನೋ ಅರಿಯದ ಚಟುವಟಿಕೆ.
ಕಂಡ ಕಂಡ ಹುಡುಗಿಯರನ್ನೆಲ್ಲಾ ಅಕ್ಕ ತಂಗಿಯರೆಂದು ಕರೆಯುತ್ತಿದ್ದ ನನ್ನ ಬಾಯಿಗೆ ಬೀಗ ಬಿದ್ದಿದ್ದು ನಿನ್ನನ್ನು ನೋಡಿದಾಗಲೇ. ನಿನ್ನ ಮಾರುದ್ದದ ಜಡೆಯೇ ನನ್ನ ಹೃದಯವನ್ನು ಕಟ್ಟಿ ಹಾಕಿತ್ತು. ಹೇಗಾದರೂ ಮಾಡಿ ನಿನ್ನ ಸ್ನೇಹ ಸಂಪಾದಿಸಬೇಕು ಅಂದುಕೊಂಡವನಿಗೆ ನೆನಪಾಗಿದ್ದು ಫೇಸ್‌ಬುಕ್.
ಅಂದು ರಾತ್ರಿ ದಿಂಬಿಗೆ ತಲೆ ಕೊಟ್ಟು ಫೇಸ್‌ಬುಕ್‌ನಲ್ಲಿ ನಿನ್ನ ಹೆಸರನ್ನು ಟೈಪ್
ಮಾಡುವಾಗ ಬೆರಳ ತುದಿಯೂ ಪುಳಕಗೊಂಡಿತ್ತು. ನಿನ್ನ ಫೋಟೊಗಳನ್ನು ನೋಡುತ್ತಾ, ಬೆಳಗಾಗಿದ್ದೇ ತಿಳಿಯಲಿಲ್ಲ. ಅಂತೂ, ಪ್ರೇಮ ಜಾಗರಣೆಯ ಕೊನೆಯ ಹಂತವಾಗಿ, ಮೆಸೆಂಜರ್ ಮೂಲಕ ಸಂದೇಶವೊಂದನ್ನು ನಿನಗೆ ಕಳುಹಿಸಿ ನಿಟ್ಟುಸಿರುಬಿಟ್ಟೆ. ಅಚ್ಚರಿ ಎಂಬಂತೆ, ಕೆಲವೇ ಕ್ಷಣಗಳಲ್ಲಿ ನೀನು ಪ್ರತಿಕ್ರಿಯೆ ನೀಡಿಬಿಟ್ಟೆ! ಆಗ ನಾನು ಕುಣಿದು ಕುಪ್ಪಳಿಸುವುದೊಂದೇ ಬಾಕಿ.
ಸಂದೇಶದಿಂದ ಶುರುವಾದ ಪರಿಚಯ, ಪ್ರೀತಿಯ ಮೊಳಕೆಯೊಂದನ್ನು ನನ್ನ
ಮನಸಲಿ ಚಿಗುರೊಡೆಸಿದೆ. ಪ್ರಪೋಸ್ ಮಾಡುವ ಆಸೆಯಿದ್ದರೂ, ಅದಕ್ಕೆ ನಿನ್ನ
ಪ್ರತಿಕ್ರಿಯೆ ಹೇಗಿರಬಹುದೆಂಬ ಆತಂಕ ಕಾಡುತ್ತಿದೆ. ನಿತ್ಯ ನೀನು ಎದುರಾದಾಗ ಉಸಿರು ಕಟ್ಟಿದಂತಾಗುತ್ತದೆ. ಹೇಳಿಬಿಡು ನೀ ಒಮ್ಮೆ ನಿನ್ನ ಮನದ ಒಳಗುಟ್ಟು. ಏನೆಂದು ಕರೆಯಲಿ ನಾ ನಿನ್ನ? ಪ್ರೇಯಸಿ ಎನ್ನಲೇ ಅಥವಾ ಗೆಳತಿ ಎನ್ನಲೇ? ಏನನ್ನಲಿ ಹೇಳಿಬಿಡು ಹುಡುಗಿ…
– ಪ್ರವೀಣ್‌ಕುಮಾರ್ ಸಲಗನಹಳ್ಳಿ
ಟಾಪ್ ನ್ಯೂಸ್
