ಅಂತರಾಳದ ಕೂಗು

ಪ್ರಿಯ ಮಾತು

Team Udayavani, Jul 5, 2019, 5:32 AM IST

ಅದೊಂದು ಅಮ್ಮನ ಪಾತ್ರ. ತಾಯಿಯೊಬ್ಬಳು ಕಳೆದು ಹೋದ ತನ್ನ ಮಗಳನ್ನು ಹುಡುಕಾಡುವ ತಳಮಳ, ಅನುಭವಿಸುವ ನೋವು, ಯಾತನೆಯನ್ನು ಇಲ್ಲಿ ಚೆನ್ನಾಗಿ ಕಟ್ಟಿಕೊಡಲಾಗಿದೆ. ತನ್ನ ಮಗು ಕಳೆದು ಹೋದಾಗ, ಆ ತಾಯಿಯ ಬದುಕಲ್ಲಿ ಏನೆಲ್ಲಾ ನಡೆದು ಹೋಗುತ್ತೆ. ಕೆಲವು ಸಂದರ್ಭದಲ್ಲಿ ಆಕೆ ಹೇಗೆ ಆ ಕಷ್ಟಗಳನ್ನು ಎದುರಿಸುತ್ತಾಳೆ ಎಂಬ ಪಾತ್ರ ನೋಡುಗರಲ್ಲಿ ಛಲ ಹುಟ್ಟಿಸುವಂತಿದೆ. ಒಂದು ಗಂಭೀರವಾದ ಕಥೆಯಲ್ಲಿ, ಅಷ್ಟೇ ಗಂಭೀರ ಪಾತ್ರ ಇಲ್ಲಿದೆ …

‘ಇಲ್ಲಿ ನಾಯಕ, ನಾಯಕಿ ಅಂತೇನೂ ಇಲ್ಲ. ಕಥೆಯೇ ಎಲ್ಲದರ ಜೀವಾಳ… ‘

– ಹೀಗೆ ಹೇಳಿ ಹಾಗೊಂದು ನಗು ಹೊರ ಹಾಕಿದರು ಪ್ರಿಯಾಂಕಾ ಉಪೇಂದ್ರ. ಅವರು ಹೇಳಿಕೊಂಡಿದ್ದು ಇಂದು ತೆರೆಕಾಣುತ್ತಿರುವ ‘ದೇವಕಿ’ ಬಗ್ಗೆ. ‘ದೇವಕಿ’ಯಲ್ಲಿ ನಾಯಕಿ ಮರಸುತ್ತುವ ಗೋಜು ಇಲ್ಲ. ನಾಯಕಿಯನ್ನು ಕಾಪಾಡುವ ನಾಯಕನೂ ಇಲ್ಲ. ಆದರೆ, ಅದರ ಹೊರತಾಗಿ ಹೊಸದೇನೋ ಇದೆ. ಹಾಗಾಗಿ, ಪ್ರಿಯಾಂಕಾ ಉಪೇಂದ್ರ ಅವರ ಸಿನಿಜರ್ನಿಯಲ್ಲಿ ‘ದೇವಕಿ’ ವಿಶೇಷ ಚಿತ್ರ. ಆ ಕುರಿತು ಪ್ರಿಯಾಂಕಾ ಒಂದಷ್ಟು ಮಾತನಾಡಿದ್ದಾರೆ.

ಈ ಹಿಂದೆ ‘ಮಮ್ಮಿ’ ಮಾಡಿ ಯಶಸ್ಸು ಪಡೆದಿದ್ದ ತಂಡದ ಜೊತೆಯಲ್ಲೇ ಪ್ರಿಯಾಂಕಾ, ‘ದೇವಕಿ’ ಚಿತ್ರ ಮಾಡಿದ್ದಾರೆ. ಸಹಜವಾಗಿಯೇ ಎಲ್ಲರಲ್ಲೂ ಒಂದು ಕುತೂಹಲ ಇದ್ದೇ ಇದೆ. ಮತ್ತದೇ ಸಕ್ಸಸ್‌ ಟೀಮ್‌ ಮಾಡಿರುವ ಚಿತ್ರವಾದ್ದರಿಂದ ನಿರೀಕ್ಷೆಯೂ ಹೆಚ್ಚಿದೆ. ಆ ಕುರಿತು ಹೇಳುವ ಪ್ರಿಯಾಂಕಾ, ‘ಮಮ್ಮಿ’ ಸಕ್ಸಸ್‌ ಬಳಿಕ ತುಂಬಾ ಜನ ಸೀಕ್ವೆಲ್ ಮಾಡಿ ಅಂದಿದ್ದರು. ಆದರೆ, ನನಗೆ ಬೇರೆ ಹೊಸದೇನನ್ನೋ ಮಾಡುವ ಆಸೆ ಇತ್ತು. ಪುನಃ ರಿಪೀಟ್ ಬೇಡ. ಹೊಸದನ್ನು ಕೊಟ್ಟು ಆ ನಂತರ ನೋಡೋಣ, ಈಗ ವಿಭಿನ್ನವಾಗಿ ಒಂದೊಳ್ಳೆಯ ಚಿತ್ರ ಮಾಡೋಣ ಅಂದುಕೊಂಡಿ­ದ್ದೆವು. ಅಂಥದ್ದೊಂದು ವಿಭಿನ್ನ, ವಿಶೇಷತೆ ಈ ‘ದೇವಕಿ’ಯಲ್ಲಿದೆ. ನನಗೆ ವೈಯಕ್ತಿಕವಾಗಿ ಥ್ರಿಲ್ಲರ್‌ ತುಂಬಾ ಇಷ್ಟ. ನಿರ್ದೇಶಕ ಲೋಹಿತ್‌ ಅವರ ಮೇಕಿಂಗ್‌ ಥಾಟ್ ನನ್ನ ಜೊತೆ ಮ್ಯಾಚ್ ಆಯ್ತು. ಪ್ರೇಕ್ಷಕರ ನಾಡಿಮಿಡಿತ ಅರ್ಥ ಮಾಡಿಕೊಂಡೇ ‘ದೇವಕಿ’ ಮಾಡಿದ್ದೇವೆ. ಇದು ಕಂಟೆಂಟ್ ಸಿನಿಮಾ. ಸ್ಕ್ರಿಪ್ಟ್ ಇಲ್ಲಿ ಮುಖ್ಯ ಪಾತ್ರ ವಹಿಸಿದೆ. ಮೇಕಿಂಗ್‌, ಸಂಗೀತ ಮತ್ತು ಕಲಾವಿದರು ಚಿತ್ರದ ಮತ್ತೂಂದು ಹೈಲೈಟ್’ ಎಂಬುದು ಪ್ರಿಯಾಂಕಾ ಮಾತು.

ಎಲ್ಲಾ ಸರಿ, ಪ್ರಿಯಾಂಕಾ ಅವರು ಪುನಃ ನಾಯಕಿ ಪ್ರಧಾನ ಚಿತ್ರ ಮಾಡಿದ್ದಾರೆ. ಅಷ್ಟಕ್ಕೂ ಅವರು ಈ ‘ದೇವಕಿ’ ಒಪ್ಪೋಕೆ ಕಾರಣ ಏನು ಎಂಬ ಪ್ರಶ್ನೆಗೆ, ‘ಮುಖ್ಯವಾಗಿ ನಾನು ಈ ಚಿತ್ರ ಒಪ್ಪೋಕೆ ಕಥೆ ಕಾರಣ. ‘ಮಮ್ಮಿ’ ಮಾಡಿದ್ದರಿಂದ ನನಗೂ ಒಂದು ಐಡಿಯಾ ಇತ್ತು. ಮೊದಲು ಒನ್‌ಲೈನ್‌ ಸ್ಟೋರಿ ಕೇಳಿದಾಗ, ಇದೊಂದು ಒಳ್ಳೆಯ ಚಿತ್ರ ಆಗುತ್ತೆ ಅಂತ, ಕಥೆಯಲ್ಲಿ ನಾನೂ ತೊಡಗಿಕೊಂಡೆ. ಸಾಕಷ್ಟು ಚರ್ಚೆ ನಡೆಸಿದೆ. ‘ಮಮ್ಮಿ’ ಒಂದು ಹಾರರ್‌ ಚಿತ್ರವಾಗಿತ್ತು. ಭಯಪಡಿಸುವುದಷ್ಟೇ ನಮ್ಮ ಮುಖ್ಯ ಉದ್ದೇಶವಾಗಿತ್ತು. ‘ದೇವಕಿ’ ಚಿತ್ರದಲ್ಲಿ ಸಾಕಷ್ಟು ಎಲಿಮೆಂಟ್ಸ್‌ ಇರಬೇಕು. ಎಲ್ಲಾ ವರ್ಗಕ್ಕೂ ಅದು ಮನಸೆಳೆಯಬೇಕು ಎಂಬ ಕಾರಣಕ್ಕೆ ಆರೇಳು ತಿಂಗಳ ಕಾಲ ಮೂರು ವರ್ಷನ್‌ ಸ್ಕ್ರಿಪ್ಟ್ ಮಾಡಿಕೊಂಡು, ಒಂದು ಹಂತಕ್ಕೆ ಅದು ಚೆನ್ನಾಗಿ ಬಂದಿದೆ ಅನಿಸಿದ ನಂತರ ಒಪ್ಪಿಕೊಂಡೆ. ಯಾವುದೇ ಕಲಾವಿದರಾಗಲಿ, ಸ್ಕ್ರಿಪ್ಟ್ ಚೆನ್ನಾಗಿದೆ ಅನಿಸಿದರೆ ಮಾತ್ರ ಅದನ್ನು ಪ್ರೀತಿಯಿಂದ ಮಾಡಲು ಮುಂದಾಗುತ್ತಾರೆ. ನನಗೂ ‘ದೇವಕಿ’ಯಲ್ಲಿ ಇಷ್ಟವಾಗಿದ್ದು ಗಟ್ಟಿಕಥೆ ಮತ್ತು ಪಾತ್ರ ‘ ಎನ್ನುತ್ತಾರೆ ಅವರು.

ಹಾಗಾದರೆ ಪ್ರಿಯಾಂಕಾ ಅವರಿಲ್ಲಿ ಮಾಡಿರುವ ಪಾತ್ರ? ಇದಕ್ಕೆ ಪ್ರತಿಕ್ರಿಯಿಸುವ ಅವರು, ‘ಅದೊಂದು ಅಮ್ಮನ ಪಾತ್ರ. ತಾಯಿಯೊಬ್ಬಳು ಕಳೆದು ಹೋದ ತನ್ನ ಮಗಳನ್ನು ಹುಡುಕಾಡುವ ತಳಮಳ, ಅನುಭವಿಸುವ ನೋವು, ಯಾತನೆಯನ್ನು ಇಲ್ಲಿ ಚೆನ್ನಾಗಿ ಕಟ್ಟಿಕೊಡಲಾಗಿದೆ. ತನ್ನ ಮಗು ಕಳೆದು ಹೋದಾಗ, ಆ ತಾಯಿಯ ಬದುಕಲ್ಲಿ ಏನೆಲ್ಲಾ ನಡೆದು ಹೋಗುತ್ತೆ. ಕೆಲವು ಸಂದರ್ಭದಲ್ಲಿ ಆಕೆ ಹೇಗೆ ಆ ಕಷ್ಟಗಳನ್ನು ಎದುರಿಸುತ್ತಾಳೆ ಎಂಬ ಪಾತ್ರ ನೋಡುಗರಲ್ಲಿ ಛಲ ಹುಟ್ಟಿಸುವಂತಿದೆ. ಒಂದು ಗಂಭೀರವಾದ ಕಥೆಯಲ್ಲಿ, ಅಷ್ಟೇ ಗಂಭೀರ ಪಾತ್ರ ಇಲ್ಲಿದೆ ‘ ಎನ್ನುತ್ತಾರೆ.

ಇದೇ ಮೊದಲ ಸಲ ಪ್ರಿಯಾಂಕಾ ಅವರ ಜೊತೆ ಮಗಳು ಐಶ್ವರ್ಯಾ ಕೂಡ ನಟಿಸಿದ್ದಾಳೆ. ಆಕೆಯ ನಟನೆ ಬಗ್ಗೆ ಪ್ರಿಯಾಂಕಾ ಹೇಳ್ಳೋದು ಹೀಗೆ . ‘ಮಗಳು ಐಶ್ವರ್ಯಾ ನಟಿಸಿದ್ದು ಖುಷಿ ಕೊಟ್ಟಿದೆ. ಇದು ಮಕ್ಕಳ ಚಿತ್ರವಲ್ಲ. ಪಕ್ಕಾ ಕಮರ್ಷಿಯಲ್ ಎಲಿಮೆಂಟ್ಸ್‌ ಇರುವ ಚಿತ್ರ. ರಾತ್ರಿ ವೇಳೆ ಚಿತ್ರೀಕರಣ ನಡೆದಿದ್ದೇ ಹೆಚ್ಚು. ಆಕೆಯ ಕನಸಿನಂತೆ ಈ ಚಿತ್ರ ಇರಲಿಲ್ಲ. ಹಾಗಂತ, ಐಶ್ವರ್ಯಾ, ನಾನು ಮಾಡಲ್ಲ ಅಂತ ಬ್ಯಾಕ್‌ ಔಟ್ ಮಾಡಲಿಲ್ಲ. ಅವಳಿಗೆ ಇಲ್ಲಿ ಅನುಭವ ಆಗಿದೆ. ನೈಟ್ ಶೂಟಿಂಗ್‌ ಕಷ್ಟ ಇತ್ತು. ಚಿತ್ರೀಕರಿಸಿದ ಏರಿಯಾ ಅಷ್ಟೊಂದು ಚೆನ್ನಾಗಿರಲಿಲ್ಲ. ಆದರೂ, ಐಶ್ವರ್ಯಾ, ಮೊದಲ ಚಿತ್ರದಲ್ಲೇ ಚೆನ್ನಾಗಿ ನಟಿಸಿ ದ್ದಾಳೆ ‘ ಎಂದು ಮಗಳ ಬಗ್ಗೆ ಖುಷಿಪಡುತ್ತಾರೆ ಪ್ರಿಯಾಂಕಾ.

ಇಲ್ಲೊಂದು ವಿಶೇಷವಿದೆ. ಪ್ರಿಯಾಂಕಾ ತವರೂರಲ್ಲೇ ಶೂಟಿಂಗ್‌ ನಡೆದಿದೆ. ಆ ಕುರಿತು ಅವರೇ ಹೇಳು ವಂತೆ, ‘ಕೊಲ್ಕತ್ತಾ ನನ್ನೂರು. ನಾನು ಆಡಿ, ಓದಿ ಬೆಳೆದ ನಗರ. ಅಮ್ಮ-ಅಪ್ಪ ಮನೆ ಅಲ್ಲೇ ಇರೋದು. ಚಿಕ್ಕಂದಿನಿಂದಲೂ ನಾನು ಹೌರಾ ಬ್ರಿಡ್ಜ್ ಸೇರಿದಂತೆ ಎಲ್ಲಾ ಕಡೆ ಓಡಾಡಿದ್ದೇನೆ. ನಾನು ಬೆಂಗಾಲಿ ಫಿಲ್ಮ್ಸ್ ಮೂಲಕ ಸಿನಿಮಾರಂಗ ಪ್ರವೇಶಿಸಿದೆ. ಹಾಗಾಗಿ, ಅಲ್ಲಿನ ಸಿನಿಮಾ ಮಂದಿ ನನಗೆ ಗೊತ್ತು. ನಾನು ಯಾವತ್ತೂ ಅಂದುಕೊಂಡಿರಲಿಲ್ಲ . ಬೆಂಗಳೂರಲ್ಲಿ ಮದ್ವೆ ಆಗ್ತೀನಿ, ಮಗಳ ಜೊತೆ ಕೊಲ್ಕತ್ತಾದಲ್ಲೇ ಸಿನಿಮಾ ಶೂಟಿಂಗ್‌ನಲ್ಲಿ ಪಾಲ್ಗೊಳ್ತೀನಿ ಅಂತ. ಅದೆಲ್ಲವೂ ಮರೆಯದ ನೆನಪು ಎನ್ನುವ ಪ್ರಿಯಾಂಕಾ, ಇಲ್ಲಿ ನನ್ನ ತಾಯಿ ಸಮೀರಾ ನಟಿಸಿದ್ದಾರೆ. ಅಮ್ಮ ಕೂಡ ಸಿನಿಮಾ, ಸೀರಿಯಲ್ ಮಾಡಿದ್ದಾರೆ. ನಾನು ಬಿಜಿ ಇರುತ್ತಿದ್ದಾಗ, ಅಮ್ಮ ನನ್ನ ಮಗಳ ಜೊತೆ ಹೆಚ್ಚು ಇರುತ್ತಿದ್ದರು. ಸೆಟ್‌ನಲ್ಲಿದ್ದಾಗ, ನಿರ್ದೇಶಕರು ಒಂದು ದೃಶ್ಯದಲ್ಲಿ ಪ್ಲಾನ್‌ ಮಾಡಿದ್ದರು. ಹಾಗಾಗಿ ಅಮ್ಮನೂ ಕಾಣಿಸಿಕೊಂಡಿದ್ದಾರೆ. ‘ದೇವಕಿ’ ಕೇವಲ ಹೆಣ್ಣುಮಕ್ಕಳಿಗಷ್ಟೇ ಅಲ್ಲ, ಎಲ್ಲರಿಗೂ ಇಷ್ಟವಾಗುವ ಚಿತ್ರ. ಇದೊಂದು ಹೊಸ ಜಾನರ್‌ ಚಿತ್ರವಂತೂ ಹೌದು’ ಎನ್ನುತ್ತಲೇ ಮಾತು ಮುಗಿಸುತ್ತಾರೆ ಅವರು.

•ವಿಜಯ್‌ ಭರಮಸಾಗರ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಹೆಣ್ಣು ಮಕ್ಕಳ ಸೌಂದರ್ಯವನ್ನು ವರ್ಣಿಸುವಾಗ ತ್ರಿಪುರ ಸುಂದರಿ ಎನ್ನುವ ವಿಶೇಷಣವನ್ನು ಬಳಸುವುದನ್ನು ನೀವು ನೋಡಿರಬಹುದು. ಈಗ ಅದೇ ತ್ರಿಪುರ ಸುಂದರಿಯ ಬಗ್ಗೆ...

  • 'ನನ್ನ ಪ್ರಕಾರ' ಚಿತ್ರದ ಟ್ರೇಲರ್‌ಗೆ ಮೆಚ್ಚುಗೆ ವ್ಯಕ್ತವಾಗುವ ಮೂಲಕ ಪ್ರಿಯಾಮಣಿಗೆ 'ನನ್ನ ಪ್ರಕಾರ' ಚಿತ್ರದ ಮೇಲಿನ ವಿಶ್ವಾಸ ಹೆಚ್ಚಿದೆ. 'ಇದು ಔಟ್ ಅಂಟ್ ಔಟ್...

  • ಕನ್ನಡ ಚಿತ್ರರಂಗದಲ್ಲಿ ಸಿನಿಪ್ರೇಕ್ಷಕರಿಗೆ ಹಲವು ದೇಶಗಳನ್ನು ತಮ್ಮ ಚಿತ್ರಗಳಲ್ಲಿ ಸುತ್ತಿಸಿದ ಕೀರ್ತಿ ನಾಗತಿಹಳ್ಳಿ ಚಂದ್ರಶೇಖರ್‌ ಅವರದ್ದು. 'ಅಮೆರಿಕಾ...

  • ಒಳ್ಳೆಯ ಸ್ನೇಹಿತರಾಗಿರುವವರು, ಮುಂದೆ ಹುಡುಗಿಯೊಬ್ಬಳಿಗಾಗಿ ಕಚ್ಚಾಡಿಕೊಂಡ, ಕೊಲೆಯಾದ ಸಾಕಷ್ಟು ಉದಾಹರಣೆಗಳು ನಮ್ಮ ಕಣ್ಣಮುಂದಿದೆ. ಈಗಗಾಲೇ ಈ ವಿಷಯದ ಸುತ್ತ...

  • ಎಲ್ಲವೂ ಅಂದುಕೊಂಡಂತೆ ಆಗಿದ್ದರೆ "ಪೈಲ್ವಾನ್‌' ಚಿತ್ರದ ಆಡಿಯೋ ಬಿಡುಗಡೆ ಚಿತ್ರದುರ್ಗದಲ್ಲಿ ನಡೆಯಬೇಕಿತ್ತು. ಎರಡೆರಡು ಬಾರಿ ದಿನಾಂಕ ಪ್ರಕಟಿಸಲಾಗಿಯೂ, ಅಲ್ಲಿ...

ಹೊಸ ಸೇರ್ಪಡೆ