ಪ್ರಬಂಧ : ಅಶ್ವಾಸನ ಪರ್ವ

Team Udayavani, Apr 14, 2019, 6:00 AM IST

ನಮಗೆ ಆನಂದ ಆಗೋದು ನಾವು ಬಯಸಿದ್ದು ಸಿಕ್ಕಾಗ. ಇಂಥ ವಸ್ತು ನಮಗೆ ಬೇಕು ಅಂತ ಎಷ್ಟೋ ಸಲ ಕನಸು, ಕಲ್ಪನೆಗಳನ್ನ ಮಾಡ್ಕೊಂಡಿರ್ತೀವಿ. ಅದು ಕೈಗೆ ಎಟುಕುತ್ತೆ ಅಂದಾಗ, ಏನೋ ಒಂದು ರೀತಿಯ ಖುಷಿ. ಅದರ ನಿರೀಕ್ಷೆಯಲ್ಲಿ ಕಾಲ ಕಳೀತೀವಿ. ನಾವು ಚಿಕ್ಕವರಿದ್ದಾಗ ಹಬ್ಬಕ್ಕೆ ಹೊಸಬಟ್ಟೆ ಹೊಲಿಸ್ತಾ ಇದ್ರು. ಹಬ್ಬಕ್ಕೆ ಹೊಸಬಟ್ಟೆ ಬರುತ್ತೆ ಅನ್ನೋ ಒಂದು ನಿರೀಕ್ಷೆಯಲ್ಲಿ ಆನಂದ ಸಿಗ್ತಿತ್ತು. ಮನೆಗೆ ಹೊಸ ಟೀವಿ ಬರುತ್ತೆ ಎಂಬ ನಿರೀಕ್ಷೆಯಲ್ಲಿ ಆನಂದ ಇರುತ್ತೆ. ವಾಸ್ತವವಾಗಿ ಆ ವಸ್ತು ಮನೆಗೆ ಬಂದಾಗ ಆಗುವ ಆನಂದಕ್ಕಿಂತ ಅದರ ನಿರೀಕ್ಷೆಯಲ್ಲೇ ಹೆಚ್ಚಿನ ಆನಂದ ಸಿಗುತ್ತದೆ.

ಮದುವೆ ಆಗಬೇಕಾದ ಹುಡುಗಿಯನ್ನ ಆಗಾಗ ಭೇಟಿಯಾದಾಗ, ಮದುವೆ ಆಗುತ್ತೆ ಎಂಬ ನಿರೀಕ್ಷೆಯಲ್ಲಿದ್ದಾಗ ಅವು ಅದ್ಭುತವಾದ ದಿನಗಳು. ಮದುವೆಯ ನಂತರ ಅದೇ ಆನಂದ ಹಾಗೇ ಉಳಿದಿರುವುದಿಲ್ಲ. ಚುನಾವಣೆಯ ಹಣೆಬರಹವೂ ಅಷ್ಟೇ. ನಮಗೆ ಬೇಕಾಗಿರುವ ಪ್ರತಿಯೊಂದೂ ಸಹ ಖಂಡಿತವಾಗಿ ಕೊಡ್ತೀವಿ ಅಂತ ಪಾಸಿಟೀವ್‌ ಆಗಿ ನಮ್ಮ ನಾಯಕರು ಹೇಳ್ಳೋದು ಚುನಾವಣೆ ಸಂದರ್ಭದಲ್ಲಿ ಮಾತ್ರ. ಅಭ್ಯರ್ಥಿ ಯಾರ ಮನೆಮುಂದೆ ಬರಲಿ, ನಮಸ್ಕಾರ ಮಾಡುತ್ತಾರೆ. ಓಟು ಕೇಳುತ್ತಾರೆ. ಈ ನಮ್ಮ ಕೆಲಸ ಆಗಬೇಕು ಎಂದರೆ ತತ್‌ಕ್ಷಣ ಆಗುತ್ತೆ ಎಂದು ಹೇಳುತ್ತಾರೆ. ಪಕ್ಕದಲ್ಲಿರುವ ತನ್ನ ಶಿಷ್ಯನಿಗೆ ಹೇಳಿ ನಮ್ಮ ಎದುರಿಗೇ ಸಂಬಂಧಪಟ್ಟವರಿಗೆ ಫೋನ್‌ ಮಾಡಿಸುತ್ತಾರೆ. ಫಾಲೋ ಅಪ್‌ ಮಾಡು ಎಂದು ಆದೇಶ ಕೊಡುತ್ತಾರೆ. ಎಲೆಕ್ಷನ್‌ ಆದ ತಕ್ಷಣ ಈ ಕೆಲಸ ಆಗಬೇಕು ಎಂದು ಹೇಳುತ್ತಾರೆ. ಉದಾಹರಣಗೆ – “ಸ್ವಾಮಿ, ನಮ್ಮ ಬೀದೀಲಿ ನಾಯಿಗಳ ಕಾಟ ಜಾಸ್ತಿ ಇದೆ’ ಎಂದರೆ,
“ಆಯ್ತು, ನಾವು ಹಿಡ್ಕೊಂಡು ಹೋಗ್ತಿವಿ. ಹಿಡ್ಕೊಂಡ್ಹೊಗಿ ಅದಕ್ಕೊಂದು ಗತಿ ಕಾಣಿಸ್ತೀವಿ’

“ಆದ್ರೆ ನಾಯಿಗಳನ್ನು ಕೊಲ್ಲೋ ಹಾಗಿಲ್ವಲ್ಲ ಎಂದರೆ, “ತಗೊಂಡ್ಹೊಗಿ ನಮ್ಮ ಏರಿಯಾದಲ್ಲಿ ಬಿಟ್ಕೊತೀವಿ. ನಮ್ಮ ಏರಿಯಾದ ನಾಯಿಗಳಿಗೆ ಜನಗಳು ಅಡ್ಜಸ್ಟ್‌ ಆಗಿದ್ದಾರೆ. ಅಲ್ಲಿದ್ದರೆ ಆರಾಮವಾಗಿ ಇರುತ್ತೆ’ ಎಂದು ಆಶ್ವಾಸನೆ ಬಂತು.

“ನಮ್ಮ ಬೀದಿಯ ಟ್ಯೂಬ್‌ಲೈಟ್‌ ಕೆಟ್ಟು ಹೋಗಿದೆ. ಮೂರು ತಿಂಗಳಿಂದ ದೀಪ ಉರಿಯುತ್ತಿಲ್ಲ’ ಎಂದರೆ, “ಚುನಾವಣೆ ಮುಗಿದ ಒಂದು ವಾರದಲ್ಲಿ ಎಲ್ಲಾ ಟ್ಯೂಬ್‌ಲೈಟ್ಸ್‌ ನಾನೇ ಏಣಿ ಹತ್ತಿ ಸರಿಮಾಡ್ತೀನಿ’ ಎಂಬ ಆಶ್ವಾಸನೆ ಸಿಗುವುದೂ ಉಂಟು.

ಬಂಡ್ವಾಳ್‌ವಿಲ್ಲದ ಬಡಾಯಿ ನಾಟಕದಲ್ಲಿ ಟಿ. ಪಿ. ಕೈಲಾಸಂ ಅವರು ಗಂಡ, ಹೆಂಡತಿ ಮತ್ತು ಮೊದ್ಮಣಿ ಎಂಬ ಒಂದು ದಡ್ಡ ಮಗುವಿನ ನಡುವೆ ಅದ್ಭುತವಾದ ದೃಶ್ಯವನ್ನು ತರುತ್ತಾರೆ. ಶಾಲಾ ಬಾಲಕ ಮೊದ್ಮಣಿಗೆ ಏನೇನೋ ಬೇಕು. ಅದನ್ನ ಕೊಡಿಸಲು ಅಪ್ಪ ತಯಾರಿರೋಲ್ಲ. ಆಗ ತಾಯಿ ಬೈಯುತ್ತಾಳೆ. “ಕೊಡಿಸದಿದ್ರೆ ಹಾಳಾಗೊಗ್ಲಿ, ಅದನ್ನ ಕಿವಿ ಮೇಲಾದ್ರೂ ಹಾಕ್ಕೊಳ್ಳಿ’ ಎಂದಾಗ ಲಾಯರ್‌ ಅಹೋಬ್ಲು ಪಾತ್ರದಲ್ಲಿ ಕೈಲಾಸಂ ಹೇಳುತ್ತಾರೆ.

ಕಿವಿಗೆ ಹಾಕ್ಕೋಬಹುದು. ಬಾಳೂ, ಒಂದು ದೊಡ್ಡ ಫ‌ುಲ್‌ಸ್ಕೇಪ್‌ ಶೀಟ್‌ ತಗೋ, ಚಿಕ್ಕ ರಾಯರು ಬೇಕಾದ್ದನ್ನೆಲ್ಲಾ ಹೇಳ್ತಾರೆ. ತಪ್ಸಿಲಾಗಿ ಪಟ್ಟಿ ಬರೊ. (ಮಗನಿಗೆ) ನಿನಗೆ ಇಹಲೋಕದಲ್ಲಿರೋ ಆಸೆನೆಲ್ಲಾ ಈ ನಮ್ಮ ಕ್ಲರ್ಕ್‌ ಬಾಳು ಬರೆಯೋ ಪಟ್ಟಿಲಿ ತೀರಿಸ್ಕೊಳ್ಳೋ. ನಿನಗೆ ಏನ್ಬೇಕು ಅಂಬೋದನ್ನ ಭಯ ಇಲೆª ಹೇಳು. ಹೇಳ್ಳೋ ಭಯ ನಿನಗೂ ಬೇಡ. ಅದನ್ನ ಕೊಂಡ್ಕೊಡೋ ಭಯ ನನಗೂ ಬೇಡ. ಹೇಳು ಪರ್ವಾಗಿಲ್ಲ.

ಈಗಿನ ಚುನಾವಣೆಯ ಸಂದರ್ಭಕ್ಕೆ ಟಿ. ಪಿ. ಕೈಲಾಸಂ ಅವರ ಈ ಸಂಭಾಷಣೆ ಅತ್ಯಂತ ಪ್ರಸ್ತುತವಾಗಿದೆ. ಉತ್ತರಕರ್ನಾಟಕಕ್ಕೆ ಹೋದರೆ ನೀರಿಗೆ ಜನ ಪರದಾಡುತ್ತಿರುವ ದೂರುಗಳು ಬರುತ್ತವೆ. ನಾಡಿನ ಯಾವುದೇ ಮೂಲೆಗೆ ಹೋದರೂ ಬಿಸಿಲುಕಾಲವಾದ್ದರಿಂದ ನೀರಿಗೆ ಹಾಹಾಕಾರ ಎದ್ದಿರುತ್ತದೆ. ಬೋರ್‌ವೆಲ್‌ಗ‌ಳು ಒಣಗಿವೆ. ಗಾಡೀಲಿ ನೀರು ತರಿಸಿಕೊಳ್ಳ ಬೇಕು. ಇದಕ್ಕೆ ಪರಿಹಾರ ಕೇಳಿದಾಗ ಆಶ್ವಾಸನೆ ಮಾತ್ರ ಸಿಗುತ್ತದೆ.

“”ಸ್ವಾಮಿ, ನಮ್ಮನ್ನ ನಂಬಿ. ನಮ್ಮನ್ನ ಗೆಲ್ಸಿ. ನಿಮಗೆ ಬೇಕಾದ್ದೆಲ್ಲಾನೂ ನಾವು ಕೊಡ್ತೀವಿ. 24 ಗಂಟೆ ನಿಮ್ಮ ನಲ್ಲೀಲಿ ನೀರು ಬರ್ಲಿಲ್ಲ ಅಂದ್ರೆ ಕೇಳಿ. ಗಂಗಾ-ಕಾವೇರಿ ಜೋಡಿಸ್ತೀವಿ. ಆಗಲಿಲ್ಲ ಅಂದ್ರೆ ನಮ್ಮನೆ ಟ್ಯಾಂಕ್‌ನಿಂದ ಒಂದು ಪೈಪ್‌ ಹಾಕಿ ಎಳೆದು ನೇರವಾಗಿ ನಿಮ್ಮನೇಗೆ ಕೊಟಿºಡ್ತೀವಿ. ಬಿಂದಿಗೆ, ಬಕೀಟ್‌ ತುಂಬಾ ನೀರು ಹಿಡ್ಕೊಳ್ಳಿ. ಬೇಕಾದಷ್ಟು ಕುಡೀರಿ. ದಿನಕ್ಕೆ ಮೂರು ಸಲ ಸ್ನಾನ ಮಾಡಿ ಎಂದೆಲ್ಲಾ ಆಸೆ ಹುಟ್ಟಿಸುವುದುಂಟು. ಹೊಸಪೇಟೆ, ಬಳ್ಳಾರಿಯ ಬಿಸಿಯನ್ನು ತಾಳಲಾರದೆ ಒದ್ದಾಡುತ್ತಿದ್ದ ಮತದಾರನೊಬ್ಬ ಹೇಳಿದ.

“ಸ್ವಾಮಿ, ಚಿಕ್ಕಮಗಳೂರು ನೋಡಿ. ಅಲ್ಲಿ ಮುಳ್ಳಯ್ಯನಗಿರಿ ಬೆಟ್ಟ ಇರೋದರಿಂದ ಕಾಶ್ಮೀರದಲ್ಲಿ ಇದ್ದಾಗೆ ತಂಪಾಗಿ ಇರುತ್ತೆ. ಅಂಥ ಬೆಟ್ಟ ನಮಗೂ ಕೊಡ್ಸಿ ನಮ್ಮಲ್ಲಿ ಬಿಸಿಲಿನ ಬೇಗೆ 45 ಡಿಗ್ರಿ ದಾಟಿ ಹೋಗುತ್ತೆ’ ಎಂದ. ಕೂಡಲೇ ಶಿಷ್ಯನಿಗೆ ಆದೇಶ ಬರುತ್ತದೆ. “ಸಾಧ್ಯವಾದ್ರೆ ಮುಳ್ಳಯ್ಯನಗಿರಿ ಬೆಟ್ಟಾನ ಇಲ್ಲಿಗೆ ಶಿಫ್ಟ್ ಮಾಡಿಸು. ಅಲ್ಲಿನವರಿಗೆ ಬೇರೆ ವ್ಯವಸ್ಥೆ ಮಾಡೋಣ’ ಸ್ಥಳದಲ್ಲೇ ಬೆಟ್ಟ ಮಂಜೂರು !

ಚುನಾವಣೆ ಬೂತ್‌ನೊಳಗಡೆ ಹೋಗುವಾಗ ಅದೆಷ್ಟು ಜನ ಬಂದು ಅಡ್ಡಗಟ್ಟಿ ನಮಸ್ಕಾರ ಮಾಡಿ ಕಾಲಿಗೆ ಬೀಳುತ್ತಾರೆ ಎಂಬುದನ್ನು ನೆನಪು ಮಾಡಿಕೊಂಡರೆ ನಗು ಬರುತ್ತದೆ. ಆದರೆ, ಒಳಗಡೆ ಹೋಗಿ ಮತ ಹಾಕಿ ಬೆರಳಿನ ಮೇಲೆ ಚುಕ್ಕೆ ಹಾಕಿಸಿಕೊಂಡು ಹೊರಬಂದಾಗ ನಾವು ಯಾರಿಗೂ ಬೇಡ. ತಿಂದೆಸೆದ ಅನ್ನದ ಪೇಪರ್‌ಪ್ಲೇಟ್‌ ಆಗಿರುತ್ತೇವೆ. ಕುಡಿದು ಎಸೆದ ಕಾಫಿಯ ಕಪ್‌ ಆಗಿರುತ್ತದೆ. ಮತ ಕೊಟ್ಟ ನಂತರ ನಾವು ಯಾರಿಗೂ ಬೇಡ. ಇದು ಯಾಕೆ ಹೀಗೆ? ಜನಗಳಿಗೆ ಆಮಿಷ ಒಡ್ಡುವುದರಲ್ಲಿ ನಾಯಕರಿಗೂ ಖುಷಿ ಸಿಗುತ್ತದೆ. ಅದನ್ನು ಕೇಳುವ ನಮಗೂ ಖುಷಿ ಸಿಗುತ್ತದೆ.

ಆಶ್ವಾಸನೆ ಎಂಬುದು ಕಿವಿಗೆ ಬಲು ಹಿತ, ಮನಸ್ಸಿಗೆ ಮುದ ! ಮನಸ್ಸಿಗೆ ಮುದ ನೀಡುವುದು, ಆಲೋಚನೆಗೆ ಆನಂದ ನೀಡುವುದು ಆಶ್ವಾಸನೆ. ಈ ಆಶ್ವಾಸನೆ ಎಂಬ ಅಸ್ತ್ರವನ್ನು ಕೈಯಲ್ಲಿ ಹಿಡಿದು ಐದು ವರ್ಷಕ್ಕೊಮ್ಮೆ ಬಂದು ಬೇಕಾದ್ದೆಲ್ಲಾ ಕೊಡುತ್ತೇವೆ ಎಂದು ನಾಯಕರು ಹೇಳುತ್ತಾರೆ. ಬಡತನ ನಿರ್ಮೂಲನೆ ಮಾಡುತ್ತೇವೆ ಎಂದು ಎಪ್ಪತ್ತು ವರ್ಷಗಳಿಂದ ಹೇಳುತ್ತಲೇ ಬಂದಿ¨ªಾರೆ. ಬಡತನ ನಿರ್ಮೂಲವಾಗಿಲ್ಲ. ಎಲ್ಲರಿಗೂ ಉದ್ಯೋಗ ಸಿಕ್ಕಿಲ್ಲ. ಎಲ್ಲರಿಗೂ ಸೂರು ದಕ್ಕಿಲ್ಲ. ಜನಗಳ ಆರ್ಥಿಕ ಪರಿಸ್ಥಿತಿಯು ನಿರೀಕ್ಷಿಸಿದ ಮಟ್ಟಕ್ಕೆ ಏರಿಲ್ಲ. ಆದರೂ ನಾಯಕರನ್ನು ನಂಬುತ್ತೇವೆ. ಮತ ಕೊಡುತ್ತೇವೆ.
ವಿಷಯ ಏನೇ ಇರಲಿ, ಮತ ಕೊಡಲೇಬೇಕಾಗುತ್ತದೆ. ಅದು ನಮ್ಮ ಕರ್ತವ್ಯ. “ನೋಟ ಒತ್ತುವುದರಲ್ಲಿ ಅರ್ಥವಿಲ್ಲ. ಯಾರಿಗಾದರೂ ಒಬ್ಬರಿಗೆ ಮತ ಒತ್ತೋಣ.

ಸರಿಯಾದವರನ್ನೇ ಆಯ್ಕೆ ಮಾಡೋಣ. ಯೋಚಿಸಿ ಮತ ಒತ್ತಿದರೆ ಒಳ್ಳೆಯ ಸರ್ಕಾರವನ್ನು ನಾವೇ ಮಾಡಿಕೊಳ್ಳಬಹುದು. ಯಾಕೆಂದರೆ, ನಮ್ಮದು ವಿಶ್ವದ ಅತಿ ಪ್ರಬಲ ಪ್ರಜಾಪ್ರಭುತ್ವ ರಾಷ್ಟ್ರ. ಇಲ್ಲಿ ಆಳು ಅರಸನಾಗಬಲ್ಲ’
ಮೇಲಿನ ಸ್ಥಾನಕ್ಕೆ ಏರಿದ ಮೇಲೆ ಏಣಿ ಒದೆಯಬೇಡಿ, ಮತದಾರರನ್ನು ಕೈ ಬಿಡಬೇಡಿ.

ಎಂ. ಎಸ್‌. ನರಸಿಂಹಮೂರ್ತಿ


ಈ ವಿಭಾಗದಿಂದ ಇನ್ನಷ್ಟು

 • ಜಯಂತ್‌ ಕಾಯ್ಕಿಣಿಯವರ ಬೊಗಸೆಯಲ್ಲಿ ಮಳೆಯಲ್ಲಿನ ಲೇಖನಗಳನ್ನು ದಿನಕ್ಕೊಂದು ಓದುತ್ತಿದ್ದೆ. ಸಮಯವಿರಲಿಲ್ಲ ಅಂತಲ್ಲ, ಎರಡು-ಮೂರು ದಿನಕ್ಕೆ ಮುಗಿದು ಬಿಟ್ಟರೆ...

 • ಆತ ಬಿ.ಎಸ್‌ಸಿ ಮಾಡುತ್ತಿದ್ದರೂ ಹೆಚ್ಚಾಗಿ ಇರುತ್ತಿದ್ದುದು ಅಡಿಕೆ ವಕಾರಿಯಲ್ಲಿ. ಅದು ಕುಟುಂಬದ ದಂಧೆ. ಅಲ್ಲದೆ, ಆತನಿಗೆ ಪ್ರೀತಿಯ ಕೆಲಸ ಅದು. ಅಡಿಕೆ ಕತ್ತರಿಸಿ...

 • ಇತ್ತೀಚೆಗೆ ಸೆಕೆಗೆ ಒಂದು ರಾತ್ರಿಯೂ ಸರಿಯಾಗಿ ನಿದ್ದೆ ಮಾಡಿಲ್ಲ. ಹೊತ್ತಲ್ಲದ ಹೊತ್ತಲ್ಲಿ ಕಣ್ಣು ಕೂರುತ್ತಿತ್ತು. ಇದನ್ನು ತಪ್ಪಿಸಲು ಒಂದು ಅಭ್ಯಾಸವನ್ನು ರೂಢಿಸಿಕೊಂಡಿದ್ದೇನೆ....

 • ಕಲೆ-ಸಂಸ್ಕೃತಿಗೆ ಸಂಬಂಧಿಸಿದ ಯಾವುದೇ ಕ್ಷೇತ್ರದಲ್ಲಿ "ಲೆಜೆಂಡ್‌' ಅನ್ನಿಸಿಕೊಂಡವರ ವ್ಯಕ್ತಿತ್ವದ ಸುತ್ತ ತೀವ್ರ ಅಭಿಮಾನದ ಹಾಗೂ ವಿಸ್ಮಯದ ಮಾಯಾ ಪರಿವೇಶವೊಂದು...

 • ಜಾಗತೀಕರಣ ತನ್ನ ಎಲ್ಲೆಗಳನ್ನು ವಿಸ್ತರಿಸಿಕೊಳ್ಳುತ್ತಿದ್ದ ಹಾಗೆ ಜನಮಾನಸವೂ ತನ್ನ ಅಸ್ಮಿತೆಗಳನ್ನು ಕಾಪಿಟ್ಟುಕೊಳ್ಳಲು ಹಲವು ದಾರಿಗಳನ್ನು ಕಂಡುಕೊಳ್ಳತೊಡಗಿತು....

ಹೊಸ ಸೇರ್ಪಡೆ

 • ಮಂಗಳೂರು: ನಿರ್ಮಾಣ್‌ ಹೋಮ್ಸ್‌ ಹಾಗೂ ಕೋಸ್ಟಲ್‌ ಕರ್ನಾಟಕ ಡೆವಲಪರ್ ಸಂಸ್ಥೆಯ ಸಹಯೋಗದಲ್ಲಿ ಬಿಜೈ ಕಾಪಿಕಾಡ್‌ನ‌ಲ್ಲಿ ನಿರ್ಮಾಣವಾಗಿರುವ ಬಹು ನಿರೀಕ್ಷಿತ 67...

 • ಬೆಂಗಳೂರು: ಬೆಂಗಳೂರು ಉತ್ತರ ವಿಶ್ವವಿದ್ಯಾಲಯ, ಕೋಲಾರ ಸ್ನಾತಕೋತ್ತರ ಕೇಂದ್ರ ಹಾಗೂ ಚಿಕ್ಕಬಳ್ಳಾಪುರದ ಸರ್ಕಾರಿ ಶಿಕ್ಷಣ ಕಾಲೇಜಿನಲ್ಲಿರುವ ಸ್ನಾತಕೋತ್ತರ...

 • ಮಲ್ಪೆ: ಭಗವಂತ ಭಕ್ತರಿಗೆ ಬೇರೆ ಬೇರೆ ರೂಪದಿಂದ ಅನುಗ್ರಹ ಮಾಡುತ್ತಾನೆ. ಆದರಲ್ಲೂ ಕಲಿಯುಗದ ಜನರ ಸಾಧನೆ, ಸಿದ್ಧಿಗೆ ತೊಂದರೆ ಇದ್ದಲ್ಲಿ ಅದನ್ನು ಪರಿಪಾಲನೆ ಮಾಡಲು...

 • ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟಕ್ಕೆ ನಿಚ್ಚಳ ಬಹುಮತವನ್ನು ಒದಗಿಸಿಕೊಟ್ಟ 2019ನೇ ಲೋಕಸಭೆ ಚುನಾವಣೆ ಈ ಕಾರಣಕ್ಕೆ ಮಾತ್ರ ಮುಖ್ಯವಾಗಿಲ್ಲ, ದೇಶದ ರಾಜಕೀಯ...

 • 2014ರಲ್ಲಿ ಅಮೇಠಿಯಲ್ಲಿ ರಾಹುಲ್‌ ಗಾಂಧಿ ವಿರುದ್ಧ ಸ್ಪರ್ಧಿಸಿ ಸೋತಿದ್ದ ಆಮ್‌ ಆದ್ಮಿ ಪಕ್ಷದ ಸಂಸ್ಥಾಪಕ ಡಾ.ಕುಮಾರ್‌ ವಿಶ್ವಾಸ್‌, ಈಗ ತಮ್ಮ ಪಕ್ಷದಿಂದ ಅಂತರ ಕಾಯ್ದುಕೊಂಡಿದ್ದಾರೆ....

 • ಕಾಸರಗೋಡು: ಕೇರಳದಲ್ಲಿ ಈ ಬಾರಿಯಾದರೂ ಖಾತೆ ತೆರೆಯುವ ಬಗ್ಗೆ ಬಹಳಷ್ಟು ನಿರೀಕ್ಷೆಯಿರಿಸಿದ್ದ ಬಿಜೆಪಿಗೆ ಈ ಗುರಿ ಸಾಧಿಸಲು ಸಾಧ್ಯವಾಗದಿದ್ದರೂ, ಈ ಹಿಂದಿನ ಎಲ್ಲ...