ಸ್ಟಾರ್‌ ಸಿನ್ಮಾದಲ್ಲಿ ನವನಟಿಯರ ಕನಸು

Team Udayavani, Sep 13, 2019, 5:30 AM IST

ಸಾಮಾನ್ಯವಾಗಿ ಸ್ಟಾರ್‌ ನಟರ ಚಿತ್ರಗಳು ಅಂದಾಕ್ಷಣ, ಅಲ್ಲಿ ಸ್ಟಾರ್‌ ನಟಿಯರು ಕಾಣಿಸಿ­ಕೊಳ್ಳುವುದು ಸಹಜ. ಕನ್ನಡ ಮಾತ್ರವಲ್ಲ, ಪರಭಾಷೆ ಚಿತ್ರರಂಗದಲ್ಲೂ ಇದು ಸಾಮಾನ್ಯ. ಈಗ ಕನ್ನಡದ ಮಟ್ಟಿಗೆ ಹೇಳುವುದಾದರೆ, ಆ ಸಿದ್ಧಾಂತ ಸ್ವಲ್ಪ ಮಟ್ಟಿಗೆ ಬ್ರೇಕ್‌ ಆಗಿದೆ ಎನ್ನಬಹುದು. ಕನ್ನಡದ ಸ್ಟಾರ್‌ ನಟರ ಸಿನಿಮಾಗಳಲ್ಲಿ ಹೊಸ ಹುಡುಗಿಯರೇ ಕಾಣಸಿಗುತ್ತಿದ್ದಾರೆ.

ಕನ್ನಡ ಚಿತ್ರರಂಗದಲ್ಲಿ ಹೊಸಬರು ಮಿಂಚುತ್ತಿರುವುದು ಹೊಸದೇನಲ್ಲ. ಆದರೆ, ನೂರಾರು ಆಸೆ, ಆಕಾಂಕ್ಷೆ ಹೊತ್ತು ಬರುವ ಹೊಸ ನಾಯಕಿಯರದ್ದೇ ಕಾರುಬಾರು ಅನ್ನೋದು ಹೊಸ ವಿಷಯ. ಹೌದು, ಇತ್ತೀಚಿನ ದಿನಗಳಲ್ಲಿ ಸೆಟ್ಟೇರುತ್ತಿರುವ ಸ್ಟಾರ್‌ ಚಿತ್ರಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ, ಅಲ್ಲಿ ಹೊಸ ನಾಯಕಿಯರ ಸಂಖ್ಯೆ ಹೆಚ್ಚು. ಕನ್ನಡದ ಹೊಸ ಪ್ರತಿಭೆಗಳ ಜೊತೆಗೆ ಪರಭಾಷೆಯಿಂದಲೂ ನಾಯಕಿಯರ ಆಗಮನವಾಗುತ್ತಿರುವುದು ತಕ್ಕಮಟ್ಟಿಗಿನ ಹೊಸ ಬೆಳವಣಿಗೆಯೇ ಸರಿ. ಆ ಮೂಲಕ ಕನ್ನಡ ಚಿತ್ರರಂಗದಲ್ಲಿ ಗಟ್ಟಿ ನೆಲೆ ಕಾಣುವ ಕನಸನ್ನು ಮೆಲ್ಲನೆ ನನಸು ಮಾಡಿಕೊಳ್ಳುವಲ್ಲಿ ದಾಪುಗಾಲು ಇಡುತ್ತಿದ್ದಾರೆ.

ಸಾಮಾನ್ಯವಾಗಿ ಸ್ಟಾರ್‌ ನಟರ ಚಿತ್ರಗಳು ಅಂದಾಕ್ಷಣ, ಅಲ್ಲಿ ಸ್ಟಾರ್‌ ನಟಿಯರು ಕಾಣಿಸಿ­ಕೊಳ್ಳುವುದು ಸಹಜ. ಕನ್ನಡ ಮಾತ್ರವಲ್ಲ, ಪರಭಾಷೆ ಚಿತ್ರರಂಗದಲ್ಲು ಇದು ಸಾಮಾನ್ಯವಾಗಿ ಕಾಣಸಿಗುವ ಚಿತ್ರಣ. ಈಗ ಕನ್ನಡದ ಮಟ್ಟಿಗೆ ಹೇಳುವುದಾದರೆ, ಆ ಸಿದ್ಧಾಂತ ಸ್ವಲ್ಪ ಮಟ್ಟಿಗೆ ಬ್ರೇಕ್‌ ಆಗಿದೆ ಎನ್ನಬಹುದು. ನಿಜ, ಕನ್ನಡದ ಸ್ಟಾರ್‌ ನಟರ ಸಿನಿಮಾಗಳಲ್ಲೀಗ ಹೊಸ ಹುಡುಗಿಯರೇ ಕಾಣಸಿಗುತ್ತಿದ್ದಾರೆ. ಸ್ಟಾರ್‌ ನಟರ ಜೊತೆಗೆ ನಾಯಕಿಯರಾಗಿ ಕಾಣಿಸಿಕೊಂಡರೆ, ತಮ್ಮೆಲ್ಲಾ ಕಲರ್‌ಫ‌ುಲ್‌ ಕನಸುಗಳನ್ನು ನನಸು ಮಾಡಿಕೊಳ್ಳಬಹುದು ಎಂಬ ಲೆಕ್ಕಾಚಾರ ಒಂದು ಕಡೆಯಾದರೆ, ಸ್ಟಾರ್‌ ಸಿನಿಮಾದಲ್ಲಿ ನಟಿಸಿ, ಚಿತ್ರರಂಗದಲ್ಲಿ ಗಟ್ಟಿ ನೆಲೆ ಕಂಡುಕೊಳ್ಳಬಹುದು ಎಂಬ ಯೋಚನೆ ಇನ್ನೊಂದು ಕಡೆ. ಹಾಗಾಗಿ, ತಮ್ಮ ಕನಸುಗಳನ್ನು ಬೆನ್ನತ್ತಿ ಬರುತ್ತಿರುವ ಹೊಸ ನಾಯಕಿಯರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಹಾಗೊಮ್ಮೆ ಕನ್ನಡದ ಸ್ಟಾರ್‌ ನಟರ ಚಿತ್ರಗಳನ್ನು ಗಮನಿಸಿದರೆ, ಅಲ್ಲಿ ಕಾಣುವ ನಾಯಕಿಯರೆಲ್ಲರಿಗೂ ಅದು ಮೊದಲ ಅನುಭವ. ವರ್ಷಗಳ ತಪಸ್ಸು ಫ‌ಲಿಸಿದ ಖುಷಿ. ಹೌದು, ಸುದೀಪ್‌ ಅಭಿನಯದ “ಪೈಲ್ವಾನ’, “ಕೋಟಿಗೊಬ್ಬ-3′, ದರ್ಶನ್‌ ನಟಿಸುತ್ತಿರುವ “ರಾಬರ್ಟ್‌’, ಪುನೀತ್‌ ಅವರ “ಯುವರತ್ನ’, “ಶ್ರೀಮುರಳಿ ನಟನೆಯ “ಭರಾಟೆ’, ಗಣೇಶ್‌ ನಾಯಕರಾಗಿರುವ “ಗೀತಾ’, ಪ್ರೇಮ್‌ ನಿರ್ದೇಶನದ “ಏಕಲವ್ಯ’, ಕೆ.ಮಂಜು ಪುತ್ರ ಶ್ರೇಯಸ್‌ ಅಭಿನಯದ ಹೊಸ ಚಿತ್ರ “ವಿಷ್ಣುಪ್ರಿಯ’ ಹೀಗೆ ಇನ್ನಷ್ಟು ಸ್ಟಾರ್ ಹಾಗು ಹೊಸಬರ ಚಿತ್ರಗಳಲ್ಲಿ ಹೊಸ ನಾಯಕಿಯರ ಆಗಮನವಾಗಿದೆ. ಅವರೆಲ್ಲರಿಗೂ ಕನ್ನಡದ ಮೊದಲ ಚಿತ್ರ ಅನ್ನೋದು ವಿಶೇಷ. ಅಷ್ಟಕ್ಕೂ ಕನ್ನಡದಲ್ಲಿ ನಾಯಕಿಯರೇ ಇಲ್ಲವೇ? ಈ ಪ್ರಶ್ನೆ ಎದುರಾಗೋದು ಸಹಜ. ಕನ್ನಡತಿಯರ ಜೊತೆಗೆ ತೆಲುಗು, ಮಲಯಾಳಂ, ಹಿಂದಿ ಚಿತ್ರರಂಗದ ಹುಡುಗಿಯರು ಮೊದಲ ಸಲ ಎಂಟ್ರಿಯಾಗಿದ್ದಾರಷ್ಟೇ. ಸಿನಿಮಾ ಕನಸು ಕಾಣುವ ಅದೆಷ್ಟೋ ಹುಡುಗಿಯರಿಗೆ ತಮ್ಮ ಮೊದಲ ಚಿತ್ರದ ನಾಯಕ ಅವರಾಗಿರಬೇಕು, ಇವರಾಗಿರಬೇಕು ಎಂಬ ಕಲ್ಪನೆ ಸಹಜವಾಗಿಯೇ ಇರುತ್ತೆ. ಆದರೆ, ಅದಕ್ಕೆಲ್ಲ ಅದೃಷ್ಟ ಕೂಡಿಬರಬೇಕು. ಅಂತಹ ಅದೃಷ್ಟ ಹೊತ್ತು ಬಂದ ಬೆರಳೆಣಿಕೆ ನಾಯಕಿಯರ ಕುರಿತು ಒಂದು ಕಿರುಪರಿಚಯವನ್ನು ಮಾತ್ರ ಇಲ್ಲಿ ಮಾಡಲಾಗಿದೆ.

ಕಿಸ್‌ ಕೊಟ್ಟ ಶ್ರೀಲೀಲಾ
ಎ.ಪಿ.ಅರ್ಜುನ್‌ ನಿರ್ದೇಶನದ “ಕಿಸ್‌’ ಚಿತ್ರದ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿರುವ ಶ್ರೀಲೀಲಾ ಕೂಡ ಅಪ್ಪಟ ಕನ್ನಡದ ಹುಡುಗಿ. ಆ ಚಿತ್ರ ಇನ್ನೇನು ಬಿಡುಗಡೆಯ ಹಂತದಲ್ಲಿದೆ. ಅದಾಗಲೇ, ಶ್ರೀಲೀಲಾ ಶ್ರೀಮುರಳಿ ಅಭಿನಯದ “ಭರಾಟೆ’ ಚಿತ್ರಕ್ಕೂ ನಾಯಕಿಯಾಗಿ ನಟಿಸಿದ್ದಾರೆ. ಮೊದಲ ಅವಕಾಶದಲ್ಲೇ ಸ್ಟಾರ್‌ ಜೊತೆ ನಟಿಸುವ ಅವಕಾಶ ಪಡೆದ ಖುಷಿ ಈ ಹುಡುಗಿಯದ್ದು. ಇನ್ನೇನು ಒಟ್ಟೊಟ್ಟಿಗೆ ಎರಡು ಚಿತ್ರ ಬಿಡುಗಡೆಯ ತಯಾರಿಯಲ್ಲಿರುವುದರಿಂದ ಸಹಜವಾಗಿಯೇ ಶ್ರೀಲೀಲಾ ಅವರಿಗೂ ಗಾಂಧಿನಗರಿಗರು ಒಪ್ಪಿ, ಅಪ್ಪುತ್ತಾರೆಂಬ ಭವ್ಯ ಭರವಸೆ ಇದೆ.

ಸ್ಟಾರ್‌ ಸಿನ್ಮಾದಲ್ಲಿ ನವನಟಿಯರ ಕನಸು
ಪೈಲ್ವಾನ ಬೆಡಗಿ ಆಕಾಂಕ್ಷ ಸಿಂಗ್‌
ಸುದೀಪ್‌ ಅಭಿನಯದ “ಪೈಲ್ವಾನ’ ಈ ವಾರ ಬಿಡುಗಡೆಯಾಗಿದೆ. ಈ ಚಿತ್ರಕ್ಕೆ ಆಕಾಂಕ್ಷ ಸಿಂಗ್‌ ನಾಯಕಿ­ಯಾಗಿದ್ದಾರೆ. ರಾಜಸ್ಥಾನದ ಬೆಡಗಿಯಾಗಿ­ರುವ ಆಕಾಂಕ್ಷ ಸಿಂಗ್‌ಗೆ ಇದು ಕನ್ನಡದ ಮೊದಲ ಚಿತ್ರ. ಹಾಗಂತ, ಸಿನಿಮಾ ಅನುಭವ ಇಲ್ಲವೆಂದಲ್ಲ, ಹಿಂದಿ ಕಿರುತೆರೆಯಲ್ಲಿ ನಾಲ್ಕೈದು ವರ್ಷಗಳ ಕಾಲ ಮಿಂಚಿದವರು. ಆ ಬಳಿಕ ಬೆರಳೆಣಿಕೆಯ ಹಿಂದಿ, ತೆಲುಗು ಚಿತ್ರಗಳಲ್ಲೂ ನಟಿಸಿ ಸೈ ಎನಿಸಿಕೊಂಡವರು. ಈಗ ಇದೇ ಮೊದಲ ಬಾರಿಗೆ ಕನ್ನಡದ “ಪೈಲ್ವಾನ’ ಮೂಲಕ ತಮ್ಮ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ಮೊದಲ ಕನ್ನಡ ಚಿತ್ರದಲ್ಲೇ ಸ್ಟಾರ್‌ ನಟನ ಜೊತೆ ನಟಿಸಿರುವುದರಿಂದ ಸಹಜವಾಗಿಯೇ ಆಕಾಂಕ್ಷ ಸಿಂಗ್‌ಗೆ ಇಲ್ಲಿ ಗಟ್ಟಿ ನೆಲೆ ಕಾಣುವ ಆಸೆ ಮತ್ತಷ್ಟು ಗಟ್ಟಿಯಾಗಿರುವುದಂತೂ ಸುಳ್ಳಲ್ಲ.

ಯುವರತ್ನನಿಗೆ ಮುಂಬೈ ಬೆಡಗಿ ಸಯ್ಯೇಶಾ
ಪುನೀತ್‌ರಾಜಕುಮಾರ್‌ ಚಿತ್ರಗಳಲ್ಲೂ ಹೊಸ ಹುಡುಗಿಯರು ಕಾಣಿಸಿಕೊಳ್ಳುತ್ತಿರುವುದು ಹೊಸದೇನಲ್ಲ. ಸಂತೋಷ್‌ ಆನಂದರಾಮ್‌ ನಿರ್ದೇಶನದ “ಯುವರತ್ನ’ ಚಿತ್ರದಲ್ಲಿ ಸಯ್ಯೇಶಾ ಸೈಗಲ್‌ ನಾಯಕಿಯಾಗಿದ್ದಾರೆ. ಈ ಹುಡುಗಿಗೆ ಇದು ಮೊದಲ ಕನ್ನಡ ಸಿನಿಮಾ ಅನ್ನೋದು ವಿಶೇಷ. ಮುಂಬೈ ಮೂಲದ ಸಯ್ಯೇಶಾ ಸೈಗಲ್‌ ಈಗಾಗಲೇ ಹಿಂದಿ, ತೆಲುಗು ಹಾಗು ತಮಿಳು ಚಿತ್ರಗಳಲ್ಲಿ ನಟಿಸಿದ್ದಾರೆ. ಮೊದಲ ಸಲ ಸ್ಟಾರ್‌ ನಟ ಪುನೀತ್‌ ಜೊತೆ ಕಾಣಿಸಿಕೊಳ್ಳುತ್ತಿರು­ವು­ದರಿಂದ ಸಹಜವಾಗಿಯೇ ಸಯ್ಯೇಶಾ ಅವರಿಗೆ ಸೌತ್‌ ಫಿಲ್ಮ್ ಇಂಡಸ್ಟ್ರಿಯಲ್ಲಿ ನೆಲೆಯೂರುವ ಭರವಸೆ ಇದೆ.

ರಾಬರ್ಟ್‌ ಹುಡುಗಿ ಆಶಾ ಭಟ್‌
ಕನ್ನಡದಲ್ಲಿ ದರ್ಶನ್‌ ಚಿತ್ರಗಳೆಂದರೆ ಇನ್ನಿಲ್ಲದ ಕ್ರೇಜ್‌. ಕಥೆ, ಬಜೆಟ್‌, ಕಾಸ್ಟಿಂಗ್ಸ್‌ ಹೀರೋಯಿನ್ಸ್‌ ಹೀಗೆ ಪ್ರತಿಯೊಂದರ ಬಗ್ಗೆಯೂ ದೊಡ್ಡ ಮಟ್ಟದಲ್ಲೇ ಸುದ್ದಿಯಾಗುತ್ತೆ. ಅವರ ಬಹುನಿರೀಕ್ಷೆಯ “ರಾಬರ್ಟ್‌’ ಬಗ್ಗೆ ಎಲ್ಲರಿಗೂ ಕುತೂಹಲ. ಈ ಚಿತ್ರಕ್ಕೆ ನಾಯಕಿ ಅವರಂತೆ, ಇವರಂತೆ ಅಂತೆಲ್ಲಾ ಸುದ್ದಿಯಾಗಿತ್ತು. ಆದರೆ, ಅದ್ಯಾವುದೂ ಪಕ್ಕಾ ಆಗಿರಲಿಲ್ಲ. ಕೊನೆಗೆ ಅಪ್ಪಟ ಕನ್ನಡತಿ ಆಶಾ ಭಟ್‌ ನಾಯಕಿಯಾಗಿದ್ದಾರೆ. ಮೂಲತಃ ಭದ್ರಾವತಿ ಹುಡುಗಿಯಾಗಿರುವ ಆಶಾ ಭಟ್‌ 2014ರ ಮಿಸ್‌ ಸುಪ್ರಾ ನ್ಯಾಶನಲ್‌ ಪ್ರಶಸ್ತಿ ವಿಜೇತೆ. ಈಗಾಗಲೇ ಹಿಂದಿಯಲ್ಲಿ “ಜಂಗ್ಲಿ’ ಎಂಬ ಚಿತ್ರ ಮಾಡಿರುವ ಆಶಾ ಭಟ್‌, ಕನ್ನಡದ ಸ್ಟಾರ್‌ ನಟ ದರ್ಶನ್‌ ಜೊತೆ ನಾಯಕಿಯಾಗಿ ಸ್ಯಾಂಡಲ್‌ವುಡ್‌ಗೆ ಬಿಗ್‌ ಎಂಟ್ರಿ ಕೊಟ್ಟು, ಇಲ್ಲೆ ನೆಲೆಯೂರುವ ಕನಸು ಕಂಡಿದ್ದಾರೆ.

ಪ್ರೇಮ್‌ ಚಿತ್ರಕ್ಕೆ ಕೊಡಗು ಚೆಲುವೆ
ನಿರ್ದೇಶಕ ಪ್ರೇಮ್‌ ತನ್ನ ಪತ್ನಿ ರಕ್ಷಿತಾ ಅವರ ಸಹೋದರ ರಾಣ ಅವರಿಗಾಗಿ “ಏಕ್‌ ಲವ್‌ ಯಾ’ (ಏಕಲವ್ಯ) ಸಿನಿಮಾ ನಿರ್ದೇಶಿಸುತ್ತಿರುವುದು ಗೊತ್ತೇ ಇದೆ. ಈ ಚಿತ್ರದ ಮೂಲಕ ರಾಣ ಕನ್ನಡ ಚಿತ್ರರಂಗದ ಹೀರೋ ಆಗಿ ಎಂಟ್ರಿಯಾಗುತ್ತಿದ್ದಾರೆ. ಈ ಚಿತ್ರಕ್ಕೂ ಪ್ರೇಮ್‌ ಹೊಸ ಹುಡುಗಿಯನ್ನೇ ಕರೆತಂದಿರುವುದು ವಿಶೇಷ. ಹೌದು, ಕೊಡಗಿನ ಬೆಡಗಿ ರಿಷಾ ನಾಯಕಿಯಾಗಿದ್ದಾರೆ. ಪ್ರೇಮ್‌ ಯಾವುದೇ ಚಿತ್ರ ಮಾಡಿದರೂ, ಅಲ್ಲಿ ಸ್ಪೆಷಲ್‌ ಅಂದರೆ ನಾಯಕಿ. ಅದೂ ಅಲ್ಲದೆ, “ಏಕ್‌ ಲವ್‌ ಯಾ’ ಅವರ ಭಾಮೈದನ ಸಿನಿಮಾ ಆಗಿರುವುದರಿಂದ ಈ ಬಾರಿ ರಿಷಾ ಎಂಬ ಅಪ್ಪಟ ಕನ್ನಡದ ಹೊಸ ಪ್ರತಿಭೆಯನ್ನು ಹುಡುಕಿ ಚಿತ್ರರಂಗಕ್ಕೆ ಪರಿಯಿಸುತ್ತಿದ್ದಾರೆ.

ಕೋಟಿಗೊಬ್ಬನ ಜೊತೆ ಮಡೋನಾ
ಸುದೀಪ್‌ ಅವರು “ಕೋಟಿಗೊಬ್ಬ-3′ ಚಿತ್ರ ಮಾಡುತ್ತಿರುವುದು ಗೊತ್ತು. ಆ ಚಿತ್ರಕ್ಕೂ ಮಡೋನಾ ಸೆಬಾಸ್ಟಿನ್‌ ಎಂಬ ಮಲಯಾಳಿ ಬೆಡಗಿ ನಾಯಕಿಯಾಗಿ ಮೊದಲ ಸಲ ಕನ್ನಡ ಚಿತ್ರರಂಗಕ್ಕೆ ಎಂಟ್ರಿಯಾಗಿದ್ದಾರೆ. ಈ ಹಿಂದೆ ಮಲಯಾಳಂ, ತೆಲುಗು ಹಾಗು ತಮಿಳು ಚಿತ್ರರಂಗದಲ್ಲಿ ಹಲವು ಚಿತ್ರಗಳಿಗೆ ನಾಯಕಿಯಾಗಿದ್ದ ಮಡೋನ ಸೆಬಾಸ್ಟಿನ್‌, ಸುದೀಪ್‌ ಜೊತೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದ ಮೂಲಕ ಮತ್ತಷ್ಟು ಕನ್ನಡದ ಹೊಸ ಚಿತ್ರಗಳಲ್ಲಿ ಮಿಂಚುವ ಭರವಸೆಯಲ್ಲಿದ್ದಾರೆ ಮಡೋನ.

ಗೋಲ್ಡ್‌ ಅಪ್ಪಿದ ಮಲಯಾಳಿ ಬೆಡಗಿಯರು
ಗಣೇಶ್‌ ಈಗ “ಗೀತಾ’ ಚಿತ್ರ ಮಾಡುತ್ತಿದ್ದು, ಈ ಚಿತ್ರದಲ್ಲಿ ಮೂವರು ನಾಯಕಿಯರಿದ್ದಾರೆ. ಆ ಪೈಕಿ ಇಬ್ಬರು ಮಲಯಾಳಿ ಚಿತ್ರರಂಗದಿಂದ ಬಂದವರು ಎಂಬುದು ವಿಶೇಷ. ಆ ಪೈಕಿ ಪ್ರಯಾಗ್‌ ಮಾರ್ಟಿನ್‌ ಮತ್ತು ಪಾರ್ವತಿ ಅರುಣ್‌ ಈ ಇಬ್ಬರಿಗೂ ಕನ್ನಡದ “ಗೀತಾ’ ಮೊದಲ ಸಿನಿಮಾ. ಈ ಮೂಲಕ ಕನ್ನಡಕ್ಕೆ ಎಂಟ್ರಿಯಾಗಿರುವ ಇವರಿಗೆ ಕನ್ನಡ ಚಿತ್ರರಂಗ ಅಪ್ಪುವ ನಂಬಿಕೆ ಆಳವಾಗಿದೆ. ಉಳಿದಂತೆ ನಿರ್ಮಾಪಕ ಕೆ.ಮಂಜು ಪುತ್ರ ಶ್ರೇಯಸ್‌ ಅಭಿನಯದ “ವಿಷ್ಣುಪ್ರಿಯ’ ಚಿತ್ರಕ್ಕೆ ಅಧಿಕೃತವಾಗಿ ಕಣ್ಸನ್ನೆ ಹುಡುಗಿ ಪ್ರಿಯಾ ವಾರಿಯರ್‌ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ವಿಜಯ್‌ ಭರಮಸಾಗರ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಇದೊಂದು ಫ್ಯಾಮಿಲಿ ಕಂಟೆಂಟ್‌ ಇರುವ ಚಿತ್ರ. ಆ ಬಗ್ಗೆ ಹೇಳುವುದಾದರೆ, ಪ್ರತಿಯೊಬ್ಬರ ಲೈಫ‌ಲ್ಲೂ ಸಂಬಂಧಕ್ಕೆ ವ್ಯಾಲ್ಯು ಇದ್ದೇ ಇರುತ್ತೆ. ಆ ಜೀವನ ಸಂಬಂಧದ ಹಿನ್ನೆಲೆಯೂ...

  • ಕನ್ನಡದಲ್ಲಿ ಇನ್ನೂ ವೆಬ್‌ ಸೀರಿಸ್‌ಗಳಿಗೆ ಮಾರುಕಟ್ಟೆ, ಪ್ರೇಕ್ಷಕ ವರ್ಗ ಸೃಷ್ಟಿಯಾಗಿಲ್ಲ. ಇವೆಲ್ಲದರ ನಡುವೆಯೂ ಇತ್ತೀಚೆಗೆ ಕನ್ನಡದಲ್ಲೂ ಅನೇಕ ಹೊಸ ಪ್ರತಿಭೆಗಳು...

  • ಒಂದು ಸಮಯವಿತ್ತು. ಚಿತ್ರರಂಗಕ್ಕೆ ಹೊಸದಾಗಿ ಬರುವವರು ಗುರುತಿಸಿಕೊಳ್ಳಬೇಕಾದರೆ ಸಿನಿಮಾನೇ ವೇದಿಕೆಯಾಗಿತ್ತು. ಆ ಮೂಲಕವೇ ಅವರು ತಮ್ಮ ಪ್ರತಿಭಾ ಪ್ರದರ್ಶನ...

  • "ಸವರ್ಣ ದೀರ್ಘ‌ ಸಂಧಿ'- ಈ ಚಿತ್ರದ ಬಗ್ಗೆ ನೀವು ಕೇಳಿರುತ್ತೀರಿ. ಈಗಾಗಲೇ ಬಿಡುಗಡೆಯಾಗಿರುವ ಈ ಚಿತ್ರದ ಟ್ರೇಲರ್‌ ಹಿಟ್‌ ಆಗುವ ಮೂಲಕ ಸಿನಿಮಾದ ಬಗೆಗಿನ ನಿರೀಕ್ಷೆ...

  • "ಅವರ ಮಗನಿಗೆ ವಯಸ್ಸು 19. ತಮ್ಮ ಪ್ರೀತಿಯ ಮಗನಿಗೋಸ್ಕರ ಆ ತಂದೆ ಸುಮಾರು ಇಪ್ಪತ್ತು ಸಲ ಮಗನ ಕಾಲೇಜ್‌ಗೆ ಹೋಗಿ, ಪ್ರಿನ್ಸಿಪಾಲ್‌ ಮುಂದೆ ಕೈ ಕಟ್ಟಿಕೊಂಡು ನಿಂತಿದ್ದರಂತೆ!...

ಹೊಸ ಸೇರ್ಪಡೆ